fbpx
ದೇವರು

ರಾವಣನ ಮಗ ಇಂದ್ರನನ್ನು ಗೆದ್ದು ಇಂದ್ರಜಿತ್ ಆದ , ಗೌತಮರ ಪತ್ನಿ ಆಹಲ್ಯೆಯನ್ನು ಕಾಮಿಸಿದ ಇಂದ್ರ ತಕ್ಕ ಪಾಠ ಕಲಿತ..

ರಾವಣನು  ಹಿಂತಿರುಗಿ ಬರುವುದರಲ್ಲಿ ರಾಕ್ಷಸರ ಕುಲದೇವತೆಯಾದ ನಿಕುಂಭಿಳೆಯನ್ನು ಮೆಚ್ಚಿಸಲು ರಾವಣನ ಮಗನಾದ ಮೇಘನಾದನು ಶುಕ್ರಾಚಾರ್ಯರ ಸಮ್ಮುಖದಲ್ಲಿ ಯಾಗವನ್ನು ಮಾಡುತ್ತಿದ್ದನು.ಅಲ್ಲಿಗೆ ಬಂದ ರಾವಣನು ಮಾಹೇಶ್ವರ ಯಾಗವನ್ನು ಪೂರ್ತಿಮಾಡಿ ತಾಮಸೀ ವಿದ್ಯೆಯನ್ನು ಬಿಲ್ಲು ಬಾಣ ಖಡ್ಗ ಮುಂತಾದ ರಥಗಳನ್ನು ಅಜೇಯವಾದ ರಥವನ್ನು ಪಡೆದಿರುವ ಮಗನನ್ನು ಕಂಡಾಗ ದಿಕ್ಪಾಲರನ್ನು ಇಂದ್ರನನ್ನು ಕುರಿತು ಯಜ್ಞವನ್ನು ಮಾಡಿದೆಯಾ ? ಎಂದು ಕೇಳಿದಾಗ ಮೇಘನಾದನು ಶಿವನೇ ಪ್ರತ್ಯಕ್ಷವಾಗಿ ವರ ಕೊಟ್ಟಿದುದನ್ನು ತಿಳಿಸಿದನು.ಅದೃಶ್ಯನಾಗಿದ್ದು ಶರವರ್ಷ ಮಾಡುವ ಸಿದ್ಧಿಯು ತನಗೆ ಸಿಕ್ಕಿದುದನ್ನು ತಿಳಿಸಿದನು.

ಹೀಗೆ ರಾವಣನ ಮಗನೂ ಸಹ ಸಿದ್ದಿ ಪಡೆದುದರಿಂದ ಸಂತಸಗೊಂಡು ಎಲ್ಲರಿಗೂ ತಮ್ಮ ತಮ್ಮ ಮನೆಗಳಿಗೆ ಹೋಗಲು ಹೇಳಿದನು.ವೀಭೀಷಣನು ರಾವಣನಿಗೆ ತಾಯಿ ಕೈಕಸೆಯ ತಂಗಿಯನ್ನು ಮಧುವೆಂಬ ರಾಕ್ಷಸನು ಅಪಹರಿಸಿದ ವೃತ್ತಾಂತವನ್ನು ತಿಳಿಸಿದನು.ನೀನು ಪರ ಪತ್ನಿಯನ್ನು ಬಯಸಿದೆ ಪತಿವ್ರತೆಯರ ಶಾಪ ನಿನ್ನನ್ನು ಸುಟ್ಟು ಬಿಡುವುದು ಅದನ್ನು ತಿಳಿಯದೇ ನೀನೊಂದು ಮಾಡಿದರೆ ಇಲ್ಲಿಯೂ ಸಹ ಅಂತಹದೇ ಘಟನೆ ನೆಡೆಯಿತು.ಕುಂಭಕರ್ಣನು ನಿದ್ದೆಯಲ್ಲಿದ್ದನು.ಮೇಘನಾದನು ಯಾಗ ಮಾಡುತ್ತಿದ್ದನು.ಮಧು ಅಂತಃಪುರಕ್ಕೆ ನುಗ್ಗಿ ಅಪಹರಣ ಮಾಡಿದನು ಎಂದನು.

