fbpx
ಮಾಹಿತಿ

ನಿಮಗೆ ದಕ್ಷಿಣ ಭಾರತದ ಈ 11 ವಿಷಯಗಳು ಗೊತ್ತಾ ?

ಎಲ್ಲರಿಗೂ ಗೊತ್ತಿರೋ ಹಾಗೆ ನಮ್ಮ ರಾಜ್ಯದ ಪಕ್ಕದಲ್ಲೇ ಇರುವ ನೆರೆರಾಜ್ಯ ತಮಿಳ್ನಾಡು ದ್ರಾವಿಡ ಶೈಲಿಗೆ ತುಂಬಾ ಹೆಸರುವಾಸಿ. ಈ ರಾಜ್ಯದಲ್ಲಿ ದೊಡ್ಡ ದೊಡ್ಡ ದೇವಸ್ಥಾನಗಳೂ, ಬೆಟ್ಟಗಾಡೂ, ಬೀಚೂ ಎಲ್ಲವೂ ಇದೆ. ತಮಿಳ್ನಾಡಿಗೆ ಪ್ರವಾಸ ಅಂತ ಹೋಗೋದಾದ್ರೆ ಯಾವೆಲ್ಲ ಜಾಗಳನ್ನ ಖಂಡಿತ ನೋಡ್ಬೇಕು ಅನ್ನೋದನ್ನ ಹೇಳ್ತೀವಿ ಕೇಳಿ. ತುಂಬಾ ಭಯ ಭಕ್ತಿಯಿಂದ ನಡೆಯೋರಿಗೆ ಹಳೆಯ ಕಾಲದ ದೇವಸ್ಥಾನಗಳು, ಸುಮ್ಮನೆ ಟೈಂ ಪಾಸ್ ಮಾಡ್ಬೇಕು ಅನ್ನೋರಿಗೆ ಸಮುದ್ರ ತೀರಗಳು, ಬೀಚ್ ರೆಸಾರ್ಟ್, ತಂಪಾಗಿರೋ ಬೆಟ್ಟ ಗುಡ್ಡಗಾಡು ಎಲ್ಲಾದಕ್ಕೂ ತಮಿಳ್ನಾಡು ತುಂಬಾ ಒಳ್ಳೇ ಜಾಗ.

 

ಚೆನ್ನೈ

ಚೆನ್ನೈ ಗೊತ್ತಲ್ಲಾ! ಅದೆ ತಮಿಳ್ನಾಡಿನ ರಾಜಧಾನಿ, ಮದ್ರಾಸು ಅನ್ನೋದು ಈ ಊರಿಗಿದ್ದ ಮೊದಲನೆ ಹೆಸರು, ವಿದೇಶಿ ವ್ಯಾಮೋಹ ಕಡಿಮೆ ಇರುವಂತ ಊರು ಅಂತ ಕೂಡ ಹೇಳಬಹುದು.ಈ ಊರಿನಲ್ಲಿ ತುಂಬಾ ಮುಖ್ಯವಾಗಿ ನೋಡಲೇಬೇಕಾದ ಜಾಗ ಎಂದರೆ ಸಮುದ್ರ ತೀರ, ಜೊತೆಗೇ ಸಾಕಷ್ಟು ದೇವಸ್ಥಾನಗಳು, ಗ್ಯಾಲರಿಗಳೂ ಇವೆ. ಅಷ್ಟೇ ಅಲ್ಲ ಪೋರ್ಚುಗೀಸರ ಶೈಲಿನಲ್ಲಿ ಕಟ್ಟಿರೋ ಚರ್ಚುಗಳೂ , ಇತ್ತೀಚೆಗೆ ನಿರ್ಮಾಣ ಮಾಡಲಾಗಿರುವ ಅಮ್ಯೂಸ್ಮೆಂಟ್ ಪಾರ್ಕುಗಳೂ ಇವೆ.

