fbpx
ದೇವರು

ಯಾವುದೇ ಚರ್ಮ ರೋಗ ಬಂದರು ಕುಕ್ಕೆ ಸುಬ್ರಮಣ್ಯದಲ್ಲಿ ವಾಸಿಯಾಗುತ್ತೆ , ಯಾವುದೇ ಶಾಪ ಇದ್ರೂ ವಿಮೋಚನೆ ಆಗುತ್ತೆ..

ಶ್ರೀ ಸುಬ್ರಹ್ಮಣ್ಯ ದೇವರ ಸಂಕ್ಷಿಪ್ತ ಮಹಾತ್ಮೆ. (ಭಾಗ-1)

“ಓಂ ನಮೋ ಭಗವತೇ  ಶ್ರೀ ಸುಬ್ರಹ್ಮಣ್ಯಯಾ ”

ಶ್ರೀ ಸ್ಕಂದ ಪುರಾಣದ ಸನತ್ಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿ ಖಂಡದ ತೀರ್ಥಕ್ಷೇತ್ರ  ಮಹಿಮಾ ನಿರೂಪಣದೊಳಗೆ ಶ್ರೀ ಸುಬ್ರಹ್ಮಣ್ಯ  ಕ್ಷೇತ್ರ  ವರ್ಣನೆಯು ಪ್ರಸಿದ್ಧವಾಗಿದೆ.ಈ ಕ್ಷೇತ್ರವು ಧಾರಾ ನದಿಯ ತೀರದಲ್ಲಿರುವುದು. ಈ ಧಾರ ನದಿಯು ಕುಮಾರಪರ್ವತದಲ್ಲಿ ಹುಟ್ಟಿ ಸಮುದ್ರ ಗಾಮಿನಿಯಾಗಿರುವುದು.ಇದಕ್ಕೆ ಕುಮಾರಧಾರ ಎಂತಲೂ ರೂಢಿಯಾಗಿದೆ.ಈ ದಿವ್ಯ ಕ್ಷೇತ್ರದಲ್ಲಿ ಷಣ್ಮುಖ ಸ್ವಾಮಿಯು ವಾಸ ಮಾಡುವುದಕ್ಕೆ ಈ ತೀರ್ಥವನ್ನು  ನಿರ್ಮಿಸಿದನೆಂದು ಪ್ರಸಿದ್ದಿಯಿದೆ ಮತ್ತು ತಾರಕಾದಿ ಮಹಾಸುರರನ್ನು ನಿಗ್ರಹಿಸಿ,ತನ್ನ ಶಕ್ತಿಯ ಆಯುಧದ ದಾರೆಯನ್ನು (ಅಲಗನ್ನು) ಈ ತೀರ್ಥದಲ್ಲಿ ತೊಳೆದುದರಿಂದ ಇದಕ್ಕೆ ಧಾರಾ ತೀರ್ಥವೆಂಬ ಹೆಸರು ಬಂತೆಂದು  ಇತಿಹಾಸವಿರುವುದು.

