ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ಪಾಂಡವರು ದ್ರುಪದನನ್ನು ತಂದು ಮುಂದೆ ನಿಲ್ಲಿಸಿದರು.
ಹಿಂದಿನ ಕತೆ ಓದಿ..
ಒಂದು ದಿನ ದ್ರೋಣರು ಎಲ್ಲ ಶಿಷ್ಯರನ್ನು ಕರೆದು ಹೇಳಿದರು.ರಾಜ ಕುಮಾರರೇ, ನಿಮ್ಮ ವಿದ್ಯಾಭ್ಯಾಸ ಮಗಿದಿದೆ.ನನ್ನ ಗುರು ದಕ್ಷಿಣೆಯನ್ನು ಕೊಡುತ್ತೀರಾ ? ಎಂದರು.ಎಲ್ಲರೂ ಗುರುಗಳೆ ನಿಮಗೆ ಯಾವ ವಸ್ತುವನ್ನು ಗುರುದಕ್ಷಿಣೆಯನ್ನಾಗಿ ಕೊಡಬೇಕು ಹೇಳಿರಿ ಎಂದು ಕೇಳಿದರು.ದ್ರೋಣರು “ದ್ರುಪದ ರಾಜನನ್ನು ಹಿಡಿದು ತನ್ನಿರಿ” ಎಂದು ಆದೇಶ ಮಾಡಿದರು.
ರಾಜಕುಮಾರರು ಯುದ್ಧದ ಉತ್ಸಾಹದಿಂದ ಹೊರಟು ಪರಸ್ಪರ ಸ್ಪರ್ಧೆಯಿಂದ ಮುಂದೆ ಸಾಗಿದರು.ಕೌರವರು ತಾವು ಗುರುದಕ್ಷಿಣೆ ಕೊಡಬೇಕೆಂದು ಬಯಸಿದರೆ ಪಾಂಡವರು ತಾವೇ ಕೊಡಬೇಕೆಂದರು.ದುರ್ಯೋಧನನು ಸಹೋದರರೊಂದಿಗೆ ಮೊದಲಿಗೆ ಪಾಂಚಾಲ ದೇಶವನ್ನು ಪ್ರವೇಶ ಮಾಡಿದನು.ಆಗ ಪಾಂಡವರು ಅವರ ಕೈಲಾಗದಿದ್ದರೆ ನಾವು ಪ್ರಯತ್ನಿಸೋಣವೆಂದು ಹೊರಗೇ ನಿಂತರು.
ಕೌರವರು ಅಬ್ಬರಿಸುತ್ತಾ ದಾರಿಯಲ್ಲಿ ಸಿಕ್ಕ ಸೈನಿಕರನ್ನು ಕತ್ತರಿಸುತ್ತಾ ಮುನ್ನೆಡೆದರು. ದ್ರುಪದರಾಜನು ರಥವನ್ನೇರಿ ಬಂದು ಕೌರವನನ್ನು ಎದುರಿಸಿದನು.ಅವನೂ ಸಹ ಪರಾಕ್ರಮ ಹೊಂದಿದವನೇ ಆದ್ದರಿಂದ ಕೌರವರನ್ನು ಕೆಂಗೆಡಿಸಿದನು.ದುರ್ಯೋಧನನು ಎಲ್ಲರೊಂದಿಗೂ ಸೋತು ಹಿಂತಿರುಗಿದನು.
ಅರ್ಜುನನು ಅಣ್ಣನಾದ ಯುಧಿಷ್ಠಿರನನ್ನು ವಂದಿಸಿ ಭೀಮ ನಕುಲ ಸಹದೇವರೊಂದಿಗೆ ಯುದ್ದರಂಗಕ್ಕೆ ಹೋದನು.ತನ್ನಲ್ಲಿರುವ ತೀಕ್ಷ್ಣ ಬಾಣಗಳಿಂದ ಸೈನಿಕರನ್ನು ದ್ವಂಸಗೊಳಿಸಿದನು.ಭೀಮನು ತನ್ನ ಗದೆಯಿಂದ ಅನೇಕರನ್ನು ಹೊಡೆದು ಕೆಡವಿದನು.ಆನೆ ಕುದುರೆ ರಥ ಸೈನಿಕರು ನಾಶ ಹೊಂದಿದರು.ಅರ್ಜುನನು ದ್ರುಪದನ ಎದುರಿಗೆ ತನ್ನ ರಥವನ್ನು ತೆಗೆದುಕೊಂಡು ಹೋಗಿ ಬಾಣಗಳಿಂದ ಮುಚ್ಚಿ ಬಿಟ್ಟನು.ಸೈನಿಕರು ಹೆದರಿ ಓಡಿದಾಗ ದ್ರುಪದನನ್ನು ಹಿಡಿದು ತಂದು ದ್ರೋಣರ ಎದುರಿಗೆ ತಂದು ಬಿಟ್ಟನು.
