ಉಡುಪಿ ಜಿಲ್ಲೆಯ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನವು ಕುಂದಾಪುರದಿಂದ ಸುಮಾರು ೯ ಕಿ ಮೀ ದೂರದಲ್ಲಿದೆ. ಆನೆಗುಡ್ಡೆ ಎಂಬ ಹೆಸರು ಆನೆ ಮತ್ತು ಗುಡ್ಡ ಎಂಬ ಎರಡು ಪದಗಳಿಂದ ಬಂದಿದ್ದು ಮೂಲತಃ ಆನೆ ಮುಖ ಹೊಂದಿರುವ ವಿನಾಯಕನನ್ನು ಪ್ರತಿನಿಧಿಸುತ್ತದೆ.
ಪುರಾಣ ಹಿನ್ನಲೆ:
ಮಹಾಭಾರತದ ಕಾಲದಲ್ಲಿ ಈ ಪ್ರದೇಶದಲ್ಲಿ ಬರಗಾಲ ಬಂದಾಗ ಮಹರ್ಷಿ ಅಗಸ್ತ್ಯರು ಮಳೆ ಬರಿಸಲು ಯಜ್ಞವನ್ನು ಮಾಡಲು ನಿರ್ಧರಿಸುತ್ತಾರೆ. ಅವರು ಮಾಡುವ ಹೋಮವನ್ನು ಕುಂಭಾಸುರ ಹಾಗು ಅವರ ಸೇವಕರು ತಪ್ಪಿಸಲಾಗಿ, ಮಹರ್ಷಿ ಅಗಸ್ತ್ಯರು ಶ್ರೀ ಸಿದ್ಧಿವಿನಾಯಕನ ಮೊರೆ ಹೋಗುತ್ತಾರೆ.ಅಗಸ್ತ್ಯರ ಪ್ರಾರ್ಥನೆಗೆ ಓಗೊಟ್ಟು ಗಜಾನನನು ವನವಾಸದಲ್ಲಿದ್ದ ಪಾಂಡವರಲ್ಲೊಬ್ಬನಾದ ಭೀಮಸೇನನನ್ನು ಕರೆದು ತನ್ನ ಶೂಲವನ್ನು ಕೊಟ್ಟು ಕುಂಭಾಸುರನನ್ನು ವಧಿಸಲು ಆದೇಶಿಸುತ್ತಾನೆ. ಗಣೇಶನ ಆಜ್ಞೆಯಂತೆ ಭೀಮನು ಕುಂಭಾಸುರನನ್ನು ಹತ್ಯೆಗೈಯಲು ಅಗಸ್ತ್ಯರ ಹೋಮವು ಸಾಂಗವಾಗಿ ನೆರವೇರುತ್ತದೆ. ಕುಂಭಾಸುರನನ್ನು ವಧೆಗೈದ ಈ ಪ್ರದೇಶವನ್ನು ಅಂದಿನಿಂದ ಕುಂಭಾಸಿಯೆಂದು ಸಹ ಕರೆಯಲಾಗುತ್ತದೆ.
ಸ್ಥಳ ಮಹಾತ್ಮೆ:
ಆನೆಗುಡ್ಡೆಯ “ಶ್ರೀ ಮಹಾಗಣಪತಿ” ಕ್ಷೇತ್ರವು ಕರಾವಳಿಯ ೭ ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ.ಇಲ್ಲಿರುವ ಶ್ರೀ ಮಹಾಗಣಪತಿಯು ಉದ್ಭವ ಮೂರ್ತಿಯಾಗಿದ್ದು ವರ್ಷೇ ವರ್ಷೇ ಬೆಳೆಯುತ್ತಾನೆಂಬ ವದಂತಿಯೂ ಇದೆ. ಭಕ್ತರು ಇಲ್ಲಿ ನೆಲೆಸಿರುವ ಗಣಪತಿಯನ್ನು ‘ಸಿದ್ಧಿ ವಿನಾಯಕ’, ‘ಸರ್ವ ಸಿದ್ಧಿ ಪ್ರದಾಯಕ’ ಮುಂತಾದ ಹೆಸರುಗಳಿಂದ ಪೂಜಿಸಿ ತಮ್ಮೆಲ್ಲ ಇಷ್ಟಾರ್ಥವನ್ನು ಬೇಡಿ ಪಡೆಯುತ್ತಾರೆ.
ಇಲ್ಲಿಗೆ ತಲುಪುವುದು ಹೇಗೆ?
ಕುಂಭಾಸಿಯು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡಿದ್ದು ಮಂಗಳೂರಿನಿಂದ ೯೬ ಕಿಮೀ , ಉಡುಪಿಯಿಂದ ೩೦ ಕಿಮೀ, ಬೆಂಗಳೂರಿನಿಂದ ಸುಮಾರು ೪ಊ ಕಿಮೀ ಅಂತರದಲ್ಲಿದೆ.ಉಡುಪಿ, ಮಂಗಳೂರು, ಕುಂದಾಪುರದಿಂದ ನಿರಂತರ ಸಾರಿಗೆ ಸೌಕರ್ಯವಿದ್ದು ಕುಂಭಾಸಿ ಬಸ್ ಸ್ಟಾಂಡಿಂದ ಮೆಟ್ಟಿಲನ್ನೇರಿ ಅಥವಾ ಆಟೋರಿಕ್ಷಾದ ಮೂಲಕ ದೇಗುಲದ ಪ್ರಾಂಗಣವನ್ನು ತಲುಪಬಹುದು.ಭಜಿಪೆ ವಿಮಾನ ನಿಲ್ದಾಣವು ಹಾಗು ಬಾರ್ಕೂರು ರೈಲ್ವೆ ನಿಲ್ದಾಣಗಳು ಹತ್ತಿರದಲ್ಲಿವೆ. ಇಲ್ಲಿ ಇಳಿದು ಕೊಳ್ಳಲು ಬಯಸುವವರಿಗೆ ರೂಮುಗಳ ಸೌಕರ್ಯವಿದ್ದು ದೇವಸ್ಥಾನದ ಸಮಿತಿಯವರಿಗೆ ಕರೆ ಮಾಡಿ ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.
ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮೆಲ್ಲ ಕಷ್ಟಗಳನ್ನು ಪರಿಹರಿಸಿಕೊಳ್ಳಿ.
-ಸರ್ವೇ ಜನಾಃ ಸುಖಿನೋ ಭವಂತು-
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
