fbpx
ದೇವರು

ವಾಸುಕಿ ಹಾವು ಗರುಡನಿಂದ ತಪ್ಪಿಸಿಕೊಂಡು ಕುಕ್ಕೆ ಸುಬ್ರಮಣ್ಯ ಸ್ವಾಮಿಯ ಆಶ್ರಯ ಪಡೆದ ಕಥೆ..

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಸಂಕ್ಷಿಪ್ತ ಮಹಾತ್ಮೆ ಭಾಗ-2

ಸಾಂವರ್ತಕಲ್ಪದಲ್ಲಿ ಕದ್ರು ವಿನತೆಯರೆಂಬ ಸ್ತ್ರೀಯರುಗಳಿಗೆ ಒಂದು ಕುದುರೆಯ ಬಣ್ಣದಲ್ಲಿ ಜಗಳ ಹುಟ್ಟಿತ್ತು.ಕದ್ರುವು ಕರಿ ಕುದುರೆಯೆಂದೂ, ಜಗಳವಾಡುತ್ತಾ, ಸೋತವರು ಗೆದ್ದವರಿಗೆ ದಾಸಿಯಾಗಿರಬೇಕೆಂದು ಭಾಷೆಯನ್ನು ತೆಗೆದುಕೊಂಡು ಮನೆಗೆ ಹೋದರು.

ಕದ್ರುವು “ ನೀವು ಕುದುರೆಯನ್ನು ಕಡಿದು ವಿಷದಿಂದ ಕಪ್ಪಗೆ ಮಾಡಿರಿ!” ಎಂದು ತನ್ನ ಮಕ್ಕಳಾದ ಸರ್ಪಗಳಿಗೆ ತಿಳಿಸಿದಳು.ಅವು ಒಪ್ಪದಿರಲು, ಅತಿ ಕೋಪದಿಂದ “ ನಿಮ್ಮ ಕುಲವು ನಾಶವಾಗಲಿ!” ಎಂದು ಶಪಿಸಿದಳು. ಜನಮೇಜಯನ ಯಜ್ಞದಲ್ಲಿ ಕೆಲವು ಗರುಡನಿಂದ,ಕೆಲವು ಸರ್ಪಗಳು ನಷ್ಟವಾಗಲು,ಭಯದಿಂದ ಕೆಲವು ಹುತ್ತಗಳಲ್ಲಿಯೂ,ಗುಹೆಗಳಲ್ಲಿಯೂ, ಡೊಗರುಗಳಲ್ಲಿಯೂ,ಪಾತಾಳದಲ್ಲಿಯೂ, ಅಡಗಿಕೊಂಡು ಜೀವಿಸುತ್ತಿದ್ದವು.

ಒಂದು ದಿನ ಗರುಡನು ಸರ್ಪಗಳನ್ನು ಹುಡುಕುತ್ತಾ ಬರುತ್ತಿರಲು, ಮಹಾ ಬಿಲದಲ್ಲಿ ವಾಸ ಮಾಡಿಕೊಂಡಿರುವ ವಾಸುಕಿಯನ್ನು ನೋಡಿ ಹಾರಿ ಬಂದು ಕೊಕ್ಕಿನಿಂದ ಕುಕ್ಕಿ ,ರೆಕ್ಕೆಯಿಂದ ಹೊಡೆದು,ಉಗುರಿನಿಂದ ಸೀಳಲು ಪ್ರಯತ್ನ ಮಾಡಿದಾಗ ಆ ಸರ್ಪರಾಜಾನ ಮಹಿಮೆಯಿಂದಲೂ, ವಿಷ ಜ್ವಾಲೆಯಿಂದಲೂ, ಫಣಾ ಮಣಿಗಳ ಕಾಂತಿಯಿಂದಲೂ ದಿಕ್ಕು ತೋಚದಂತಾಯಿತು.ಇವರಿಬ್ಬರು ಒಬ್ಬರೊನ್ನಬ್ಬರು ಗೆಲ್ಲಬೇಕೆಂದು ಹೋರಾಡುತ್ತಿರಲು, ಕಶ್ಯಪರು ಬಂದು ಗರುಡನನ್ನು ಕುರಿತು  “ವತ್ಸಾ! ವಾಸುಕಿಯನ್ನು ಬಿಡು.ಶಿವಭಕ್ತನಾದ ವಾಸುಕಿಯಲ್ಲಿ ನಿನ್ನ ಚೆಲ್ಲಾಟಗಳು ನೆಡೆಯಲಾರದು”  ಎಂದು ತಿಳಿಸಲು,ಗರುಡನು ಭೀತಿಯಿಂದ ಕಶ್ಯಪರಿಗೆ ವಂದಿಸಿ, “ಸ್ವಾಮಿ, ನಾನು ಹಸಿವಿನಿಂದ  ಬಳಲಿದ್ದೇನೆ. ಏನು ಮಾಡಲಿ” ? ಎಂದು ಕೇಳಲು,

