ಕಾಯಲಾರೆನೋ ಕೃಷ್ಣ ಎನ್ನಬಾರದು !
ಬದುಕಿನ ಅಮೂಲ್ಯ ಪಾಠ ಕಲಿಸಿಕೊಟ್ಟ ನಿಜ ಜೀವನದ ಎರಡು ಘಟನೆಗಳು ಕುತೂಹಲಕಾರಿಯಾಗವೆ. ಓದಿ ನೋಡಿ !
ಮೊದಲನೇ ಘಟನೆ:- ಒಮ್ಮೆ ನಾವು ನಮ್ಮ ಸ್ವಾಮಿಜಿಯವರೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಾಗಿತ್ತು.ವಿಮಾನ ನಿಲ್ದಾಣಕ್ಕೆ ಬರುವಷ್ಟರಲ್ಲಿ ದ್ವನಿವರ್ಧಕದಲ್ಲಿ “ ತಾಂತ್ರಿಕ ತೊಂದರೆಯಿಂದಾಗಿ ಬೆಂಗಳೂರಿಗೆ ಹೋಗುವ ವಿಮಾನ ಮೂರು ಗಂಟೆ ತಡವಾಗಿ ಹೊರಡುತ್ತದೆ. ಪ್ರಯಾಣಿಕರಿಗೆ ಆಗಿರುವ ಆನಾನುಕೂಲಕ್ಕೆ ವಿಷಾಧಿಸುತ್ತೇವೆ” ಎಂದು ಪ್ರಕಟಿಸಿದರು.
ಅಲ್ಲಿದ್ದ ಎಲ್ಲರೂ ಬೇಸರಗೊಂಡರು. ಸ್ವಾಮೀಜಿಯವರು ಏನೂ ಮಾತನಾಡದೆ ಗಂಭೀರವಾಗಿ ವಿಮಾನ ನಿಲ್ದಾಣದ ಒಂದು ಮೂಲೆಯಲ್ಲಿ ಕುಳಿತರು. ತಮ್ಮ ಬ್ರೀಫ್ ಕೇಸಿನಿಂದ ಪತ್ರಗಳನ್ನು ಮತ್ತು ಲೆಟರ್ ಪ್ಯಾಡನ್ನು ಹೊರತೆಗೆದರು.ಮೂರು ಗಂಟೆಗಳ ಕಾಲ ತಲೆ ಎತ್ತಿಯೂ ನೋಡಲಿಲ್ಲ. ಎಲ್ಲ ಪತ್ರಗಳಿಗೂ ತಮ್ಮ ಕೈ ಬರಹದಲ್ಲಿಯೇ ಉತ್ತರಿಸಿದರು. ಪತ್ರಗಳಿಗೆಲ್ಲ ಉತ್ತರಿಸಿ ಅಲ್ಲಿದ್ದ ಅಂಚೆ ಪೆಟ್ಟಿಗೆಗೆ ಹಾಕಿ ಬರುವ ಹೊತ್ತಿಗೆ ದ್ವನಿವರ್ಧಕದಲ್ಲಿ “ಇದೀಗ ವಿಮಾನ ಹೊರಡಲು ಸಿದ್ಧವಾಗಿದೆ ಎಂದು ಪ್ರಕಟಿಸಿದರು”.
ನಾವೆಲ್ಲ ವಿಮಾನದತ್ತ ಹೊರಡುತ್ತ ಭಾರತ ಸರಕಾರವನ್ನು, ಏರಲೈನ್ಸನ್ನೂ, ನಮ್ಮ ಅದೃಷ್ಟವನ್ನು ಬೈಯುತ್ತಾ ಹೋಗುತ್ತಿರುವಾಗ ಸ್ವಾಮೀಜಿಯವರು “ತಾಂತ್ರಿಕ ತೊಂದರೆ ಸೃಷ್ಟಿಸಿ, ವಿಮಾನ ಹೋಗುವುದನ್ನು ಮೂರು ಗಂಟೆಗಳ ಕಾಲ ತಡಮಾಡಿ ,ನಾನು ಎಲ್ಲ ಪತ್ರಗಳಿಗೂ ಉತ್ತರಿಸುವಂತೆ ಮಾಡಿದ ಭಗವಂತನಿಗೆ ವಂದಿಸುತ್ತೇನೆ. ವಿಮಾನ ನೆಲದಲ್ಲಿ ಇದ್ದಾಗಲೇ ತಾಂತ್ರಿಕ ತೊಂದರೆ ಉಂಟಾಯಿತು. ಒಂದು ವೇಳೆ ಆಕಾಶದಲ್ಲಿದ್ದಾಗ ತೊಂದರೆಯಾಗಿದ್ದರೆ ಏನಾಗುತ್ತಿತ್ತು ? ಮೂರು ಗಂಟೆ ಲೇಟಾಗಿ ಬೆಂಗಳೂರು ತಲುಪಿ ಲೇಟ್ ಆಗುವ ಬದಲು ಲೇಟ್ ಸ್ವಾಮೀಜಿ ಆಗುತ್ತಿದ್ದೆ! ಅದನ್ನು ತಪಿಸಿದ್ಧಕಾಗಿ ಭಗವಂತನಿಗೆ ಧನ್ಯವಾದಗಳನ್ನು ಹೇಳಬೇಕು” ಎಂದರು.