ರಾವಣನು ಅತ್ಯಂತ ಕೋಪದಿಂದ ನೀವೆಲ್ಲರೂ ಏನು ಮಾಡುತ್ತಿದ್ದೀರಿ ಎಂದಾಗ ನಾನು ನೀರಲ್ಲಿ ಮುಳುಗಿ ಅಘಮರ್ಶನ ಜಪ  ಮಾಡುತ್ತಿದ್ದೆನು. ಎಂದು ಹೇಳಿದಾಗ ಲಂಕೆಯ  ರಕ್ಷಣೆಯ ಜವಾಬ್ದಾರಿಯನ್ನು  ವಿಭೀಷಣನಿಗೆ ಒಪ್ಪಿಸಿ ಮಧುವನ್ನು ನಾಶಪಡಿಸಲು ಧಾವಿಸಿದನು.ರಾವಣ ಸಿಟ್ಟಿನಿಂದ ಗರ್ಜಿಸುತ್ತಲೇ ರಾಕ್ಷಸ ಸೈನ್ಯವೂ ದಾರಿಯಲ್ಲಿರುವ ಅನೇಕ ಪ್ರಾಣಿಗಳನ್ನು ನಾಶಪಡಿಸುತ್ತ ಮಧುವಿನ ಪಟ್ಟಣವನ್ನು ಅಕ್ರಮಿಸಿದರು.ಕುಂಭಕರ್ಣನು ಮೇಘನಾದ ಮುಂತಾದವರು ಸೈನ್ಯದಲ್ಲಿದ್ದರು.

ಮಧುವೆಂಬ ರಾಕ್ಷಸನು ಶಿವನನ್ನು ಮೆಚ್ಚಿಸಿ ತ್ರಿಶೂಲ ಪಡೆದು ಯಾರಿಂದಲೂ ಸೋಲದೇ ಅಹಂಕಾರದಿಂದ ಇದ್ದವನು.ಮಧುವಿನ ಪುರಕ್ಕೆ ರಾವಣನ ಸೈನ್ಯವು ಮುತ್ತಿಗೆ ಹಾಕಿದಾಗ ಚಿಕ್ಕಮ್ಮ ಕುಂಭಿನಿಯು ಬಂದು ಮಗನೇ,ನನ್ನ ಗಂಡನನ್ನು  ನನ್ನ ಮಗನನ್ನು ಕಾಪಾಡು.ಎಂದು ಹೇಳಿದಾಗ ಅವನನ್ನು ಕರೆದುಕೊಂಡು ಬಾರೆನಲು ಅವಳು ತನ್ನ ಗಂಡ ಮಧುವಿಗೆ ರಾವಣನನ್ನು ಕಾಣಲು ತಿಳಿಸಿದಳು.ಅದರಂತೆ ಮಧುವು ಬಂದು ಅನೇಕ ರೀತಿಯಿಂದ ಉಪಚಾರ ಮಾಡಿದನು.ತನ್ನ ಚಿಕ್ಕಮ್ಮನ ಗಂಡನೇ ಮಧು ಎಂದು ತಿಳಿದ ರಾವಣನು ಯುದ್ಧದ ವಿಚಾರವನ್ನು ಬಿಟ್ಟು ದೇವೇಂದ್ರನನ್ನೇ ಕುರಿತು ಯುದ್ಧ ಮಾಡುವ ಆಲೋಚನೆ ಮಾಡಿದನು.ಮಧುವಿನ ಸ್ನೇಹದೊಂದಿಗೆ ಅವನೂ ಸಹ ರಾವಣನನ್ನು ಸೇರಿಕೊಂಡನು.

ಕೈಲಾಸಗಿರಿಗೆ ಬಂದು ರಾವಣನು ಪರಿವಾರದೊಂದಿಗೆ ಇರುವಾಗ ಆ ಮಾರ್ಗವಾಗಿ ಅಪ್ಸರೆ ರಂಭೆ ಹೋಗುತ್ತಿದ್ದದನ್ನು ಕಂಡನು.ಅವಳನ್ನು ತಡೆದಾಗ  ಅವಳು ಅಲ್ಲಿಯೇ ಮರೆಯಾಗಿ ಕುಭೇರನ ಮಗ   ನಳಕೂಬರನಲ್ಲಿಗೆ  ಹೋಗಿ ರಾವಣನು ತನ್ನ ಮಾರ್ಗವನ್ನು ತಡೆದುದನ್ನು ತಿಳಿಸಿದಳು.ಇನ್ನು ಮುಂದೆ ಪರಸ್ತ್ರಿಯನ್ನು ಬಲಾತ್ಕರಿಸಿದರೆ ಅವನ ಹತ್ತು ತಲೆಗಳು ಸೀಳಾಗಿ ಹೋಗಿ ಅವನು ಸಾಯಲಿ ಎಂದು ನಳಕೂಬರ ಶಾಪ ಕೊಟ್ಟನು.ಈ ಶಾಪದ ವಿಚಾರವೂ ರಾವಣನಿಗೆ ಅಶರೀರವಾಣಿಯಿಂದ ತಿಳಿಯಿತು.

