fbpx
ಉಪಯುಕ್ತ ಮಾಹಿತಿ

ಅಮ್ಮನ ಮಾತುಗಳನ್ನು ಸೋಶಿಯಲ್ ಮಿಡಿಯಾದ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸುವ ಪ್ರಯತ್ನ ನನ್ನದು

ಎಂದಿನಂತೆ ಮತ್ತೊಂದು ಪೋಸ್ಟ್ ಅಲ್ಲ ಇದು. ನಿಮ್ಮೆಲ್ಲರ ಸಹಾಯ ಅಗತ್ಯವಿದೆ ಇಂದು. ಓದಿ ನೋಡಿ ಜೊತೆಗೆ ಶೇರ್ ಮಾಡುವ ಅಗತ್ಯ ತುಂಬಾ ಇದೆ.

ಅಮ್ಮ , ಅಂಗನವಾಡಿ ಟೀಚರ್. ಶುರು ಮಾಡಿದ್ದು 125 ರೂಪಾಯಿಗಳ ಗೌರವ ಧನದೊಂದಿಗೆ. 30 ವರ್ಷದ ನಂತರ ಅವಳ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾಳೆ. ಒಬ್ಬ ಮಗ ಇಂಜಿನಿಯರ್ ಇನ್ನೊಬ್ಬ ಫಾರೆಸ್ಟ್ರಿ ಗ್ರ್ಯಾಡ್ಯೂ ಯೆಟ್. ಅಂಗನವಾಡಿ ಯೋಜನೆಯು ಸರ್ಕಾರದ ಒಂದು ಪೈಲಟ್ ಪ್ರಾಜೆಕ್ಟ್ ಆಗಿ ಶುರುವಾಗಿದ್ದು 35 ವರ್ಷಗಳಿಂದೆ. 5 ವರ್ಷ ನಡೆದ ಯೋಜನೆ ಯಶಸ್ವಿಯಾಗಿದ್ದು ನೋಡಿ ಅದನ್ನ ಮುಂದುವರೆಸಲು ಸರ್ಕಾರವು ಅನುಮತಿ ನೀಡಿತ್ತು.

ಅಂದು ಮಹಿಳಾ ಕಾರ್ಯಕರ್ತೆಯರನ್ನು ಗೌರವ ಧನ ನೀಡಿ ಸರ್ಕಾರ ಕೆಲಸಕ್ಕೆ ತೆಗೆದುಕೊಂಡಿದ್ದು ಅವರನ್ನು ಅಂದಿನಿಂದ ಸರ್ಕಾರದ ಅಧಿಕಾರಿಗಳಾಗಿ ಇಂದಿಗೂ ಪರಿಗಣಿಸಿಲ್ಲ. ಸಾಮಾನ್ಯವಾಗಿ ಸರ್ಕಾರದ ಎಲ್ಲ ಯೋಜನೆಗಳನ್ನು ಅಂಗನವಾಡಿಯ ಮೂಲಕವೇ ಜಾರಿಗೆ ತರುವುದು. ಇಂದಿಗೆ ಭಾರತ ಪೋಲಿಯೋ ಮುಕ್ತ ಭಾರತವಾಗಲು ನಿಮ್ಮ ಅಮಿತಾಭ್ ಬಚ್ಚನ್ , ಸರ್ಕಾರದ ಮಂತ್ರಿಗಳಷ್ಟೇ ಅಲ್ಲ ಕಾರಣ. ಇಂದಿಗೆ ಭಾರತ ಪೋಲಿಯೋ ಮುಕ್ತವಾಗಲು ಮುಖ್ಯ ಕಾರಣ ಈ ಅಂಗನವಾಡಿ ಕಾರ್ಯಕರ್ತೆಯರು. ಹಳ್ಳಿಗಳಲ್ಲಿರುವ ಮನೆ ಮನೆಗೆ ನುಗ್ಗಿ ಮಕ್ಕಳನ್ನು ಹಿಡಿದು ಎರಡು ಪೋಲಿಯೋ ಹಾಕಿದ್ದಾರೆಂದರೆ ಅದು ಅಂಗನವಾಡಿ ಕಾರ್ಯಕರ್ತೆಯರು.ಇದಕ್ಕಿಂತ ಸಾಧನೆ ಬೇಕೇ.