“ಎಲೈ ಗರುಡನೇ ! ನೀನು ರಮಣಕ ದ್ವೀಪಕ್ಕೆ ಹೋಗಿ ಬಹು ದುಷ್ಟರಾದ ಕಿರಾತರನ್ನು, ಸರ್ಪಗಳನ್ನೂ ಭಕ್ಷಿಸಿದ ಕಿರಾತರ ಮದ್ಯದಲ್ಲಿ ಒಬ್ಬ ಬ್ರಾಹ್ಮಣಾಧಮನು ಕಿರಾತೆಯ ಪ್ರೇಮದಿಂದ ವಾಸ ಮಾಡಿದ್ದಾನೆ. ಯಾರನ್ನು ತಿನ್ನುವಾಗ ನಿನ್ನ ಗಂಟಲು ಸುಡುವುದೋ ಅವನೇ ಬ್ರಾಹ್ಮಣನೆಂದು ತಿಳಿದು ಅವನನ್ನು ಉಗುಳಿ ಬಿಡು,ನಡೆ ನಿಲ್ಲಬೇಡ” ಎಂದು ಹೇಳಿ ಕಳುಹಿಸಿದರು.

ಕರುಣೆಯಿಂದ ವಾಸುಕಿಯನ್ನು ಮೈದಡವಿ, “ವತ್ಸಾ ವಾಸುಕಿ!ನೀನು ಸಹ್ಯಾದ್ರಿಯ ಪುಣ್ಯಾಶ್ರಮಗಳಲ್ಲಿ ಪ್ರಸ್ಸಿದ್ದವಾದ ಕುಮಾರ ಕ್ಷೇತ್ರಕ್ಕೆ ಹೋಗಿ, ಭಕ್ತಿಯಿಂದ ಪರಮೇಶ್ವರನನ್ನು ಆರಾಧಿಸಿ ಕೃತಾರ್ಥನಾಗು.ಇನ್ನು ಮೇಲೆ ನಿನಗೆ ಗರುಡನ ಭಯವಿಲ್ಲ.ಪರಮೇಶ್ವರನ ಅನುಗ್ರಹದಿಂದ  ಲೋಕಪೂಜ್ಯನಾಗು !” ಎಂದು ಹರಸಿ ಕಳುಹಿಸಿದರು.