ಆದರೂ ರಾವಣನು ಯಾವುದೇ ಚಿಂತೆಯಲ್ಲಿ ಇರಲಿಲ್ಲ.ಮರುದಿವಸ ದೇವತೆಗಳು ರಾವಣನ ಸೈನ್ಯ ಬಂದಿರುವುದನ್ನು ಗಮನಿಸಿದನು.ದೇವೇಂದ್ರನಿಗೆ ತಿಳಿಸಿದರು.ಆಗ.ಅವನು ನಮ್ಮನ್ನು ಹರಿ; ಹರ,ಬ್ರಹ್ಮರೇ ಕಾಪಾಡಬೇಕು ಎಂದು  ಇಂದ್ರನು ಹೇಳಿದಾಗ ಅಲ್ಲಿರುವ ಅನೇಕ ದೇವತೆಗಳು ರುದ್ರರು ,ಮರುತ್ತುಗಳು,ವಸುಗಳು ಸಿದ್ದರು  ಸಾಧ್ಯರು  ಅಪ್ಸರರು ವಿದ್ಯಾದರರು  ಕಿನ್ನರರು ಕಿಂಪುರಶರು ನಾವೆಲ್ಲರೂ ಇಲ್ಲವೇ.? ಇನ್ನು ಏಕೆ ಭಯ ಎಂದು ಇಂದ್ರನು ಧೈರ್ಯ ಹೆಚ್ಚಿಸಿದನು.ರಾವಣನನ್ನು ಸೋಲಿಸಿ ಕಳಿಸುವೆವು ಎಂದು ಸಮಾಧಾನ ಪಡಿಸಿದರು. ಆದರೆ ಅವರ ಉತ್ಸಾಹವನ್ನು ತಿಳಿದು ಅವರನ್ನು ತಡೆದು ರಾತ್ರಿಯಲ್ಲಿ ತಾನು ಮಾತ್ರ ಶ್ರೀಮನ್ನಾರಾಯಣನನ್ನು  ಕಂಡು ರಾವಣನು ಬಂದಿರುವ ವಿಚಾರವನ್ನು ತಿಳಿಸಿದನು. ಜಗದ್ರಕ್ಷಕನಾದ  ನೀನೇ ಕರುಣಿಸಿ ರಕ್ಷಿಸಬೇಕೆಂದು ಪ್ರಾರ್ಥಿಸಿದನು.

ಆಗ ಮಹಾವಿಷ್ಣುವು ಈಗ ನಾನು ಬರಲು ಸಾಧ್ಯವಿಲ್ಲ. ರಾವಣನು ದೇವತೆಗಳಿಂದ ಅಜೇಯನಾಗಿದ್ದಾನೆ.ಬ್ರಹ್ಮನ ವರವೇ ಆಗಿರುವದು.ನಾನು ಮಾನವನಾಗಿ  ನೀವು ಕಪಿಗಳಾಗಿ ಹುಟ್ಟಿ  ಭೂಲೋಕದಲ್ಲಿ ಅವತರಿಸಬೇಕು ಆಗಲೇ ರಾವಣನ ನಾಶ ಸಾಧ್ಯವಾಗುವುದು.ಈಗ ಅಷ್ಟರವರೆಗೆ ರಾವಣನ ಭಾದೆಯನ್ನು ಸಹಿಸಿಕೊಳ್ಳುವುದೇ   ಉತ್ತಮವೆಂದು  ಹೇಳಿಕಳಿಸಿದನು. ದೇವೇಂದ್ರನು ಶ್ರೀ ಹರಿಯು  ಮಾನವನಾಗಿ ಜನುಮವನ್ನು ಪಡೆಯುವ ಕಾಲವನ್ನು ನಿರೀಕ್ಷೆ ಮಾಡುತ್ತ ಇರುವುದೇ ಸರಿ  ಎಂದು ಅಮರಾವತಿಯನ್ನು ಸೇರಿದನು.ಸೂರ್ಯೋದಯದ ಸಮಯದಲ್ಲಿ ರಾವಣನ ಸೈನ್ಯವು ಅಮರಾವತಿಯನ್ನು ಮುತ್ತಿಗೆ ಹಾಕಿತು.ರಣವಾದ್ಯಗಳ ದನಿಯು ಆಕಾಶದಲ್ಲಿ ತುಂಬಿತು.ದೇವತೆಗಳು ಭಯದಿಂದ ಓಡುತ್ತಿರಲು ದೇವೇಂದ್ರನು ಎಲ್ಲರನ್ನು ತಡೆದು ಯುದ್ಧಕ್ಕೆ ಸಿದ್ದರಾಗಿರಿ ಎಂದು ಹೇಳಿದನು.

