fbpx
ಭವಿಷ್ಯ

ಮನೆ ಕಟ್ಟೋಕೆ ಮುಂಚೆ ಮಾಡೋ ಭೂಮಿ ಚೆನ್ನಾಗಿದ್ಯಾ ಅಥವಾ ಇಲ್ವಾ ಅನ್ನೋ ಈ ಪರೀಕ್ಷೆಗೆ ವಾಸ್ತು ವಾಸ್ತುವಿನಲ್ಲಿ ಶಲ್ಯ ಶೋಧನೆ ಅಂತಾರೆ..

ವಾಸ್ತುವಿನಲ್ಲಿ ಶಲ್ಯ ಮತ್ತು ಶಲ್ಯ ಶೋಧನೆ.

ಏನಿದು ಶಲ್ಯ?

ಭೂಮಿಯ ಗರ್ಭದಲ್ಲಿ ದೋಷ ಪೂರ್ಣವಾದ ಅನೇಕ ವಸ್ತುಗಳು ಇರುತ್ತವೆ.ಉದಾಹರಣೆಗೆ ಪಶು ಅಥವಾ ಮನುಷ್ಯನ ಅಸ್ಥಿ (ಮೂಳೆ)ಗಳು,ಲೋಹ,ಶಿಲೆ,ಕಟ್ಟಿಗೆ(ಮರ),ಇದ್ದಿಲು ಹಾಗೂ ಅನ್ಯ ಧಾತುಗಳು ಇತ್ಯಾದಿ ‘ ಶಲ್ಯ’  ಎನಿಸಿಕೊಳ್ಳುತ್ತವೆ.

ಯಾವ ನಿಕೃಷ್ಟ ವಸ್ತುಗಳ ಸಂಪರ್ಕದಿಂದ ದ್ರವ್ಯ,ಕ್ಷೇತ್ರ ಹಾಗೂ ವಾತವರಣಾದಿಗಳು ದೂಷಿತವಾಗುತ್ತವೋ ,ಅಂಥ ಪದಾರ್ಥಗಳಿಗೆ ವಿದ್ವಾಂಸರು ‘ಶಲ್ಯ’ ದ ಸಂಜ್ಞೆ ನೀಡಿರುವರು.

ತಲೆ ಬುರುಡೆ,ಮೂಳೆ, ಚರ್ಮ,ಕೇಶ(ಕೂದಲು),ಇದ್ದಿಲು, ಲೋಹ ಹಾಗೂ ಅತಿಕ್ಷರ ಇತ್ಯಾದಿ ಪದಾರ್ಥಗಳನ್ನು ಶಲ್ಯ ಎಂದು ಕರೆಯುತ್ತಾರೆ. ಈ ಎಲ್ಲ ಶಲ್ಯಗಳು ಎಲ್ಲಕ್ಕಿಂತ ನಿಕೃಷ್ಟ ಹಾಗೂ ಅತ್ಯಂತ ಹಾನಿಕಾರಕವಾದ ಶಲ್ಯವೆಂದರೆ,ಮನುಷ್ಯನ ತಲೆ ಬುರುಡೆ ಮತ್ತು ಮೂಳೆಗಳೆಂದು ಹೇಳಲಾಗಿದೆ.

ವಿಶ್ವಕರ್ಮ ಪ್ರಕಾಶದ ಪ್ರಕಾರ, ಶಲ್ಯವನ್ನು ತೆಗೆಯಲು ನೀರು ಬರುವವರೆಗೂ,ಭೂಮಿಯಲ್ಲಿ ಶಿಲೆ ಸಿಗುವವರೆಗೆ ಅಥವಾ ಮನುಷ್ಯನ ಎತ್ತರ,ಅಂದರೆ ಒಂದು ಆಳದ ವರಗೆ ಭೂಮಿಯನ್ನು ಆಗೆದು ಶಲ್ಯವನ್ನು ತೆಗೆಯಬೇಕು .ಆನಂತರ ದೇವಾಲಯ ಅಥವಾ ಮನೆ ನಿರ್ಮಾಣ ಪ್ರಾರಂಭಿಸಬೇಕು.

