ಬೆಟ್ಟದ ಮಧ್ಯದಲ್ಲೆಲ್ಲೋ ಕಳೆದೇ ಹೋಗಿರೋ ಒಂದೂರಿನ ಬಗ್ಗೆ ನಮ್ಮ ಈ ದಿನದ ಮಾತು ಕತೆ. ಕದಂಬ ರಾಜವಂಶಸ್ಥರು ಆಳ್ವಿಕೆ ನಡೆಸೋವಾಗ ಅಂದರೆ ಸುಮಾರು ೪ನೇ ಶತಮಾನದಲ್ಲಿ ಈ ಬನವಾಸಿನೇ ಅವರ ರಾಜಧಾನಿಯಾಗಿತ್ತು. ಆನಂತರ ಸಾಕಷ್ಟು ರಾಜರು ರಾಜವಂಶಸ್ಥರು ಆಳ್ವಿಕೆ ನಡೆಸಿದ್ದು ಈಗ ಇತಿಹಾಸ. ಇತಿಹಾಸದ ಪುಟ ಒಮ್ಮೆ ತಿರುವಿ ನೋಡಿದರೆ ಬನವಾಸಿಯ ವಿಚಾರವಾಗಿ ಎಷ್ಟೆಲ್ಲಾ ವಿಶೇಷ ವಿಷಯಗಳು ಸಿಗುತ್ತವೆಯೋ ಅಷ್ಟೇ ವಿಶೇಷ ಅಲ್ಲಿನ ಪ್ರಕೃತಿ ಇಂದಿಗೂ ಹೊಂದಿದೆ. ವಸಂತಕಾಲ ಶುರುವಾಗುತ್ತಿದ್ದಂತೆ ಹಸಿರನ್ನೇ ಹೊದ್ದಿರುವಂತ ಭತ್ತದ ಗದ್ದೆಗಳು, ಜುಳು ಜುಳು ಹರಿಯೋ ನದಿ, ಅಲ್ಲಲ್ಲಿ ಧುಮ್ಮಿಕ್ಕೊ ಜಲಪಾತಗಳು ಅಬ್ಬಾ!! ಅದೇ ಬನವಾಸಿ ಸುಂದರ ವನರಾಶಿ.
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ| ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್ ||
[ತ್ಯಾಗ, ಭೋಗ, ವಿದ್ಯೆ, ಸಂಗೀತ, ಕೂಟಗಳು – ಇವುಗಳಿಂದ ಕೂಡಿರುವ ಜೀವನವನ್ನು ಸಾಗಿಸುವವರೇ ನಿಜವಾದ ಮನುಷ್ಯರು. ಅಂತಹವರಾಗಿ ಹುಟ್ಟಬೇಕು. ಹಾಗಾಗದಿದ್ದರೆ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.]
ಹೀಗೆ ಹೇಳಿದ್ದು ಆದಿಕವಿ ಪಂಪ ಆತ ೧೦ನೇ ಶತಮಾನದಲ್ಲಿ ಬನವಾಸಿಯಲ್ಲೇ ಜೀವಿಸಿದ್ದ. ಪಂಪನ ಪ್ರಕಾರ ಬನವಾಸಿ ಅಂದ್ರೆ ಒಂದು ಸ್ವರ್ಗ.
1. “ಪಂಪನ ಬನವಾಸಿ ಒಂದು ಸ್ವರ್ಗ”
ಪಂಪ ಹೇಳಿರೋ ಮಾತು ಎಷ್ಟು ನಿಜ ಅನ್ಸುತ್ತೆ ಗೊತ್ತಾ. ಕಾರಣ ಏನಪ್ಪಾ ಅಂದ್ರೆ ಈ ಬನವಾಸಿಯಲ್ಲಿ ಎಲ್ಲಾ ಕಾಲದಲ್ಲೂ ಒಂದೊಂದು ಹೊಸತನ ಬರುತ್ತೆ. ಚಳಿಗಾಲದಲ್ಲಿ ಬನವಾಸಿನಲ್ಲಿರೋ ಎಲ್ಲಾ ಕೆರೆಗಳೂ ತಾವರೆ ಹೂಗಳಿಂದ ತುಂಬಿ ನಿಂತಿರುತ್ತೆ. ಮಳೆಗಾಲದಲ್ಲಿ ಮಂಜು ಮುಸುಕಿದ ಬೆಳ್ಳಿ ವಾತಾವರಣ ಜೊತೆಗೆ ಅಲ್ಲಲ್ಲಿ ಜಲಪಾತಗಳನ್ನ ಸೃಷ್ಠಿ ಮಾಡೋ ನೀರ ಸೆಲೆ. ವಸಂತಕಾಲದಲ್ಲಿ ತಣ್ಣನೆಯ ಗಾಳಿ ತನ್ನ ಜೊತೆಗೇ ಹೊತ್ತು ತರುವ ಹಲವು ಹೂಗಳ ಸುಗಂಧ. ಪಂಪನ ಮಾತು ಸತ್ಯ ಬನವಾಸಿ ನಿಜಕ್ಕೂ ಸ್ವರ್ಗವೆ ಸರಿ.
