ಜಗತ್ತಿನ ಅತೀ ದೊಡ್ಡ ಇಂಟರ್ ನೆಟ್ ವಂಚನೆ ಪ್ರಕರಣವನ್ನು ಭೇಧಿಸಿರುವ ಉತ್ತರ ಪ್ರದೇಶ ಪೊಲೀಸರು ಮೂವರನ್ನು ಬಂಧಿಸಿ, 500 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಈ ಮೂವರು 65 ಲಕ್ಷ ಜನರಿಂದ 3500 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ವಿಶೇಷ ಕಾರ್ಯಾಪಡೆ ಈ ಪ್ರಕರಣವನ್ನು ಭೇದಿಸಿದ್ದು, ಅನುಭವ್ ಮಿತ್ತಲ್, ಶ್ರೀಧರ್ ಪ್ರಸಾದ್ ಮತ್ತು ಮಹೇಶ್ ದಯಾಲ್ ಅವರನ್ನು ಬಂಧಿಸಿದ್ದಾರೆ.
Socialtradr.biz ಎಂಬ ವೆಬ್ಸೈಟ್ ನಡೆಸುತ್ತಿದ್ದ ಈ ಮೂವರು ಬಂಡವಾಳ ಹೂಡಿಕೆದಾರರು 5,700ರಿಂದ 57,500 ಕೋಟಿವರೆಗೆ ಹೂಡಿಕೆ ಮಾಡಬಹುದಾಗಿತ್ತು. ಕಂಪನಿ ಅಕೌಂಟ್ ಗೆ ಒಮ್ಮೆ ಕ್ಲಿಕ್ ಮಾಡಿದರೆ 5 ಡಾಲರ್ ದೇಣಿಗೆ ಪಡೆಯಲಾಗುತ್ತದೆ. ಈ ಮೂಲಕ ಕಂಪನಿಯ ಷೇರುದಾರರಾಗಬಹುದು. 5 ಡಾಲರ್ ನೀಡಿದರೆ ನೀವು 6 ಡಾಲರ್ ಆದಾಯ ಗಳಿಸಬಹುದು ಎಂದು ವೆಬ್ಸೈಟ್ನಲ್ಲಿ ಆಮೀಷ ಒಡ್ಡಲಾಗಿತ್ತು.
ಅಬ್ಲೆಜ್ ಇನ್ಫೊ ಸೋಲುಷನ್ಸ್ ಪ್ರವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಯ್ಡಾದಲ್ಲಿ ಕಂಪನಿ ನೋಂದಣಿ ಮಾಡಿಸಿಕೊಂಡಿದ್ದ ಈ ಮೂವರು ಆರೋಪಿಗಳು ಪದೇಪದೆ ವೆಬ್ಸೈಟ್ ವಿಳಾಸ ಬದಲಿಸುವ ಮೂಲಕ 65 ಲಕ್ಷ ಜನರಿಂದ 3700 ಕೋಟಿ ರೂ.ವನ್ನು ಈ ರೀತಿ ದೇಣಿಗೆ ಪಡೆದು ವಂಚಿಸಿದ್ದರು.
ಗಜಿಯಾಬಾದ್ನಿಂದ ಬಿ.ಟೆಕ್ ಪದವಿ ಪಡೆದಿದ್ದ ಮಿತ್ತಲ್ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಪ್ರಸಾದ್ ಎಂಬಾತ ಆಂಧ್ರಪ್ರದೇಶದ ವಿಶಾಖಪಟ್ಟಣದ ನಿವಾಸಿಯಾಗಿದ್ದಾನೆ. ದಯಾಲ್ ಎಂಬಾತ ಉತ್ತರ ಪ್ರದೇಶದ ಮಥುರಾದ ನಿವಾಸಿಯಾಗಿದ್ದಾನೆ.
2015 ಆಗಸ್ಟ್ ನಲ್ಲಿ ಆರಂಭವಾದ ಈ ವೆಬ್ಸೈಟ್ ನಾಲ್ಕು ಪ್ಯಾಕೇಜ್ಗಳನ್ನು ಘೋಷಿಸಿತ್ತು. ಆಸಕ್ತರು ಕಂಪನಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ 5 ಡಾಲರ್ ಪಾವತಿಸಿದ ಮೇಲೆ ನಿಮಗೆ ಲಿಂಕ್ ಕಳುಹಿಸಿದ ಪೇಜ್ ಲೈಕ್ ಮಾಡಿ ಎಂಬ ಸಂದೇಶ ಬರುತಿತ್ತು. ಆ ಸಂದೇಶ ನಕಲಿ ಆಗಿರುತಿತ್ತು. ಈ ರೀತಿ ಲಕ್ಷಾಂತರ ಜನರಿಗೆ ವಂಚಿಸಿದ್ದು, ಇದರ ಹಿಂದೆ ಇನ್ನೆಷ್ಟು ಮಂದಿ ಇದ್ದಾರೆ ಎಂದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