ಎರಡೂ ಸೈನ್ಯಗಳಲ್ಲಿ ವಿವಿಧ ಬಗೆಯ ಆಯುಧಗಳನ್ನು ಹಿಡಿದ  ಸೈನಿಕರು ಆವೇಶದಿಂದ ಹೋರಾಡಿದರು, ಗದೆ, ಖಡ್ಗ, ತೋಮರ, ಬಿಂಡಿವಾಳ, ಮುದ್ಗರ, ಖೇಡ್ಕ, ಈಟಿ ಮುಂತಾದವನ್ನು  ಹಿಡಿದು  ಎದುರಿಗೆ  ಬಂದವರನ್ನು  ಕತ್ತರಿಸುತ್ತಾ ಸಾಗಿದರು.ದೇವಸೈನ್ಯದ ಎದುರಿಗೆ  ರಾವಣನ ಸೈನ್ಯವೂ ಭಯ ಪಡುವಂತಾಯಿತು,ರಾವಣನು ಪ್ರಹಸ್ತ ತ್ರಿಶಿರ ಮಾರೀಚ ನುಕುಂಭ,ಖರ, ಧೂಮ್ರಾಕ್ಷ ದುರ್ಮುಖ ಮುಂತಾದವರನ್ನು ಯುದ್ಧಕ್ಕೆ ನಿಯಮಿಸಿದನು.

ರಾವಣನ  ಸೈನ್ಯದಲ್ಲಿ  ಮೇಘನಾದನು ಪ್ರಳಯವನ್ನು ಮಾಡುವವನಂತೆ ಮುನ್ನುಗ್ಗಿದನು.ವಸುಗಳನ್ನು ,ಮರುತ್ತರನ್ನು,ದಿಕ್ಪಾಲಕರನ್ನು ಸೋಲಿಸಿದನು. ಇಂದ್ರನು ಐರಾವತವನ್ನೇರಿ ಬಂದಾಗ ಇಂದ್ರಪುತ್ರ ಜಯಂತನು ಮೇಘನಾದನನ್ನು ಎದುರಿಸಿದನು. ಇಂದ್ರಪುತ್ರನನ್ನು ಮೇಘನಾದನು ಸರಳುಗಳಿಂದ ಸೀಳಿಹಾಕಿದನು.ಜಯಂತನು ಮೂರ್ಛೆ ಹೊಂದಿದನು. ಇಂದ್ರನು ರಾವಣನೊಂದಿಗೆ ಯುದ್ದವನ್ನು ಮಾಡಿದನು.

ರಾವಣನು ಬಿಟ್ಟ ಬಾಣಗಳನ್ನು ಇಂದ್ರನು ಕತ್ತರಿಸಿದನು. ರಾವಣನನ್ನು ಇಂದ್ರನು ಶರಪಂಜರದಿಂದ ಮುತ್ತಿದನು. ಅದನ್ನು ರಾವಣನು ಕತ್ತರಿಸಿದನು.ಇಂದ್ರನು ರಾವಣನ ಸಾರಥಿಯನ್ನು ಕೊಂದು ವಿರಥನನ್ನಾಗಿಸಿ ಅವನ ಧನುಸ್   ಬಾಣಗಳನ್ನು ತುಂಡು ಮಾಡಿದನು.ರಾವಣನು ಗದೆಯಿಂದ ಹೊಡೆದಾಗ ಇಂದ್ರನು ವಜ್ರಾಯುಧದಿಂದ  ಹೊಡೆದನು.ಅದರ ಹೊಡೆತದಿಂದಾಗಿ ರಾವಣನು ಮೂರ್ಛೆ ಹೊಂದಿ ಬಿದ್ದನು.

