fbpx
ದೇವರು

ಶೃಂಗೇರಿಯ ಜಗದ್ಗುರು ಶ್ರೀ ನರಸಿಂಹ ಭಾರತಿ ಸ್ವಾಮೀಜಿ

ಜಗದ್ಗುರು ಶ್ರೀ ನರಸಿಂಹ ಭಾರತೀ ಸ್ವಾಮಿಗಳು ಜನಿಸಿದ್ದು ಕ್ರಿ.ಶ. 1798ರಲ್ಲಿ. ಇವರು ಬಾಲಕನಾಗಿದ್ದಾಗಲೇ ಶಾಸ್ತ್ರಗಳ ಅಭ್ಯಾಸಕ್ಕೆಕಾಲ್ನಡಿಗೆಯಲ್ಲಿಯೇ ಕಾಶಿಗೆ(ವಾರಾಣಾಸಿ) ಹೋಗಿದ್ದರು. ಅಲ್ಲಿ ವೇದಕ್ಕೆ ಸಂಬಂಧಪಟ್ಟ ತರ್ಕ, ಮೀಮಾಂಸೆ, ವ್ಯಾಕರಣಗಳನ್ನು ಅಭ್ಯಸಿಸಿ ಬಂದರು. ಶಾರದಾ ಪೀಠಾಧಿಪತಿ ಆದ ನಂತರ ಹಲವಾರು ಶಾಸ್ತ್ರಗಳಲ್ಲಿ ಪ್ರಾವೀಣ್ಯವನ್ನು ಪಡೆದರು ಹಾಗೂ ಮಠದ ಆಡಳಿತ ವ್ಯವಹಾರವನ್ನು ಕ್ರಮಬದ್ಧವಾಗಿ ವ್ಯವಸ್ಥೆ ಮಾಡಿದರು. ಸುಮಾರು 40 ವರ್ಷಗಳ ಕಾಲ ದಿಗ್ವಿಜಯ ಯಾತ್ರೆಯಲ್ಲಿಯೇ ಕಳೆದದ್ದು ವಿಶೇಷ. ಯಾತ್ರೆಯ ಸಮಯದಲ್ಲಿ ಅದ್ವೈತ ತತ್ವವನ್ನು ಪ್ರಚಾರ ಮಾಡಿದರು. ಜಗದ್ಗುರುಗಳು ಕನ್ನಡ, ತೆಲುಗು, ತಮಿಳು, ಮರಾಠಿ ಹಾಗೂ ಸಂಸ್ಕøತದಲ್ಲಿ ಪ್ರೌಢಿಮೆ ಗಳಿಸಿದ್ದರಿಂದ ಭಾರತದ ಎಲ್ಲಾ ಮೂಲೆಗಳಿಂದ ಬರುವ ಭಕ್ತರುಗಳ ಸಂಕಟವನ್ನು ಕೇಳಿ ಅವರಿಗೆ ಸರಿಯಾದ ಮಾರ್ಗದರ್ಶನ, ಆಶೀರ್ವಾದ ಮಾಡಿ ಕಳಿಸುತ್ತಿದ್ದರು. ಅವರುಗಳು ಸಂತೋಷದಿಂದ ತೆರಳುತ್ತಿದ್ದರು. ಯಾವಾಗಲೂ ಶಾರದೆ ಮತ್ತು ನರಸಿಂಹ ದೇವರ ಧ್ಯಾನದಲ್ಲಿಯೇ ಕಳೆಯುತ್ತಿದ್ದರು. ಜಗದ್ಗುರುಗಳು ಸಹೃದಯಿಗಳಾಗಿದ್ದು ಭಕ್ತರ ಸಂಕಷ್ಟ ಸ್ಥಿತಿಯನ್ನು ಕಂಡು ಕೂಡಲೇ ಕರಗಿ ಹೋಗುತ್ತಿದ್ದರು.

