fbpx
ದೇವರು

ತಾಯಿ ಗಂಗೆಯನ್ನು ಭೂಮಿಗೆ ತರಲು ಭಗೀರಥ ಮಾಡಿದ ಪ್ರಯತ್ನ ಕೇಳಿದ್ರೆ ಆಶ್ಚರ್ಯ ಆಗದೆ ಇರಲ್ಲ..

ಭಗೀರಥ ಪ್ರಯತ್ನ..!

ಭಗೀರಥ ಮಹಾರಾಜನಿಗೆ ಸಕಲ ವೈಭವಗಳಿದ್ದರೂ ಒಂದು ಕೊರಗಿತ್ತು. ಅವನ ತಂದೆ-ತಾತಂದಿರು `ದೇವಗಂಗೆಯನ್ನು ಪಡೆಯಬೇಕು’ ಎಂದು ಆಸೆ ಈಡೇರದೆ ಸತ್ತುಹೋಗಿದ್ದರು. `ನಾನಾದರೂ ದೇವಗಂಗೆಯನ್ನು ಪಡೆದುಕೊಳ್ಳಬೇಕು’ ಎಂದು ಭಗೀರಥ ಪ್ರತಿಜ್ಞೆ ಮಾಡಿದ. ದೇವಗಂಗೆ ಕುರಿತು ಮಾಡಿದ ಘೋರ ತಪಸ್ಸಿಗೆ ಮೆಚ್ಚಿ ಗಂಗೆ ಪ್ರತ್ಯಕ್ಷಳಾಗಿ: `ನಿನಗೇನು ವರ ಬೇಕು ಕೇಳು’ ಎಂದಳು. `ನೀನು ಭೂಮಿಗೆ ಇಳಿಯಬೇಕು. ನನ್ನ ತಂದೆ ತಾತಂದಿರನ್ನು ಪವಿತ್ರಗೊಳಿಸಬೇಕು’ ಎಂದು ಬೇಡಿದ. `ತಥಾಸ್ತು, ಅದರೆ ನಾನು ಆಕಾಶದಿಂದ ಭೂಮಿಗೆ ಧುಮುಕುವಾಗ ನನ್ನ ರಭಸವನ್ನು ತಡೆಯುವವರಾರು? ಆ ರಭಸಕ್ಕೆ ಇಡೀ ಭೂಮಂಡಲವೇ ಕೊಚ್ಚಿ ಹೋದರೇನು ಗತಿ? ಭೂಮಿಯ ಪಾಪಿಗಳೆಲ್ಲಾ ನನ್ನಲ್ಲಿ ಮಿಂದು ತಮ್ಮ ಪಾಪಗಳನ್ನು ಕಳೆದುಕೊಂಡರೆ, ಆ ಪಾಪಗಳನ್ನು ನಾನೆಲ್ಲಿ ತೊಳೆದುಕೊಳ್ಳಲಿ ?’ ಎಂದಳು ಗಂಗಾಮಾತೆ.

`ದೇವೀ, ನಿನ್ನ ರಭಸವನ್ನು ತಡೆಹಿಡಿಯುವಂತೆ ಪರಶಿವನನ್ನು ಪ್ರಾರ್ಥಿಸುತ್ತೇನೆ. ಪಾಪಿಗಳು ನಿನ್ನಲ್ಲಿ ಸ್ನಾನ ಮಾಡುವಂತೆ ಜ್ಞಾನಿಗಳೂ ನಿನ್ನಲ್ಲಿ ಮೀಯುತ್ತಾರೆ. ಅವರ ಸಂಪರ್ಕದಿಂದ ಪಾಪಗಳು ಕೊಚ್ಚಿ ಹೋಗುತ್ತವೆ’ ಎಂದ ಭಗೀರಥನ ಮಾತಿಗೆ ಒಪ್ಪಿದಳು.ಭಗೀರಥ ಶಿವನನ್ನು ಕುರಿತು ತಪಸ್ಸು ಮಾಡಿದ. ಶಿವ ಪ್ರತ್ಯಕ್ಷನಾದ. ಗಂಗೆ ಆಕಾಶದಿಂದ ಧುಮ್ಮಿಕ್ಕಿದಳು. ಶಿವನು ಅವಳನ್ನು ಜಟೆಯಲ್ಲಿ ಧರಿಸಿದ. ಅಲ್ಲಿಂದ ಅವಳು ಭೂಮಿಗಿಳಿದು ಭಗೀರಥನ ರಥದ ಹಿಂದೆ ಹರಿಯುತ್ತಾ ಹೊರಟಳು.