ಈ ನದಿಯು ಸುಬ್ರಹ್ಮಣ್ಯ ಕ್ಷೇತ್ರದ ಬಹಿರ್ದ್ವಾರದಲ್ಲಿ ಪ್ರವಹಿಸುತ್ತಿದೆ.ನದಿಯ ಎರಡೂ ದಡಗಳೂ ದಟ್ಟವಾಗಿ ಬೆಳೆದಿರುವ ಹೂಗೊಂಚಲುಗಳಲ್ಲಿ ಹಾರಾಡುವ  ಬೃಂಗಗಳಿಂದಲೂ ಹಂಸ,ಕೋಕಿಲ ಮೊದಲಾದ ಪಕ್ಷಿಗಳ ಮಧುರ ದ್ವನಿಯಿಂದಲೂ, ಹಲಸು,ತೆಂಗು,ಅಡಿಕೆ, ಬಾಳೆ ಮುಂತಾದ ಗಿಡ ಮರಗಳಿಂದಲೂ ,ಜನರಿಗೆ ಅತಿಯಾದ ಆನಂದವನ್ನು ಉಂಟು ಮಾಡುತ್ತಿರುವುದು. ಪ್ರಕೃತಿ ಸೌಂದರ್ಯಕ್ಕೆ ತವರು ಮನೆಯಂತಿರುವ ಶೈಲ ಮಾಲೆಗಳಿಂದಲೂ  ಕೊಡುಗಲ್ಲುಗಳಿಂದಲೂ ಹಾರಿ ಹರಿಯುತ್ತಿರುವ ಬೆಟ್ಟ, ಚಿಲುಮೆಗಳಿಂದಲೂ ,ಗುಡ್ಡದ ಕಿಬ್ಬದ್ದಿಯಲ್ಲಿರುವ   ಹಳ್ಳಿಗಳಿಂದಲೂ , ಸೊಂಪಾಗಿ ಬೆಳೆದಿರುವ  ತೋಟ,ತುಡಿಕೆಗಳಿಂದಲೂ ,ಬೆಳೆ ಬೆಳೆದು ಬಾಗಿರುವ ಕಬ್ಬು,ಭತ್ತಗಳ ಹೊಲ ಗದ್ದೆಗಳಿಂದಲೂ, ಮನೋಹರವಾದ ಈ ಕ್ಷೇತ್ರದಲ್ಲಿ ಬ್ರಾಹ್ಮಣಾಗ್ರಹಾರಗಳ  ವೇಧ ಘೋಷಗಳೂ ,ಅಗ್ನಿಹೋತ್ರ  ಧೂಮಗಳೂ, ಮಹಾಮುನಿಗಳ ಆಶ್ರಮಗಳೂ , ತಪ್ಪಸ್ಸಿದ್ದಿಯ ಸ್ಥಳಗಳೂ ಹೇರಳವಾಗಿರುವುದರಿಂದ ಇದೇ ಭೂ ಕೈಲಾಸವೆಂದೆಣಿಸಿ , ಕುಮಾರಸ್ವಾಮಿಯ ಸರ್ಪ ರಾಜನಾದ ವಾಸುಕಿಯಿಂದ ಸಮೇತನಾಗಿ ವಾಸ ಮಾಡಿದ್ದಾನೆಂಬುದು  ಉತ್ಪ್ರೇಕ್ಷೆಯಲ್ಲ.

ಈ ಕ್ಷೇತ್ರದಲ್ಲಿ ಅನೇಕರು ಮಂತ್ರಸಿದ್ದಿ  ,ತಪಸ್ಸಿದ್ದಿಗಳನ್ನು ಹೊಂದಿರುವುದೂ, ಕ್ಷೇತ್ರ ದರ್ಶನದಿಂದಲೇ ಅಸಾಧ್ಯ ರೋಗ ಪೀಡಿತರಾದವರು ಆರೋಗ್ಯ ದೃಢಕಾರ್ಯರಾಗಿರುವುದು  ಕುಮಾರ ಸ್ವಾಮಿಯ ಸೇವೆಯಿಂದ ಸಕಲಾಭೀಷ್ಟ ಸಿದ್ಧಿಯನ್ನು ಹೊಂದಿರುವುದು.ಶಾಪ ಪೀಡಿತರಾದವರು  ಈ ಕ್ಷೇತ್ರ ಯಾತ್ರೆಯಿಂದ ಮುಕ್ತ ಶಾಪರಾದ ವಿಷಯಗಳೂ, ಸಹ್ಯಾದ್ರಿ ಖಂಡದಲ್ಲಿ  ಬಹುವಾಗಿ ವರ್ಣಿಸಲ್ಪಟ್ಟಿವೆ. ಈಗಲೂ ದಕ್ಷಿಣೋತ್ತರ ದೇಶದ ಸಮಸ್ತ ಜನರೂ ಯಾತ್ರಾರ್ಥಿಗಳಾಗಿ ಈ ಕ್ಷೇತ್ರಕ್ಕೆ ಬರುವುದು ಲಕ್ಷಗಟ್ಟಲೆಯಾಗಿದೆ.  ಇಂತಹ  ಮಹಾಮಹಿಮಾನ್ವಿತವಾದ  ಕ್ಷೇತ್ರ ಮಹಾತ್ಮೆಯನ್ನು ಪುರಾಣ ಪ್ರಸ್ಸಿದ್ದವಾದ ಕೆಲವು ಇತಿಹಾಸಗಳಿಂದ ಪ್ರಸಿದ್ದಿ ಪಡಿಸುತ್ತವೆ.