ವಾಸುಕಿಯು ಕಶ್ಯಪರಿಗೆ ನಮಸ್ಕರಿಸಿ,ಸಕುಟುಂಬರಾಗಿ ಕುಮಾರ ಕ್ಷೇತ್ರಕ್ಕೆ ಬಂದು ಶೈವ ವ್ರತವನ್ನು ಕೈಗೊಂಡು ಜಿತಕ್ರೋದಿತನಾಗಿ, ಜಿತೇಂದ್ರಿಯನಾಗಿ ತ್ರಿಕಾಲದಲ್ಲಿಯೂ ಪರಮೇಶ್ವರನನ್ನು ಆರಾಧಿಸುತ್ತಾ ಆಹಾರ ನಿದ್ರೆಗಳನ್ನು ತೊರೆದು ತಪ್ಪಸ್ಸು ಮಾಡುತ್ತಿದ್ದನು.ತಪಸ್ಸಂತುಷ್ಟನಾದ ಶಿವನು  ಅಷ್ಟಮೂರ್ತಿಯು ಪ್ರಸನ್ನ ನಾಗಲು ವಾಸುಕಿಯು ಭಕ್ತಿಯಿಂದ ನಮಸ್ಕರಿಸಿ ಸ್ತೋತ್ರ ಮಾಡಿದನು.” ಸೃಷ್ಟಿ, ಸ್ಥಿತಿ, ಸಂಹಾರಗಳಿಗೆ ಕಾರಣಭೂತನಾಗಿ ಭಕ್ತಾನುಗ್ರಹಕೋಸ್ಕರ ಲೀಲಾವತಾರಗಳನ್ನು ಮಾಡಿದ ಸಖಲ ಲೋಕ ರಕ್ಷಕನಾದ ನಿನಗೆ ನಮಸ್ಕಾರವು,ಸುರಮುನಿಗಣ ವಂದ್ಯ ಚರಣ, ಸಖಲಾಭಿಷ್ಟ ವಿತರಣ ಅಪನ್ನ ಶರಣ,ಪನ್ನಗ ಭೂಷಣ,ಶರಣಾಗತ, ದುರಿತ ಹರಣ, ಭುವನಪಾವನ,ಸ್ಮರಣ ಸೃಷ್ಟಿ ,ಸ್ಥಿತಿ, ಪ್ರಳಯಕಾರಣ, ಕೈಲಾಸಶೈಲ ವಿಹರಣ, ಶಾರ್ದೂಲ ಚಾರ್ಮಾವರಣ, ಭಸ್ಮಾoಗರಾಗಾಭರಣ,ಭಕ್ತರಕ್ಷಕ ಧುರೀಣ, ಭುವನ ಸುಂದರ, ನೀಲಕಂಠ ಧರ, ಚಂದ್ರಧರ, ಮಂದಹಾಸ ಮನೋಹರ,ಕಾಲಹರ,ಗೌರಿವರ,ದುಃಖಿದಾರಿದ್ರ್ಯ ಹರ,ಪ್ರಸ್ಸನ್ನ ಶಂಕರ,ಮಹೇಶ್ವರ ನೀನು ರಕ್ಷಿಸು.” ಎಂದು ಸಾಷ್ಟಾಂಗ ಪ್ರಣಾಮ ಮಾಡಿದ ವಾಸುಕಿಯನ್ನು ವಾತ್ಸಲ್ಯದಿಂದ ಮುದ್ದಾಡಿ,

“ಪರಂಭಕ್ತನಾದ ವಾಸುಕಿಯೇ! ನೀನು ಇಷ್ಟು ಘೋರವಾದ ತಪ್ಪಸ್ಸನ್ನು ಮಾಡಬೇಕೇ ? ನಿನ್ನಲ್ಲಿ ಯಾವಾಗಲೂ ನಾನು ಪ್ರಸ್ಸನ್ನನಾಗಿರುವೆನು.ತ್ರಿಪುರ ಸಂಹಾರಕ್ಕೆ ಬಿಲ್ಲಿನ ಹೆಡೆಯಾಗಿ ಮಾಡಿದ ಸೇವೆಯನ್ನು ನಾನು ಮರೆತಿಲ್ಲ.ಮಂದರ ಪರ್ವತಕ್ಕೆ ನೀನು ರಜ್ಜುವಾಗಿ ಸಮುದ್ರಮಥನ ಮಾಡಿಸದಿದ್ದರೆ ದೇವತೆಗಳು ಹೇಗೆ ಅಮೃತವನ್ನು ಕುಡಿಯುತ್ತಿದ್ದರು ? ನೀನು ಇಷ್ಟು ಮಹಿಮೆಯಿದ್ದರೂ ಲೋಕಶಿಕ್ಷಣಾರ್ಥವಾಗಿ ನೀನು ತಪ್ಪಸ್ಸು ಮಾಡಿದೆ. ಮುಂದಿನ ಕಲ್ಪದಲ್ಲಿ ಕುಮಾರನಾದ ಷಣ್ಮುಖನು ತಾರಾಕಾದಿ ರಾಕ್ಷಸರನ್ನು ಸಂಹರಿಸಿ ಈ ಕ್ಷೇತ್ರಕ್ಕೆ ಬರುತ್ತಾನೆ.ಆಗ ಮಹೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಈ ಕ್ಷೇತ್ರದಲ್ಲಿ ಕಲ್ಯಾಣೋತ್ಸವವನ್ನು ಮಾಡಿಸುತ್ತಾನೆ.ಆಗ ನೀನು ಷಣ್ಮುಖನಿಂದ ಅನುಗ್ರಹಿತನಾದ ಈ ಕ್ಷೇತ್ರದಲ್ಲಿ ಅವನ ಕಾಲಾಂಶದಿಂದ ಕೂಡಿದವನಾಗಿ ಲೋಕಪೂಜ್ಯನಾಗುತ್ತೀಯ.