ಮುಟ್ಟಿದ ಜಾಗವನ್ನೆಲ್ಲಾ ಪವಿತ್ರಗೊಳಿಸುತ್ತಾ ಭಗೀರಥನ ತಂದೆ ತಾತಂದಿರಿಗೆ ಸ್ವರ್ಗ ಪ್ರಾಪ್ತಿಯಾಗುವಂತೆ ಮಾಡಿದಳು.ಸಗರನೆಂಬಾತ ಸಜ್ಜನರನ್ನು ಬಾಧಿಸುತ್ತಿದ್ದ ರಾಜರನ್ನೆಲ್ಲಾ ಸೋಲಿಸಿ ಚಕ್ರವರ್ತಿಯಾದ. ತೊಂಬತ್ತೊಂಬತ್ತು ಅಶ್ವಮೇಧ ಯಾಗಗಳನ್ನು ಮಾಡಿದ. ಇನ್ನು ಒಂದು ಯಾಗ ಮಾಡಿದರೆ ಅವನು ಸ್ವರ್ಗದ ಒಡೆಯನಾಗಬಹುದೆಂದು ಹೆದರಿ ಇಂದ್ರನು ಯಾಗದ ಕುದುರೆಯನ್ನು ಅಪಹರಿಸಿ ಪಾತಾಳಕ್ಕೊಯ್ದು ಅಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮುನಿಯ ಹಿಂಭಾಗದಲ್ಲಿ ಕಟ್ಟಿ ಹಾಕಿದ. ಸಗರನಿಗೆ ಅರವತ್ತು ಸಾವಿರ ಮಕ್ಕಳಿದ್ದರು. ಅವರು ಯಾಗದ ಕುದುರೆಯನ್ನು ಇಡೀ ಭೂಮಿಯಲ್ಲಿ ಹುಡುಕಿದರೂ ಸಿಗದೆ ಕಡೆಗೆ ಪಾತಾಳಲೋಕಕ್ಕೆ ಹೋಗಿ, ಕುದುರೆಯನ್ನು ಕಂಡರು.

ಕಪಿಲಮುನಿಯೇ ಕುದುರೆ ಕಳ್ಳನೆಂದು ಭಾವಿಸಿ ಅವನ ತಪೋ ಭಂಗ ಮಾಡಿದರು. ಕಪಿಲನು ಕಣ್ತೆರೆದಾಗ ಕಣ್ಣುಗಳಲ್ಲಿಂದ ಸೂಸಿದ ಬೆಂಕಿಯಲ್ಲಿ ಭಸ್ಮವಾದರು. ಸಗರನ ಮೊಮ್ಮಗ ಅಂಶುಮಂತ. ಬಹುಕಾಲವಾದರೂ ಕುದುರೆ ಹುಡುಕಲು ಹೋದವರು ಹಿಂತಿರುಗಲಿಲ್ಲವೆಂದು ಅವನು ಹುಡುಕುತ್ತ ಪಾತಾಳಲೋಕ ತಲುಪಿದ. ಅಲ್ಲಿ ಕಪಿಲ ಮುನಿಯ ಮುಂದಿರುವ ಬೂದಿರಾಶಿ, ಹಿಂದಿರುವ ಕುದುರೆ ಕಂಡು ಪರಿಸ್ಥಿತಿಯ ಅರಿವಾಯಿತು. ಬಹು ವಿಧದಿಂದ ಮುನಿಯನ್ನು ಕೊಂಡಾಡಿ ಪ್ರಸನ್ನಗೊಳಿಸಿದ. ಮುನಿಯು ಅವನನ್ನು ಅನುಗ್ರಹಿಸಿ, ಕುದುರೆಯನ್ನು ಅವನಿಗೊಪ್ಪಿಸಿದ. ಭಸ್ಮವಾದ ಸಗರ ಪುತ್ರರಿಗೆ ಮೋಕ್ಷ ಸಿಗಬೇಕಾದರೆ ಆಕಾಶಗಂಗೆ ಧುಮುಕಿ ಬೂದಿಯನ್ನು ಕೊಚ್ಚಿಕೊಂಡು ಹೋಗಬೇಕು. ದೇವಗಂಗೆಯನ್ನು ತಪಸ್ಸಿನಿಂದ ಒಲಿಸಿಕೊಳ್ಳಬೇಕೆಂದು ಹೇಳಿದ.