ಪೂರ್ವದಲ್ಲಿ ಕಶ್ಯಪ ಮಹರ್ಷಿಗಳ ಧರ್ಮಪತ್ನಿಯಾದ ಅದಿತಿಯು ತನ್ನ ಮಕ್ಕಳಾದ ಇಂದ್ರಾದಿ ದೇವತೆಗಳ ಬಾಲಕ್ರೀಡೆಯನ್ನು ನೋಡಿ ಸಂತೋಷ ಪಡುತ್ತಿರಲು, ಅಸಿತರೆಂಬ ಮಹಾಮುನಿಗಳು ಇಂದ್ರಾದಿಗಳನ್ನು ನೋಡುವುದಕ್ಕೆ ಮನೆಗೆ ಬಂದರು.ಅದಿತಿಯು ಮಕ್ಕಳ ಆಟ-ಪಾಠಗಳಲ್ಲಿ ಸೇರಿ,ಆಟದ ಸಾಮಾನುಗಳನ್ನು ಕೊಡುತ್ತಾ, ಮಕ್ಕಳ ಮುದ್ದು ಮಾತುಗಳಿಗೆ ನಲಿಯುತ್ತಾ, ಕೆಲವರನ್ನು  ಓಡಿಸುವುದು , ಹಲವರನ್ನು  ಹಾರಿಸುವುದು,ಮತ್ತೆ ಕೆಲವರನ್ನು ಕುಣಿಸುವುದು,ದಣಿದವರನ್ನು ಉಪಚರಿಸುವುದು,ತುಂಟರನ್ನು ಶಿಕ್ಷಿಸುವುದು  ಮೊದಲಾದ ವಿನೋಧಗಳಿಂದ ಮೈ ಮರೆತು,ಬಂದ ಮುನಿಗಳನ್ನು ಉಪರಿಚಯಿಸಲಿಲ್ಲ,ಆಶೀತರು ಮಹಾಕೋಪದಿಂದ “ ಎಲೈ ಅದಿತಿಯೇ, ಮನೆಗೆ ಬಂದ ಅತಿಥಿಯನ್ನು ಲಕ್ಷಿಸದೇ ಸೊಕ್ಕಿದ ನೀನು ರಾಕ್ಷಸಿಯಾಗಿ ಹುಟ್ಟು!” ಎಂದು ಶಾಪಕೊಟ್ಟು ಮುಂದುವರಿಯಲು,ಅದಿತಿಯು ಮಹಾಭೀತೆಯಾಗಿ ಮುನಿಗಳ ಕಾಲಿಗೆರಗಿ, “ಮಹಾಸ್ವಾಮಿ,ನಾನು ಮಕ್ಕಳಾಟದಲ್ಲಿ  ಮೈಮರೆತಿದ್ದೆನು.ಮಹಾನುಭಾವರಾದ ತಮ್ಮ ಬರುವಿಕೆಯನ್ನು ತಿಳಿಯಲಿಲ್ಲ.

