fbpx
ಮಾಹಿತಿ

ಪ್ರಾಯದ ಮಕ್ಕಳು : ಪೋಷಕರ ಪಾತ್ರ !!

ಪ್ರಾಯವನ್ನು 10 – 19 ವಯಸ್ಸಿನ ಬೆಳವಣಿಗೆಗೆ ಹೋಲಿಸಲಾಗುತ್ತೆ.ಬೆಳೆಯುವ ಮಕ್ಕಳು ವಯಸ್ಕರಾಗುವ ಮುಂಚೆ ಬರುವ ಪ್ರಾಯ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟ.ಪ್ರಾಯದ ವಯಸ್ಸಿನಲ್ಲಿ ದೈಹಿಕ, ಮಾನಸಿಕ ಬೆಳವಣಿಗೆಯ ಜೊತೆಗೆ ಜನನಾಂಗಗಳು ಪ್ರೌಡಾವಸ್ಥೆ ತಲುಪುವುದು.ಈ ವಯಸ್ಸಿನಲ್ಲಿ ಮಾನಸಿಕ ಹಾಗೂ ಸಾಮಾಜಿಕ ಪ್ರೇರಣೆಗಳು ಮಕ್ಕಳ ಭಾವನೆ ಮತ್ತು ನಡವಳಿಕೆ ಮೇಲೆ ಹೆಚ್ಚು ಪರಿಣಾಮ ಬೀರುವುದು. ಈ ಬದಲಾವಣೆ ಗಳನ್ನು ಪೋಷಕರು,ಇತರೆ ವಯಸ್ಕರು ಅರಿತುಕೊಳ್ಳುವುದರಿಂದ ಯೌವನಾವಸ್ಥೆಯ ಸಾಮಾನ್ಯ ಬೆಳವಣಿಗೆಯನ್ನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಒಪ್ಪಿಕೊಳ್ಳಲು ಸಾಧ್ಯ.

ಪ್ರಾಯದಲ್ಲಿ ಬದಲಾಗುವ ಸಾಮಾನ್ಯ ಭಾವನೆಗಳು ಮತ್ತು ನಡವಳಿಕೆಗಳು ಯಾವುವು ?

ಪ್ರಾಯದ ಮಕ್ಕಳಲ್ಲಿ ಸ್ವತಂತ್ರ ಭಾವನೆಗಳು ಬೆಳೆಯುವ ಕಾಲ ಈ ಸಮಯದಲ್ಲಿ ಗೌಪ್ಯತೆಯನ್ನು ಬಯಸುತ್ತಾರೆ,ಪೋಷಕರು ,ಸ್ನೇಹಿತರು ಮತ್ತು ಜೊತೆಆಟವಾಡುವವರಿಂದ ಹಿಂದೆ ಸರಿಯುವುದು ಸಾಮಾನ್ಯ.

ಸಣ್ಣವರಿದ್ದಾಗ ಇಷ್ಟ ಪಡುತ್ತಿದ್ದ ಆಟಗಳು ಬೇಸರವೆನಿಸುವುದು.ವಿಭಿನ್ನ ಆಸಕ್ತಿಯಲ್ಲಿನ ಚಂಚಲತೆ ಚಡಪಡಿಕೆಯುಂಟುಮಾಡುವುದು,ಯಾವುದರಲ್ಲೂ ಸಂಪೂರ್ಣ ತೃಪ್ತಿಯಿಲ್ಲ.ಸಣ್ಣ ಪುಟ್ಟ ವಿಚಾರಗಳಿಗೆ ನೊಂದುಕೊಳ್ಳುವುದು,ಕೋಪಿಸಿಕೊಳ್ಳುವುದು,ಮುನಿಸಿಕೊಳ್ಳುವುದು ಸಾಮಾನ್ಯ.

10-14 ವರ್ಷದ ಮಕ್ಕಳು ಸಮನಾದ ಲಿಂಗದವರೊಂದಿಗೆ ಆಕರ್ಷಿತರಾಗುವರು 14 -17 ವರ್ಷದಲ್ಲಿ ವಿರುದ್ದ ಲಿಂಗದವರ ಮೇಲೆ ಆಕರ್ಷಣೆ ಹೆಚ್ಚುವುದು ಸಹಜ.ಈ ವಯಸ್ಸಿನ ಮಕ್ಕಳ ಚಲನವಲನಗಳ ಮೇಲೆ ಪೋಷಕರು ಗಮನವಿಡಬೇಕು ಮತ್ತು ಮಾರ್ಗದರ್ಶಿಗಳಾಗಬೇಕು.