ಆಂಶುಮಂತನು ಕುದುರೆಯೊಂದಿಗೆ ಹಿಂದಿರುಗಿ ವಿಷಯವನ್ನು ಸಗರನಿಗೆ ತಿಳಿಸಿದ. ಯಾಗ ಮುಗಿಯಿತು. ಸಗರನು ತಪಸ್ಸಿಗಾಗಿ ಕಾಡಿಗೆ ಹೊರಟ. ತಂದೆಯ ಅಪೇಕ್ಷೆಯತೆಯೇ ಆಂಶುಮಂತ ಸಿಂಹಾಸನವೇರದೆ ತಪಸ್ಸಿಗಾಗಿ ಕಾಡಿಗೆ ಹೋದ. ಜೀವನವಿಡೀ ತಪೋ ನಿರತನಾದರೂ ಗಂಗೆ ಒಲಿಯಲಿಲ್ಲ. ನಂತರ ಈ ಹೊಣೆ ಹೊತ್ತ ಮಗ ದಿಲೀಪನೂ ಸಫಲನಾಗದೇ ತನ್ನ ಮಗ ಭಗೀರಥನಿಗೆ ಜವಾಬ್ದಾರಿ ಒಪ್ಪಿಸಿದ. ಭಗೀರಥನು ಮೊದಲು ನೀರನ್ನು ಕುಡಿಯುತ್ತಾ ತಪಸ್ಸಿಗೆ ತೊಡಗಿದ. ಮತ್ತೆ ನೀರು, ಗಾಳಿಯ ಸೇವನೆಯನ್ನೂ ನಿಲ್ಲಿಸಿ ಉಗ್ರ ತಪಸ್ಸು ಮುಂದುವರೆಸಿದ. ಅವನ ತಪಸ್ಸಿನ ಬೆಂಕಿಗೆ ಮೂರು ಲೋಕಗಳೂ ಸುಡಲಾರಂಭಿಸಿದವು.

ಆಗ ಬ್ರಹ್ಮ ಗಂಗೆಯನ್ನು ಕಳುಹಿಸಿದ. ಗಂಗೆ `ನಾನು ಭೂಮಿಗೆ ಬಂದರೆ ಪಾಪಿಗಳಿರುವ ಭೂಮಿಯ ಜನ ನನ್ನಲ್ಲಿ ಸ್ನಾನ ಮಾಡಿ ಪಾಪಮುಕ್ತರಾಗುತ್ತಾರೆ. ಆಗ ನನಗಂಟಿದ ಪಾಪ ನಿವಾರಣೆಗೆ ಏನಿದೆ ದಾರಿ?’ ಎಂದು ಕೇಳಿದಾಗ `ಪುಣ್ಯವಂತರ ಸ್ನಾನ’ ಎಂದುತ್ತರಿಸಿದ.`ನನ್ನ ರಭಸಕ್ಕೆ ಭೂಮಿಯೇ ಕೊಚ್ಚಿ ಹೋಗಬಹುದು. ನನ್ನ ವೇಗ ತಡೆಯಲು ಶಿವನನ್ನು ತಪಸ್ಸು ಮಾಡಿ ಒಲಿಸಿಕೋ. ಅವನು ಜಟೆಯಲ್ಲಿ ನನ್ನನ್ನು ಧರಿಸಿದರೆ ನಿಧಾನವಾಗಿ ಭೂಮಿಗಿಳಿದು ನಿನ್ನ ಬಂಧುಗಳಿಗೆ ಮೋಕ್ಷ ನೀಡುತ್ತೇನೆ’ ಎಂದಳು. ಭಗೀರಥ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ. ಶಿವನು ಭೂಮಿಯಲ್ಲಿ ನಿಂತು ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿದ. ಗಂಗೆ ನೆಲಕ್ಕಿಳಿದ ರಭಸಕ್ಕೆ ಜಹ್ನು ಋಷಿಯ ಆಶ್ರಮ ಕೊಚ್ಚಿ ಹೋಯಿತು. ಋಷಿ ಗಂಗೆಯನ್ನೆತ್ತಿ ಕುಡಿದುಬಿಟ್ಟ.

ಭಗೀರಥನ ಪ್ರಾರ್ಥನೆಯಂತೆ ಅವನು ಕಿವಿಗಳ ಮೂಲಕ ಗಂಗೆಯನ್ನು ಹೊರ ಚೆಲ್ಲಿದಾಗ, ಗಂಗೆಗೆ `ಜಾಹ್ನವಿ‘ ಎಂಬ ಹೆಸರಾಯಿತು. ಗಂಗೆ ಪಾತಾಳಕ್ಕೆ ಹರಿದು ಸಗರ ಪುತ್ರರ ದೇಹದ ಬೂದಿಯನ್ನು ತೊಳೆದು ಮೋಕ್ಷಕ್ಕೆ ಕಾರಣಳಾದಳು. ಸಗರನ ಮಕ್ಕಳು ನಿರ್ಮಿಸಿದ ಸುರಂಗದಲ್ಲಿ ನಿಂತ ನೀರಿಗೆ ಸಾಗರವೆಂಬ ಹೆಸರು ಬಂತು. ಕಠಿಣ ಪ್ರಯತ್ನದಿಂದ ಸಾಧನೆ ಮಾಡುವುದಕ್ಕೆ ಭಗೀರಥ ಪ್ರಯತ್ನವೆಂಬ ಹೆಸರಾದುದು ಈ ಕಾರಣದಿಂದಲೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published. Required fields are marked *

To Top