ಹೆಂಗಸರೇ ಜ್ಞಾನವಿಲ್ಲದವರು,ಅದರಲ್ಲಿಯೂ  ಮಕ್ಕಳ ಮದ್ಯದಲ್ಲಿದ್ದರೆ ಕೇಳುವುದೇನು ? ಈ ಅಪರಾಧವನ್ನು ಕ್ಷಮಿಸಿ ನನ್ನನ್ನು ಕಾಪಾಡಬೇಕು.ತಾವು ಶಾಂತಾತ್ಮಕರು,ನನ್ನನ್ನು ಉದ್ಧರಿಸಬೇಕು ಎಂದು  ಸೆರಗೊಡ್ಡಿ ಬೇಡಿದಳು.ಆಗ ಅಸಿತರು ಮನಮರುಗಿ : ಎಲೈ ಅದಿತಿಯೇ , ನಿನ್ನ ಕರ್ಮಫಲದಿಂದ ನನ್ನ ಬಾಯಲ್ಲಿ ಶಾಪ ಕ್ಷರವು ಹೊರಟಿತು.ಇದು ಸುಳ್ಳಾಗಲಾರದು.ನೀನು ಪಿಶಿತಾಶಿನಿ ಎಂಬ ಹೆಸರಿನಿಂದ  ರಾಕ್ಷಸಿಯಾಗಿ  ಹುಟ್ಟಿ,ತಮನೆಂಬ ದೈತ್ಯನ ಹೆಂಡತಿಯಾಗಿದ್ದು, ಮತ್ಸ್ಯವತಾರಿಯಾದ ಹರಿಯಿಂದ ನಿನ್ನ ಪತಿಯು ಹತನಾದ ಮೇಲೆ ದುಃಖದಿಂದ ಅಲ್ಲಲ್ಲಿ ಸಂಚರಿಸಿ,ಕುಮಾರಧಾರ ತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನ  ಮಾಡಿ, ಕ್ಷೇತ್ರಪತಿಯಾದ  ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿದ ಕ್ಷಣವೇ ಎಚ್ಚರಗೊಂಡು ಜನ್ಮಾಂತರ  ಸಂಸ್ಕಾರದ  ಮಹಿಮೆಯಿಂದ  ರಾಕ್ಷಸ ದೇಹವನ್ನು ಬಿಟ್ಟು ಪುನಃ  ಕಶ್ಯಪರನ್ನು  ಸೇರುವೆ. ಹೋಗು ನಿನಗೆ ಮಂಗಳವಾಗಲಿ!” ಎಂದು ಹರಸಿ ಹೊರಟು ಹೋದರು.

ಅದಿತಿಯು ಬಹು ದುಃಖದಿಂದ ಕಶ್ಯಪರಿಗೆ ವಿಜ್ಞಾಪಿಸಲು ಅವರು ಅದಿತಿಯನ್ನು  ಸಂತೈಸಿ,: ಪ್ರಿಯೆ !ದೈವವನ್ನು ಮೀರಲು ಯಾರಿಂದಲೂ  ಸಾಧ್ಯವಿಲ್ಲ ಚಿಂತಿಸಬೇಡ .  ಸ್ವಲ್ಪ ಕಾಲದಲ್ಲಿಯೇ ಶಾಪ ವಿಮುಕ್ತೆಯಾಗಿ ಬಂದು ಸೇರುವೆ”. ಎಂದು ನುಡಿದರು.ತತ್ ಕ್ಷಣದಲ್ಲಿಯೇ ದೇವಲೋಕದಿಂದಿಳಿದು ಪಿಶಿತಾಶಿನಿ ಎಂಬ ರಾಕ್ಷಸಿಯಾಗಿ ಹುಟ್ಟಿದಳು. ಉನ್ಮತ್ತೆಯಾಗಿ,ಕುಟಿಲೆಯಾಗಿ,ಭಯಂಕರಿಯಾಗಿರುವ ಪಿಶಿತಾಶಿನಿಯನ್ನು ತಮನೆಂಬ ಕ್ರೂರ ರಾಕ್ಷಸನು ಲಗ್ನ ಮಾಡಿಕೊಂಡನು.ಬ್ರಹ್ಮವರದಿಂದ  ಸೊಕ್ಕಿದ  ಆ ರಾಕ್ಷಸನು ಮೂರು ಲೋಕಗಳನ್ನು ವಿಚಿತ್ರವಾಗಿ ಹಿಂಸಿಸುತ್ತಾ ನಾರಾಯಣನು ತಮ್ಮ ಕುಲಕ್ಕೆ ವೈರಿಯೂ, ಮಾಯಾವಿಯೂ ಆಗಿದ್ದಾನೆ.