ತನ್ನ ತಂದೆಯು ಎಚ್ಚರ ತಪ್ಪಿ ಬಿದ್ದುದನ್ನು ಕಂಡು ಮೇಘನಾದನು ಇಂದ್ರನೊಂದಿಗೆ ಕಾಳಗವನ್ನು ಆರಂಭಿಸಿದನು.ತನ್ನ ಮಾಯಾಬಲದಿಂದ  ಇಂದ್ರನಿಗೆ  ಕಾಣಿಸದಂತೆ ಆಕ್ರಮಣ ಮಾಡಿದನು.ಇಂದ್ರನು ಏನೂ ತಿಳಿಯದೇ ಕಂಗಾಲಾದಾಗ ಇಂದ್ರನನ್ನು ಕಟ್ಟಿದನು.ರಥದಲ್ಲಿ ಹಾಕಿಕೊಂಡು ಹೊರಟನು.ರಾವಣನಿಗೆ ಎಚ್ಚರವಾದಾಗ ರಾಕ್ಷಸರ ಜಯಘೋಷ ಕೇಳಿ ಬಂದಿತು. ರಾವಣನು ತನ್ನ ಮಗನನ್ನು ಸಂತಸದಿಂದ ಅಪ್ಪಿಕೊಂಡು ಇಂದ್ರಲೋಕವನ್ನು ಸೂರೆಗೈಯುವಂತೆ ರಾಕ್ಷಸರಿಗೆ ಆದೇಶ ನೀಡಿದನು.ಲಂಕಾ ನಗರಕ್ಕೆ ಬಂದು ಇಂದ್ರನನ್ನು ಸೆರೆಯಲ್ಲಿ ಇರಿಸಿದನು.

ದೇವೇಂದ್ರನು ಲಂಕೇಶ್ವರನ ಸೆರೆಯಲ್ಲಿದ್ದಾಗ ಒಂದು ದಿನ ಚತುರ್ಮುಖ ಬ್ರಹ್ಮನು ಲಂಕೆಗೆ ಬಂದು ರಾವಣನಿಗೆ ಈ ರೀತಿ ಹೇಳಿದನು.ಮಗನೇ,ಮೂರು ಲೋಕವನ್ನೇ ಗೆದ್ದ ನೀನು ಇಂದ್ರನಿಗಿಂತಲೂ ಮೇಲು. ಇಂದ್ರನನ್ನು ಗೆದ್ದ ನಿನ್ನ ಮಗನು ‘ಇಂದ್ರಜಿತ್’ ಎಂದು ಹೆಸರು ಪಡೆದಿದ್ದಾನೆ.ಇಂದ್ರನು  ನನ್ನ ಅಪ್ಪಣೆಯಂತೆ ದೇವಲೋಕವನ್ನು ಆಳುವನು. ಅವನನ್ನು ಬಿಟ್ಟು ಬಿಡು.ಎಂದಾಗ ಇಂದ್ರಜಿತ್ ಅಮರತ್ವವನ್ನು ನನಗೆ ದಾಯಪಾಲಿಸೆಂದು ಕೇಳಿದನು.

ಬ್ರಹ್ಮನು ಸುರನರ ರಾಕ್ಷಸರಿಗೆ ಅಮರತ್ವವು ಸಾಧ್ಯವಿಲ್ಲ .ಅದನ್ನು ಬಿಟ್ಟು ಬೇರೆ ವರವನ್ನು ಕೇಳು ಎಂದಾಗ ನಾನು ಯಜ್ಞೇಶ್ವರನನ್ನು ಆರಾಧಿಸಿ ರಥವನ್ನು ಪಡೆಯುವೆನು. ಆ ರಥದಲ್ಲಿದ್ದರೆ ನಾನು ಅಜೇಯನಾಗುವಂತೆ ಅನುಗ್ರಹಿಸಿ  ಎಂದು ಕೇಳಿಕೊಂಡನು.ಬ್ರಹ್ಮನು ಹಾಗೇ ಆಗಲಿ ಎಂದು ಅಭಯವನ್ನಿತ್ತು ಇಂದ್ರನೊಂದಿಗೆ ಅಮರಾವತಿಗೆ ಹೋದನು.ಇಂದ್ರನಿಗೆ ನೀನು ಗೌತಮರ ಪತ್ನಿ ಆಹಲ್ಯೆಯನ್ನು ಕಾಮಿಸಿದ್ದರಿಂದಾಗಿ ನಿನಗೆ ಈ ಸ್ಥಿತಿ ಉಂಟಾಯಿತು. ಎಂದು ಹೇಳಿ ಸತ್ಯಲೋಕ ಸೇರಿದನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top