ಎರಡನೆಯ ಘಟನೆ:- ಒಮ್ಮೆ ನಮ್ಮ ಪೂಜ್ಯ ತಂದೆಯವರೊಟ್ಟಿಗೆ ಆಸ್ಪತ್ರೆಗೆ ಹೋಗಿದ್ದೆವು. ಜನಸಂದಣಿ ಬಹಳ ಇತ್ತು. ಅಲ್ಲಿದ್ದದ್ದು ಒಂದೇ ಲಿಫ್ಟ್. ಬಹಳ ಹೊತ್ತು ಕಾಯಬೇಕಾಗಿತ್ತು. ನಮ್ಮ ಸಹನೆ ಕಡಿಮೆ.ಸಹಜವಾಗಿ ಲಿಫ್ಟನ್ ಗುಂಡಿಯನ್ನು ಪದೇ ಪದೇ ಒತ್ತುತ್ತಿದ್ದೆವು. ಅದನ್ನು ಗಮನಿಸಿದ ನಮ್ಮ ತಂದೆಯವರು “ಲಿಫ್ಟನ್ ಗುಂಡಿಯನ್ನು ಪದೇ ಪದೇ ಒತ್ತಿದರೆ ಲಿಫ್ಟ್ ಬೇಗ ಬರುತ್ತದೆಯೇ ? ಎಂದು ಪ್ರಶ್ನಿಸಿದರು. ನಮ್ಮಲ್ಲಿ ಅದಕ್ಕೆ ಉತ್ತರವಿರಲಿಲ್ಲ.
ಆದರೆ ನಾವು ಬಟನ್ ಒತ್ತುವುದನ್ನು ಬಿಡಲಿಲ್ಲ, ಲಿಫ್ಟ್ ಬರಲಿಲ್ಲ. ಸ್ವಲ್ಪ ಹೊತ್ತಿಗೆ ಮೇಲಂತಸ್ತಿನಿಂದ ಮೆಟ್ಟಿಲ ಮೂಲಕ ಇಳಿದು ಬಂದ ಲಿಫ್ಟ್ ಚಾಲಕ “ಲಿಫ್ಟ ಗುಂಡಿಯನ್ನು ಒತ್ತಿ ಒತ್ತಿ ಶಾರ್ಟ್ ಸರ್ಕ್ಯೂಟ್ ಆಗಿದೆ,ಮೆಕ್ಯಾನಿಕ ಬರುವವರೆಗೂ ಲಿಫ್ಟ್ ಬರುವುದಿಲ್ಲ” ಎಂದು ಹೇಳಿ ಹೋದ.ನಮಗೆ ಮುಖವೆತ್ತಿ ನಮ್ಮ ತಂದೆಯವರನ್ನು ನೋಡುವ ಧೈರ್ಯವಿರಲಿಲ್ಲ. ನಮ್ಮ ನಿತ್ಯ ಜೀವನದಲ್ಲಿ ಸಣ್ಣ ಪುಟ್ಟ ಅಡೆ ತಡೆಗಳು ಉಂಟಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಬಸ್ಸು,ರೈಲು,ವಿಮಾನ ,ಲಿಫ್ಟ್ ಅಥವಾ ನಾವು ಕಾಯುತ್ತಿರುವ ವ್ಯಕ್ತಿ ತಡವಾಗಿ ಬರಬಹುದು ಅಂಥ ಸಂದರ್ಭಗಳಲ್ಲಿ ಮುಷ್ಠಿ ಬಿಗಿಹಿಡಿದರೆ, ಅವುಡುಗಚ್ಚಿದರೆ ಅಥವಾ ಎಲ್ಲರ ಮೇಲೆ ಸಿಟ್ಟು ಮಾಡಿಕೊಂಡರೆ ಏನೂ ಪ್ರಯೋಜನವಿಲ್ಲ. ಅದರಿಂದ ನಮ್ಮ ಅಸಹನೆ ಇನ್ನಷ್ಟು ಹೆಚ್ಚಾಗುತ್ತದೆಯೇ ಹೊರತು ತಡವಾಗಿರುವುದು ಬೇಗ ಬರುವುದಿಲ್ಲ. ಇಂಥ ಸಂದರ್ಭಗಳನ್ನು ಅಡೆ ತಡೆಗಳು ಎಂದು ಭಾವಿಸಿ ದೂಷಿಸುವ ಬದಲು ಅವುಗಳನ್ನು ಅವಕಾಶಗಳೆಂದು ಭಾವಿಸಿ ಸದುಪಯೋಗ ಪಡಿಸಿಕೊಳ್ಳಬಹುದು.
ನೇರ ಬಳಕೆ ಸಾಧ್ಯವಿಲ್ಲದಿದ್ದರೆ ಅಲ್ಲಿಯೇ ಎನ್ನನ್ನಾದರೂ ಓದಬಹುದು. ಕಣ್ಮುಚ್ಚಿ ಕುಳಿತು ದ್ಯಾನ ಮಾಡಬಹುದು . ಕುಳಿತಲ್ಲಿಯೇ ಪ್ರಾಣಯಾಮ ಮಾಡಬಹುದು ಅಥವಾ ಯಾವುದಾದರೂ ಉಲ್ಲಾಸ ತರುವ ಪ್ರಸಂಗವನ್ನು ನೆನಪಿಸಿಕೊಂಡು ಪುಳಕಿತರಾಗಬಹುದು. ಇದಕ್ಕೆ ಕಠಿಣ ಸಾಧನೆಯು ಬೇಕಿಲ್ಲ, ಖಾಸು ಖರ್ಚು ಮಾಡಬೇಕಿಲ್ಲ, ಅಲ್ಲವೇ ?
ಜೀವನದಲ್ಲಿ ಎಲ್ಲಾ ಹಂತಗಳಲ್ಲಿಯೂ ಸಹ ತಾಳ್ಮೆ ಬಹಳ ಮುಖ್ಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
