ಆಯಾ ಕಾಲಕ್ಕೆಅಗತ್ಯವಾದ ಹಣ್ಣು, ತರಕಾರಿ, ಧಾನ್ಯ ಒಟ್ಟಾರೆ ಆಹಾರ ಪದಾರ್ಥಗಳನ್ನು ಪ್ರಕೃತಿಯೇ ನಮಗೆ ಪೂರೈಸುತ್ತಿದೆ. ಕೆಲವರು ಯಾವುದನ್ನೂ ತಿನ್ನಲು ಇಚ್ಛಿಸದೆ ಪ್ರಕೃತಿ ನೀಡಿರುವ ಈ ಪ್ರಯೋಜನದಿಂದ ವಂಚಿತರಾಗುತ್ತಾರೆ. ಪ್ರಕೃತಿಯ ಒಡನಾಟದಲ್ಲಿ ಬದುಕುವ ನಾವು ಅದು ನೀಡಿರುವ ಸೌಲಭ್ಯದ ಪ್ರಯೋಜನವನ್ನೂ ಪಡೆಯಬೇಕಿದೆ. ನಮ್ಮ ದೇಹದ ಆರೋಗ್ಯಕ್ಕೆ ಅವಶ್ಯಕವಾದ ಅಂಶಗಳನ್ನು ಆಯಾ ಕಾಲದಲ್ಲಿ ದೊರೆಯುವ ಹಣ್ಣುಗಳು ಒಳಗೊಂಡಿರುತ್ತವೆ.
ಅದೇ ರೀತಿ ಚಳಿಗಾಲದಲ್ಲಿ ವಿಫುಲವಾಗಿ ದೊರೆಯುವ ಕಿತ್ತಳೆ ಹಣ್ಣೂ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ವಿಶೇಷವಾಗಿ ದೊರೆಯುವ ಕಿತ್ತಳೆ ಹಣ್ಣಿನಲ್ಲಿ ಯಥೇಚ್ಛವಾದ ಆರೋಗ್ಯಕಾರಿ ಗುಣಗಳಿವೆ. ಸಿಟ್ರಸ್ ಹಾಗೂ ಫೈಟೊನ್ಯೂಟ್ರಿಯೆಂಟ್ ಅಂಶಗಳು ಕಿತ್ತಳೆಯಲ್ಲಿದ್ದು ಕರುಳಿನ ಕ್ಯಾನ್ಸರ್ ನಿವಾರಿಸುವ ಶಕ್ತಿ ಹೊಂದಿದೆ. ಹುಳಿ-ಸಿಹಿ ರುಚಿ ಹೊಂದಿರುವ ಕಿತ್ತಳೆ ಕಡಿಮೆ ಬೆಲೆಯಲ್ಲೇ ದೊರೆಯುತ್ತದೆ. ಶೀರ, ಕಿವಿ ನೋವು, ಅಸ್ತಮಾ, ಸಂಧಿವಾತದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹೃದಯ ಸಂಬಂಧಿ ರೋಗವಷ್ಟೇ ಅಲ್ಲದೆ ಕ್ಯಾನ್ಸರ್‍ನ್ನು ನಿಯಂತ್ರಿಸುವ ಸಾಮಥ್ರ್ಯವನ್ನೂ ಹೊಂದಿದೆ.
ಇವಿಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ನಾರಿನಂಶ ಕಿತ್ತಳೆಯಲ್ಲಿದ್ದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಕಾರಿ. ನಿಯಮಿತವಾಗಿ ಕಿತ್ತಳೆ ರಸ ಸೇವಿಸುವುದರಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳಲ್ಲದೆ ಕಿಡ್ನಿ ಕಲ್ಲುಗಳನ್ನೂ ಹೋಗಲಾಡಿಸಬಹುದು. ಕರಗುವ ಫೈಬರ್ ಕಿತ್ತಳೆಯಲ್ಲಿದ್ದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಕಿತ್ತಳೆಯಲ್ಲಿರುವ ಪೊಟ್ಯಾಷಿಯಂ ಅಂಶವು ಹೃದಯ ಆರೋಗ್ಯ ಕಾಪಾಡಲು ಅತ್ಯಗತ್ಯವಾಗಿದೆ.