ಯಾರು ನಿನ್ನ ನಾಮಸ್ಮರಣೆ ಮಾಡುವರೋ ಅವರಿಗೆ ಸಕಲಾಭೀಷ್ಟಗಳು ಸಿದ್ಧಿಸಲಿ. ಸುರನರರು,  ಸಿದ್ದಚರಣಾ ದಿಗಳೆಲ್ಲರು ನಿನ್ನನ್ನು ಸೇವೆ ಮಾಡಲಿ. ನಿನ್ನ ನಿವಾಸದಿಂದ ಪವಿತ್ರವಾದ ಈ ಕ್ಷೇತ್ರವು ಸಖಲ ಸಿದ್ದಿಗಳನ್ನು ಶೀಘ್ರದಲ್ಲಿಯೇ ಪ್ರದಾನ ಮಾಡುವುದು.ನಿನಗೆ ಇನ್ನೂ ಮುಂದೆ  ಯಾವತ್ತೂ ಗರುಡನಿಂದ ಭೀತಿ ಉಂಟಾಗುವುದಿಲ್ಲ.ನನ್ನ ಪಾದಬ್ಜದಲ್ಲಿ ದೃಢವಾದ ಭಕ್ತಿಯಿರಲಿ.ಸಕುಟುಂಬನಾಗಿ ಸಕಲ ಕಲ್ಯಾಣಗಳನ್ನು ಅನುಭವಿಸುತ್ತಾ ಈ ಕ್ಷೇತ್ರದಲ್ಲಿ ವಾಸಮಾಡು”ಎಂದು ಹೇಳಿ  ಶಿವನು ಅಂತರ್ದಾನವನ್ನು ಹೊಂದಿದನು.

ಸರ್ಪ ರಾಜನಾದ ವಾಸುಕಿಯು ಪರಮಾನಂದದಿಂದ ಸತಿಸುತ ಸಮೇತನಾಗಿ ಮೂಲ ಸುಬ್ರಹ್ಮಣ್ಯವೆಂಬ ಸ್ಥಳದಲ್ಲಿ ವಾಸ ಮಾಡುತ್ತಿದ್ದನು. ನಿರಂತರದಲ್ಲಿಯೂ ಶಿವಪೂಜಾ ದೂರೀಣನಾಗಿ ಷಣ್ಮುಖನ ನಿರೀಕ್ಷೆಯಲ್ಲಿ ಇದ್ದನು. ಪ್ರಿಯೆ! ಅದಿತಿ!  ಅಸುರೇಂದ್ರನೆಂಬ ದೈತ್ಯರಾಜನು ಸ್ವರ್ಗಾದಿಪತ್ಯವನ್ನು ಅಪೇಕ್ಷಿಸಿ  ಇಂದ್ರನೊಡನೆ ಯುದ್ಧಕ್ಕೆ ಬರಲು ನಾರಾಯಣನ ಸಹಾಯದಿಂದ ಇಂದ್ರನು ದೈತ್ಯ ಸೈನ್ಯವನ್ನು ಗೆಲ್ಲಲ್ಲು,ಅಸುರೇಂದ್ರನು ಭೀತನಾಗಿ ಪಾತಾಳವನ್ನು ಹೊಕ್ಕು ಚಿಂತಿಸುತ್ತಾ, ಮಂಗಳ ಕೇಶಿನಿ ಎಂಬ ಸ್ತ್ರೀಯಲ್ಲಿ ಹುಟ್ಟಿದ ತ್ರಿಭುವನ ಸುಂದರಿಯಾದ ಮಾಯೆಯೆಂಬ ತರುಣಿಯನ್ನು ಕರೆದು,

