fbpx
Awareness

ಅಪಾಯದಂಚಿನಲ್ಲಿ ರಾಜಧಾನಿ ದೆಹಲಿ

ರಾಜಧಾನಿ ದೆಹಲಿ ಹಿಮಾಲಯದಿಂದ ಕೇವಲ 521 ಕಿ.ಮೀಟರ್‍ಗಳ ಅಂತರದಲ್ಲಿದೆ. ಹಿಮಾಲಯದಲ್ಲಿ 9.25 ರಿಕ್ಟರ್ ಮಾಪನದಲ್ಲಿ ಭೂಕಂಪ ಸಂಭವಿಸಿದರೆ ಸುತ್ತಲಿನ 2000 ಕಿ.ಮೀ.ಗಳಿಗೂ ಹೆಚ್ಚಿನ ಭೂಪ್ರದೇಶ ತತ್ತರಿಸಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಅಂದಾಗ ಕೇವಲ 521 ಕಿ.ಮೀ.ಗಳ ಅಂತರದಲ್ಲಿರುವ ದೆಹಲಿ ಹೆಚ್ಚು ಹಾನಿಗೊಳಗಾಗಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಅಲ್ಲದೆ ತಜ್ಞರೇ ಹೇಳಿರುವಂತೆ ದೆಹಲಿ ಅತ್ಯಂತ ಅಪಾಯಕಾರೀ ವಲಯದಲ್ಲಿದೆ. ಭಾರತವನ್ನು ವಿಜ್ಞಾನಿಗಳು 5 ಭೂಕಂಪನದ ವಲಯಗಳನ್ನಾಗಿ ವಿಂಗಡಿಸಿದ್ದು, ಭೂಕಂಪನದ ಅತ್ಯಂತ ಅಪಾಯಕಾರೀ ವಲಯ 5ರಲ್ಲಿ ದೆಹಲಿ ಇದೆ. ಭೂವಿಜ್ಞಾನಿಗಳು ಹೇಳುವಂತೆ ದೆಹಲಿಯ ಅಸೋಲಾದಿಂದ ಹರ್ಯಾಣದ ಬಹಾದೂರ್‍ಘರ್‍ವರೆಗೆ ಒಂದು ದೋಷಪೂರ್ಣ ರೇಖೆ ಹರಿದುಬಂದಿದೆ.

ದೆಹಲಿ, ಹರಿದ್ವಾರ ಮತ್ತು ಮೊರಾದಾಬಾದ್ ಈ ದೋಷಪೂರ್ಣ ರೇಖೆಯೊಂದಿಗೆ ಸೇರಿಕೊಂಡಿವೆ. ಈ ಭಾಗದಲ್ಲಿ ರಿಕ್ಟರ್ ಮಾಪನ 6.5 ರಿಂದ 6.7ರಷ್ಟು ಪ್ರಮಾಣದಲ್ಲಿ ಭೂಕಂಪವಾಗುವ ಸಾಧ್ಯತೆಗಳಿವೆ. ಈ ಕಂಪನದ ಮುಖ್ಯ ಕೇಂದ್ರ ಕೇವಲ 8 ಕಿ.ಮೀ.ಗಳಷ್ಟು ಆಳದಲ್ಲಿರುವುದರಿಂದ ಉಂಟಾಗುವ ಅನಾಹುತ ಅತ್ಯಂತ ಭಯಾನಕವಾಗಿರುತ್ತವೆ. ಏಕೆಂದರೆ, ಕಂಪನದ ನಾಭಿಕೇಂದ್ರ ಭೂಮಿಯ ಮೇಲ್ಮೈಗೆ ಹತ್ತಿರದಲ್ಲಿದ್ದರೆ ಹಾನಿಯ ಪ್ರಮಾಣ ಹೆಚ್ಚಿರುತ್ತದೆ. ಬರುವ 50 ವರ್ಷಗಳಲ್ಲಿ ದೆಹಲಿಯಲ್ಲಿ 6ರಿಂದ 7 ರಿಕ್ಟರ್ ಪ್ರಮಾಣದಲ್ಲಿ ಭೂಕಂಪನ ನಿಶ್ಚಿತ ಎಂದು 20 ವರ್ಷಗಳ ಹಿಂದೆಯೇ ವಿಜ್ಞಾನಿಗಳು ಹೇಳಿದ್ದರು. ಈಗ ಉಳಿದಿರುವುದು 30 ವರ್ಷ! ಹಿಮಾಲಯದಲ್ಲಿ ಭಾರೀ ಭೂಕಂಪನವಾದರೆ ಅದರಿಂದ ಚುರುಕುಗೊಂಡು 5ರ ವಲಯವೂ ಕಂಪಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು. ಈಗಿನಿಂದಲೇ ಭೂಕಂಪನವನ್ನು ಎದುರಿಸಲು ದೆಹಲಿ ಆಡಳಿತ ಸಿದ್ಧತೆ ನಡೆಸಬೇಕಾಗಿದೆ.