ನನಗೆ ಇಂದಿಗೂ ನೆನಪು ನಮ್ಮಮ್ಮ ಯಾವತ್ತೂ ಪೋಲಿಯೋ ಲಸಿಕೆ ಕಾರ್ಯಕ್ರಮ ತಪ್ಪಿಸುತ್ತಿರಲಿಲ್ಲ. ಅಷ್ಟು ಶ್ರದ್ದೆ ಕೆಲಸದ ಮೇಲೆ ಇವರಿಗೆ. ಪ್ರತಿಯೊಂದು ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮೊದಲು ತಿರುಗುವುದು ಅಂಗನವಾಡಿ ಕಾರ್ಯಕರ್ತೆಯರ ಕಡೆಗೆ. ನನಗೆ ತಿಳಿದಂತೆ ಮೂವತ್ತು ವರ್ಷದಲ್ಲಿ ನೂರಾರು ಯೋಜನೆಗಳು ನಮ್ಮಮ್ಮ ಅನುಷ್ಠಾನ ಗೊಳಿಸಿದ್ದಾರೆ. ಪೋಲಿಯೋ , ದಡಾರ, ಮೀಸಲ್ಸ್, ಜನಗಣತಿ, ಮಕ್ಕಳ ಗಣತಿ, ರೋಗಗಳ ಬಗ್ಗೆ ಮಾಹಿತಿ, ಊರಲ್ಲಿರುವ ಗರ್ಭಿಣಿ ಬಾಣಂತಿಯರ ಯೋಗಕ್ಷೇಮ, ಭಾಗ್ಯಲಕ್ಷ್ಮಿ, ಅಯ್ಯೋ ಇವೆಲ್ಲ ಮನೆಲಿದ್ದಾಗ ನಮ್ಮಮ್ಮ ಕನವರಿಸೋದನ್ನ ಕೇಳಿ ನನ್ನ ಬಾಯಲ್ಲಿ ಬಂದಿರೋದು. ಇನ್ನು ಇಂತ ಎಷ್ಟೊಂದು ಯೋಜನೆಗಳನ್ನ ಅಮ್ಮ ಪ್ರತಿದಿನ ಟ್ರ್ಯಾಕ್ ಮಾಡ್ತಾರೆ.

ಪ್ರತಿಯೊಬ್ಬ ಮುಖ್ಯಮಂತ್ರಿ ಬದಲಾದಾಗ ವಿಚಿತ್ರ ತರ ತರ ಯೋಜನೆಗಳು ಬರೋದು ಸಹಜ. ಮಂತ್ರಿ ಏನೋ ಯೋಜನೆ ಅನೌನ್ಸ್ ಮಾಡ್ತಾನೆ, ಜನ ಅದನ್ನ ಪೇಪರ್ ನಲ್ಲಿ ಓದಿ ಸರಿ ಇದ್ರೆ ಸೂಪರ್ ಅಂದು ಸರಿ ಇಲ್ಲಂದ್ರೆ ಮಂತ್ರಿ ಗೆ ಬೈದು ಮರೆತು ಮಲ್ಕೊತಾರೆ . ಆದ್ರೆ ಅಂಗನವಾಡಿ ಕಾರ್ಯಕ್ರತೆಯ ಗೋಳು ಅದಲ್ಲ. ಅದು ಯಾವ ಯೋಜನೆ ಆಗಿರಲಿ, ಅದೆಷ್ಟೋ ಹಳೆ ಯೋಜನೆಗಳು ಇವರ ತಲೆಯ ಮೇಲಿರಲಿ, ಮತ್ತೆ ಬರುವ ಹೊಸ ಯೋಜನೆಗಳು ಅನುಷ್ಠಾನ ಗೊಳಿಸುವ ಜವಾಬ್ದಾರಿ ಮಾತ್ರ ಇವರದು.