 

ಮಹಾಬಲಿಪುರ

ಮಹಾಬಲಿಪುರ ಚೆನ್ನೈನಿಂದ ಒಂದು ಗಂಟೆ ಕಾಲ ಪ್ರಯಾಣ. ಮಹಾಬಲಿಪುರನ ಮಮ್ಮಲಾಪುರ ಅಂತಲೂ ಕರೆಯುತ್ತಾರೆ. ಇಲ್ಲಿ ಪೂರ್ವ ಕರಾವಳಿ ತೀರವನ್ನ ನೋಡಬಹುದು. ಜನ ದಂಡು ದಂಡಾಗಿ ಇಲ್ಲಿಗೆ ಆರಾಮವಾಗಿ ದಿನ ಕಳೆಯುವ ಆಸಕ್ತಿ ಇರೋರು ಇಲ್ಲಿನ ಬೀಚ್ ರೆಸಾರ್ಟ್ ಗಳಿಗೆ ಹೋಗಬಹುದು. ಸಮುದ್ರದ ದಡದಲ್ಲಿ ಮರಳಿನ ದಂಡೆಯ ಮೇಲೆ ರಥದ ಆಕಾರದಲ್ಲಿ ಕಟ್ಟಿರುವ ಐದು ರಥಗಳನ್ನ ನೋಡಬಹುದು. ಆ ಐದೂ ರಥಗಳೂ ಪಂಚ ಪಾಂಡವರ ರಥಗಳನ್ನ ಸೂಚಿಸುತ್ತದೆ. ಹೀಗೆ ಮಹಾಭಾರತವನ್ನೂ ನೆನಪಿಸೋ ಸೌಭಾಗ್ಯಕ್ಕಾಗಿಯಾದ್ರೂ ಮಹಾಬಲಿಪುರಕ್ಕೆ ಹೋಗಲೇಬೇಕು. ಕಲ್ಲಿನಲ್ಲಿ ಕೆತ್ತಲಾಗಿರುವ ಶಿಲ್ಪಗಳಿಗೆ ಈ ಊರು ತುಂಬಾ ಹೆಸರುವಾಸಿ. ಜನ ದೂರದೊರದ ಊರುಗಳಿಂದ ಮಹಾಬಲಿಪುರಕ್ಕೆ ಬಂದು ಇಲ್ಲಿನ ಕಲಾಕೃತಿಗಳನ್ನ ಖರೀದಿ ಮಾಡುತ್ತಾರೆ.

 

ಕಾಂಚೀಪುರಂ

“ಸಹಸ್ರ ದೇವಾಲಯಗಳ ನಗರ” ಎಂತಲೇ ಕಾಂಚೀಪುರಂನು ಕರೆಯುತ್ತಾರೆ. ಕಂಚೀ ರೇಶ್ಮೆ ಸೀರೆ ಯಾರಿಗೆ ತಾನೇ ಗೊತ್ತಿಲ್ಲ.ಈ ಊರು ಚೆನ್ನೈನಿಂದ ಬೆಂಗಳೂರಿಗೆ ಹೋಗೋ ದಾರಿಯಲ್ಲಿ ಸಿಗುತ್ತದೆ. ಚೆನ್ನೈನಿಂದ ಈ ಊರು ಸುಮಾರು ೮೦ ಕಿಮಿ ದೂರದಲ್ಲಿದೆ. ಪಲ್ಲವರು ರಾಜ್ಯ ಆಳುತ್ತಿದ್ದ ಕಾಲದಲ್ಲಿ ಕಾಂಚೀಪುರಂ ಪಲ್ಲವರ ರಾಜಧಾನಿ ಕೂಡ ಆಗಿತ್ತು. ಈ ಊರನ್ನು ಸಹಸ್ರ ದೇವಸ್ಥಾನಗಳ ಊರು ಎಂದು ಕೂಡ ಕರೆಯುತ್ತಾರೆ. ಈಗ ಸಧ್ಯಕ್ಕೆ ಉಳಿದಿರುವುದು ಕೇವಲ ನೂರು ದೇವಸ್ಥಾನಗಳು ಮಾತ್ರ. ಕೆತ್ತನೆ ಕೆಲಸಗಳೆಲ್ಲಾ ತುಂಬಾ ಸೂಕ್ಮವಾಗಿಯೂ ಮತ್ತೆ ಸುಂದರವಾಗಿಯೂ ಇದೆ. ಇನ್ನೊಂದು ವಿಶೇಷ ವಿಚಾರವೆಂದರೆ ಈ ಊರಿನಲ್ಲಿ ಶಿವ ಮತ್ತು ವಿಷ್ಣು ಇಬ್ಬರ ದೆವಸ್ಥಾನಗಳೂ ಇವೆ.