ತ್ವಚೆ, ಶ್ವಾಸಕೋಶ, ಸ್ತನ, ಹೊಟ್ಟೆ, ಕರುಳಿನ ಕ್ಯಾನ್ಸರ್ ತಡೆಗೂ ಕಿತ್ತಳೆ ರಾಮಬಾಣವಾಗಿದ್ದು ಅದರ ವಿರುದ್ಧ ಸಂರಕ್ಷಣೆ ನೀಡಬಲ್ಲ ಸಿಟ್ರಸ್ ಲಿಮನಾಯ್ಡ್‍ಸ್ ಅಂಶ ಹೊಂದಿದೆ.ಜೀರ್ಣಕ್ರಿಯೆಗೆ ಸಹಾಯಕವಾಗುವ ಜೀರ್ಣವಾಗುವ ನಾರಿನಂಶ ಇದರಲ್ಲಿರುವುದರಿಂದ ಜೀರ್ಣಕ್ರಿಯೆ ಸರಾಗವಾಗುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯೂ ನಿವಾರಣೆಯಾಗುತ್ತದೆ. ಹೆಸ್ಪರಿಡನ್ ಎಂಬ ಅಂಶ ಕಿತ್ತಳೆಯಲ್ಲಿದ್ದು ಇದು ರಕ್ತದೊತ್ತಡ ಹೆಚ್ಚದಂತೆ ತಡೆಗಟ್ಟುತ್ತದೆ.
ಕಿತ್ತಳೆಯಲ್ಲಿರುವ ಮೆಗ್ನಿಷಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.ಬರೀ ಆರೋಗ್ಯಕ್ಕಷ್ಟೇ ಅಲ್ಲ, ಕಿತ್ತಳೆಯಲ್ಲಿರುವ ಬೀಟಾ-ಕ್ಯಾರೋಟಿನ್ ಅಂಶ ಶಕ್ತಿಯುತ ಉತ್ಕರ್ಷಣ ವಿರೋಧಿಯಾಗಿರುವುದರಿಂದ ತ್ವಚೆಯ ಕೋಶಗಳಿಗೆ ಆಗುವ ಹಾನಿಯನ್ನು ತಡೆಗಟ್ಟುತ್ತದೆ. ಚಳಿಗಾಲದಲ್ಲಿ ಯಥೇಚ್ಛವಾಗಿ ದೊರೆಯುವ ಕಿತ್ತಳೆಯನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ. ಉತ್ಕೃಷ್ಟ ಮಟ್ಟದ ವಿಟಮಿನ್ ಸಿ ಅಂಶ ಕಿತ್ತಳೆಯಲ್ಲಿದ್ದು ಜೀವಕೋಶಗಳನ್ನು ಸಂರಕ್ಷಿಸುವ ಮಹತ್ಕಾರ್ಯ ಮಾಡುತ್ತದೆ. ದೀರ್ಘಕಾಲದ ರೋಗಗಳಾದ ಕ್ಯಾನ್ಸರ್ ಮತ್ತು ಹೃದಯ ರೋಗವನ್ನು ನಿವಾರಿಸುವ ಮುಕ್ತ ರಾಡಿಕಲ್ಸ್‍ಗಳನ್ನು ದುರ್ಬಲಗೊಳಿಸುವ ಶಕ್ತಿ ಕಿತ್ತಳೆಗಿದೆ. ಅಂದ ಮೇಲೆ ಕಿತ್ತಳೆ ತಿನ್ನಲು ಸಿದ್ಧವಾಗಲೇಬೇಕು. ಕಿತ್ತಳೆಹಣ್ಣನ್ನು ಹಾಗೇ ತಿನ್ನಲು ಹುಳಿ ಎನಿಸಿದರೆ ಸ್ವಲ್ಪ ಉಪ್ಪು ಹಾಕಿ ತಿನ್ನುವುದರಿಂದ ಹುಳಿಯ ಅನುಭವವಾಗುವುದಿಲ್ಲ. ಜೊತೆಗೆ ಹೀಗೆ ತಿನ್ನುವುದರಿಂದ ಸಾಮಾನ್ಯ ತಲೆನೋವು ಕೂಡ ಕಡಿಮೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
