ದಿನಕ್ಕೆ ಮೂರ್ನಾಲ್ಕು ಖರ್ಜೂರ ತಿಂದ್ರೆ ಎಂತಹ ಸುಸ್ತಾದ್ರೂ ದೂರ ಓಡಿ ಹೋಗುತ್ತೆ..
ಪೋಷಣೆಗೆ ಪೂರಕ ಖರ್ಜೂರ
ನಿತ್ಯ ಒಂದು ಸೇಬು ತಿಂದರೆ ವೈದ್ಯರ ಅಗತ್ಯವೇ ಇರುವುದಿಲ್ಲ ಅಂದರೆ ಆರೋಗ್ಯ ಕೆಡುವುದಿಲ್ಲ ಎಂಬ ಮಾತನ್ನು ಕೇಳಿದ್ದೇವೆ. ಆದರೆ ಸೇಬು ಸದಾ ಕಾಲ ದೊರೆತರೂ ಸುಲಭ ಬೆಲೆಗಂತೂ ದೊರೆಯುವುದಿಲ್ಲ. ಆದ್ದರಿಂದ ಎಷ್ಟೋ ವೇಳೆ ಸೇಬು ಬೆಲೆ ಕೇಳಿಯೇ ಹೃದಯದ ಬಡಿತ ಏರುಪೇರಾಗುತ್ತದೆ. ಸೇಬಷ್ಟೇ ಅಲ್ಲ, ಅಂತಹುದೇ ಹಲವಾರು ಆರೋಗ್ಯಕರ ಪದಾರ್ಥಗಳಿದ್ದು ಅವು ನಮ್ಮ ಆರೋಗ್ಯವನ್ನು ಸಮರ್ಥವಾಗಿ ಕಾಪಾಡುತ್ತವೆ. ಅವುಗಳಲ್ಲಿ ಖರ್ಜೂರವೂ ಒಂದು.ಸಿಹಿ-ಮೆದು ಎಂದರೆ ಖರ್ಜೂರದಷ್ಟು ಎನ್ನುತ್ತಾರೆ.
ನೋಡಲು ಪುಟ್ಟದಾಗಿದ್ದರೂ ಅಪಾರವಾದ ಶಕ್ತಿ ಹೊಂದಿದ್ದು, ನೈಸರ್ಗಿಕವಾದ ಸಿಹಿಯನ್ನು ಹೊಂದಿದೆ. ಅತಿ ಹೆಚ್ಚು ನಾರಿನಂಶ ಹೊಂದಿದ್ದು ಖರ್ಜೂರ ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳಿನ ಕ್ರಮಬದ್ಧ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
ನಿತ್ಯ ಮೂರ್ನಾಲ್ಕು ಖರ್ಜೂರ ತಿಂದರೆ ಸಾಕು. ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್, ನಾರಿನಂಶ ದೊರೆಯುತ್ತದೆ. ಇಷ್ಟಾದರೆ ಸಾಕಲ್ಲ. ರಕ್ತದೊತ್ತಡ, ರಕ್ತಹೀನತೆ, ಕೊಲೆಸ್ಟ್ರಾಲ್ ಮತ್ತಿತರ ಸಮಸ್ಯೆ ಬಾರದಂತೆ ತಡೆಗಟ್ಟುತ್ತದೆ.
ಕಣ್ಣಿನ ಆರೋಗ್ಯ ವೃದ್ಧಿಗೆ ಬೇಕಾದ ವಿಟಮಿನ್ ಝೀಕ್ಸಾಥಿನ್ ಮತ್ತು ಲುಟೆಯಿನ್‍ಗಳನ್ನು ಹೊಂದಿದ್ದು ಇವೆರಡೂ ವಿಟಮಿನ್‍ಗಳು ವಿಶೇಷವಾಗಿ ಕಣ್ಣಿನ ಆರೋಗ್ಯಕ್ಕೆ ಅವಶ್ಯವಾಗಿದ್ದು ಕಣ್ಣಿನ ಮಕ್ಯುಲರ್ ಮತ್ತು ರೆಟಿನಲ್ ಆರೋಗ್ಯ ಕಾಪಾಡುವಲ್ಲಿ ನೆರವಾಗುವುದಲ್ಲದೆ ಅಕ್ಷಿಪಟಲಕ್ಕೆ ಉಂಟಾಗುವ ತೊಂದರೆಗಳನ್ನು ತಡೆಗಟ್ಟುತ್ತದೆ.