“ಎಲೈ,ಮಾಯೆ! ನೀನು ಕಶ್ಯಪ ಮುನಿಯನ್ನು ವಿಲಾಸ ವಿಭ್ರಮೆಗಳಿಂದ ಮೋಹಗೊಳಿಸಿ ,ಇಂದ್ರನನ್ನು ಜಯಿಸುವ ಮಕ್ಕಳನ್ನು ಪಡೆದುಕೊಂಡು ಬಾ”  ಎಂದು ಹೇಳಲು.ಮಾಯೆಯು ಕಶ್ಯಪ ಮುನಿಯ ಆಶ್ರಮಕ್ಕೆ ಹೋಗಿ ತನ್ನ ಸೊಬಗಿನಿಂದ ಅವರನ್ನು ವಶಮಾಡಿಕೊಂಡು, ಶೂರಪದ್ಮ, ಸಿಂಹವಕ್ರ, ಗಜಾಸ್ಯ, ತಾರಕರೆಂಬ ನಾಲ್ಕು ಮಕ್ಕಳನ್ನು ಪಡೆದು ಅಸುರೇಂದ್ರನೆಡೆಗೆ ಬಂದಳು.ಅಸುರೇಂದ್ರನು ಮಹಾ ಬಲಿಷ್ಠರಾದ ಈ ಮಕ್ಕಳನ್ನು ನೋಡಿ ಸಂತೋಷದಿಂದ ಕಾಪಾಡಿ ಯೌವನಸ್ಥರಾದ ಈ ಮಕ್ಕಳಿಗೆ ತನ್ನ ಪೂರ್ವ ಕಥೆಯನ್ನು ತಿಳಿಸಿ,

“ಮಕ್ಕಳಿರಾ ಹೇಗಾದರೂ ಇಂದ್ರನನ್ನು ಜಯಿಸಿ ಸ್ವರ್ಗ ರಾಜ್ಯವನ್ನು ಸಂಪಾದಿಸಬೇಕು. ಇದಕ್ಕೆ ಪರಮೇಶ್ವರನ ಅನುಗ್ರಹವಿಲ್ಲದಿದ್ದರೆ ಅಸಾಧ್ಯವಾಗುವುದು.ಆದ್ದರಿಂದ ನೀವು ನಿಮ್ಮ ಕುಲ ಗುರುಗಳಾದ  ಶುಕ್ರಾಚಾರ್ಯರ ಸಮೀಪಕ್ಕೆ ಹೋಗಿ ಅಸ್ತ್ರ,ಮಂತ್ರಗಳನ್ನು ಅಭ್ಯಾಸ ಮಾಡಿ, ಶಿವಮಂತ್ರವನ್ನೂ , ಶಿವಾರಾಧನ ಕ್ರಮವನ್ನೂ ಅವರಿಂದ ಉಪದೇಶ ಪಡೆದು ಘೋರ ತಪ್ಪಸ್ಸಿನಿಂದಾಗಿ ಶಿವನನ್ನು ಮೆಚ್ಚಿಸಿ ಅಭೀಷ್ಟವಾದ ವರವನ್ನು ಪಡೆದು ಬನ್ನಿ.ಎಂದು ಶುಕ್ರಾಚಾರ್ಯರ ಸಮೀಪಕ್ಕೆ ಮಕ್ಕಳನ್ನು ಕಳುಹಿಸಿದನು.

