ಪುರಾಣದಲ್ಲಿ ಬರುವ ಆದರ್ಶಪ್ರಾಯರಾದ ಸಪ್ತ ಮಾತೆಯರು
ಹೆಣ್ಣು ತನ್ನ ಜೀವನದಲ್ಲಿ ಏನೆಲ್ಲಾ ಪಾತ್ರ ನಿರ್ವಹಿಸುತ್ತಾಳೆ. ತಾಯಿ, ಮಗಳು, ಅಕ್ಕ, ತಂಗಿ, ಹೆಂಡತಿ, ಗೆಳತಿ, ಬಂಧು, ಗುರು ಹೀಗೆ ಹಲವಾರು. ಆದರೆ ಮಾತೃ ಸ್ಥಾನಕ್ಕೆ ತನ್ನದೇ ಆದ ಬಹು ದೊಡ್ಡ ಪ್ರಾಶಸ್ತ್ಯವಿದೆ. ಅವಳಿಗೆ ಸರಿಸಾಟಿಯಾಗಿ ಯಾರೂ ಇಲ್ಲ. ತನ್ನ ಮಗುವಿನ ಪ್ರತಿಯೊಂದು ಹೆಜ್ಜೆ ಗುರುತಿನಲ್ಲಿಯೂ ಅವಳ ಛಾಯೆಯಿದೆ. ಮಗ/ಮಗಳ ವ್ಯಕ್ತಿತ್ವ ರೂಪಿಸುವ ರೂವಾರಿ ಪ್ರಮುಖವಾಗಿ ತಾಯಿಯೇ. ಪುರಾಣದಲ್ಲಿ ಬರುವ ಆದರ್ಶಪ್ರಾಯರಾದ ಮಾತೆಯರನ್ನು ತಿಳಿಯೋಣ ಬನ್ನಿ.
ಹಿಡಿಂಬೆ:
ಹೌದು. ಆ ಕಾಲದಲ್ಲಿಯೇ ಏಕಾಂಗಿಯಾಗಿ ತನ್ನ ಮಗನ ಸರ್ವತೋಮುಖ ಬೆಳವಣಿಗೆಗೆ ಕಾರಣಳಾದ ಮಹಾತಾಯಿ ಈಕೆ. ರಾಕ್ಷಸ ಕುಲದವಳಾದರೇನಂತೆ? ಸಂಸ್ಕಾರಕ್ಕೇನು ಕೊರತೆಯಿಲ್ಲ. ತನ್ನ ಪತಿ ಭೀಮನಿಂದಾಗಲೀ, ಅಥವಾ ಪಾಂಡವರಿಂದಾಗಲೀ ಈಕೆ ಯಾವ ಸಹಾಯವನ್ನೂ ಬಯಸಿಲ್ಲ. ಬದಲಿಗೆ ತನ್ನ ಕೈಲಾದ ಸಹಾಯ ಮಾಡಿದ್ದಾಳೆ. ಈಕೆ ಗಂಡನಡನೆ ಕಳೆದ ಕಾಲ ಅತ್ಯಲ್ಪವಾದರೂ ಘಟೋತ್ಕಚನನ್ನು ಭೀಮ ಪುತ್ರನೆಂದೇ ಬೆಳೆಸಿದ್ದಾಳೆ. ಅವನೊಬ್ಬ ಮಹಾಯೋಧನೆಂದರೆ ಇದರ ಹೆಗ್ಗಳಿಕೆ ಹಿಡಿಂಬೆಗೇ ಸಲ್ಲಬೇಕು.
ರೇಣುಕೆ:
ಈಕೆ ಎಲ್ಲರ ಅಮ್ಮ ಎಲ್ಲಮ್ಮನೆಂದೇ ಪ್ರಸಿದ್ಧಳಾದ ಪರಶುರಾಮನ ತಾಯಿ. ತಂದೆ ಜಮದಗ್ನಿಗೆ ಪರಶುರಾಮ ನೀಡಿದ ವಚನವನ್ನು ಉಳಿಸಲು ಮಗನಿಂದಲೇ ಶಿರಚ್ಛೇದ ಮಾಡಿಸಿಕೊಂಡ ಮಹಾತಾಯಿ ಈಕೆ.