2.ಹಳೆಯ ಪಟ್ಟಣದಲ್ಲೊಂದು ಪ್ರಖ್ಯಾತ ಇತಿಹಾಸ
ವಿವಿಧ ರಾಜವಂಶಗಳು ಆಳಿದ ಕಾರಣ, ಹಲವು ದೇಶದ ವಿದ್ವಾಂಸರು ಭೇಟಿ ಕೊಟ್ಟ ಕಾರಣದಿಂದ ಬನವಾಸಿಗೆ ಹಲವಾರು ಹೆಸರುಗಳಿವೆ. ವನವಾಸಿಕ, ಜಯಂತಿಪುರ, ಕೊಂಕಣಪುರ , ನಂದನವನ , ಕನಕಾವತಿ, ಜಲದುರ್ಗಾ, ಸಂಜಯಂತಿ ಇವು ಬನವಾಸಿಗೆ ಇದ್ದ ಹಲವು ಹೆಸರುಗಳು. ಈ ಊರಿನ ಬಗ್ಗೆ ಗ್ರೀಕ್-ರೋಮನ್ ಬರಹಗಾರ ಟಾಲೆಮಿ ೨ನೇ ಶತಮಾನದಲ್ಲೇ ತನ್ನ ಬರಹಗಳಲ್ಲಿ ಕೊಂಡಾಡಿದ್ದಾನೆ. ಅಲ್ಲದೆ ಪರ್ಷಿಯನ್ ವಿದ್ವಾಂಸನಾದ ಆಲ್ಬರೂನಿ ಕೂಡ ಇಲ್ಲಿರುವ ಸುಂದರ ದೇವಸ್ಥಾನಗಳ ಬಗ್ಗೆ , ವರದಾ ನದಿ, ಕೋಟೆಗಳ ಬಗ್ಗೆ, ಜೊತೆಗೆ ಅಲ್ಲಿ ಸಿಗುವ ಊಟತಿಂಡಿ ಎಲ್ಲದರ ವಿಚಾರವಾಗಿ ತನ್ನ ಗ್ರಂಥಗಳಲ್ಲಿ ಬರೆದಿದ್ದಾನೆ. ಇದೊಂದು ಮಾಯಾ ನಗರ ಎನ್ನುವುದು ಚಾಮರಸ ಮತ್ತೆ ಕಾಳಿದಾಸರ ಪದ್ಯದಲ್ಲಿ ಕಂಡು ಬರುವ ಸಾಲುಗಳು.
3. ಮಧುಕೇಶ್ವರ ದೇವಸ್ಥಾನ
ಕದಂಬ ರಾಜ ವಂಶಸ್ತರು ಈ ಊರನ್ನು ಆಳುತ್ತಿದ್ದ ಸಮಯದಲ್ಲಿ ಈ ಮಧುಕೇಶ್ವರ ದೇವಸ್ಥಾನ ಕಟ್ಟಿದ್ದಾರೆ. ಮೊದಲಿಗೆ ವಿಷ್ಣುವೀಣೆ ಅಥವಾ ಮಾಧವನ ದೇವಸ್ಥಾನವಾಗಿದ್ದ ಈ ಸ್ಥಳ ಆನಂತರ ಆಳ್ವಿಕೆ ಮಾಡಿದ್ದ ಹೊಯ್ಸಳರು, ಚಾಲುಕ್ಯರು, ಸೌಂದ ಮತ್ತೆ ವಿಜಯನಗರದ ಅರಸರು ಈ ದೇವಸ್ಥಾನದ ವಾಸ್ತುಶಿಲ್ಪದ ಬದಲಾವಣೆ ಮಾಡಿದ್ದಾರೆ. ಪೂರ್ವ ದಿಕ್ಕಿಗೆ ಮುಖ ಮಾಡಿರುವ ಈ ಮಧುಕೇಶ್ವರ ದೇವಸ್ಥಾನದಲ್ಲಿ (ಮಧು) ಜೇನುಬಣ್ಣದ ಶಿವಲಿಂಗ ಇದೆ. ಇದರ ಜೊತೆಗೆ ಮಹಿಷಾಸುರ ಮರ್ಧಿನಿ, ಗಣೇಶ, ನಂದಿ, ಪಾರ್ವತಿ, ವೀರಭದ್ರ, ನರಸಿಂಹ, ಬಸವಲಿಂಗೇಶ್ವರ ಗುಡಿಗಳೂ ಇವೆ.
