fbpx
ಸಾಧನೆ

IIT ಯಲ್ಲಿ ಓದಿ ಲಕ್ಷಾಂತರ ರೂಪಾಯಿ ಸಂಬಳದ ಕೆಲಸ ಬಿಟ್ಟು ಈತ ಮಾಡಿದ್ದು ರೈತರಿಗೆ ಸಹಾಯ ಮಾಡೋ ಕೆಲಸ..

ರೈತರ ಪಾಲಿಗೆ ತಂಪೆರೆದ ಚಂದ್ರ ಶಶಾಂಕ

ಭಾರತದ ಶೇಕಡ 60ರಷ್ಟು ಜನಸಂಖ್ಯೆ ಕೃಷಿಯ ಮೇಲೆ ಅವಲಂಬಿತವಾಗಿದೆ. ಆದರೆ ದೇಶದ ಬೆನ್ನೆಲುಬಾದ ರೈತರ ಸಮಸ್ಯೆಗಳು ನೂರಾರಿವೆ. ಸರ್ಕಾರ ರೈತರ ಪರ ಘೋಷಿಸಿರುವ ಹಲವಾರು ಸೌಲಭ್ಯಗಳು ಇನ್ನೂ ಜಾರಿಗೆ ಬರುವುದು ಬೇಕಾದಷ್ಟಿವೆ. ರೈತರ ಬವಣೆ ಹೇಳತೀರದು. ನೀರಿನ ಅಭಾವ, ಅತಿವೃಷ್ಟಿ, ಅನಾವೃಷ್ಟಿ, ಬೆಂಬಲ ಬೆಲೆಯಿಲ್ಲದ ಬೆಳೆ, ಮಧ್ಯವರ್ತಿಗಳ ಕಾಟ… ಹೀಗೆ ಒಂದೇ?  ಎರಡೇ? ಇದಲ್ಲದೇ ನಮ್ಮ ದೇಶದ ಸಾಕಷ್ಟು ರೈತರು ಸುಶಿಕ್ಷಿತರಲ್ಲ, ಕೆಲವರಂತೂ ಅನಕ್ಷರಸ್ಥರು. ಇದರಿಂದ ಅವರಿಂದ ಲಾಭ ಪಡೆದು ಮೋಸ ಮಾಡುವವರು ಹೆಚ್ಚು. ಇಂತಹ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಕೆಲವರು ಮಾತ್ರ ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.

ಇಂದು ನಾವು ಅಂತಹ ಒಬ್ಬ ಜವಾಬ್ದಾರಿಯುತ ನಾಗರಿಕನ ಪರಿಚಯ ಮಾಡುತ್ತಿದ್ದೇವೆ. ಮನಸ್ಸು ಮಾಡಿದ್ದರೆ ಈತ ತನ್ನ ಸಂಪಾದನೆಯಿಂದ ಐಷಾರಾಮಿ ಬದುಕು ನಡೆಸಬಹುದಿತ್ತು. ಐಐಟಿ ಪದವೀಧರರಾದ ಇವರು ಕಾರ್ಪೊರೇಟ್ ಸಂಸ್ಥೆಯ ಉನ್ನತ ಹುದ್ದೆಯನ್ನು ತೊರೆದು, ರೈತರ ಬೆಂಬಲಕ್ಕೆ ನಿಂತಿದ್ದಾರೆ. ಇವರು ನಡೆಸುತ್ತಿರುವ ಅಭಿಯಾನದಿಂದ 16000 ಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆಯುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು. ನಾವು ಈಗ ಹೇಳ ಹೊರಟಿರುವುದು ಈ ಯೋಜನೆಯ ರೂವಾರಿಯಾದ ಶಶಾಂಕ ಕುಮಾರ್ ರ ಬಗ್ಗೆ.

ಶಶಾಂಕ್ ಬಿಹಾರದ ಛಾಪ್ರಾ ಎಂಬ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದರು. ತಮ್ಮ ಶಾಲಾ ಶಿಕ್ಷಣವನ್ನು ನೇತಾರ್ ಹತ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ದೆಹೆಲಿಯ ಐಐಟಿ ಸೇರಿದರು. ಅಲ್ಲಿ ಟೆಕ್ಸ್ ಟೈಲ್ ಇಂಜಿನಿಯರಿಂಗ್ ವಿಭಾಗದಲ್ಕಿ 2008ರಲ್ಲಿ ಬಿ.ಟೆಕ್. ಪದವಿ ಪಡೆದರು. ನಂತರ ಅದೇ ಸಂಸ್ಥೆಯ ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಎಂ.ಬಿ.ಎ ಪದವಿ ಪಡೆದರು. ತಮ್ಮ ಅರ್ಹತೆಗೆ ತಕ್ಕಂತೆ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಹುದ್ದೆಯೊಂದಿಗೆ ವೃತ್ತಿ ಆರಂಭಿಸಿದರು.

2.5 ವರ್ಷದ ತಮ್ಮ ಕಾರ್ಪೊರೇಟ್ ಬದುಕಿನಲ್ಲಿ ಪೂರೈಕೆ ಸರಣಿ ನಿರ್ವಹಣೆ (Supply Chain management), ರೀಟೇಲ್ ಹಾಗೂ FMCG (Fast Moving Consumer Goods) ವಿಭಾಗಗಳಲ್ಲಿ ಕೆಲಸ ಮಾಡಿದರು. FMCG ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುವಾಗ ಸರಬರಾಜು ಸಂಕೀರ್ಣ ವ್ಯವಸ್ಥೆಯ ಹಲವು ಸಮಸ್ಯೆಗಳನ್ನು ಬಗೆಹರಿಸಿದರು. ರೈತರ ಸಮಸ್ಯೆಗಳನ್ನು ಅವರು ಅಲ್ಲಿ ಗುರುತಿಸಿದರು. ಮಧ್ಯವರ್ತಿಗಳ ಕಪಟ ಅರ್ಥವಾಯಿತು. ಗ್ರಾಹಕರು ಪಾವತಿಸಿದ ಹಣ, ಹಾಗೂ ರೈತರಿಗೆ ಸಿಗುತ್ತಿದ್ದ ಆದಾಯದಲ್ಲಿ ಅಗಾಧ ವ್ಯತ್ಯಾಸವನ್ನು ಗುರುತಿಸಿದರು.

