fbpx
ಸಮಾಚಾರ

ಸಿದ್ದಗಂಗಾ ಶ್ರೀಗಳ ಚೇತರಿಕೆ : ಆಸ್ಪತೆಯಲ್ಲೂ ಲಿಂಗ ಆರಾಧನೆ ಮರೆಯದ ಶ್ರೀಗಳು [ ವಿಡಿಯೋ ]

ವಯೋಮಿತಿ ಹಾಗೂ ಬಹು ಅಂಗಗಳ ಸೋಂಕಿನ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸೂಕ್ತ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಂಡೊಸ್ಕೋಪಿ ಮಾಡಲಾಗಿದ್ದು ವೈದ್ಯರು ನಿಗಾ ವಹಿಸಿದ್ದಾರೆ.

ಬೆಂಗಳೂರು ಸಮೀಪ ಕೆಂಗೇರಿಯ ಬಿಜಿಎಸ್‍ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಿದ್ಧಗಂಗಾ ಶ್ರೀಗಳು ಪ್ರಮುಖವಾಗಿ ಕಾಡುತ್ತಿದ್ದ ಪಿತ್ತಕೋಶದ ಸಮಸ್ಯೆಗೆ ಚಿಕಿತ್ಸೆ ನೀಡಿದ್ದು ಅದು ಫಲಕಾರಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಆಸ್ಪತೆಯಲ್ಲೂ ಲಿಂಗ ಆರಾಧನೆ ಮರೆಯದ ಶ್ರೀಗಳು

ಇದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ ಸ್ವಾಮಿಜಿ, ತುಮಕೂರು ಮಠಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಚಿಕಿತ್ಸೆ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶಾಸಕರಾದ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಅವರ ಮನವೊಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿದರು.

ಅನಾರೋಗ್ಯದ ವಿಷಯ ತಿಳಿಯುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶ್ರೀಗಳು ವಯೋಸಹಜ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಅವರು ಹಸನ್ಮುಖಿಯಾಗಿದ್ದಾರೆ. ನನ್ನೊಂದಿಗೆ ಹಾಗೂ ದೇವೇಗೌಡರೊಂದಿಗೆ ನಗುತ್ತಲೇ ಮಾತನಾಡಿದರು ಎಂದು ಹೇಳಿದರು.

ದೇವೇಗೌಡರು ಮಾತನಾಡಿ, ಸಿದ್ಧಗಂಗಾ ಶ್ರೀಗಳೊಂದಿಗೆ ಮಾತನಾಡಿ ಸಂತಸವಾಯಿತು. ಅವರು ಆರೋಗ್ಯವಾಗಿ ಇರುವುದೇ ಆನಂದ ನೀಡಿತು. ಅವರು ಶೀಘ್ರದಲ್ಲೇ ಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ‘ಶ್ರೀಗಳ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆಯಾಗುತ್ತಿದೆ. ಇನ್ನೊಂದು ವಾರ ಯಾರೂ ಶ್ರೀಗಳನ್ನು ಭೇಟಿ ಮಾಡಬಾರದು” ಎಂದು ಅಭಿಪ್ರಾಯಪಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top