4. ಮಧುಕೇಶ್ವರ ದೇವಸ್ಥಾನದಲ್ಲಿರೋ ಕಲಾತ್ಮಕ ವಿಶೇಷ
ಬ್ರಾಹ್ಮಿ, ಪ್ರಾಕೃತ ಭಾಷೆಯ ಬರಹಗಳಿರೋ ನಾಗನ ವಿಗ್ರಹಗಳನ್ನ ಕೆತ್ತನೆಗಳನ್ನ ನಾವಿಲ್ಲಿ ನೋಡಬಹುದು. ೩ನೇ ಶತಮಾನದಲ್ಲಿ ಆಳಿದ್ದ ಶಾತವಾಹನರ ದೊರೆ ಪುಳುಮಾವಿಯ ಧರ್ಮಪತ್ನಿಯ ಸವಿನೆನಪಿನಲ್ಲಿ ಕೆತ್ತಲಾಗಿರುವ ಕಲ್ಲಿನ ವಿಗ್ರಹಗಳು, ರೋಮನ್ನರ ಕಲ್ಲಿನ ನಾಣ್ಯ, ಮಣ್ಣಿನಿಂದ ಮಾಡಿರೋ ಸ್ಕಂದ – ಕಾರ್ತಿಕೇಯನ ಮೂರ್ತಿಗಳು, ಮರದಳ್ಳಿ ಕೆತ್ತಿರೋ ರಥ ಎಲ್ಲವೂ ನೆಲ ಅಗೆದ ಸಂದರ್ಭದಲ್ಲಿ ದೊರೆತಿವೆ.
5. ಬನವಾಸಿಯ ಐತಿಹಾಸಿಕ ಸಂಭ್ರಮ ” ಕದಂಬೋತ್ಸವ”
ಬನವಾಸಿ ಆ ಕಾಲದಿಂದಲೂ ಕಲೆ- ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಆ ಸಂಭ್ರಮಾಚರಣೆಯೇ ಪ್ರತಿ ವರ್ಷ ಅಲ್ಲಿ ಆಚರಿಲಾಗುವ ಕದಂಬೋತ್ಸವ. ಇದು ೩ ದಿನಗಳ ಕಾಲ ನಡೆಯುವ ಕಲಾ ಹಬ್ಬ. ಸಾಕಷ್ಟು ಜನ ಕಲಾವಿದರು, ಸಂಗೀತಗಾರರು, ನೃತ್ಯಗಾರರು, ಕುಂಬಾರರು, ರಂಗೋಲಿ ಕಲಾವಿದರು, ಕೆತ್ತನೆ ಕೆಲಸ ಮಾಡುವವರು, ಬಡಗಿಗಳು, ಬನವಾಸಿಯ ಕಳೆದುಹೋದ ಸಂಭ್ರಮವನ್ನ ಮತ್ತೆ ನೆನಪಿಸೋ ಕೆಲಸವನ್ನ ಈ ಮೂರೂ ದಿನ ಕಾಲ ಮಾಡುತ್ತಾರೆ.