ಪ್ರೌಡಾವಸ್ಥೆಗೆ ಬಂದ ಮಕ್ಕಳ ಸಂಕೀರ್ಣ ಬೆಳವಣಿಗೆಯ ಘಟ್ಟ ಪೋಷಕರನ್ನು  ಮತ್ತು ಹಿರಿಯರನ್ನು ಪ್ರಶ್ನಿಸುವುದು,ವಿರೋಧಿಸುವುದು ಮತ್ತು ಗಲಾಟೆ ಸಾಮಾನ್ಯ ಹಾಗೂ ತಾತ್ಕಾಲಿಕ.ಬಹು ಬೇಗನೆ ಈ ಘಟ್ಟದಿಂದ ಹೊರಬರುತ್ತಾರೆ; ಪೋಷಕರು ಕುಟುಂಬದವರು,ಶಿಕ್ಷಕರು ಮತ್ತು ಇತರರ ಬೆಂಬಲದಿಂದ ಅಚಲವಾದ ಪ್ರಭುದ್ದ ನಡವಳಿಕೆ ಕಲಿಯುತ್ತಾರೆ.

ಪ್ರಾಯಕ್ಕೆ ಬಂದ ಮಕ್ಕಳು ಮತ್ತು ಪೋಷಕರ ನಡುವಿನ ಭಿನ್ನಾಭಿಪ್ರಾಯದಿಂದ ಸಂಘರ್ಷಗಳು ಸಾಮಾನ್ಯ.ಪ್ರಾಯದ ಮಕ್ಕಳು ಸ್ವಾಯತ್ತತೆ,ಗೌಪ್ಯತೆ,ಸ್ವತಂತ್ರ ನಿರ್ಧಾರಗಳನ್ನು ಬಯಸುತ್ತಾರೆ.ಪೋಷಕರು ತಮ್ಮ ನಿಯಂತ್ರಣದಲ್ಲಿಡಲು,ಅಪ್ರಬುದ್ದತೆಯಿಂದಾಗುವ ಪ್ರಮಾದಗಳನ್ನು ತಡೆಯಲು ಇಚ್ಚಿಸುತ್ತಾರೆ.ಪೋಷಕರು ತಮ್ಮ ಅನಿಸಿಕೆಗಳನ್ನು ಮಕ್ಕಳ ಮೇಲೆ ಹೇರಲು ಹೊರಟಾಗ ಘರ್ಷಣೆಗಳಾಗುವ ಸಂಭವವುಂಟು.

ಪ್ರಾಯಕ್ಕೆ ಬಂದ ಮಕ್ಕಳು ಸ್ವಾಯತ್ತತೆಯನ್ನು,ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ.ಪೋಷಕರು ಮಕ್ಕಳಿಗೆ ಹೆಚ್ಚು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರ ಕೊಡಬೇಕು,ಮಾರ್ಗದರ್ಶಕರಾಗಬೇಕು ಮತ್ತು ಸಹಾಯ ಮಾಡಬೇಕು.

ಅತಿ ರಕ್ಷಣೆ ಗೊಳಪಟ್ಟ ಮಕ್ಕಳು ದೊಡ್ಡವರಾದ ಮೇಲೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ಸಮಾಜಿಕ ಪ್ರೌಢಿಮೆ ಗಳಿಸುವುದರಲ್ಲಿ ವಿಫಲರಾಗುವ ಸಂಭವ ಹೆಚ್ಚು.

ಪೋಷಕರು ಮಕ್ಕಳ ಮೇಲ್ವಿಚಾರಣೆಯ ಜೊತೆಗೆ ಪರಸ್ಪರ ನಂಬಿಕೆಯಿಂದ ಸಾಕಷ್ಟು ಸ್ವತಂತ್ರ ಕೊಟ್ಟು ಸಮತೋಲನವನ್ನು ಕಾಪಾಡಬೇಕು.

ಪೋಷಕರ ಪ್ರೀತಿ,ನಂಬಿಕೆ ಮತ್ತು ಬೆಂಬಲ ಪಡೆದ ಮಕ್ಕಳ ಸಾಮಾಜಿಕ ಬೆಳವಣಿಗೆ ಸುಲಭವಾಗುವುದು.