Image result for sri narasimha bharati swami

Image Credits: Shringeri Sharada Peetham

ಮಧುರೆ ಮೀನಾಕ್ಷಿ ದೇವಾಲಯಕ್ಕೆ ಭೇಟಿ:

ಒಮ್ಮೆ ಜಗದ್ಗುರುಗಳು ತಮ್ಮ ಕಿರಿಯ ಶಿಷ್ಯನೊಂದಿಗೆ ಪ್ರಸಿದ್ಧವಾದ ಮೀನಾಕ್ಷಿ ದೇವಾಲಯಕ್ಕೆ ಹೋಗಿದ್ದರು. ಒಂದು ದಿನ ಕಿರಿಯ ಶಿಷ್ಯರು ದೇವಾಲಯದ ಗರ್ಭಗುಡಿಯಲ್ಲಿರುವ ಮೀನಾಕ್ಷಿ ದೇವಿಗೆ ಪೂಜೆ ಮಾಡಬೇಕೆಂದು ಒಳಗೆ ಪ್ರವೇಶ ಮಾಡಲು ಬಯಸಿದರು. ಆದರೆ ದೇವಾಲಯದ ಅರ್ಚಕರು ಶಿಷ್ಯನನ್ನು ಒಳಗಡೆ ಬಿಡಲು ಒಪ್ಪಲಿಲ್ಲ. ಜಗದ್ಗುರುಗಳು ದೇವಾಲಯಕ್ಕೆ ಹೋಗಿ ಎರಡು ತೆಂಗಿನ ಕಾಯಿಯನ್ನು ತರಲು ಹೇಳಿ ಕೆಲವು ಮಂತ್ರಗಳನ್ನು ಉಚ್ಚರಿಸಿ ದೇವತೆಯ (ಮೀನಾಕ್ಷಿ) ಶಕ್ತಿಯನ್ನು ತೆಂಗಿನಕಾಯಿಗಳಲ್ಲಿ ಆವಾಹನೆ ಮಾಡಿ ಅಲ್ಲಿದ್ದ ಸಾವಿರಾರು ಭಕ್ತರುಗಳಿಗೆ ತಾವು ದೇವತೆಯನ್ನು ನಮ್ಮ ಮಠಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು. ಇನ್ನು ಮುಂದೆ ಇಲ್ಲಿಗೆ ಬರುವ ಭಕ್ತರುಗಳು ದೇವಾಲಯದ ಹೊಸ್ತಿಲ ಬಳಿಯಲ್ಲಿಯೇ ದೇವತೆಯನ್ನು ಉದ್ದೇಶಿಸಿ ಇಲ್ಲಿಯೇ ಪೂಜೆ ಮಾಡಿದರೆ ಸಾಕೆಂದರು. ಅಲ್ಲಿನ ಅರ್ಚಕರಿಗೆ ತಮ್ಮ ತಪ್ಪಿನ ಅರಿವಾಗಿ ಜಗದ್ಗುರುಗಳಲ್ಲಿ ಕ್ಷಮೆಯಾಚಿಸಿದರು. ಅರ್ಚಕರ ಪ್ರಾರ್ಥನೆಯಂತೆ ಮತ್ತೆ ಮಧುರೆಗೆ ಬಂದು ದೇವತೆಯಲ್ಲಿ ಶಕ್ತಿಯನ್ನು ಮರು ಆವಾಹನೆ ಮಾಡಿ ಇನ್ನು ಮುಂದೆ ಭಕ್ತಾದಿಗಳು ಎಂದಿನಂತೆಯೇ ಸಾಂಪ್ರದಾಯಿಕವಾಗಿ ದೇವರಿಗೆ ಪೂಜೆ ಮಾಡಬಹುದು ಎಂದರು. ಜಗದ್ಗುರುಗಳಲ್ಲಿ ಅಂಥ ವಿಶೇಷ ಶಕ್ತಿ ಇತ್ತು.