ಹಿಮಾಲಯ ಅತ್ಯಂತ ಸೂಕ್ಷ್ಮ ಪರಿಸರವನ್ನು ಹೊಂದಿದೆ ಎನ್ನುತ್ತಾರೆ ಭೂವಿಜ್ಞಾನಿಗಳು. ಇದು ಇನ್ನೂ ಗಟ್ಟಿತನವನ್ನು ಮೈಗೂಡಿಸಿಕೊಳ್ಳದೇ ಸಡಿಲವಾಗಿಯೇ ಉಳಿದಿದೆ ಎಂಬುದಕ್ಕೆ ಅಲ್ಲಿ ನಿತ್ಯ ಸಂಭವಿಸುತ್ತಿರುವ ಭೂಜರಿತಗಳೇ ಸಾಕ್ಷಿ. ಆದರೂ ಅಲ್ಲಿ ಅನೇಕ ದೊಡ್ಡ-ಸಣ್ಣಯೋಜನೆಗಳನ್ನು ಹಮ್ಮಿಕೊಂಡಿರುವುದು `ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿರುವ ಪರಿ’ ಯಾಗಿದೆ. ದೇಶದ ಮಹಾ ಲೇಖಾಪಾಲಕರು (ಸಿಎಜಿ) ತಮ್ಮ ವರದಿಯಲ್ಲಿ “ಇಲ್ಲಿ ಸ್ಥಾಪಿಸಲು ಉದ್ಧೇಶಿಸಿರುವ ಜಲವಿದ್ಯುತ್ ಸ್ಥಾವರಗಳು ಎಂದಾದರೂ ಒಂದು ದಿನ ಮಹಾದುರಂತಕ್ಕೆ ಕಾರಣವಾಗುತ್ತವೆ” ಎಂದು ಹೇಳಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಸರಕಾರಗಳು ಈಗ ಅಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಭೂಕಂಪದ ವಲಯ ಎಂದೇ ಗುರುತಿಸಲಾದ ತೇಹರಿಯಲ್ಲಿ ಗಂಗಾ ನದಿಗೆ ಬೃಹತ್ ಆಣೆಕಟ್ಟನ್ನು ನಿರ್ಮಿಸಿದೆ.