ವಿನಯದಿಂದ ನಮಸ್ಕರಿಸಿ ಕೈ ಮುಗಿದುಕೊಂಡು ನಿಂತಿರುವ ಈ ಹುಡುಗರಿಗೆ ಶುಕ್ರಾಚಾರ್ಯರು “ ಅಸ್ತ್ರಮಂತ್ರಗಳನ್ನೆಲ್ಲಾ ತಿಳಿಸಿ,ಮಂತ್ರ ಶ್ರೇಷ್ಠವಾದ ಪಂಚಾಕ್ಷರೀ ಮಂತ್ರವನ್ನು ಉಪದೇಶಿಸಿ ನೀವು ಭೂಮಿಯ ಉತ್ತರ ದಿಕ್ಕಿನಲ್ಲಿರುವ ಪವಿತ್ರವಾದ ವಟ  ದ್ವೀಪಕ್ಕೆ ಹೋಗಿ ಅಲ್ಲಿ ಘೋರ ತಪ್ಪಸ್ಸನ್ನು ಮಾಡಿ ಪರಮೇಶ್ವರನಿಂದ ಅಭೀಷ್ಟ ವರವನ್ನು ಹೊಂದಿ ಬನ್ನಿರಿ”ಎಂದು ಶಿಷ್ಯರನ್ನು ಕಳುಹಿಸಿದರು.

ಆ ದೈತ್ಯ ಕುಮಾರರು ವಟ ದ್ವೀಪಕ್ಕೆ ಹೋಗಿ ಅಗ್ನಿ ಕುಂಡದಲ್ಲಿ ಕಬ್ಬಿಣದ ಕಂಭವನ್ನು ನೆಟ್ಟು,ಅದರ ಮೇಲೆ ತಲೆಕೆಳಗಾಗಿ ನಿಂತು ಘೋರವಾದ ತಪಸ್ಸನ್ನು ಮಾಡುತ್ತಾ, ಬೆಂಕಿಯ ಊರಿಗೆ ಬೆದರದೇ ಶಿವನನ್ನು ದ್ಯಾನಿಸುತ್ತಿರಲು, ಇದರ ತಪೋ ಜ್ವಾಲೆಯಿಂದ ಮೂರು ಲೋಕಗಳು ಸಂತಾಪವನ್ನು ಹೊಂದಿದವು.ದೇವತೆಗಳಿಂದ ಪ್ರಾರ್ಥಿತನಾದ ಶಂಕರನು ಪ್ರತ್ಯಕ್ಷವಾಗಿ ಬಂದು.

“ಎಲೈ ದೈತ್ಯ ಕುಮಾರರಿರಾ,ನಿಮ್ಮ ನಿಶ್ಚಲವಾದ ಭಕ್ತಿಗೆ ಮೆಚ್ಚಿ ನಿಮಗೆ ವರವನ್ನು ಕೊಡಲು ಬಂದಿದ್ದೇನೆ” ಎಂದು ಎಚ್ಚರಿಸಲು ಭಕ್ತಿಯಿಂದ ನಮಿಸಿ, ಸ್ತುತಿಸಿ “ ಸ್ವಾಮಿ! ಇಂದ್ರಾದಿ ದೇವತೆಗಳಿಂದಲೂ ಸಿದ್ದಚರಣ, ನರರೋಗದಿಂದಾಗಲಿ,ಚರಾಚರ ಪ್ರಾಣಿಗಳಿಂದಾಗಲೀ ನಾವು ಅವದ್ಯ ರಾಗುವಂತೆ ವರವನ್ನು ದಯಪಾಲಿಸು,ಸಕಲ ಬ್ರಹ್ಮಾಂಡ ಅಧಿಪತ್ಯವನ್ನು ನಮಗೆ ನಿಯಮಿಸು,ದೇವಮಾಯೆಯಿಂದ ಮೋಹಿತರಾಗಿ,ಶಿವನಿಗೆ ಸಂತತಿ ಇಲ್ಲವೆಂಬುದನ್ನು ತಿಳಿದು,ಸ್ವಾಮಿ,ನಿನ್ನ ಔರಾಸಪುತ್ರನಿಂದಲ್ಲದೆ ಬೇರೆ ಯಾರಿಂದಲೂ ನಮಗೆ ಮರಣ ಉಂಟಾಗದಂತೆ ವರವನ್ನು ಕರುಣಿಸು” ಎಂದು ಪ್ರಾರ್ಥಿಸಿದರು. ಶಿವನು ಹಾಗೆಯೇ ಆಗಲೆಂದು ವರವನ್ನು ಕೊಟ್ಟು ಪರಮೇಶ್ವರನು ಅಂತರ್ದಾನ ಹೊಂದಿದನು.

