fbpx
ಸಮಾಚಾರ

ಪಿಜಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದವನಿಂದ 2 ದಿನಗಳ ಹಿಂದೆ ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರ!

ಮಾರ್ಚ್ 4ರಂದು ಮುಂಜಾನೆ ಬೆಂಗಳೂರಿನ ಎಚ್‍ಎಎಲ್‍ ಪೊಲೀಸ್‍ ಠಾಣಾ ವ್ಯಾಪ್ತಿಯ ಪಿಜಿಯೊಂದಕ್ಕೆ ನುಗ್ಗಿ 20 ವರ್ಷದ ಯುವತಿ ಮೇಲೆ ಹಣ ದೋಚಿದ್ದೂ ಅಲ್ಲದೇ ಅತ್ಯಾಚಾರಕ್ಕೆ ಯತ್ನಿಸಿದ್ದ 30 ವರ್ಷದ ಶಿವರಾಮ ರೆಡ್ಡಿ ಎಂಬಾತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ಇದೇ ಬಡಾವಣೆಯಲ್ಲಿ 2 ದಿನಗಳ ಹಿಂದೆಯಷ್ಟೇ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದನ್ನು ಬಾಯಿಬಿಟ್ಟಿದ್ದಾನೆ.

ಶಿವರಾಮ ರೆಡ್ಡಿ ಮಾರ್ಚ್ 2ರಂದು ಮತ್ತೊಂದು ಪಿಜಿಯಲ್ಲಿ ವಾಸವಾಗಿದ್ದ ಟೆಕ್ಕಿ ಮೇಲೆ ಅತ್ಯಾಚಾರ ಎಸಗಿದ್ದು ಈಗ ಉತ್ತರ ಭಾರತದ ಮಹಿಳೆಯನ್ನು ಕೇಂದ್ರೀಕರಿಸಿ ದಾಳಿ ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಎಂಬ ಮಾಹಿತಿ ಪೊಲೀಸರನ್ನು ಅಚ್ಚರಿಪಡಿಸಿದೆ. ಇದರ ಜಾಡು ಹಿಡಿದು ಪೊಲೀಸರು ಮತ್ತಷ್ಟು ಮಾಹಿತಿಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಶಿವರಾಮ ರೆಡ್ಡಿ ವಿರುದ್ಧ 16 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 3 ಅತ್ಯಾಚಾರ ಪ್ರಕರಣಗಳಾಗಿವೆ. ಶಿವರಾಮ ರೆಡ್ಡಿ ಕ್ಯಾಬ್‍ ಚಾಲಕನಾಗಿದ್ದು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವನಾಗಿದ್ದಾನೆ. ಕಳೆದ 15 ವರ್ಷಗಳಿಂದ ಬೆಂಗಳೂರಿನ ಹೊಸೂರಿನಲ್ಲಿ ವಾಸವಾಗಿರುವ ಈತ, ಮಾರ್ಚ್‍ 7ರಂದು ಪೊಲೀಸರ ದಾಳಿಯಲ್ಲಿ ಗಾಯಗೊಂಡಿದ್ದ.

2014ರಲ್ಲಿ ಬೀದರ್ ಮಹಿಳೆ ಅತ್ಯಾಚಾರ

ಶಿವರಾಮ ರೆಡ್ಡಿ 2014ರಲ್ಲಿ ಇದೇ ರೀತಿ ಎಲೆಕ್ಟ್ರಾನಿಕ್ ‍ಸಿಟಿಯ ಪಿಜಿಯಲ್ಲಿ ತಂಗಿದ್ದ ಬೀದರ್‍ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ಪಿಜಿ ಮಾಲೀಕರಿಗೆ ಕೀ ಕೊಡದೇ ತಮ್ಮ ಬಳಿಯೇ ಉಳಿಸಿಕೊಂಡ ಮಹಿಳೆಯರನ್ನು ಗುರುತಿಸಿ ಅವರ ಮೇಲೆ ದಾಳಿ ನಡೆಸುತ್ತಿದ್ದ.

ನನ್ನೊಂದಿಗೆ 5 ಮಂದಿ ಇದ್ದಾರೆ ಎಂಬ ಬೆದರಿಕೆ

ಮಹಿಳೆಯರ ಕೊಠಡಿಗೆ ನುಗ್ಗುವ ಶಿವರಾಮ ರೆಡ್ಡಿ, ಲೈಂಗಿಕ ಚಟುವಟಿಕೆಗೆ ಸಹಕರಿಸುವಂತೆ ಚಾಕು ಹಿಡಿದು ಬೆದರಿಕೆ ಹಾಕುತ್ತಿದ್ದ. ನನ್ನೊಂದಿಗೆ ಇನ್ನೂ ಐದು ಮಂದಿ ಇದ್ದು, ಅವರೆಲ್ಲರೂ ಇದೇ ರೀತಿ ಬೇರೆ ಕೊಠಡಿಗಳಲ್ಲಿರುವ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ನೀನು ಕೂಗಿಕೊಂಡರೂ ಪ್ರಯೋಜನವಿಲ್ಲ. ಒಂದು ವೇಳೆ ಕೂಗಿಕೊಂಡರೆ ಚಾಕು ಇರಿದು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ಪಿಜಿಯಲ್ಲಿ ಅತ್ಯಾಚಾರದಿಂದ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ ಯುವತಿ ವಿವರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top