ಹೇಗಾದರೂ ಅವನನ್ನು ಹಿಡಿಯಬೇಕೆಂದೆನಿಸಿ,  ವಿಷ್ಣುವನ್ನು “ಬ್ರಾಹ್ಮಣರೆ ಯಜ್ಞ ಯಾಗದಿಗಳಲ್ಲಿ ಆಹಾರವನ್ನು ಕೊಟ್ಟು ಪೋಷಿಸಿದರು. ಅವರಿಗೆ ವೇದವೇ ಮೂಲವಾದುದ್ದು.ಆದುದರಿಂದ ವೇದವನ್ನು ಕದ್ದು ಸಮುದ್ರದಲ್ಲಡಗುತ್ತೇನೆ ಎಂದು ನಾಲ್ಕು ವೇದಗಳನ್ನು ತೆಗೆದುಕೊಂಡು ಸಮುದ್ರವನ್ನು ಪ್ರವೇಶಿಸಿದನು.ಬ್ರಹ್ಮಾದಿಗಳಿಂದ ಪ್ರಾರ್ಥಿತನಾದ ಶ್ರೀ ಪರಮಾತ್ಮನು ಮತ್ಸ್ಯವತಾರಗೈದು ಆ ದೈತ್ಯವನ್ನು ಕೊಂದು ಚತುರ್ವೇದಗಳನ್ನುದ್ದರಿಸಿದನು .ಪಿಶಿತಾಶಿನಿಯು ದುಃಖಿತಳಾಗಿ ಅಲ್ಲಲ್ಲಿ ತಿರುಗಿತ್ತಾ  ದಾರಾನದಿಯ ದಡಕ್ಕೆ ಬಂದಳು.ಆ ದಿವ್ಯ ಕ್ಷೇತ್ರವನ್ನು ನೋಡಿದ ಕ್ಷಣವೇ ಜನ್ಮಾಂತರ ಸ್ಮೃತಿಯುಂಟಾಯಿತು ದಾರಾತೀರ್ಥದಲ್ಲಿ ಸ್ನಾನಮಾಡಿ ರಾಕ್ಷಸ ದೇಹವನ್ನು ಬಿಟ್ಟು ದಿವ್ಯ ರೂಪವನ್ನು ಧರಿಸಿ, ಸ್ಕಂದಾಂಶ ಸಮೇತವಾದ ವಾಸುಕಿಯನ್ನು ಭಕ್ತಿಯಿಂದ ಆರಾಧಿಸಿ ಮೂರು ದಿವಸವಿದ್ದು ಕ್ಷೇತ್ರ ಮಹಿಮೆಯನ್ನು ಕೊಂಡಾಡುತ್ತಾ ಸುರಲೋಕವನ್ನು ಸೇರಿ ಕಶ್ಯಪರಿಗೆ ನಮಸ್ಕರಿಸಿದಳು.ಅವರು ಪ್ರೀತಿಯಿಂದ ಉಪಚರಿಸಲು,ಅದಿತಿಯು ಕುತೂಹಲದಿಂದ ನುಡಿದಳು.

“ಭಗವಾನ್ ! ರಾಕ್ಷಸಿಯಾದ ಕಾಲದಲ್ಲಿ ಎಷ್ಟೆಷ್ಟೋ ತೀರ್ಥ ಕ್ಷೇತ್ರಗಳನ್ನು ನೋಡಿದೆ. ಯಾವುದರಲ್ಲಿಯೂ ನನಗೆ ಉಂಟಾಗದ ಮನಃ ಪ್ರಸಾದವು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಉಂಟಾಗಲು ಕಾರಣವೇನು ? ಬಹುಜನ ಯಾತ್ರಿಕರು ಅಲ್ಲಿಗೆ ಬಂದು ತಮ್ಮ ಇಷ್ಟಾರ್ಥವನ್ನು ಹೊಂದಲು ಕಾರಣವೇನು? ನಾಗರಾಜನಾದ ವಾಸುಕಿಯು ಅಲ್ಲಿ ವಾಸ  ಮಾಡಿದ್ದಾನೆ ?   ಕುಮಾರಸ್ವಾಮಿಯು ನಿತ್ಯ ಸನ್ನಿಹಿತನಾಗಿರಲು ನಿಮ್ಮಿತ್ತವೇನು ? ಈ ಇತಿಹಾಸವನ್ನು ಸರಾಗವಾಗಿ ತಿಳಿಸಬೇಕು” ಎಂದು ಪ್ರಾರ್ಥಿಸುವ ಅದಿತಿಯನ್ನು ಕುರಿತು ಕಶ್ಯಪರು ನಿರೂಪಿಸಿದರು. “ಅದಿತಿಯೆ ! ಲೋಕಾನುಗ್ರಹಾರ್ಥವಾಗಿ ನೀನು ಮಾಡಿದ ಪ್ರಶ್ನೆಯು ಮಹತ್ತರವಾದುದು.ಇದರ ಮಹಿಮೆಯನ್ನು ವರ್ಣಿಸಲು ಸಾವಿರಾರು ವರ್ಷಗಳಿದ್ದರೂ ಸಾಲದು.ಕೃತಯುಗದಲ್ಲಿ ಮಹಾಮಹಿಮರಾದ ಮುನಿಜರು ಈ ತೀರ್ಥ ಸೇವನೆಯಿಂದ  ತಪ್ಪಸ್ಸಿದ್ದಿಯನ್ನು ಹೊಂದಿದರು .