ಖರ್ಜೂರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದ್ದು, ಪ್ರತಿದಿನದ ಸೇವನೆಯಿಂದ ಕರುಳಿನ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ.
ಪೋಷಕಾಂಶಭರಿತವಾಗಿದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸಮತೋಲನದಲ್ಲಿರುತ್ತದೆ.
ಹೆಚ್ಚಿನಂಶದ ಪೊಟ್ಯಾಸಿಯಂ ಇರುವುದರಿಂದ ಪಾಶ್ರ್ವವಾಯು ಉಂಟಾಗದಂತೆ ತಡೆಯಬಹುದು. ಇದು ನರವ್ಯವಸ್ಥೆಯಲ್ಲಿ ರಕ್ತ ಸಂಚಲನ ಸರಾಗವಾಗುವಂತೆ ನೋಡಿಕೊಳ್ಳುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ ಸಮೃದ್ಧವಾಗಿ ರಂಜಕದ ಅಂಶ ಇರುವುದರಿಂದ ಖರ್ಜೂರ ಮೆದುಗಳಿನ ಆರೋಗ್ಯ ಕಾಪಾಡುವಷ್ಟು ಸಮರ್ಥವಾಗಿದೆ. ಮೆದುಳಿಗೆ ಅವಶ್ಯವಾಗಿರುವ ಪೌಷ್ಟಿಕಾಂಶವನ್ನು ನಿತ್ಯ ಸೇವಿಸುವ ಮೂರು ಖರ್ಜೂರ ಪೂರೈಸಬಲ್ಲದು.
ಒಣಹಣ್ಣುಗಳ ಗುಂಪಿಗೆ ಸೇರಿದ ಖರ್ಜೂರದಲ್ಲು ಫ್ರುಕ್ಟೋಸ್, ಸುಕ್ರೋಸ್ ಮತ್ತು ಗ್ಲುಕೋಸ್‍ನಂತಹ ನೈಸರ್ಗಿಕ ಸಕ್ಕರೆ ಅಂಶವು ಸಾಕಷ್ಟಿದ್ದು, ಹಾಲಿನೊಂದಿಗೆ ಇದರ ತಿರುಳನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ದೊರೆಯುತ್ತದೆ.ಅಷ್ಟೇ ಅಲ್ಲ ಇದರ ಜೊತೆಗೆ ಮಲಬದ್ಧತೆ, ಕರುಳಿನ ಅಸ್ವಸ್ಥತೆ, ಹೃದಯದ ತೊಂದರೆ, ಅತಿಸಾರ ಮುಂತಾದ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿ ಖರ್ಜೂರಕ್ಕಿದೆ.
ರಕ್ತಹೀನತೆ ಸಮಸ್ಯೆಗಂತೂ ಇದು ರಾಮಬಾಣ. ಪ್ರತಿ 100 ಗ್ರಾಮ್ ಖರ್ಜೂರದಲ್ಲಿ 0.90 ಗ್ರಾಮ್ ಕಬ್ಬಿಣಾಂಶವಿದ್ದು, ದೇಹದಲ್ಲಿ ಕೆಂಪುರಕ್ತದ ಪ್ರಮಾಣ ಹೆಚ್ಚಿಸಿ ರಕ್ತಹೀನತೆಯನ್ನು ಹೊಡೆದೋಡಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