ಪ್ರತಿಷ್ಠಾ ಸಾಗರ ಗ್ರಂಥದ ಪ್ರಕಾರ, ಮನೆ ನಿರ್ಮಾಣದ ಭೂಮಿಯಲ್ಲಿ ಒಂದು ವೇಳೆ ಪುರುಷನ ಎತ್ತರದ ಆಳದ ಕೆಳಗೆ ಶಲ್ಯವಿದ್ದರೆ ದೋಷ ಉಂಟಾಗುವುದಿಲ್ಲ.ಆದರೆ ದೇವಾಲಯ ನಿರ್ಮಿಸುವ ಸಂದರ್ಭದಲ್ಲಿ, ಭೂಮಿಯಲ್ಲಿ ನೀರು ಬರುವ ವರೆಗೆ ಬುನಾದಿಯನ್ನು ತೆಗೆದೇ, ಶಲ್ಯದ ಸಂದೇಹಕ್ಕೆ ಸಮಾಧಾನವನ್ನು ಕಂಡು ಕೊಳ್ಳುವುದು ಅನಿವಾರ್ಯ.

ದೇವಾಲಯದ ಭೂಮಿಯಲ್ಲಿ, ವೇದಿಕೆಯಲ್ಲಿ,ಮನೆಯ ಭೂಮಿಯ ಪ್ರಾಂಗಣದಲ್ಲಿ, ಹೊಸ್ತಿಲ ಕೆಳಗೆ ಮತ್ತು ಬಾಗಿಲು ಇತ್ಯಾದಿಗಳಲ್ಲಿ ಶಲ್ಯವಿದ್ದರೆ, ಅವುಗಳನ್ನು ಶೀಘ್ರವಾಗಿ ನಿವಾರಿಸಬೇಕು.ಇಲ್ಲದಿದ್ದರೆ ಸಮಾಜದಲ್ಲಿ ಕಲಹ,ಧಾರ್ಮಿಕ ಉನ್ಮಾದ, ರೋಗೋತ್ಪತ್ತಿ, ರಾಜಭಯ,ಅಗ್ನಿಭಯ,ಮಿತ್ರನಾಶ,ಸಂತಾನ ಹಾನಿ,ಕ್ಲೇಶ,ಧನ ಹಾನಿ,ಪಶುಹಾನಿ,ಅಕಾಲ ಮೃತ್ಯು, ದುಃಸ್ವಪ್ನ, ಹುಚ್ಚು,ಇತ್ಯಾದಿ ಘಟನೆಗಳ ಮೂಲಕ ಶಲ್ಯದ ಸೂಚನೆ ಪ್ರಾಪ್ತಿಯಾಗುತ್ತದೆ.

ವಿಶ್ವಕರ್ಮ ಪ್ರಕಾಶದ ಪ್ರಕಾರ, ಮನೆ ಅಥವಾ ದೇವಾಲಯ ನಿರ್ಮಿಸುವಾಗ ತಮ್ಮ ಹಿತ ಬಯಸುವವರು, ಅವಶ್ಯ ಶಲ್ಯೊದ್ಧಾರ ಮಾಡಬೇಕು.ಶುಭ ದಿನ ಹಾಗೂ ಶುಭ  ನಕ್ಷತ್ರದಲ್ಲಿ, ಯಾವ ದಿನ ಚಂದ್ರ ಮತ್ತು ನಕ್ಷತ್ರಗಳು ಅನುಕೂಲವಾಗಿರುತ್ತವೋ, ಆ ದಿನದಂದು ಶುಭಲಗ್ನ ಹಾಗೂ ಶುಭ ಸಮಯದಲ್ಲಿ ಶಲ್ಯೊದ್ಧಾರ ಮಾಡಬೇಕು. ಶಲ್ಯೊದ್ಧಾರದ ಹಿಂದಿನ ದಿನ ವಿಧಿ-ವಿಧಾನದಿಂದ ಅವಶ್ಯ ವಾಸ್ತು ಪೂಜೆ ಮಾಡಬೇಕು.

ಭೂಮಿಯ ಮೇಲೆ ನಿರ್ಮಾಣ ಕಾರ್ಯ ಆರಂಭಿಸುವ ಮುಂಚೆ,ಆ ಕ್ಷೇತ್ರದಲ್ಲಿ ನಿವಾಸ ಮಾಡುವ ದೇವತಾದಿಗಳನ್ನು ಸಂತುಷ್ಟಗೊಳಿಸಿ,ಅಂದರೆ ಯಥಾ ದ್ರವ್ಯ ಮತ್ತು ಯಥಾವಿಧಿ ಸಮ್ಮಾನಿಸಿ, ಪಂಚ ಪರಮೇಷ್ಠಿಯ ಪೂಜೆಯನ್ನು ಮಾಡಬೇಕು, ಹಾಗೂ ದೀನರಿಗೆ-ದುಃಖಿಗಳಿಗೆ ಕರುಣೆಯಿಂದ ದ್ರವ್ಯ ಮತ್ತು ಭೋಜನಾದಿ ಗಳಿಂದ ಸಂತುಷ್ಟಗೊಳಿಸಬೇಕು.ತದನಂತರ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು.