ಒಂದು ಅಧ್ಯಯನದ ಪ್ರಕಾರ ಈ ಪ್ರದೇಶದಲ್ಲಿ 70 ದೊಡ್ಡ ಹಾಗೂ 200 ಕಿರು ಜಲವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿದೆ. ಪರಿಸರ ಮತ್ತು ವಿಜ್ಞಾನ ಕೇಂದ್ರದ ನಿರ್ದೇಶಕಿಯಾದ ಸುನೀತಾ ನಾರಾಯಣರು ಹೇಳುತ್ತಾರೆ- “ ಹಿಮಾಲಯದ ತಪ್ಪಲಲ್ಲಿ ನಡೆಯುತ್ತಿರುವ ಈ ಪ್ರಾಕೃತಿಕ ವಿನಾಶಲೀಲೆಯಲ್ಲಿ ಮಾನವನ ಕೈವಾಡವಿರುವುದು ಅತ್ಯಂತ ಸತ್ಯ-ಸ್ಪಷ್ಟ. ಪರಿಸರಕ್ಕೆ ಪೂರಕವಲ್ಲದ ತಮ್ಮ ಮನಸ್ಸಿಗೆ ಬಂದಂತೆ ನಿರ್ಮಿಸಿರುವ ರಸ್ತೆಗಳು ಮತ್ತು ವಿದ್ಯುತ್ ಯೋಜನೆಗಳ ನಿರ್ಮಾಣದಿಂದ ಹಿಮಾಲಯದ ಪರ್ವತ ಪ್ರದೇಶ ನಲುಗಿಹೋಗಿದೆ. ಈ ವಿನಾಶಕ್ಕೆ ಮನುಷ್ಯನ ದುರಾಸೆಯೇ ಮೂಲ.” ನಾವು ಅಭಿವೃದ್ಧಿಯ ನೆಪದಲ್ಲಿ ಆಧುನಿಕತೆ ಆಡಂಬರದಲ್ಲಿ ಪ್ರಕೃತಿಯನ್ನು ಯಾವ ತೆರನಾಗಿ ವಿಕೃತಗೊಳಿಸುತ್ತಿದ್ದೇವೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೇ?

ಸಡಿಲ ಮಣ್ಣಿನ ಹಿಮಾಲಯ ಪರ್ವತ ಪ್ರದೇಶದಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳು ಪರಿಸರ, ಜೀವಸಂಕುಲ, ಸಸ್ಯ ಸಂಪತ್ತು ಮತ್ತು ಅಲ್ಲಿರುವ ಜನರ ಹಿತದೃಷ್ಟಿಯಿಂದ ವೈಜ್ಞಾನಿಕವಾಗಿ ಯಾವುದೇ ರೀತಿಯಿಂದಲೂ ಸಹ್ಯವಲ್ಲ. ಇದನ್ನು ವಿಜ್ಞಾನಿಗಳು, ಪರಿಸರ ತಜ್ಞರು ಹೇಳುತ್ತಲೇ ಬಂದಿದ್ದರೂ ಅಲ್ಲಿರುವ ಪ್ರತಿ ನದಿಗಳ ಸ್ವಚ್ಛಂದ ಹರಿವಿಗೆ ಅಡ್ಡಗಟ್ಟಿ ಅವುಗಳ ಪಾತ್ರವನ್ನೇ ಬದಲಿಸಿದ್ದಾರೆ. ಜಲಾಶಯಗಳಿಗಾಗಿ, ರಸ್ತೆಗಳ ನಿರ್ಮಾಣಕ್ಕಾಗಿ ಅಪೂರ್ವ ಅರಣ್ಯ ಸಂಪತ್ತನ್ನು ಶಾಶ್ವತವಾಗಿ ಅಳಿಸಿಹಾಕಿದ್ದಾರೆ. ಹಿಮಾಲಯದ ಕೆಲವು ಪ್ರದೇಶಗಳನ್ನು ಪ್ರಮುಖವಾಗಿ ಗಂಗೋತ್ರಿಯ ಪರಿಸರವನ್ನು “ಪರಿಸರ ಸೂಕ್ಷ್ಮ ವಲಯ” ಎಂದು ಕೇಂದ್ರ ಪರಿಸರ ಮಂತ್ರಾಲಯ ಘೋಷಿಸಿದಾಗ ಅದರ ವಿರುದ್ಧ ರಾಜಕಾರಣಿಗಳೆಲ್ಲರೂ ಪ್ರತಿಭಟನೆ ನಡೆಸಿದ್ದು ಇಲ್ಲಿ ಸ್ಮರಣಾರ್ಹ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top