ಇಷ್ಟೆಲ್ಲ ಮಾಡಿ 30 ವರ್ಷ ಆದ್ರೂ ಇವರು ಈಗಲೂ ಸರ್ಕಾರದ ಅಧಿಕಾರಿಗಳಲ್ಲ ಮತ್ತೆ ಸರ್ಕಾರದ ಅಧಿಕಾರಿಗಳ ತರ ಇವರಿಗೆ ಯಾವುದೇ ಸವಲತ್ತುಗಲಿಲ್ಲ. ಕೆಲಸ ಮಾಡುವುದು ಮಾತ್ರ ಸರ್ಕಾರದ ಕೆಲಸ. 30 ವರ್ಷಗಳ ನಂತರ ಇವರ ಗೌರವ ಧನ ಇಂದಿಗೂ 5000 ದ ಆಸು ಪಾಸಿದೆ. ಕೆಲಸ ಮಾಡುವುದು ಮಾತ್ರ 50000 ಸಂಬಳ ಪಡೆಯುವ ಅಧಿಕಾರಿಗಳಿಗಿಂತ ಹೆಚ್ಚು. ಒಂದೋ ಎರಡೋ ಇವರು ಮಾಡಿರುವ ಪ್ರತಿಭಟನೆಗಳು. ಯಾವ ಸರ್ಕಾರವೂ, ಯಾವ ಮುಖ್ಯ ಮಂತ್ರಿಗಳು ಇವರನ್ನು ಪರಿಗಣಿಸಿಲ್ಲ.

ನಿನ್ನೆ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಫ್ರೀಡಂ ಪಾರ್ಕಿನ ಮುಂದೆ ರಸ್ತೆಯಲ್ಲಿ ಮಲಗಿದ್ದರು ಯಾವ ಮಂತ್ರಿಗಳು ಅಲ್ಲಿ ಹೋಗಿ ಅವರನ್ನು ಆಲಿಸಿಲ್ಲದಿರುವುದನ್ನು ನೋಡಿದರೆ ನಮ್ಮ ಸರ್ಕಾರಗಳು ಮತ್ತದರ ವ್ಯವಸ್ಥೆಯನ್ನು ನೋಡಿದರೆ ಅಸಹ್ಯ ಬರುತ್ತದೆ. ಇಂದು ಕೂಡ ನಡೆಯುತ್ತಿದೆ. ಸರ್ಕಾರ ಕಣ್ಣು ಮುಚ್ಚಿ ಕೂರುವ ಬದಲು ಮಹಿಳಾ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಬೇಕು. ಮಾತೆತ್ತಿದರೆ ವುಮೆನ್ ಎಂಪೋವರ್ಮೆಂಟ್ ಎನ್ನುವ ನೀವು ಇದೇನಾ ಸ್ವಾಮಿ ನಿಮ್ಮ ಎಂಪೌರ್ಮೆಂಟು , ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನ ಮಾಡುವ ಮಹಿಳಾ ಕಾರ್ಯಕರ್ತೆಯರನ್ನು ಬೀದಿಯಲ್ಲಿ ಮಲಗಲು ಬಿಡುವುದೇ ನಿಮ್ಮ ಎಂಪೌರ್ಮೆಂಟು.

