ಹಾಸನ: ಜಮ್ಮು ಮತ್ತು ಕಾಶ್ಮೀರದ ಸೋನಮಾರ್ಗ್ ಸೇನಾ ಕ್ಯಾಂಪ್ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಹಾಸನ ಜಿಲ್ಲೆಯ ಶಾಂತಿ ಗ್ರಾಮದ ದೇವಿಹಳ್ಳಿಯ ಯೋಧ ಸಂದೀಪ್ ಶೆಟ್ಟಿ ದಾರುಣವಾಗಿ ವೀರಮರಣವನ್ನಪ್ಪಿದ್ದಾರೆ.
ಬುಧವಾರ ಜಮ್ಮು ಕಾಶ್ಮೀರದ ಸೋನಾಮಾರ್ಗ್ ಬಳಿ ಸಂಭವಿಸಿದ ಹಿಮಕುಸಿತದಲ್ಲಿ ಸಿಲುಕಿ ಒಟ್ಟು 11 ಯೋಧರು ಸಾವನ್ನಪ್ಪಿದ್ದರು. ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂದೀಪ್ ಮದುವೆ ಫೆ. 22ರಂದು ನಡೆಯಬೇಕಿತ್ತು. ಸಂದೀಪ್ ಶೆಟ್ಟಿ ವೀರ ಮರಣದಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಮದುವೆ ನಿಗದಿಯಾಗಿತ್ತು.. ಸಂದೀಪ್ಗೆ ಹತ್ತಿರದ ಸಂಬಂಧಿ ಯುವತಿಯೊಂದಿಗೆ ಈಗಾಗಲೇ ನಿಶ್ಚಿತಾರ್ಥವಾಗಿದ್ದು, ಫೆಬ್ರವರಿ 22 ಕ್ಕೆ ವಿವಾಹ ನೆರವೇರಬೇಕಿತ್ತು. ಪುಟ್ಟರಾಜು ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರನಾಗಿರುವ ಸಂದೀಪ್ ಅವರ ನಿಧನದಿಂದ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ವಿಶೇಷ ವಿಮಾನದಲ್ಲಿ ವೀರಯೋಧನ ಪಾರ್ಥೀವ ಶರೀರವನ್ನು ಕರ್ನಾಟಕಕ್ಕೆ ರವಾನಿಸಲಾಗಿದ್ದು, ನಾಳೆ ಹಾಸನ ತಲುಪುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕಳೆದ ವರ್ಷ ಹಿಮಪಾತದಲ್ಲಿ ಹಾಸನದ ವೀರಯೋಧ ಸುಬೇದಾರ್ ನಾಗೇಶ್ ಅವರು ಮೃತಪಟ್ಟಿದ್ದನ್ನು ಸ್ಮರಿಸಬಹುದು.
ಮತ್ತಿಬ್ಬರು ಕನ್ನಡಿಗ ಯೋಧರು ಬಚಾವ್: ಸೋನಾಮಾರ್ಗ್ ಸೇನಾ ಕ್ಯಾಂಪ್ ಮೇಲೆ ಬುಧವಾರ ಹಿಮದ ಗುಡ್ಡ ಕುಸಿತಕ್ಕೆ ಸಿಲುಕಿದ್ದ ಕರುನಾಡಿನ ಇಬ್ಬರು ವೀರ ಸೈನಿಕರು ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಮೇಜರ್ ಶ್ರೀಹರಿ ಕುಗಜಿ, ಬಂಡಿವಡ್ಡರ್ ಸಾವಿನ ದವಡೆಯಿಂದ ಪಾರಾದ ಸೈನಿಕರು. ಸದ್ಯ ಅವಘಡದಿಂದ ಮೇಜರ್ ಶ್ರೀಹರಿ ಕುಗಜಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಇನ್ನು ಹಿಮದ ಗಡ್ಡೆಯಡಿ ಸಿಲುಕಿದ್ದವರನ್ನು ರಕ್ಷಿಸುವಾಗ ಮೇಜರ್ ಬಂಡಿವಡ್ಡರ್ ಅವರಿಗೂ ಗಾಯಗಳಾಗಿದ್ದು, ಇವರಿಬ್ಬರೂ ಶ್ರೀನಗರದ ಬೇಸ್ ಕ್ಯಾಂಪ್ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರಿನ ಮೂಲದವರಾದ ಮೇಜರ್ ಶ್ರೀಹರಿ, ಕೆಲ ತಿಂಗಳ ಹಿಂದಷ್ಟೇ ಸೋನಾಮಾರ್ಗ್ ಸೇನಾ ಕ್ಯಾಂಪ್ಗೆ ವರ್ಗವಾಗಿದ್ದರು. ಇವರು ಈ ಮೊದಲು 115ನೇ ಮಹರ್ ಬೆಟಾಲಿಯನ್ನ ಬೆಳಗಾವಿ ಯೂನಿಟ್ನಲ್ಲಿ ಸೇವೆ ಸಲ್ಲಿಸಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