6. ಬತ್ತದ ಗದ್ದೆ ಮತ್ತೆ ಪೈನಾಪಲ್ ತೋಟ
ಬನವಾಸಿ ಊರು ಮಳೆಗಾಲ ಶುರುವಾಗುತ್ತಿದ್ದಂತೆ ಹಸಿರು ಹೊದ್ದಿರುವುದನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಅದಕ್ಕೆ ಕಾರಣ ಅಲ್ಲಿರುವ ಭತ್ತದ ಗದ್ದೆ. ಈ ಬನವಾಸಿಯಲ್ಲಿ ರುಚಿ ಚಿಯಾಗಿರುವ ಪೈನಾಪಲ್ ಬೆಳೇಯುತ್ತಾರೆ. ಈ ಹಾಗೆಯೇ ತಿನ್ನುವುದರ ಜೊತೆಗೇ ಪೈನಾಪಲ್ ಬಳಸಿ ಮಾಡಿರೋ ಗೊಜ್ಜು ಸವಿಯುವುದೇ ಸೊಗಸು. ಇದನ್ನ ಅಲ್ಲಿನ ಖಾನಾವಳಿಗಲ್ಲಿ ಅಕ್ಕಿ, ಜೋಳ ಮತ್ತೆ ಸಜ್ಜೆಯಿಂದ ಮಾಡಿರುವ ರೊಟ್ಟಿಗಳ ಜೊತೆಗೆ ಪಲ್ಯ , ಚಟ್ನಿ, ಉಪ್ಪಿನಕಾಯಿ ಮತ್ತೆ ಪೈನಾಪಲ್ ಗೋಜ್ಜೂ ಜೊತೆಮಾಡಿ ಕೊಡ್ತಾರೆ.
7. ಗುಡ್ನಾಪುರದ ಅವಶೇಷಗಳು
ಬನವಾಸಿಯ ಹೊರಭಾಗದಲ್ಲಿರೋ ಗುಡ್ನಾಪುರ ಅವಶೇಷಗಳಲ್ಲಿ ಸೇರಿಹೋಗಿದೆ. ಭವ್ಯವಾದ ಮನೆಗಳೂ, ನೃತ್ಯಮಾಡಲೆಂದೇ ನಿರ್ಮಿಸಲಾದ ಹಾಲ್ ಗಳೂ ಅಷ್ಟೇ ಅಲ್ಲದೆ ಒಂದಷ್ಟು ಜೈನ ತೀರ್ಥಂಕರರ ವಿಗ್ರಹಗಳೂ ದೇವಸ್ಥಾನ ಎಲ್ಲವೂ ಮಳೆ ನೀರು ಹೆಚ್ಚಾಗಿ ಕೆರೆ ತುಂಬಿ ಹರಿಯುವಾಗ ಮುಳುಗಿರುವುದನ್ನು ಕಾಣಬಹುದು. ಪ್ರಾಚ್ಯವಸ್ತು ಸಂಗ್ರಹಕಾರರು ಉತ್ಖನನ ಸಮಯದಲ್ಲಿ ದೊರೆತ ಒಂದು ವಿಶೇಷವಾದ ಕಂಬದಲ್ಲಿ ರಾಜ ರವಿವರ್ಮನ ವಿಷಯವಿರುವ ಕೆತ್ತನೆಯನ್ನೂ ನೋಡಬಹುದು.
8. ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ.
ಬನವಾಸಿಯ ಸುಮಾರು ೪೩ ದೂರಲ್ಲಿರೋ ಶಿರಾಳಿಕೊಪ್ಪ ಹೆಸರಿನ ತಾಲ್ಲೂಕಿನಲ್ಲಿ ಬಳ್ಳಿಗಾವಿ ಹೆಸರಿನ ಹಳ್ಳಿ ಇದೆ. ಸುಮಾರು ೫೪ ದೇವಸ್ಥಾನಗಳನ್ನ ನಾವಿಲ್ಲಿ ನೋಡಬಹುದು. ಶೈವರಿಗೆ, ವೈಷ್ಣವರಿಗೆ, ಜೈನರಿಗೆ, ಬೌದ್ಧರಿಗೆ ಹೀಗೆ ಎಲ್ಲರ ಆರಾಧನೆಗೂ ಇಲ್ಲಿ ದೇವಾಲಯ ಇದೆ. ಒಂದೆರಡು ದೇವಸ್ಥಾನಗಳನ್ನು ಚಾಲುಕ್ಯರ ಆಳ್ವಿಕೆಯ ನಂತರ ಕಟ್ಟಲಾಗಿದೆ ಎಂದು ನಂಬಲಾಗಿದೆ. ಇಲ್ಲಿರುವ ಕೇದಾರೇಶ್ವರನ ದೇವಸ್ಥಾನ ಕಟ್ಟಿರುವುದು ಬಳಪದ ಕಲ್ಲಿನಲ್ಲಿ. ಚಾಲುಕ್ಯ – ಹೊಯ್ಸಳ ಎರಡೂ ಶೈಲಿಗಳನ್ನೂ ನಾವಿಲ್ಲಿ ನೋಡಬಹುದು. ಸುಮಾರು ೧೧ನೇ ಶತಮಾನದಲ್ಲಿ ಇದನ್ನ ಕಟ್ಟಲಾಗಿದೆ. ಈ ದೇವಸ್ಥಾನದ ಪ್ರಾಕಾರದಲ್ಲಿಯೇ ಒಂದು ಮ್ಯೂಸಿಯಂ ಸಹ ಇದೆ.