ತ್ರೇತಾಯುಗದಲ್ಲಿ ಕ್ಷತ್ರಿಯಾತಂಕನಾದ ಪರುಶುರಾಮನು ಈ ತೀರ್ಥಸ್ನಾನದಿಂದ ಮಾತೃಹತ್ಯಾ ಪಾಪವನ್ನು ಕಳೆದುಕೊಂಡನು.ದ್ವಾಪರದಲ್ಲಿ ಶ್ರೀ ಕೃಷ್ಣ  ಕುಮಾರನಾದ ಸಾಂಬನು ಮುನಿಗಳ ಆಶ್ರಮದಲ್ಲಿ ಸಂಚರಿಸುತ್ತಿದ್ದನು. ಇವರ ಅನುಪಮ ಸೌಂದರ್ಯವನ್ನು ನೋಡಿ ಮುನಿ ಪತ್ನಿಯರು ಮನೋ ವಿಕಾರವನ್ನು ಹೊಂದಲು ಮುನಿಗಳು ಕುಪಿತರಾಗಿ, “ಎಲೈ ದುರಾತ್ಮನೇ! ಯಾವ ರೂಪ ಮದದಿಂದ ಆಶ್ರಮವಾಸಿಗಳಾದ ಸ್ತ್ರೀಯರ ಮೇಲೆ ಮನೋವಿಕಾರವನ್ನು ಉಂಟು ಮಾಡಿದೆಯೋ ಅಂತಹ ನಿನ್ನ ರೂಪ ಕುಷ್ಟರೂಪದಿಂದ ಜಿಗುಪ್ಸಿತವಾಗಲಿ ಎಂದು ಶಾಪವನ್ನು ಕೊಟ್ಟರು.ಕುಷ್ಠರೋಗದಿಂದ ದುಃಖಿತನಾದ  ಸಾಂಬಾನನ್ನು ನೋಡಿ ನಾರದನು  “ಈ ಜಿಗುಪ್ಸಿತವಾದ ವ್ಯಾಧಿ ನಿವಾರಣೆಗೆ ನೀನು ಕೌಮಾರ ಕ್ಷೇತ್ರಕ್ಕೆ ಹೋಗಿ   ಧಾರಾ ನದಿಯಲ್ಲಿ ಸ್ನಾನ ಮಾಡಿ ಮೂಲ ಮೃತ್ತಿಕೆಯನ್ನು ಮೈಗೆ ಲೇಪಿಸಿಕೊಂಡು ಧಾರಾತೀರ್ಥದಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಪರ್ಯಂತವಾಗಿ ಉಚ್ಚಿಷ್ಟವಿದ್ದ ಮಾರ್ಗದಲ್ಲಿ ಹೊರಳುತ್ತಾ ಹೋಗಿ,ವಾಸುಕಿಯನ್ನು ದರ್ಶನ ಮಾಡಿದರೆ ರೋಗ ನಿವೃತ್ತಿಯಾಗುವುದು” ಎಂದು ಕ್ಷೇತ್ರ ಮಹಾತ್ಮೆಯನ್ನು ಉಪದೇಶಿಸಿದರು.