Image result for sri narasimha bharati swami

Image Credits: Vishwa Samvada Kendra

ಜಗದ್ಗುರುವಿನಿಂದ ಶಿವ ಗೀತೆಯ ಅಭ್ಯಾಸ:

ಹಿಂದಿನಿಂದಲೂ ಶೃಂಗೇರಿಯ ಜಗದ್ಗುರುಗಳಿಗೂ ಮತ್ತು ಮೈಸೂರು ರಾಜಮನೆತನಕ್ಕೂ ಮೆಚ್ಚುಗೆಯ ನಿಕಟ ಸಂಬಂಧ ಇದೆ ಎಂಬುದು ಗ್ರಂಥಗಳಿಂದ ತಿಳಿದು ಬರುತ್ತದೆ. ಸುಮಾರು ಒಂದುನೂರು ವರ್ಷಗಳ ಹಿಂದೆ ಮೈಸೂರು ಮಹಾರಾಜರಾಗಿದ್ದ ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ್‍ರವರು ಜಗದ್ಗುರು ಶ್ರೀಶ್ರೀ ನರಸಿಂಹ ಭಾರತೀ ಸ್ವಾಮಿಗಳನ್ನು ಕರೆಸಿ ಭವ್ಯವಾದ ಸ್ವಾಗತವನ್ನು ಏರ್ಪಡಿಸಿ, ಅವರಿಗೆ ಅತ್ಯಂತ ಬೆಲೆಬಾಳುವ ಕಿರೀಟವನ್ನು ಕೊಡುಗೆಯಾಗಿ ಸಮರ್ಪಿಸಿದರು. ಶೃಂಗೇರಿಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ಲಿಂಗಕ್ಕೆ ಒಂದು ಅನಘ್ರ್ಯ ನಾಗಾಭರಣವನ್ನು ಕೊಡುಗೆಯಾಗಿ ನೀಡಿದರು ಹಾಗೂ ಜಗದ್ಗುರುಗಳ ಬಳಿಯಲ್ಲಿಯೇ ಶಿವಗೀತೆಯನ್ನು ಕಲಿತರು. ಇದು ಅವರ ಸೌಭಾಗ್ಯ ಎಂದು ಹೇಳಬಹುದು.

ಶಿಷ್ಯನ ಆಯ್ಕೆ:

ಜಗದ್ಗುರುಗಳು ಯಾತ್ರೆಯ ಸಲುವಾಗಿ ಮೈಸೂರಿಗೆ ಬಂದರು. ಆಗ ಅವರಿಗೆ 60 ವರ್ಷಗಳಾಗಿತ್ತು. ತಮಗೊಬ್ಬ ಸೂಕ್ತ ಉತ್ತರಾಧಿಕಾರಿಯನ್ನು ಆರಿಸಿ ಆತನಿಗೆ ತಕ್ಕ ಮಾರ್ಗದರ್ಶನ ನೀಡಬೇಕೆಂದು ಅವರ ಮನಸ್ಸಿಗೆ ಬಂದಿತ್ತು. ಆ ಸಂದರ್ಭದಲ್ಲಿ ಮೈಸೂರಿನ ಮಹಾರಾಜರ ಆಸ್ಥಾನ ಪಂಡಿತರಾಗಿದ್ದ ಕುಣಿಗಲ್ ರಾಮಶಾಸ್ತ್ರಿಗಳ ಮಗನಾದ ಶಿವಸ್ವಾಮಿ ಮತ್ತು ಆತನ ಅಣ್ಣ ಗುರುಗಳಿಗೆ ವಂದಿಸಲು ಅರಮನೆಗೆ ಬಂದಿದ್ದರು. ಜಗದ್ಗುರುಗಳು ಜೀವನದಲ್ಲಿ ಏನನ್ನು ಸಾಧಿಸಬೇಕೆಂದಿರುವೆಯಪ್ಪ ಎಂದು ಪ್ರಶ್ನೆಯನ್ನು ಕೇಳಿದರು. ಆಗ ಆ ಬಾಲಕ ಸಂಸ್ಕøತ ಶ್ಲೋಕವನ್ನು ಹೇಳಿದನು. ಅದು ಶಿವ ಸ್ತೋತ್ರವಾಗಿದ್ದು ಆ ಬಾಲಕ ದೃಢ ಭಕ್ತಿಯನ್ನು ಬಿಟ್ಟು ಬೇರೆ ಏನನ್ನೂ ಅಪೇಕ್ಷೆಪಟ್ಟಿರಲಿಲ್ಲ. ಗುರುಗಳಿಗೆ ಆನಂದವಾಗಿ ಈತನೇ ನಮ್ಮ ಮಠಕ್ಕೆ ಶಿಷ್ಯ ಆಗುವುದಕ್ಕೆ ಯೋಗ್ಯ ಎಂದು ಶಿವಾಭಿನವ ನರಸಿಂಹಭಾರತೀ ಎಂದು ನಾಮಕರಣ ಮಾಡಿದರು. ಆ ಸಂದರ್ಭದಲ್ಲಿ ಮೈಸೂರು ಮಹಾರಾಜರೂ ಉಪಸ್ಥಿತರಿದ್ದರು. ಜಗದ್ಗುರುಗಳು ಮತ್ತು ಅವರ ಕಿರಿಯ ಉತ್ತರಾಧಿಕಾರಿಗಳೂ ಸುಮಾರು 12 ವರ್ಷಗಳ ಕಾಲ ದೀರ್ಘವಾದ ದಿಗ್ವಿಜಯ ಯಾತ್ರೆಯನ್ನು ಕೈಗೊಂಡಿದ್ದರು.

