fbpx
Awareness

ಬಿ.ಎಸ.ಎಫ್.ಯೋಧ ತೇಜ್ ಬಹಾದ್ದೂರ್-ರವರ ನೋವಿನ ಕಥೆ!!!

ಯಾವುದೇ ದೇಶಕ್ಕೆ ಆ ದೇಶದ ಸೈನ್ಯ, ಶಕ್ತಿ ಮತ್ತು ಹೆಮ್ಮೆಯ ಸಂಕೇತ. ಹವಾಮಾನ ವೈಪರೀತ್ಯ ಮುಂತಾದ ಹಲವು ಸಂಕಷ್ಟಗಳ ನಡುವೆಯೂ ದೇಶ ಕಾಯುವ ಸೈನಿಕರ ಬಗ್ಗೆ ಜನರಿಗೆ ಸಹಜ ಗೌರವ ಭಾವ ಇರುತ್ತದೆ. ಯುದ್ಧ, ಉಗ್ರರ ವಿರುದ್ಧ ದಾಳಿ, ವಿಪತ್ತು ನಿರ್ವಹಣೆ ಮುಂತಾದ ಶೌರ್ಯ ಸಂದರ್ಭಗಳಲ್ಲಿ ಗಾಯಾಳು ಅಥವಾ ಹುತಾತ್ಮರಾಗುವ ಯೋಧರ ಬಗ್ಗೆ ಇಡೀ ದೇಶ ಮಮ್ಮಲ ಮರುಗುತ್ತದೆ. ಯೋಧ ಎಲ್ಲಿಯೇ ಇರಲಿ, ಆತನ್ನು ಕಣ್ಣಾರೆ ನೋಡದೇ ಇರಲಿ ಆತ ತನ್ನ ಕುಟುಂಬದ ಭಾಗ ಎಂದು ಜನ ಭಾವಿಸುವುದು ಅತಿಶಯವೇನೂ ಅಲ್ಲ.
ದೇಶವನ್ನು ಕಾಯುವ ಯೋಧರಿಗೆ ಸರ್ಕಾರ ಅತ್ಯುತ್ತಮ ಸೌಲಭ್ಯ ನೀಡಬೇಕು. ಉತ್ತಮ ಆಹಾರ, ಆಧುನಿಕ ಆಯುಧಗಳು, ಚಳಿ ಪ್ರದೇಶಗಳಲ್ಲಿ ಬೆಚ್ಚನೆಯ ಉಡುಪು ಮುಂತಾದವುಗಳು ಅವರಿಗೆ ಸಿಗಬೇಕು ಎಂದು ಜನ ಬಯಸುತ್ತಾರೆ. ಈ ವಿಷಯದಲ್ಲಿ ಅವರಿಗೆ ತೊಂದರೆ ಆದರೆ ತಾವೇ ನೋವುಂಡವರಂತೆ ಭಾವಿಸುತ್ತಾರೆ. ಯೋಧರಿಗೆ ಉತ್ತಮ ಸೌಲಭ್ಯ ನೀಡುವುದು ಯಾವುದೇ ಸರ್ಕಾರದ ಕರ್ತವ್ಯ. ದೇಶದ ಹೆಮ್ಮೆ ಸಹ. ಇದಕ್ಕಾಗಿ ಕೇಂದ್ರ ಸರ್ಕಾರ ಭಾರೀ ಹಣನ್ನು ಬಜೆಟ್‍ನಲ್ಲಿ ಮೀಸಲಿಡುತ್ತದೆ.
ಆದರೆ ಜನರ ಈ ಸದಾಶಯ ಹಾಗೂ ನಂಬಿಕೆಯನ್ನು ಚೂರು ಮಾಡುವ ಪ್ರಕರಣವೊಂದು ನಡೆದು ಹೋಗಿದೆ. ಬಿಎಸ್‍ಎಫ್ ಯೋಧ ತೇಜ್ ಬಹದ್ಧೂರ್ ಸೇನೆಯಲ್ಲಿ ಯೋಧರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಅರೋಪಿಸಿದ ವಿಡಿಯೋ ಹರಿಬಿಟ್ಟಿದ್ದಾರೆ. ಇದು ದೇಶದಾದ್ಯಂತ ಸಂಚಲನ ಮೂಡಿಸಿದೆ. ಅಷ್ಟು ಮಾತ್ರವಲ್ಲ, ನಮ್ಮ ಸಾಂಪ್ರದಾಯಿಕ ವೈರಿ ಎಂದೇ ಭಾವಿಸಲಾಗಿರುವ ನೆರೆಯ ಪಾಕಿಸ್ತಾನ ಸೇರಿದಂತೆ ವಿಶ್ವದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Image result for tej bahadur
ಇದರಿಂದ ನಮ್ಮ ಸೇನೆಯ ಹಾಗೂ ದೇಶದ ಘನತೆಗೆ ಕುಂದು ಬಂದಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಭಾರತೀಯ ಸೇನೆ ವಿಶ್ವಕ್ಕೆ ಮಾದರಿ. ಯುದ್ಧ ಹಾಗೂ ಹಲವು ಸಂದರ್ಭಗಳಲ್ಲಿ ಇದು ಸಾಬೀತಾಗಿದೆ. ಆದರೆ ದೇಶಕ್ಕಾಗಿ ಪ್ರಾಣ ಕೊಡುವ, ದೇಶದ ಮಾನ ಉಳಿಸುವ ಸೈನಿಕರನ್ನು ನಾವು ಯಾವ ರೀತಿ ನೋಡಿಕೊಳ್ಳುತ್ತಿದ್ದೇವೆ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.
ಜೀವದ ಹಂಗು ತೊರೆದು, ದೇಶಕ್ಕಾಗಿ ತನ್ನ ಸಂಸಾರ ಸುಖವನ್ನೇ ತೊರೆದು ಕೆಲಸ ಮಾಡುವ ಸೈನಿಕರಿಗೆ ನಾವು ಕೊಡುವ ಮರ್ಯಾದೆ ಇದೇನಾ? ಎಂಬ ಪ್ರಶ್ನೆಯನ್ನು ಜನ ಕೇಳತೊಡಗಿದ್ದಾರೆ. ಅವರಿಗೆ ಉತ್ತಮ ಆಹಾರ, ಉಡುಪು ಒದಗಿಸಲಾಗದ ಸ್ಥಿತಿಯಲ್ಲಿ ದೇಶ ಇಲ್ಲ. ನಮ್ಮ ಸೈನಿಕ ಬಲವನ್ನು ಆಗಾಗ ಜಗತ್ತಿಗೇ ಹೆಮ್ಮೆಯಿಂದ ಪರಿಚಯಿಸುವ ಕೇಂದ್ರ ಸರ್ಕಾರ ಈಗ ಕಣ್ಣು ತೆರೆಯಲೇಬೇಕು. ತೇಜ್ ಬಹದ್ಧೂರ್ ಮಾಡಿರುವ ಆರೋಪದ ಹಿಂದೆ ರಾಜಕೀಯ ಹುಡುಕುವ ಸಣ್ಣತನ ಪ್ರದರ್ಶನ ಮಾಡಬಾರದು. ಈ ವಿಷಯದಲ್ಲಿ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ದಿಟ್ಟತನ ತೋರಬೇಕು. ಇಂತಹ ಅಸಮಾಧಾನ ಮುಂದಿನ ದಿನಗಳಲ್ಲಿ ಭುಗಿಲೇಳದಂತೆ ಈಗಲೇ ಸೂಕ್ತ ಕ್ರಮ ಕೈಗೊಳ್ಳಬೇಕು.