ಶ್ರುತಶ್ರವೆ:
ಈಕೆ ಶಿಶುಪಾಲನ ತಾಯಿ. ಅವಳಿಗೆ ಎಲ್ಲರಂತೆ ಚೆಂದವಾದ ಮಗು ಇರಲಿಲ್ಲ. ಮೂರು ಕಾಲು, ಎರಡು ತಲೆ ಇರುವ ಅಷ್ಟಾವಕ್ರ ಮಗುವಿತ್ತು. ಆದರೆ ಅವಳು ಮಗುವನ್ನು ದೂರ ಮಾಡಲಿಲ್ಲ. ಯಾರ ಮಡಿಲಲ್ಲಿ ಮಲಗಿದರೆ ಮಗುವಿನ ವಕ್ರತೆ ಹೋಗಿ ರೂಪವಂತನಾಗುವುದೋ ಅವನಿಂದಲೇ ಅದರ ಅಂತ್ಯ ಎಂಬುದು ಅವಳಿಗೆ ತಿಳಿದಿತ್ತು. ಈಕೆ ಕೃಷ್ಣನ ಸೋದರತ್ತೆ. ಕೃಷ್ಣ ಮಗುವನ್ನು ಆಡಿಸಲು ಎತ್ತಿಕೊಂಡಾಗ ಮಗುವಿನ ವಕ್ರತೆ ಹೋಗಿ ಎಲ್ಲರಂತಾಯಿತು. ಆಗ ಅವಳು ಮಗುವನ್ನು ಕೊಲ್ಲದಂತೆ ಕೃಷ್ಣನಲ್ಲಿ ವಿನಂತಿಸುತ್ತಾಳೆ. ಅದರಿಂದ ಸುಪ್ರೀತನಾದ ಕೃಷ್ಣ ಮಗುವಿನ 100 ತಪ್ಪುಗಳನ್ನು ಕ್ಷಮಿಸುವುದಾಗಿ ಭಾಷೆ ಕೊಡುತ್ತಾನೆ.
ರಾಧೆ:
ಈಕೆ ಕರ್ಣನ ಸಾಕುತಾಯಿ. ಈಕೆಯ ತಾಯ್ತನ ಎಲ್ಲೂ ಬೆಳಕಿಗೆ ಬರಲೇ ಇಲ್ಲ. ನದಿಯ ದಂಡೆಯ ಮೇಲಿದ್ದ ಮಗುವನ್ನು ಪತಿ ಅಧಿರಥನು ತಂದಾಗ ಮಮತೆಯಿಂದ ಸಾಕಿ ಸಲಹಿದಳು. ಸೂತಕುಲದವರಳಾದರೂ ಮಗುವಿಗೆ ಉತ್ತಮ ಸಂಸ್ಕಾರ ಕೊಟ್ಟಳು. ಕರ್ಣನನ್ನು ರಾಧೇಯ ಎಂದೇ ಕರೆಯುತ್ತಿದ್ದರು.
ದ್ರೌಪದಿ:
ಪಾಂಡವರ ಪತ್ನಿಯಾದ ಈಕೆ ಉಪ ಪಾಂಡವರ ತಾಯಿ ತನ್ನ ಐದು ಮಕ್ಕಳನ್ನೂ ವೀರರನ್ನಾಗಿ ಬೆಳೆಸಿದ್ದಳು. ಸುಭದ್ರೆಯ ಮಗನಾದ ಅಭಿಮನ್ಯುವಿನ ಮೇಲೂ ಅಪಾರ ಪ್ರೀತಿ ಹೊಂದಿದ್ದಳು.
ಯಶೋದೆ:
ತಾಯಿಯ ಮಮತೆಗೆ ದೊಡ್ಡ ಉದಾಹರಣೆ ಈಕೆ. ಸಾಕುಮಗನಾದ ಕೃಷ್ಣನನ್ನು ಅಪಾರ ಮಮತೆಯಿಂದ ಬೆಳೆಸಿದಳು. ತಪ್ಪು ಮಾಡಿದ ತುಂಟ ಕೃಷ್ಣನನ್ನು ದಂಡಿಸಿ ನಂತರ ಅಳುತ್ತಿದ್ದಳು. ನಂತರ ಬೆಟ್ಟದಷ್ಟು ಪ್ರೀತಿ ತೋರುತ್ತಿದ್ದಳು.
ಸೀತೆ:
ಏಕಾಂಗಿಯಾಗಿ ರಾಮನ ಸಹಾಯವಿಲ್ಲದೇ ಅವಳೀ ಮಕ್ಕಳನ್ನು ವೀರರನ್ನಾಗಿ ಬೆಳೆಸಿದಳು. ತ್ಯಾಗಮೂರ್ತಿ ಹಾಗು ಸಹನಶೀಲೆ ಈಕೆ. ಲವ- ಕುಶರನ್ನು ರಾಮನಿಗೊಪ್ಪಿಸಿ ಭೂಮಿಯಲ್ಲಿ ಐಕ್ಯಳಾದಳು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
