ಬಹಳ ಹಿಂದೆ ಕಶ್ಯಪ ಮುನಿಗಳಿಗೆ ಇಬ್ಬರು ಹೆಂಡತಿಯರಿದ್ದರು. ಅವರೇ ಕದ್ರು ಮತ್ತು ವಿನುತ. ಇವರಲ್ಲಿ ಕದ್ರುವಿಗೆ ಸರ್ಪಗಳು ಮಕ್ಕಳು. ವಿನುತಗೆ ಅರುಣ ಮತ್ತು ಗರುಡ ಎಂಬ ಇಬ್ಬರು ಮಕ್ಕಳು. ಹೀಗಿರಲು ಒಂದು ದಿನಾ ಅವರೀರ್ವರೂ ಸಮುದ್ರಮಂಥನದಲ್ಲಿ ಬಿಳಿಗುದುರೆ ಹುಟ್ಟುವುದನ್ನು ಕಾಣುತ್ತಾರೆ.ಆಗ ಅವರೀರ್ವರಲ್ಲೂ ಒಂದು ಪಂಥ ಏರ್ಪಡುತ್ತದೆ. ಅದೇನೆಂದರೆ ವಿನುತ ಆ ಕುದುರೆ ಪೂರ್ತಿ ಬಿಳಿಯಾಗಿದೆ ಎನ್ನುತ್ತಾಳೆ.
ಆದರೆ ಕದ್ರು ಅದರ ಬಾಲ ಮಾತ್ರ ಕಪ್ಪಗಾಗಿದೆ ಎನ್ನುತ್ತಾಳೆ. ಪಂಥದಲ್ಲಿ ಸೋತವರು ಗೆದ್ದವರ ದಾಸಿಯಾಗಬೇಕು ಎಂದು ನಿರ್ಣಯವಾಗುತ್ತದೆ.ಆದರೆ ಕದ್ರು ಪಂಥದಲ್ಲಿ ತಾನೇ ಗೆಲ್ಲಬೇಕು ಎಂದು ತನ್ನ ಮಕ್ಕಳಾದ ಹಾವುಗಳನ್ನು ಕರೆದು ಕುದುರೆಯ ಬಾಲದಲ್ಲಿ ಸೇರಿಕೊಳ್ಳುವಂತೆ ಸೂಚಿಸುತ್ತಾಳೆ.ಈಗ ಕುದುರೆಯ ಬಾಲ ಕಪ್ಪಗೆ ಕಾಣುತ್ತಿದೆ ಮತ್ತು ವಿನುತ ಕದ್ರುವಿನ ದಾಸಿಯಾಗುತ್ತಾಳೆ. ಆದರೆ ಕದ್ರು ವಿನುತಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಾಳೆ. ಇದರಿಂದ ಗರುಡನಿಗೆ ಬೇಸರವಾಗುತ್ತದೆ. ಮತ್ತು ಆತ ಸರ್ಪಗಳ ಬಳಿ ಬಂದು ತನ್ನ ತಾಯಿಯ ಬಂಧಮುಕ್ತಿಯ ಬಗ್ಗೆ ಮಾತಾಡುತ್ತಾನೆ.
ಆಗ ಸರ್ಪಗಳು ತಮಗೆ ಸ್ವರ್ಗದಿಂದ ಅಮೃತ ತಂದು ಕೊಟ್ಟರೆ ಬಂಧ ಮುಕ್ತಿ ಮಾಡುವುದಾಗಿ ತಿಳಿಸುತ್ತವೆ.ಅಂತೆಯೇ ಗರುಡ ಸ್ವರ್ಗಕ್ಕೆ ಹೋಗಿ ಇಂದ್ರನ ಭೇಟಿ ಮಾಡುತ್ತಾನೆ. ಆದರೆ ಇಂದ್ರ ಅಮೃತ ನೀಡಲು ಹಿಂಜರಿಯುತ್ತಾನೆ. ಆಗ ಗರುಡ ತನ್ನ ತಾಯಿಯ ಬಂಧಮುಕ್ತಿಯಾದ ಕೂಡಲೇ ಅಮೃತ ವಾಪಸ್ ತರುವುದಾಗಿ ತಿಳಿಸಿದ್ದರಿಂದ ಇಂದ್ರ ಒಪ್ಪಿ ಅಮೃತ ನೀಡುತ್ತಾನೆ.ಅಮೃತವನ್ನು ಕಂಡ ಸರ್ಪಗಳು ಸಂತೋಷಗೊಂಡು ವಿನುತಾಳನ್ನು ಬಂಧಮುಕ್ತಿಗೊಳಿಸುತ್ತವೆ, ತಕ್ಷಣ ಗರುಡ ಅಮೃತವನ್ನು ಅಲ್ಲಿಂದ ಕೊಂಡೊಯುತ್ತಾನೆ. ಸರ್ಪಗಳು ನಿರಾಸೆಯಿಂದ ಆ ಅಮೃತ ಇಟ್ಟಿದ್ದ ಧರ್ಬೆಯನ್ನೇ ನೆಕ್ಕುತ್ತವೆ. ಆಗ ನೆಕ್ಕಿ-ನೆಕ್ಕಿ ಅವುಗಳ ನಾಲಿಗೆ ಎರಡಾಗಿ ಸೀಳಿ ಹೋಗುತ್ತದೆ. ಆಮೇಲಿಂದ ಗರುಡನಿಗೂ-ಸರ್ಪಗಳಿಗೂ ವೈರತ್ವ ಉಂಟಾಗುತ್ತದೆ ಮತ್ತು ಸರ್ಪಗಳ ನಾಲಿಗೆ ಎರಡಾಗಿ ಸೀಳಿ ಹೋಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