Image result for tej bahadur
ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರಧಾನಿ ಕಾರ್ಯಾಲಯ ಗೃಹ ಸಚಿವಾಲಯದಿಂದ ವರದಿ ಕೇಳಿದೆ. ಇದು ಇಷ್ಟಕ್ಕೆ ಮುಗಿದರೆ ಪ್ರಯೋಜನ ಇಲ್ಲ. ಇತ್ತೀಚೆಗೆ ಪಾಕ್ ವಿರುದ್ಧ ನಡೆಸಿದ ನಿರ್ದಿಷ್ಟ ದಾಳಿ ಹಾಗೂ ಪ್ರಧಾನಿ ಆಗಿದ್ದ ವಾಜಪೇಯಿ ಕಾಲದಲ್ಲಿ ನಡೆದ ಕಾರ್ಗಿಲ್ ಸಮರದ ವಿಜಯವನ್ನು ಸದಾ ಸ್ಮರಿಸುವ ಕೇಂದ್ರ ಸರ್ಕಾರ ಅದಕ್ಕೆಲ್ಲಾ ಕಾರಣರಾದ ಸೈನಿಕರ ಮೂಲ ಸೌಕರ್ಯದ ಬಗ್ಗೆ ಮರು ಚಿಂತನೆ ಮಾಡಬೇಕು. ದೇಶದ ಮಾನ ಹಾಳಾಗದಂತೆ ಎಚ್ಚರ ವಹಿಸಬೇಕು. ಇದು ಇಂದಿನ ತುರ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top