fbpx
ದೇವರು

ಮಹಾ ಶಿವರಾತ್ರಿ: ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಮಂಗಳಕರ ರಾತ್ರಿ!

ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು ಈ ಮಹಾ ಶಿವರಾತ್ರಿ. ಈ ಹಬ್ಬವನ್ನು ಮಾಘ ಮಾಸದ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಅಂದು ಶಿವನ ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ.

ಶಿವರಾತ್ರಿ ದಿನ ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ. ಅಂದು ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಕೂಡ ಇದೆ. ಶುಭ್ರ ಆಕಾಶದಲ್ಲಿ ಮೋಡಗಳೇ ಇಲ್ಲದೆ ಅಂದು ಕಾಣುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಕೆಲವರು ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಇನ್ನು ಕೆಲವರು ಶಿವನ ನಾಮವನ್ನು ೧೦೦೮ ಸಲಿ ಬರೆದು ಶಿವನನ್ನು ಆರಾಧಿಸುತ್ತಾರೆ ಇದರಿಂದ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.

ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಇತ ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ತೊಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ. ಎಲ್ಲಾ ಜೀವರಾಶಿಗಳನ್ನು ಕಾಪಾಡುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ ಮತ್ತು ಧ್ಯಾನಪ್ರಿಯ. ಶಿವ ಭಕ್ತರಿಂದ ಬಯಸುವುದು ಕೇವಲ ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ ನಮ್ಮನ್ನೆಲ್ಲಾ ಕಾಪಾಡುತ್ತಾನೆ ಎಂಬ ನಂಬಿಕೆ ಇದೆ.

ಎಲ್ಲ ಭಕ್ತಾದಿಗಳು ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಮಾಡದೇ ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆಯಾದ ಶಿವನ್ನನ್ನು ಆರಾಧಿಸಿ. ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಆಶಯ.. ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top