fbpx
News

ಕಂಬಳ ಓಟಕ್ಕೆ ಸಮ್ಮತಿ, ಸಾಮಾನ್ಯ ಕನ್ನಡಿಗನಿಗೆ ಸಿಕ್ಕ ಜಯ

ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ, ಕೇಂದ್ರ ಸರ್ಕಾರ 1960ರಲ್ಲಿ ಜಾರಿಗೆ ತಂದ ಪ್ರಾಣಿ ಹಿಂಸೆ ತಡೆ ಕಾಯ್ದೆಯಿಂದ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ವಿನಾಯ್ತಿ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ.

ಕಂಬಳ ಮತ್ತು ಎತ್ತಿನ ಗಾಡಿ ಓಟ (ಹೋರಿಗಳ ಓಟ) ಕಾನೂನುಬದ್ಧಗೊಳಿಸುವ ತಿದ್ದುಪಡಿ ಮಸೂದೆಗೆ ವಿಧಾನಸಭೆ ಸೋಮವಾರ ಒಕ್ಕೊರಲಿನಿಂದ ಅಂಗೀಕಾರ ನೀಡಿತು.

ರಾಜ್ಯ ಸರ್ಕಾರ ಸಾಂಪ್ರದಾಯಿಕ ಕ್ರೀಡೆಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಪಶುಸಂಗೋಪನೆ ಸಚಿವ ಎ. ಮಂಜು ಅವರು ಮಂಡಿಸಿದ ‘ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ’ಯನ್ನು ಪಕ್ಷಾತೀತವಾಗಿ ಎಲ್ಲ ಶಾಸಕರು ಬೆಂಬಲಿಸಿದರು.

ಕೇಂದ್ರ ಸರ್ಕಾರ 1960ರಲ್ಲಿ ಜಾರಿಗೆ ತಂದ ಪ್ರಾಣಿ ಹಿಂಸೆ ತಡೆ ಕಾಯ್ದೆಯಿಂದ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ವಿನಾಯ್ತಿ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ.

‘ರಾಜ್ಯದ ಜನರಲ್ಲಿನ ಸಂಪ್ರದಾಯ ಮತ್ತು ಸಂಸ್ಕೃತಿ ಸಂರಕ್ಷಿಸಲು ಮತ್ತು ಉತ್ತೇಜಿಸಲು ಸರ್ಕಾರ ಈ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿದೆ. ಕಂಬಳಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕಂಬಳದ ಬಗ್ಗೆ ಅಧ್ಯಯನ ಮಾಡಲು ರಚಿಸಿದ ಸಮಿತಿ ನೀಡಿದ ವರದಿ ಆಧರಿಸಿ ಸುಗ್ರೀವಾಜ್ಞೆ ತಂದು ಅವಕಾಶ ಮಾಡಿ ಕೊಡಬಹುದಾಗಿತ್ತು. ಅದರ ಬದಲು ಕಾನೂನು ಮಾಡಿದ್ದೇವೆ’ ಎಂದು ಮಂಜು ಹೇಳಿದರು.