ರೈತರ ಸಮಸ್ಯೆಗಳನ್ನು ಬಗೆಹರಿಸಿ, ಲಾಭ ತಂದುಕೊಡಲು ಪಣತೊಟ್ಟ ಶಶಾಂಕ್ ಅವರ ಸ್ನೇಹಿತ ಮನೀಷ್ ಜೊತೆ ಸೇರಿ “Farm and Farmers Foundation” ಎಂಬ ಸಂಸ್ಥೆಯನ್ನು 2011ರಲ್ಲಿ ಸ್ಥಾಪಿಸಿದರು. ಈ ಅಭಿಯಾನವನ್ನು ಅವರು ಬಿಹಾರದಿಂದಲೇ ಆರಂಭಿಸಿದರು. ಇಲ್ಲಿ ಹಲವಾರು ಪ್ರತಿಷ್ಥಿತ ಸಂಸ್ಥೆಗಳಾದ ಐಐಟಿ ಖರಗ್ಪುರ್, ಐಐಟಿ ಅಹಮದಾಬಾದ್, ಐಎಸ್ಎಮ್ ಧನಾಬಾದ್ ಇವುಗಳ ಉದ್ಯೋಗಿಗಳ ತಂಡಿವಿತ್ತು. ಸೂಕ್ಷ್ಮ ನೀರಾವರಿಯನ್ನು (Micro Irrigation) ಬಿಹಾರದ ರೈತರಿಗೆ ಪರಿಚಯಿಸಿ, ಅವರಿಗೆ ಲಾಭ ತಂದುಕೊಟ್ಟರು. ಅವರ ಈ ಕಾರ್ಯವನ್ನು ಗುರಿತಿಸಿ, “Farm and Farmers Foundation” ಸಂಸ್ಥೆಗೆ ಹಲವಾರು ಪ್ರಶಸ್ತಿಗಳೂ ಸಹ ಬಂದವು.

ತಂತ್ರಜ್ಞಾನದ ಸದ್ಬಳಕೆ ರೈತರಿಗೆ ತಿಳಿಸಬೇಕೆಂದು ಶಶಾಂಕ್ ಶ್ರಮಿಸಿದರು. 2012 ರಲ್ಲಿ ಸಾಮಾಜಿಕ ವಾಣಿಜ್ಯೋದ್ಯಮ ಸಂಸ್ಥೆ “Green Agrevolution” ಅನ್ನು ಹುಟ್ಟು ಹಾಕುವಲ್ಲಿ ಕೈ ಜೋಡಿಸಿದರು. ಈ ಸಂಸ್ಥೆಯ ಆಂಡ್ರಾಯ್ಧ್ ಅಪ್ಲಿಕೇಷನ್ “ದೇ ಹಾಥ್” ಮೂಲಕ ರೈತರು ಬೀಜಗಳ ಮಾರುಕಟ್ಟೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ ಇಲ್ಲಿ FPO (Farmers Producers Organisation), ವಾಣಿಜ್ಯೋದ್ಯಮಿಗಳು ಹಾಗೂ ರೈತರ ನಡುವೆ ಸಂವಹನವನ್ನು ಸಾಧ್ಯಗೊಳಿಸಿ, ರೈತರಿಗೆ ಮಧ್ಯವರ್ತಿಗಳ ಸಹಾಯವಿಲ್ಲದೆ ಮಾರುಕಟ್ಟೆಯ ಅರಿವಾಗುವಂತೆ ಮಾಡಿದರು. ಸುಮಾರು 16 ಜಿಲ್ಲೆಗಳಿಂದ 10000ಕ್ಕೂ ಹೆಚ್ಚು ರೈತರು “ದೇ ಹಾಥ್”ನ ಸೌಲಭ್ಯದಿಂದ ಪ್ರತಿಫಲ ಪಡೆದಿದ್ದಾರೆ.

ಶಶಾಂಕ್ ಮನಸ್ಸು ಮಾಡಿದ್ದರೆ ಹೆಚ್ಚುಮುಂದುವರೆಯಲು ಜಾಸ್ತಿ ಆದಾಯವಿರುವ ಕಾರ್ಪೊರೇಟ್ ಉದ್ಯೋಗವನ್ನೇ ಬಳಸಬಹುದಾಗಿತ್ತು. ತಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನಾಗಿದ್ದರೂ ಸಹ ತನ್ನ ಉನ್ನತ ಹುದ್ದೆಯನ್ನು ಬಿಟ್ಟು ದೇಶದ ರೈತರ ಹಿತಕ್ಕಾಗಿ ಶ್ರಮಿಸುತ್ತಿರುವ ಶಶಾಂಕ್ ಇಂದಿನ ಯುವಕರಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರು ನಡೆಯುತ್ತಿರುವ ಮಾರ್ಗ ಯುವ ಜನತೆಗೆ ಆದರ್ಶವಾಗಬೇಕಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top