ಭೂಮಿ ಆಮಂತ್ರಣ.

ಭೂಮಿ ಆಮಂತ್ರಣ  ಮಂತ್ರ-

 “ಓಂ ಪವಿತ್ರ ವಜ್ರಭೂಮೇ ಹುಂ ಸ್ವಾಹಾ”.

ವಿಘ್ನ ನಿವಾರಣಾ ಮಂತ್ರ-

“ಓಂ ಮಕ್ಷ ರಕ್ಷ ಹುಂ ಫಟ್ ಸ್ವಾಹಾ”.

ಈ ಮೇಲೆ ಹೇಳಿರುವ ಎರಡೂ ಮಂತ್ರಗಳ ಜಪ ಮಾಡುವುದರಿಂದ  ಜಮೀನು  ಮತ್ತು ಸಂಪತ್ತಿಗೆ ಸಂಬಂಧಿಸಿದ  ವಿಘ್ನಗಳು ದೂರವಾಗಿ ಹೋಗುತ್ತವೆ.ಮಂಗಳ ಭೂಮಿ ಪುತ್ರನಾದ್ದರಿಂದ, ಆತನ ಪ್ರಸಂಗದಲ್ಲಿಯೇ ಆತನ ತಾಯಿಯ,ಅರಿಷ್ಠ ನಾಶಕ ಮಂತ್ರಗಳಾಗಿವೆ.

ಶಲ್ಯ ಶೋಧನೆಗೆ ಸರಳ ಉಪಾಯ.

ಯಾವ ಸ್ಥಾನದಲ್ಲಿ ಶಲ್ಯ ವಿರುತ್ತದೋ,ಆ ಸ್ಥಾನದಲ್ಲಿ ಮನೆಯ ಯಜಮಾನ ಅಥವಾ ಯಜಮಾನಿಯ ಎತ್ತರದಷ್ಟು ಆಳವಾದ  ಗುಂಡಿಯನ್ನು ತೆಗೆದು ,ಅದರಿಂದ ಮಣ್ಣನ್ನು ತೆಗೆದು ಬೇರೆಡೆಗೆ ಬಿಸಾಡಿ ಬಿಡಬೇಕು.ಆ ಮಣ್ಣನ್ನು ಯಾವುದೇ ಕಾರಣಕ್ಕೂ ಯಾವ ಕಾರ್ಯಕ್ಕೂ ಉಪಯೋಗಿಸಬಾರದು. ಆ ಗುಂಡಿಯಲ್ಲಿ ಹೊಸ ಶುದ್ಧವಾದ ಮಣ್ಣನ್ನು ತುಂಬುವುದರಿಂದ ಶಲ್ಯೊದ್ದಾರವಾಗಿ ಹೋಗುವುದು.

ಶಲ್ಯೊದ್ದಾರದ ನಂತರ ಮನೆ ನಿರ್ಮಾಣ ಮಾಡುವುದರಿಂದ, ಭೂಮಿ ಸಂಭಂದಿ ದೋಷ ಉಳಿಯುವುದಿಲ್ಲ.ಒಂದು ವೇಳೆ ಮನೆಯನ್ನು ನಿರ್ಮಿಸಿದ್ದರೆ, ಶಲ್ಯೊದ್ದಾರದ ಸಂಭವವಾಗುವುದಿಲ್ಲ.

ಒಂದು ವೇಳೆ ಭೂಮಿಯಲ್ಲಿ ಹತ್ತು ಅಡಿ ಆಳದೊಳಗೆ,ಶಲ್ಯವಿದ್ದರೆ ಅದರ ದೋಷ ಉಂಟಾಗುವುದಿಲ್ಲ.