ಜಗದ್ಗುರುಗಳ ಯೋಗ ಶಕ್ತಿ ಅಪಾರ:

ಜಗದ್ಗುರುಗಳು ಗೋಕರ್ಣದ ಮಹಾಬಲೇಶ್ವರ ದೇವಾಲಕ್ಕೆ ಹೋಗಿಬರಬೇಕು ಎಂದು ಮನಸ್ಸು ಮಾಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಅವರು ಮಠದಲ್ಲಿಯೇ ಇದ್ದಾಗ ಒಂದು ದಿನ ಪಲ್ಲಕ್ಕಿಯನ್ನು ಸಜ್ಜುಗೊಳಿಸಿ ನಾನು ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಬೇಗ ಹೋಗಬೇಕು ಎಂದು ನುಡಿದಂತೆ ತಕ್ಷಣವೇ ತಮ್ಮ ಯೋಗ ಬಲದಿಂದ ಅಲ್ಲಿಗೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದರು. ಅದೇ ಸಮಯದಲ್ಲಿ ಅಲ್ಲಿರುವ ಭಕ್ತರುಗಳು ಜಗದ್ಗುರುಗಳು ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಿದ್ದುದನ್ನು ಪ್ರತ್ಯಕ್ಷವಾಗಿ ಕಂಡರಂತೆ. ಪರಮಾತ್ಮನಲ್ಲಿ ಒಂದಾಗಿರುವ ಯೋಗಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಹೀಗೆ ಜಗದ್ಗುರುಗಳಿಗೆ ಯೋಗ ಶಕ್ತಿ ಅಪಾರವಾಗಿತ್ತು.

ಜಗದ್ಗುರುಗಳಿಗೆ 82 ವರ್ಷವಾಗಿದ್ದಾಗ:

ಜೇಷ್ಠಮಾಸದ ಶುಕ್ಲಪಕ್ಷದ ಬಿದಿಗೆ ದಿನ 1879ರಲ್ಲಿ ಅವರ ಆತ್ಮವು ಶಾಶ್ವತ ಆನಂದವನ್ನು ಪಡೆಯಿತು. ಜಗದ್ಗುರುಗಳು ದಿನಕ್ಕೆ ಎರಡು ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದರು ಹಾಗೂ ಎರಡು ತುತ್ತು ಅನ್ನವನ್ನು ಸೇವಿಸುತ್ತಿದ್ದರು. ತಮ್ಮ ಯೋಗ ಬಲದಂದಲೇ ಜೀವಿಸಿದ್ದರು ಎಂದು ಹೇಳಬಹುದು. ಪಂಚಾಂಗದ ಪ್ರಕಾರ ಜಗದ್ಗುರುಗಳ 136ನೇ ಆರಾಧನೆ 20-5-15ರಂದು ಶೃಂಗೇರಿಯ ಶಾರದಾ ಪೀಠದಲ್ಲಿ ವಿಶೇಷವಾಗಿ ನಡೆಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top