ಪೋಷಕರಿಗೆ ಉಪಯುಕ್ತ ಸಲಹೆಗಳು:

ಪರಾವಲಂಭಿ ಮಕ್ಕಳು ಸ್ವಾಯತ್ತ ವಯಸ್ಕರಾಗುವಂತೆ ಬೆಂಬಲಿಸಿ ಬೆಳೆಸುವುದು ಪೋಷಕರ ಜವಾಬ್ದಾರಿ.ಈ ಘಟ್ಟದಲ್ಲಿ ಪೋಷಕರು ಅನೇಕ ಸವಾಲುಗಳನ್ನು,ತಾಳ್ಮೆಯನ್ನು ಪರೀಕ್ಷಿಸುವ ಸಂದರ್ಭಗಳನ್ನು ಎದುರಿಸಲು ತಯಾರಿರಬೇಕು.ಸಾಮಾನ್ಯ ಜ್ಞಾನ,ತಾಳ್ಮೆ ಬಹಳ ಉಪಕಾರಿ ಎಂದು ಸಾಭೀತಾಗಿದೆ.

1 ಮೆಚ್ಚುಗೆಯ ನಂಬಿಕಸ್ಥ ಪ್ರೀತಿಯ ವಾತಾವರಣ ಜೊತೆಗೆ ಸುಲಭವಾಗಿ ಸಂಧಿಸಲು ಅವಕಾಶ

2 ಕುಟುಂಬಗಳಲ್ಲಿ ಪೋಷಕರ ಮತ್ತು ಮಕ್ಕಳ ನಡುವಿನ ಉತ್ತಮ ಸಂಭಂದ,ಸಂವಹನ ಪರಸ್ಪರ ಹೊಂದಾಣಿಕೆ ಸ್ವಾಯತ್ತ ವಯಸ್ಕರಾಗಲು ಸಹಕಾರಿ.

3  ನೆನಪಿಡಿ ಪ್ರಾಯದ ಮಕ್ಕಳು ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ವ್ಯಕ್ತಪಡಿಸಲು ಅರ್ಹರು.ಯಾವುದೇ ಸಮಸ್ಯೆಯನ್ನು ಪೋಷಕರ ಮತ್ತು ಮಕ್ಕಳ ದೃಷ್ಟಿಕೋನದಿಂದ ನೋಡಬೇಕು.ಪೋಷಕರು ಮಕ್ಕಳ ದೃಷ್ಟಿಕೋನವನ್ನು ಗೌರವಿಸಬೇಕು,ಭವಿಷ್ಯದ ನಿರ್ಧಾರದಲ್ಲಿ ಮಕ್ಕಳನ್ನು ಒಳಪಡಿಸಿಕೊಳ್ಳಬೇಕು.

4 ಸಂಬಂಧದ ಸಮತೋಲನವನ್ನು ಎಂದಿಗೂ ಕಾಪಾಡಿಕೊಳ್ಳಿ ಸಮಂಜಸವಾದ ಮಿತಿಗಳನ್ನು ಗೊತ್ತುಪಡಿಸಿ.ಪ್ರಾಯದ ಮಕ್ಕಳು ತಮ್ಮಮಿತಿಯನ್ನು ಅರಿಯಲು ಬಯಸುತ್ತಾರೆ ಸ್ವೇಚ್ಚಾಚಾರವನ್ನು ಬಯಸೊಲ್ಲ .

5 ಶಿಸ್ತಿನಲ್ಲಿ ಸ್ಥಿರತೆ ಕಾಪಾಡಿಕೊಳ್ಳಿ,ಮಕ್ಕಳಿಗೆ ಶಿಸ್ತಿನ ಮಿತಿಯನ್ನು ಗೌರವಿಸಲು ತಿಳಿಸಿ.ಶಿಸ್ತಿನ ಮಿತಿಯನ್ನು ಅವರೇ ನಿರ್ಧರಿಸಲಿ.