ಶಲ್ಯವು ಯಾವ ದಿಕ್ಕಿನಲ್ಲಿ,ಯಾವ ಜಾತಿಯದ್ದು ? ಅದು ಯಾವ ದಿಕ್ಕಿನಲ್ಲಿ, ಎಷ್ಟು ಉದ್ದ ಸಿಕ್ಕಿದರೆ, ಯಾವ ಪ್ರಾಣಿ ಅಥವಾ ಮನುಷ್ಯನ ಮೂಳೆ ದೊರೆತರೆ  ಅದರ  ಫಲ ಏನೆಂದು ತಿಳಿಯೋಣ ಬನ್ನಿ.

ಪೂರ್ವ ದಿಕ್ಕಿನಲ್ಲಿ ಒಂದೂವರೆ ಮೊಳದಷ್ಟು ಮನುಷ್ಯನ ಮೂಳೆ ಸಿಕ್ಕಿದರೆ ಮನೆಯ ಯಜಮಾನನ ಮರಣ.

ಆಗ್ನೇಯ ದಿಕ್ಕಿನಲ್ಲಿ ಎರಡು ಮೊಳದಷ್ಟು ಇರುವ ಕತ್ತೆಯ ಮೂಳೆ ದೊರೆತರೆ ರಾಜದಂಡ ಅಥವಾ ರಾಜಭಯ.

ದಕ್ಷಿಣ ದಿಕ್ಕಿನಲ್ಲಿ ಮನುಷ್ಯನ ಸೊಂಟದ ಅಳದಲ್ಲಿ ಮೂಳೆ ದೊರೆತರೆ ಮನೆ ಯಜಮಾನನ ಸುಖಕ್ಕೆ ಹಾನಿ.

ನೈಋತ್ಯ ದಿಕ್ಕಿನಲ್ಲಿ ಒಂದೂವರೆ ಮೊಳದಷ್ಟು ನಾಯಿಯ ಮೂಳೆ ದೊರೆತರೆ ಸಂತಾನ ಸುಖಕ್ಕೆ ಹಾನಿ.

ಪಶ್ಚಿಮ ದಿಕ್ಕಿನಲ್ಲಿ ಎರಡು ಮೊಳದಷ್ಟು ಶಿಶುವಿನ ಮೂಳೆ ಸಿಕ್ಕಿದರೆ ಮನೆಯ ಯಜಮಾನನಿಗೆ ಪರ ದೇಶದ ವಾಸ.

ವಾಯುವ್ಯ ದಿಕ್ಕಿನಲ್ಲಿ ನಾಲ್ಕು ಮೊಳದಷ್ಟು ಕೋಗಿಲೆಯ ಮೂಳೆ ದೊರೆತರೆ ಮಿತ್ರ ನಾಶ ,ದುಃಸ್ವಪ್ನ.

ಉತ್ತರ ದಿಕ್ಕಿನಲ್ಲಿ ಸೊಂಟದ ಅಳದಲ್ಲಿ ಮನುಷ್ಯನ ಮೂಳೆ ಸಿಕ್ಕಿದರೆ ದಾರಿದ್ರ್ಯ.

ಈಶಾನ್ಯ ದಿಕ್ಕಿನಲ್ಲಿ ಒಂದೂವರೆ ಮೊಳದಷ್ಟು ಹಸುವಿನ ಮೂಳೆ ದೊರೆತರೆ ಧನ ನಾಶ.

ಮದ್ಯ ಭಾಗದಲ್ಲಿ ಎದೆಯ ಮಟ್ಟದ ಸೊಂಟದ ಅಳದಲ್ಲಿ ಇವುಗಳು ದೊರೆತರೆ ಅತಿಕ್ಷಾರ ಕೋಶ,ಲೋಹ,ಬೂದಿ, ಇತ್ಯಾದಿ ದೊರೆತರೆ.ಮನೆಯ ಯಜಮಾನನಿಗೆ ಮೃತ್ಯು ಕಾರಕ.

 

ಹೀಗೆ ಮನೆ ಕಟ್ಟುವ ಮುಂಚೆ ನೋಡಿ, ಆ ಮಣ್ಣಿನಲ್ಲಿ ಏನಾದರೂ ಶಲ್ಯ ಸಿಕ್ಕಿದರೆ ಸುಲಭವಾಗಿ ಈ ಮೇಲೆ ಹೇಳಿದಂತೆ ಪರಿಹಾರ ಮಾಡಿಕೊಂಡು ಸುಖವಾಗಿ ಜೀವಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top