ಈ ವೃತ್ತಾನಂತವನ್ನು ಅಸುರೇಂದ್ರನಿಗೂ, ಶುಕ್ರಾಚಾರ್ಯರಿಗೂ ತಿಳಿಸಿ,ಅವರ ಪ್ರೇರಣೆಯಿಂದ ಅನೇಕ ಸೈನ್ಯ ಸಮೇತನಾಗಿ ಸ್ವರ್ಗಲೋಕಕ್ಕೆ ದಾಳಿಯಿಟ್ಟು, ಇಂದ್ರಾದಿಗಳನ್ನು ಯುದ್ಧದಲ್ಲಿ ಸೋಲಿಸಿ,ಸ್ವರ್ಗಾದಿ ಲೋಕಗಳ ಅಧಿಪತ್ಯವನ್ನು ತಮ್ಮ ಕೈವಶ ಮಾಡಿಕೊಂಡು ತಮ್ಮ ಸೇನಾ ನಾಯಕರುಗಳನ್ನು ಅಧಿಕಾರಕ್ಕೆ ನಿಯಮಿಸಿದರು ಮತ್ತು ಸಮುದ್ರದ ಮದ್ಯದಲ್ಲಿ “ವೀರಮಾಹೇಂದ್ರಕ” ವೆಂಬ ವಿಚಿತ್ರ ನಗರವನ್ನು ಮಯನಿಂದ ನಿರ್ಮಾಣ ಮಾಡಿಸಿ,ಸಕಲ ಭೋಗವಸ್ತುಗಳನ್ನೂ ಅಲ್ಲಿ ಅನಿಮಾಡಿಟ್ಟುಕೊಂಡು ವಿಮಾನದ ಮೇಲೆ ಸಂಚರಿಸುತ್ತಾ ಕಂಡ ಕಂಡ ವಸ್ತುಗಳನ್ನು ಅಪಹರಿಸುತ್ತಾ ,ಸಾಧುಗಳನ್ನು ಪೀಡಿಸುತ್ತಾ ವರದರ್ಪದಿಂದ ನಿರ್ಭಯವಾಗಿ ಇದ್ದರು. ತಾರಾಕಸುರನೆಂಬ ಪ್ರಭಲ ದೈತ್ಯನು ಕ್ರೌoಚ ಪರ್ವತವನ್ನು ಕೋಟೆಯನ್ನಾಗಿ ಮಾಡಿಕೊಂಡು ಶತ್ರುಗಳಿಗೆ ಅಸಾದ್ಯವಾದ  ಸ್ಥಾನದಲ್ಲಿ ವಾಸ ಮಾಡುತ್ತಿದ್ದನು.ಇವನ ಉಪದ್ರವದಿಂದ ಸಕಲ ದಿಕ್ಪಾಲಕರೂ ನಿದ್ರಾಹಾರ ಮತ್ತು ವಿಶ್ರಾಂತಿಯಿಲ್ಲದೇ ತಲ್ಲಣಿಸುತ್ತಿದ್ದರು. ತ್ರೈಲೋಕವು ಮಹಾಭೀತಿಯಿಂದ ನಡುನಡುಗಿ  ನರಳುತ್ತಿತ್ತು.ಇಂತಹ ಘೋರ ಸಂಕಟವನ್ನು ಬ್ರಹ್ಮನಿಗೆ ದೇವತೆಗಳು  ವಿಜ್ಞಾಪಿಸಲು,ಬ್ರಹ್ಮನು ಬಹಳ ಚಿಂತಿಸಿ ನುಡಿದನು. “ಎಲೈ ಇಂದ್ರಾದಿಗಳಿರಾ! ಈ ದುಸ್ಸಾಹವಾದ ತಾರಕನ ತೇಜಸ್ಸನ್ನು ಅಡಗಿಸಬೇಕಾದರೆ, ಶಿವ ತೇಜೋಮಯವಾದ ಷಣ್ಮುಖನನ್ನು ಬಿಟ್ಟರೆ ಇನ್ನ್ಯಾರು ಸಮರ್ಥರಲ್ಲ.