9.ಬೇಡವಾದ ರತ್ನ ಎನಿಸಿಕೊಂಡಿರೋ ಬೆಳ್ಳಿಗಾವಿಯ ತ್ರಿಪುರಾಂತಕೇಶ್ವರ ದೇವಸ್ಥಾನ.
ಬೇರೆ ದೇವಸ್ಥಾನಗಳಿಗೆ ಹೋಲಿಸಿದಂತೆ ಈ ದೇವಸ್ಥಾನ ಅದೇನೋ ಹೆಚ್ಚು ಪ್ರಚಾರ ಪಡೆದಿಲ್ಲ. ಆದ್ರೆ ಇಲ್ಲಿನ ಕೆತ್ತನೆಗಳು ತುಂಬಾ ಅದ್ಭುತವಾಗಿದೆ. ಕಲ್ಲಿನಲ್ಲಿ ಮಾಡಿರುವ ಕಿಟಕಿಗಳು, ನೃತ್ಯಭಂಗಿಯಲ್ಲಿರೋ ಹುಡುಗಿಯರ ವಿಗ್ರಹಗಳು, ಆಭರಣ ತೊಟ್ಟಿರುವ ದ್ವಾರಪಾಲಕರು, ಪಂಚತಂತ್ರ ಕತೆಗಳ ಕೆತ್ತನೆಗಳು ಇವೆಲ್ಲವೂ ಖಂಡಿತವಾಗಿ ನೋಡಲೇಬೇಕಾದ ಜಾಗ.
10. ಇಷ್ಟೆಲ್ಲಾ ವಿಶೇಷತೆಗಳಿರೋ ಕಲಾಬೀಡು ಬನವಾಸಿಗೊಮ್ಮೆ ಭೇಟಿ ಮಾಡಬಯಸುವವರಿಗಾಗಿ ಮಾಹಿತಿ.
ಶಿರಸಿಯಿಂದ ೨೨ ಕಿಮಿ ದೂರದಲ್ಲಿರುವ ಈ ಬನವಾಸಿಗೆ ಶಿವಮೊಗ್ಗ, ಹಾವೇರಿಯಿಂದ ಬಸ್ಸು, ಟ್ರೇನು ಲಭ್ಯವಿದೆ. ಶಿರಸಿಯಿಂದ ಬನವಾಸಿಗೂ ಬೇಕಾದಷ್ಟು ಬಸ್ಸುಗಳಿವೆ.
11. ಬನವಾಸಿಯ ವಿಶೇಷ ತಿಂಡಿ ತೀರ್ಥ.
ಬನವಾಸಿಯ ಖಾನಾವಳಿಗಳಲ್ಲಿ ದೊರೆಯುವ ಅಕ್ಕಿ ಜೋಳ ಸಜ್ಜೆ ನವಣೆಗಳಲ್ಲಿ ಮಾಡಿರುವ ರೊಟ್ಟಿ ಪಲ್ಯ ಚಟ್ನಿ ಉಪ್ಪಿನಕಾಯಿ ತಿನ್ನಲೇಬೇಕು. ಸಿಹಿ ತಿಂಡಿ ಇಷ್ಟ ಪಡುವವರು ಇಲ್ಲಿ ತಯಾರಿಸುವ ಒಬ್ಬಟ್ಟು ಸವಿಯಬಹುದು. ಪೈನಾಪಲ್ ತಿನ್ನದೇ ವಾಪಸ್ಸಾದ್ರೆ ಆಮೆಲೆ ಬೇಸರ ಪಡ್ತೀರಿ ಜೋಕೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
