fbpx
Awareness

ವಾಯು ಮಾಲೀನ್ಯದಿಂದ ಮನಕುಲ ನಾಶ..!

ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗಳೂ ಜೀವಂತವಾಗಿರಲು ಶುದ್ಧ ಗಾಳಿ ಬಹಳ ಮುಖ್ಯವಾದದ್ದು. ಪ್ರಾಣ ವಾಯುವಿಲ್ಲದೆ ಯಾವ ಜೀವಿಯೂ ಕೆಲವು ನಿಮಿಷಗಳಿಗಿಂತ ಹೆಚ್ಚು ಬದುಕಿರಲಾರದು. ಇವತ್ತು ಪ್ರಗತಿಯ ಹೆಸರಿನಲ್ಲಿ ಮಾನವನು ಉಸಿರಾಡಲು ಬೇಕಾದ ಗಾಳಿಯನ್ನೂ ಸಂಪೂರ್ಣವಾಗಿ ಕಲುಷಿತಗೊಳಿಸಿದ್ದಾನೆ. ಇದರಿಂದಾಗಿಯೇ ಇವತ್ತು ಪ್ರಪಂಚದಾದ್ಯಂತ ಶ್ವಾಸಕೋಶದ ಕ್ಯಾನ್ಸರ್ ವಿಪರೀತವಾಗಿದ್ದು ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಪ್ರತಿ ನಿತ್ಯವೂ ಸೆಕೆಂಡಿಗೆ 5,000 ಘನ ಅಡಿ ತೈಲವನ್ನು ಭೂಮಿಯಿಂದ ತೆಗೆದು ಬಳಸುತ್ತಿದ್ದೇವೆ.

Image result for air pollution

ಪ್ರತಿ ವರ್ಷವೂ ವಾತಾವರಣದಲ್ಲಿರುವ 24 ಬಿಲಿಯನ್ ಟನ್ ಇಂಗಾಲಾಮ್ಲಕ್ಕೆ ಶೇ. 40 ಭಾಗ ಹೆಚ್ಚುವರಿ ಇಂಗಾಲಾಮ್ಲವನ್ನು ಸೇರಿಸುತ್ತಿದ್ದೇವೆ. ವಾತಾವರಣದಲ್ಲಿರುವ ಇಂಗಾಲಾಮ್ಲದ ಮೊತ್ತ 400 ಪಾಟ್ರ್ಸ್ ಪರ್ ಮಿಲಿಯನ್ ಗಡಿ ದಾಟಿದೆ. ಇದರಿಂದಾಗಿ ಜಗತ್ತಿನ ತಾಪಮಾನವು ಏರಿಕೆಯಾಗಿದೆ.
2014 ಮಾನವ ಇತಿಹಾಸದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಿಸಿದ ವರ್ಷವಾಗಿದೆ. ಧ್ರುವ ಪ್ರದೇಶದಲ್ಲಿನ ಹಿಮರಾಶಿ ಶೀಘ್ರವಾಗಿ ಕರಗುತ್ತಿದೆ. ಜಾಗತಿಕ ಸಮುದ್ರ ಮಟ್ಟ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ. ಇವತ್ತು ಪ್ರಪಂಚದಲ್ಲಿ 100 ಕೋಟಿಗೂ ಹೆಚ್ಚು ಕಾರುಗಳಿವೆ.

Image result for air pollution

ಪ್ರತಿನಿತ್ಯ 1,25,000 ಹೊಸ ಕಾರು ತಯಾರಾಗುತ್ತಿವೆ. ಪ್ರಪಂಚದ ಒಟ್ಟು ಕಾರಿನ ಸಂಖ್ಯೆಯಲ್ಲಿ ಅಮೆರಿಕ
ದೇಶಕ್ಕೇ 25 ಭಾಗವಿದೆ. ಈ ಕಾರುಗಳ ಜೊತೆ ಬಸ್ಸುಗಳು, ಲಾರಿಗಳು, ದ್ವಿಚಕ್ರವಾಹನಗಳು, ವಿವಿಧ ವಿಮಾನಗಳು, ಹಡಗುಗಳು, ದೋಣಿಗಳು, ಮಿಲಿಟರಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಮುಂತಾದವುಗಳ ಸಂಖ್ಯೆ ಹಲವಾರು ಕೋಟಿಗಳಿವೆ. ಇದಲ್ಲದೆ ಲಕ್ಷಾಂತರ ಕೈಗಾರಿಕಾ ಘಟಕಗಳಿಂದ ಹೊರಸೂಸುವ ಹೊಗೆ ಹಾಗೂ ಮಾನವನ ಇತರ ಚಟುವಟಿಕೆಗಳಿಂದ ಇದರಲ್ಲಿ ಸಿಗರೇಟು, ಬೀಡಿ ಇವೆಲ್ಲದಿಂದಲೂ ಹೊರ ಬರುವ ವಿಷ ಅನಿಲಗಳನ್ನು ಸೇವಿಸುತ್ತಿರುವ ಮಾನವನ ಆರೋಗ್ಯದ ಮೇಲಾಗುತ್ತಿರುವ ಭೀಕರ ಪರಿಣಾಮ ಊಹೆಗೂ ನಿಲುಕದ್ದು.