6 ಪೋಷಕರು ಬೋಧಿಸುವುದನ್ನು ಪಾಲಿಸಿ ಮಕ್ಕಳಿಗೆ ಮಾದರಿಯಾಗಬೇಕು

7 ಹಿಯ್ಯಾಳಿಸುವಷ್ಟೇಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿ.ಹಲವಾರು ಬಾರಿ ಮೆಚ್ಚುಗೆ ವ್ಯಕ್ತಪಡಿಸಲು ವಿಫಲವಾಗಬೇಡಿ.”ಎಂತಹ ಮೂರ್ಖತನದ ಕೆಲಸ “ಅನ್ನುವ ಬದಲು” ಈ ರೀತಿ ಮಾಡಿದರೆ ಚೆನ್ನಾಗಿರುತ್ತಿತ್ತು ” ಎಂದು ಹೇಳುವುದು ಹೆಚ್ಚು ಪರಿಣಾಮಕಾರಿ.

8  ಅಸಾಮರ್ಥ್ಯ ದ ಬಗ್ಗೆ ಅನಗತ್ಯವಾಗಿ ಹಿಯ್ಯಾಳಿಸುವ,ದೂರುವ ಬದಲು ಅವರ ಸಾಮರ್ಥ್ಯವನ್ನು ಪ್ರೋತ್ಸಾಹಿಸಿ.

9 ಪ್ರಾಯದ ಮಕ್ಕಳನ್ನು ಇತರರೊಂದಿಗೆ ಹೋಲಿಸುವುದು ತಪ್ಪು ಅವರಲ್ಲಿನ ಆತ್ಮಗೌರವ ಮತ್ತು ವಿಶ್ವಾಸಕ್ಕೆ ಧಕ್ಕೆಯುಂಟು ಮಾಡುವುದರ ಜೊತೆಗೆ ಪೋಷಕರ ಮೇಲಿನ ನಂಬಿಕೆ ಕಡಿಮೆಯಾಗುವುದು.

10 ಆಗಾಗ್ಗೆ ಹೇಳಿ “ನಾವು ನಿನ್ನ ಸ್ನೇಹಿತರಂತೆ ಚಿಂತಿಸಬೇಡ,ನಿನ್ನ ಆತ್ಮವಿಶ್ವಾಸದಲ್ಲಿ ನಂಬಿಕೆಯಿಡು ” “ನಿನ್ನ ಭಾವನೆಗಳು ನಮಗೆ ಅರ್ಥವಾಗುತ್ತೆ ” “ನಿನ್ನೊಂದಿಗೆ ಎಂದೆಂದೂ ನಾನಿರುತ್ತೇನೆ” ” ನಾವು ನಿನ್ನನ್ನು ನಂಬುತ್ತೇವೆ ”

ಮಕ್ಕಳನ್ನು ನಿಮ್ಮ ಪ್ರೀತಿಯಿಂದ ವಂಚಿತರಾಗಿಸಬೇಡಿ .ಪ್ರಾಯಕ್ಕೆ ಬಂದ ಮಕ್ಕಳಿಗೆ ಸಂಘರ್ಷ ದ ಸಮಯದಲ್ಲೂ ನಿಮ್ಮ ಬೆಚ್ಚನೆಯ ಪ್ರೀತಿಯ ಅಗತ್ಯವಿದೆ.

ಕೊನೆಯದಾಗಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೊಳಗಾಗುವ ಮಕ್ಕಳು ಬಾಳೆಕಾಯಿ ಯನ್ನು ಗುದ್ದಿ ಹಣ್ಣು ಮಾಡಿದಹಾಗೆ.

ಪೋಷಕರೇ,ಆರೋಗ್ಯವಂತ ಪರಿಪೂರ್ಣ ಸಾಮರ್ಥ್ಯದ ಸತ್ಪ್ರಜೆಗಳನ್ನು ದೇಶದ ಅಭಿವೃದ್ದಿಗೆ ಸಮರ್ಪಿಸುವ ದೊಡ್ಡ ಅವಕಾಶ ಮತ್ತು ಜವಾಬ್ದಾರಿಯನ್ನು ಸದುಪಯೋಗಪಡಿಸಿಕೊಳ್ಳಿ

 

ಡಾ| ಮೋಹನ್,ಜಿ.ಎಂ. ಎಂ.ಡಿ., ಡಿ.ಸಿ.ಎಚ್. ಎಂ.ಆರ್.ಸಿ.ಪಿ.(ಐರ್’ಲ್ಯಾಂಡ್)
ಮಕ್ಕಳ ತಜ್ಞರು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top