ಸಾಂಬನು ಧಾರಾ ತೀರ್ಥದಲ್ಲಿ ಸ್ನಾನ ಮಾಡಿ ಪರಮ ಭಕ್ತಿಯಿಂದ  ಮೂಲ ಮೃತ್ತಿಕೆಯನ್ನು ಮೈಗೆ ಲೇಪಿಸಿಕೊಂಡು,ಅಂಗ ಪ್ರದಕ್ಷಿಣೆಯನ್ನು ಮಾಡುತ್ತಿರಲು ಸ್ವಾಮಿಯ ಅನುಗ್ರಹದಿಂದ ರೋಗ ನಿವೃತ್ತಿಯಾಗಿ,ಮೊದಲಿನ ಸೌಂದರ್ಯವನ್ನು ಹೊಂದಿ ಪರಮಾನಂದದಿಂದ ಲಕ್ಷ ಬ್ರಾಹ್ಮಣ ಸಂತರ್ಪಣೆಯನ್ನು ಮಾಡಿಸಿ,ಆ ವಿಪ್ರೋಚ್ಚಿಷ್ಟದಲ್ಲಿ ಹೊರಳಿದನು.ನಾಗರಾಜನು ಸುಪ್ರೀತನಾಗಿ ಅಭಿಮತವಾದ ವರವನ್ನು ಕೊಡಲು ಪರಮ ಪ್ರಮೋಧದಿಂದ ದ್ವಾರಕೆಗೆ ಬಂದನು.

ಆ ಕಾಲದಿಂದಲೂ ಈ ಕ್ಷೇತ್ರವೂ ಅಪರಿಹಾರ್ಯಗಳಾದ ರೋಗಗಳಿಗೆ  ಸಿದ್ದೌಷಧವೆಂದು ಜಗತ್ಪ್ರಸ್ಸಿದ್ದವಾಯಿತು. ಮಹಾಪಾತಕಿಗಳಾಗಲಿ,ಉಪಪಾತಕಿಗಳಾಗಲೀ, ಈ ಕ್ಷೇತ್ರ ದರ್ಶನದ ಸ್ನಾನ ಮಾಡಿ ಸ್ವಾಮಿ ಸೇವಾಧಿಗಳನ್ನು ಮಾಡಿದರೆ ಇಪ್ಪತ್ತೆಂಟು ತರಹಗಳಾದ ನರಕ ಭಾದೆಗಳು ತಪ್ಪಿ, ದಿವ್ಯಕಲ್ಪ ಪರ್ಯಂತವಾಗಿ ಸ್ವರ್ಗದಲ್ಲಿ ವಾಸ ಮಾಡುತ್ತಾರೆ.

ಕಲಿಯುಗದಲ್ಲಿ ಕನಕ ವೃಷನೆಂಬ ರಾಜನು ಸಂತತಿ ಕಾಮನೆಯಿಂದ ಸ್ವಾಮಿಯನ್ನಾರಾಧಿಸಿ,ಚಕ್ರವರ್ತಿಯಾದ ಪುತ್ರನನ್ನೂ ಪಡೆದ ಇತಿಹಾಸವು ಪ್ರಸ್ಸಿದ್ದವಾದೆ. ಶರ್ಮ ವರ್ಮನೇ ಮೊದಲಾದವರು ಸ್ವಾಮಿಯ ಅನುಗ್ರಹದಿಂದ ಸಖಲ  ಐಶ್ವರ್ಯವನ್ನೂ ,ದಿವ್ಯ ಜ್ಞಾನವನ್ನೂ ಹೊಂದಿರುವುದು ಸುಪ್ರಸ್ಸಿದ್ದವಾಗಿರುವುದು.ಪ್ರಿಯೇ ! ಬಹಳ ಹೇಳುವುದರಿಂದೇನು ? ಎಲ್ಲಾ ತೀರ್ಥ ಕ್ಷೇತ್ರಗಳಿಂದ ಲಭಿಸುವ ಫಲವೂ ಈ ಕ್ಷೇತ್ರದಲ್ಲಿಯೇ ಉಂಟಾಗುವುದು. ನಾಗರಾಜನಾದ ವಾಸುಕಿಯು ಈ ದಿವ್ಯ ಕ್ಷೇತ್ರದಲ್ಲಿ ವಾಸ ಮಾಡಿದ ಕಾರಣವನ್ನು ತಿಳಿಸುತ್ತೇನೆ.

ಮುಂದುವರಿಯುವುದು…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top