ತನ್ನ ಶಿಷ್ಯನು ಮಾಡಿದ ಸಾಹಸವನ್ನು ಕಂಡು ಗುರು ದ್ರೋಣರು ಪ್ರಸನ್ನರಾಗಿ ದ್ರುಪದನಿಗೆ ಈ ರೀತಿ ಹೇಳಿದರು “ಮಹಾರಾಜ ದ್ರುಪದ, ನಾನು ನಿನ್ನ ಗೆಳೆಯ ದ್ರೋಣ. ನೆನಪಿದೆಯೇ ? ಎಂದನು. ನಿನ್ನ ರಾಜ್ಯವನ್ನು ನಾನು ಗೆದ್ದಿದ್ದೇನೆ. ಹಿಂದೆ ಅಹಂಕಾರದಿಂದ ನೀನು ನಿನ್ನ ಮಾತನ್ನು ಉಳಿಸಿಕೊಂಡಿಲ್ಲ.ಆದರೆ ನಾನು ನಿನಗೆ ಭಾಗೀರಥಿ ನದಿಯ ದಕ್ಷಿಣ ಭಾಗವನ್ನು ನಿನಗೆ ಕೊಟ್ಟಿದ್ದೇನೆ ಉತ್ತರಭಾಗ ನನ್ನದಾಗಿದೆ .ಆದರೆ ಎಂದಿಗೂ ನೀನು ನನ್ನ ಗೆಳೆಯನೇ ಎಂದು ತಿಳಿಸಿದರು. ಆಗ ಅವಮಾನಿತನಾದ ದ್ರುಪದನು ತಲೆಯಾಡಿಸಿದನು.ದ್ರೋಣರು ಅವನನ್ನು ಗೌರವದಿಂದ ಕಳಿಸಿದರು.ಅಹಿಛತ್ರವೆಂಬ ನಗರವನ್ನು ರಾಜಧಾನಿಯನ್ನಾಗಿಸಿ ಕೊಂಡು ಉತ್ತರ ಪಾಂಚಾಲವನ್ನು ಆಳಿದರು.
ದ್ರುಪದ ರಾಜನ ಮೇಲೆ ಪಾಂಡವರ ವಿಜಯದಿಂದ ಹಸ್ತಿನಾವತಿಯ ಜನರಿಗೆ ಹಿರಿಯರಿಗೆ ಬಹಳ ಸಂತಸವಾಯಿತು.ಪಾಂಡವರನ್ನು ಜನರು ಭಯ ಭಕ್ತಿಯಿಂದ ಗೌರವಿಸಿದರು.ಯುಧಿಷ್ಠಿರನ ಮಾತನ್ನು ಎಲ್ಲರೂ ಪಾಲಿಸುತ್ತಿದ್ದರು.ಧರ್ಮ, ನ್ಯಾಯ, ನೀತಿಗಳನ್ನು ತಿಳಿದು ಹಿರಿಯನಾದ ಯುಧಿಷ್ಠಿರನು ಧರ್ಮ ರಾಜನೆಂದೇ ಹೆಸರು ಪಡೆದನು.ಅವನ ಯಾವುದೇ ಸಮಯದಲ್ಲಿ ಸಮಾಧಾನದಿಂದ ಇದ್ದು ಎಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದನು.
ಭೀಮ ಅರ್ಜುನ ನಕುಲ ಸಹದೇವರು ಪರಾಕ್ರಮಿಗಳಾದರೂ ಅಣ್ಣನ ಮೇಲೆ ಗೌರವ, ಪ್ರೀತಿ ಹೊಂದಿದ್ದರು.ಅಣ್ಣನ ಮಾತಿನಂತೆಯೇ ನೆಡೆದುಕೊಳ್ಳುತ್ತಿದ್ದರು. ಕೆಲವು ಕಾಲ ಕಳೆದ ನಂತರದಲ್ಲಿ ದೃತರಾಷ್ಟ್ರನು ಪಾಂಡವರಲ್ಲಿ ಹಿರಿಯವನಾದ ಯುಧಿಷ್ಠಿರನಿಗೆ ಪಟ್ಟ ಕಟ್ಟಿದನು.ಯೌವರಾಜ್ಯ ಅಭಿಷೇಕದ ನಂತರದಲ್ಲಿಯೂ ಯುಧಿಷ್ಠಿರನು ಪ್ರಜಾ ಪ್ರೀತಿಯನ್ನು ಗಳಿಸಿದನು.ಇದರಿಂದ ಕೌರವರಿಗೆ ಅಸೂಯೇ ಉಂಟಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