ದಕ್ಷಯಜ್ಞದಲ್ಲಿ ಸತಿಯು ಯೋಗಾಗ್ನಿಯಿಂದ ತನ್ನ ಶರೀರವನ್ನು ಬಿಟ್ಟಳು.ಈಶ್ವರನು ಜಿತೇಂದ್ರಿಯನಾಗಿ ಹಿಮವದಪರ್ವತದಲ್ಲಿ ತಪ್ಪಸ್ಸು ಮಾಡುತ್ತಿರುವನು,ಪರ್ವತ ರಾಜಕುಮಾರಿಯಾಗಿ ಸತಿಯೂ ಆಲ್ಲಿಯೇ ಅವತರಿಸುವಳು. ಯೌವನೋನ್ಮುಖಿಯಾದ ಆ ಭುವನ ಜನನಿಯು  ತಂದೆಯ ಅಪ್ಪಣೆಯಿಂದ ಮಹೇಶ್ವರನನ್ನು ನಿರಂತರ ಸೇವೆ ಮಾಡುತ್ತಿದ್ದರು.ಕಾಮ ಸಂಕಲ್ಪ ರಹಿತನಾದ ಮಹೇಶ್ವರನು ನಿರ್ವಿಕಾರನಾಗಿಯೇ ಇದ್ದಾನೆ.

ಪಾರ್ವತಿಯು ಅಸಮಾನ್ಯ  ಲಾವಣ್ಯ, ತಾರುಣ್ಯ ವಿಲಾಸಗಳೊಂದು ಈಶ್ವರನಲ್ಲಿ ಸಲ್ಲವು.ಹೇಗಾದರೂ ಪರಮೇಶ್ವರನು ಪಾರ್ವತಿಯನ್ನು ಮೋಹಿಸುವಂತೆ ಮಾಡಲು ಮನ್ಮಥನೇ ಶಕ್ತನಾದವನು.ಅವನನ್ನು ಕಳುಹಿಸಿ ಈ ಕಾರ್ಯವನ್ನು ನೆರವೇರಿಸಿದರೆ  ಈ ಸಂಕಟವು ಪರಿಹಾರವಾಗುವುದು.ಅತ್ಯಂತ ದುಷ್ಕರವಾದ ಈ ಕಾರ್ಯವನ್ನು ಬಹು ಜಾಗರೂಕರಾಗಿ ಸಾಧಿಸಿರಿ” ಎಂದು ನಿರೂಪಿಸಿದರು ಸಂತುಷ್ಟರಾದ ಇಂದ್ರಾದಿಗಳು ಮನ್ಮಥನನ್ನು ಪ್ರೋತ್ಸಾಹಗೊಳಿಸಿ  ಶಿವನ ತಪೋವನಕ್ಕೆ ಕಳುಹಿಸಲು,ಕಾಲನ ಕರಾಳ ರೂಪವನ್ನು ಕಂಡೊಡನೆಯೇ ಕಾಮನ ಕೈಯಿಂದ ಕೈದುಗಳು ಕಳಚಿ ಬಿದ್ದವು.

ಈ ಸಮಯಕ್ಕೆ ತ್ರಿಭುವನ ಸುಂದರಿ,ಸೌಂದರ್ಯ ದೇವತೆಯಾದ ಭವಾನಿಯು ವಸಂತ ಕುಸುಮಾಭರಣಳಾಗಿ ಬಂದಳು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top