ನಾಚಿಕೆಯಾಗಬೇಕು ನಿಮ್ಮ ವ್ಯವಸ್ಥೆಗೆ ನಿಮ್ಮ ಆಡಳಿತಕ್ಕೆ. ನಿಮಗೇನಾದರೂ ಸ್ವಲ್ಪವಾದರೂ ಮೊರಾಲಿಟಿ ಅನ್ನುವುದಿದ್ದರೆ ಅಲ್ಲಿ ಹೋಗಿ ಸಮಸ್ಯೆಗಳನ್ನ ಆಲಿಸಿ , ಒಂದು ಶಾಶ್ವತ ಪರಿಹಾರ ನೀಡಿ. ನನ್ನಮ್ಮ ರಾತ್ರಿಯೆಲ್ಲ ಮನೆಗೆ ಬಾರದೆ, ಫ್ರೀಡಂ ಪಾರ್ಕಿನ ರಸ್ತೆ ಮೇಲೆ ಪ್ರತಿಭಟನೆಗೆ ಮಲಗಿರುವದ ನೆನೆದರೆ , ಮೈ ಉರಿಯುತ್ತಿದೆ, ಅಮ್ಮನ ಮೇಲಲ್ಲ ಈ ಸುಳ್ಳು ವ್ಯವಸ್ಥೆಯ ಮೇಲೆ. ಯಾಕಾಮ್ಮಾ ಹೀಗೆ ಮಾಡಿದೆ ನಾನೆಷ್ಟು ಕರೆದರೆ ಬರುವುದಿಲ್ಲವೇಕೆ ಎಂದರೆ ಅಮ್ಮ ಹೇಳಿದ್ದಿಷ್ಟು “ಆರಾಧ್ಯ , ನಿನ್ನ ಮನೆಗೆ ಬಂದು ಆರಾಮವಾಗಿ ಮಲಗಲು ಅಲ್ಲ ನಾ ಬೆಂಗಳೂರಿಗೆ ಬಂದಿರುವುದು. ಇವತ್ತು ನಾನು ಈ ಕೆಲಸ ಬಿಟ್ಟು ನಿಮ್ಮ ಬಳಿ ಆರಾಮವಾಗಿರಬಹುದು ಆದರೆ ಇಲ್ಲಿ 15000 ಜನರಿದ್ದಾರೆ, ಇಲ್ಲಿಗೆ ಬಂದಿರುವ 15000 ಜನ ಎರಡು ತುತ್ತಿಗಾಗಿ ಕಷ್ಟ ಪಡುತ್ತಿರುವವರು. ಇದಕ್ಕೊಂದು ಶಾಶ್ವತ ಪರಿಹಾರ ಸಿಕ್ಕರೆ ಅಂದಿಗೆ ನಾ ತೃಪ್ತಳಾಗುವೆ. ತೊಂದರೆಯಾದರೆ ಫೋನ್ ಮಾಡುವೆ. ಅಲ್ಲಿಯವರೆಗೂ ನೀನು ಆರಾಮವಾಗಿರು” ತುಂಬಾ ಯೋಚಿಸಿ ಈ ಪತ್ರ ಬರೆದಿರುವೆ.

ಅಮ್ಮನ ಮಾತುಗಳನ್ನು ಸೋಶಿಯಲ್ ಮಿಡಿಯಾದ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸುವ ಪ್ರಯತ್ನ ನನ್ನದು. ನೀವು ಮತ್ತು ನಿಮ್ಮ ಮಕ್ಕಳು ಇಂದು ಪೋಲಿಯೋ ಮುಕ್ತರಾಗಿದ್ದರೆ ಅಥವಾ ಯಾವುದೇ ಮಾರಕ ಕಾಯಿಲೆಗಳಿಲ್ಲದಿದ್ದರೆ ಅದಕ್ಕೆ ನಮ್ಮಮ್ಮ ನಂತವರದ್ದೇ ಮಹತ್ವ ಪಾಲು. ಇದನ್ನು ನೆನೆದಾದರು ಅವರಿಗೆ ಒಂದು ಥ್ಯಾಂಕ್ಸ್ ಹೇಳುವ ಇಷ್ಟವಿದ್ದರೆ, ಈ ಒಂದು ಪತ್ರವ ಶೇರ್ ಮಾಡಿ ಎಲ್ಲಿಯವರಿಗೆಂದರೆ ವಿಧಾನಸೌಧದ ಕೋಣೆಗಳಲ್ಲಿ ಈ ಮಾತುಗಳು ಪ್ರತಿಧ್ವನಿಸುವವರೆಗೂ !

– ಪುಟ್ಟಾರಾಧ್ಯ ಸಿದ್ದರಾಜ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top