Image result for air pollution
70ನೇ ದಶಕದಲ್ಲಿ ಜಪಾನಿನಲ್ಲಿರುವ ಮಕ್ಕಳು ತಮ್ಮ ಶಾಲೆಗಳಲ್ಲಿನ ಆಟದ ಮೈದಾನಗಳಲ್ಲಿ ಪೆಟ್ರೋಲ್‍ನ ಹೊಗೆಯಿಂದಾಗಿ ಕುಸಿದು ಬೀಳುತ್ತಿದ್ದರು. ಇದಕ್ಕೆ “ಯೊಕಯಿಚಿ ಆಸ್ತಮ’’ವೆಂದು ಕರೆದಿದ್ದರು. 50ನೇ ದಶಕದಲ್ಲಿ ಲಂಡನ್‍ನಲ್ಲಿ ವಾಯುಮಾಲಿನ್ಯದಿಂದಾಗಿ 4,000 ಜನರು ಅಸುನೀಗಿದ್ದರು. ಈಗ ಮುಖವಾಡ ಧರಿಸಿ ಆಮ್ಲಜನಕದ ಸಿಲಿಂಡರ್ ಮುಖಾಂತರ ಉಸಿರಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ದೆಹಲಿ, ಬೀಜಿಂಗ್‍ನಲ್ಲಿ ಪ್ರತಿ ವರ್ಷ ಚಳಿಗಾಲದಲ್ಲಿ ವಾಯು ಮಾಲಿನ್ಯ ಅಧಿಕವಾಗಿದ್ದು ಜನರಿಗೆ ಮನೆಯಿಂದ ಹೊರಗೆ ಹೋಗದಂತೆ ಎಚ್ಚರಿಸುತ್ತಾರೆ. ಇದರ ಜೊತೆಗೆ ಇಂಡೋನೇಷ್ಯಾದಲ್ಲಿ ಪ್ರತಿ ವರ್ಷವೂ ಕಾಡುಗಳನ್ನು ಸುಡುವುದರಿಂದ ಸುತ್ತಮುತ್ತಲಿನ ದೇಶಗಳಾದ ಮಲೇಷ್ಯಾ, ಸಿಂಗಪೂರ್‍ನ ಜನರು ಉಸಿರಾಡಲು ಹರಸಾಹಸ ಪಡುತ್ತಾರೆ. ಮಧ್ಯಾಹ್ನದ ಹೊತ್ತ ಹೊಗೆಯಿಂದಾಗಿ ಕೆಲವೇ ಅಡಿಯಷ್ಟು ದೂರದಲ್ಲಿರುವುದೂ ಕಾಣದೇಹೋಗುತ್ತದೆ.

Image result for air pollution bangalore
ಇವತ್ತು ಬೆಂಗಳೂರಿನಲ್ಲೇ 80 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಪ್ರತಿದಿನವೂ 1000ಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗೆ ಬರುತ್ತಿವೆ. ವಾಹನಗಳಿಂದ ಹೊರಸೂಸುವ ಅನಿಲಗಳ ಪೈಕಿ ಓಜೋನ್ ಸಹ ಒಂದು. ಇದು ವಾತಾವರಣದ ಮೇಲ್ಪದರದಲ್ಲಿದ್ದರೆ ಸೂರ್ಯನಿಂದ ಬರುವ ಹಾನಿಕಾರಕ ಕಿರಣಗಳನ್ನು ತಡೆದು ನಮ್ಮನ್ನು ರಕ್ಷಿಸುತ್ತವೆ. ಅದೇ ನೆಲದ ಮೇಲೆ ಇದ್ದಾಗ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿ ಅವುಗಳ ಉತ್ಪಾದನೆ ಶೇ. 20ರಿಂದ 30 ಭಾಗ ಕುಂಠಿತಗೊಳ್ಳುತ್ತದೆ. ಇದಲ್ಲದೆ ಕೃತಕವಾಗಿ ತಯಾರಿಸಲ್ಪಡುವ 65,000 ರಾಸಾಯನಿಕ ವಸ್ತುಗಳು ವಾತಾವರಣವನ್ನು ವಿಪರೀತವಾಗಿ ಕಲುಷಿತಗೊಳಿಸುತ್ತಿವೆ. ಹೀಗೇ ಮುಂದುವರೆದರೆ ಮಾನವ ಜನಾಂಗದ ಮೇಲೆ ಬರುವ ದಿನಗಳಲ್ಲಿ ದುಷ್ಪರಿಣಾಮ ಬೀರುವುದರಲ್ಲಿ ಯಾವ ಅನುಮಾನವೂ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top