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಸಾಂಪ್ರದಾಯಿಕವಾಗಿ ನಡೆಯುವ ಇಂತಹ ಕ್ರೀಡೆಗಳಿಗೆ ಸಂಬಂಧಿಸಿದ ಆದೇಶ ನೀಡುವ ಸಂದರ್ಭದಲ್ಲಿ ನ್ಯಾಯಾಲಯಗಳು ವಿಸ್ತೃತವಾಗಿ ಚರ್ಚೆ ಮಾಡಬೇಕು. ಇಲ್ಲದಿದ್ದರೆ ಸಾಮಾನ್ಯ ಜನ ದಂಗೆ ಏಳಬಹುದು’ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯ ಗೋವಿಂದ ಕಾರಜೋಳ, ‘ಕಾರ ಹುಣ್ಣಿಮೆ ದಿನ ಉತ್ತರ ಕರ್ನಾಟಕ ಭಾಗದಲ್ಲಿ ತೆರಬಂಡಿ ಓಟ (ಎತ್ತುಗಳ ಓಟ) ಸ್ಪರ್ಧೆ ಆಯೋಜಿಸಲಾಗುತ್ತದೆ. ಅಲ್ಲದೆ, ರಾಜ್ಯದಲ್ಲಿ ಟಗರು ಕಾಳಗ, ಕೋಳಿ ಅಂಕ, ನಾಯಿಗಳ ಓಟ ಅಲ್ಲಲ್ಲಿ ನಡೆಯುತ್ತವೆ. ಅವುಗಳ ಆಯೋಜನೆಗೂ ಮಸೂದೆಯಲ್ಲಿ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಯಾವುದೇ ರೀತಿಯಲ್ಲಿ ನಡೆಯುವ ಹೋರಿಗಳ ಓಟದ ಸ್ಪರ್ಧೆ ಅಥವಾ ಮರದ ನೊಗದ ನೆರವಿನಿಂದ ಎತ್ತುಗಳನ್ನು ಕಟ್ಟಿರುವ ಗಾಡಿ ಓಟವನ್ನು ಒಳಗೊಂಡ, ಯಾವುದೇ ಹೆಸರಿನಿಂದ ಕರೆಯಲಾಗುವ ಸಾಂಪ್ರದಾಯಿಕ ಕ್ರೀಡೆಗಳಿಗೆ ಅನುಮತಿ ನೀಡುವಂತೆ ಮಸೂದೆ ರೂಪಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಜೆಡಿಎಸ್‌ನ ವೈ.ಎಸ್‌.ವಿ. ದತ್ತ, ‘ಈ ಕ್ರೀಡೆಗಳು ಸಾಂಪ್ರದಾಯಿಕವೇ ಸಂಸ್ಕೃತಿಗೆ ಸಂಬಂಧಿಸಿದವುಗಳೇ ಎನ್ನುವ ಅಂಶವನ್ನು ಮಸೂದೆಯಲ್ಲಿ ಸ್ಪಷ್ಟಪಡಿಸಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿಯ ಸುನೀಲ್‌ಕುಮಾರ್‌, ‘ಮಸೂದೆ ರಚನೆಯಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಈ ವರ್ಷ 15ಕ್ಕೂ ಹೆಚ್ಚು ಕಂಬಳಗಳು ನಿಂತಿವೆ. ಈ ವಿಷಯದಲ್ಲಿ ಸರ್ಕಾರದ ವಾದವೇನು. ತಡೆಯಾಜ್ಞೆ ತೆರವಿಗೆ ಏನು ಕ್ರಮ ತೆಗೆದುಕೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ಅದಕ್ಕೆ ಯಾವುದೇ ಉತ್ತರಿಸದ ಸಚಿವ ಮಂಜು, ‘ಈ ಕ್ರೀಡೆಗಳನ್ನು ವೃತ್ತಿಪರವಾಗಿ ಮತ್ತು ಪ್ರಜಾಪ್ರಭುತ್ವ ರೀತಿಯಲ್ಲಿ ಆಯೋಜಿಸಲು ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ತಿದ್ದುಪಡಿ ಕಾನೂನಿಗೆ ಕೇಂದ್ರ ಸರ್ಕಾರದ ಅಂಗೀಕಾರ ಸಿಗಲು ನಿಮ್ಮ ಸಹಕಾರ ಬೇಕು’ ಎಂದು ಬಿಜೆಪಿ ಸದಸ್ಯರನ್ನು ಕೋರಿದರು.

‘ಕಂಬಳ ಎಂದಿನಿಂದ ಮತ್ತೆ ನಡೆಯಬೇಕು ಎನ್ನುವ ಬಗ್ಗೆ ಸರ್ಕಾರವೇ ನಿರ್ದೇಶನ ನೀಡಬೇಕು. ಆದಷ್ಟು ಬೇಗ ಪುನರಾರಂಭಿಸಲು ಹಸಿರು ನಿಶಾನೆ ತೋರಿಸಬೇಕು’ ಎಂದು ಕಾಂಗ್ರೆಸ್ಸಿನ ಅಭಯಚಂದ್ರ ಜೈನ್‌ ಮತ್ತು ಬಿಜೆಪಿಯ ಸುರೇಶಕುಮಾರ್‌ ಸಲಹೆ ನೀಡಿದರು. ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್‌, ಕಾಂಗ್ರೆಸ್ಸಿನ ಶಂಕುತಲಾ ಶೆಟ್ಟಿ, ವಿನಯ್‌ ಕುಮಾರ್‌ ಸೊರಕೆ ಧ್ವನಿಗೂಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top