ಸಾಮಾನ್ಯವಾಗಿ ಕಾಂಚಿಪುರಂ, ಮಮ್ಮಲಾಪುರಂ ಮತ್ತೆ ಚೆನ್ನೈ ಈ ಮೂರು ಜಾಗಗಳನ್ನು ತಮಿಳುನಾಡಿನ ಸುವರ್ಣ ತ್ರಿಕೋನ ( ಗೋಲ್ಡನ್ ಟ್ರೈಯಾಂಗಲ್ ಆಪ್ ತಮಿಳ್ನಾಡು) ಎಂದು ಕರೆಯುತ್ತಾರೆ.

 

ಪಾಂಡಿಚೆರಿ

ಕೇಂದ್ರಾಡಳಿತಕ್ಕೆ ಒಳಪಟ್ಟಿರೋ ಕೆಲವೇ ಊರುಗಳಲ್ಲಿ ತಮಿಳುನಾಡಿನಲ್ಲಿರೋ ಪಾಂಡಿಚೆರಿ ಕೂಡ ಒಂದು. ೧೮ ನೇ ಶತಮಾನದಲ್ಲಿ ಪ್ರೆಂಚರು ನಮ್ಮ ದೆಶದಲ್ಲಿದ್ದಾಗ ಅವರಿಗೆ ಅಗತ್ಯವಿದ್ದ ರೀತಿಯಲ್ಲಿ ಈ ಊರಿನ ನಿರ್ಮಾಣ ಮಾಡಿದ್ದಾರೆ. ಈ ಪ್ರೆಂಚ್ ಸಂಸ್ಕೃತಿಯನ್ನು ಭಾರತದಲ್ಲಿ ನೋಡಬೇಕೆಂದರೆ ಪಾಂಡಿಚೆರಿಗೆ ಹೋಗಬೇಕು. ಮನಸ್ಸಿಗೆ ಶಾಂತಿ ಹುಡುಕಿಕೊಂಡು ಬರುವಂತಹವರು ಶ್ರೀ ಅರಬಿಂದೋ ಆಶ್ರಮಕ್ಕೆ ಬರುತ್ತಾರೆ. ಬಂಗಾಳ ಕೊಲ್ಲಿಯ ಬೀಚುಗಳು ಸಾಕಷ್ಟು ಬೀಚ್ ರೆಸಾರ್ಟ್ಗಳೂ ಇಲ್ಲಿದೆ.

 

ಮದುರೈ

ಮಧುರೆ ಮೀನಾಕ್ಷಿ ದೇವಸ್ಥಾನದ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ನಮ್ಮ ದಕ್ಷಿಣ ಭಾರತದಲ್ಲಿರೋ ಮುಖ್ಯವಾದ ದೇವಸ್ಥಾನಗಳ ಪಟ್ಟಿಯಲ್ಲಿ ಈ ದೇವಸ್ಥಾನಕ್ಕೂ ಕೂಡ ಅರ್ಗ ಸ್ಥಾನವನ್ನ ಕೊಡಲಾಗಿದೆ. ಈ ಮದುರೈ ಊರು ಸುಮಾರು ೪೦೦೦ ವರ್ಷಗಳಷ್ಟು ಹಳೆಯದು. ತಮಿಳಿಗರ ಸಂಸ್ಕ್ರುತಿ ತಿಳಿದುಕೊಳ್ಳಬಯಸುವವರಿಗೆ ಮದುರೈ ಹೇಳಿ ಮಾಡಿಸಿದಂತಹ ಜಾಗ. ಇತಿಹಾಸದ ಪ್ರಕಾರ ನಾಯಕರ ರಾಜವಂಶಸ್ಥರು ಇಲ್ಲಿ ಆಳ್ವಿಕೆ ಮಾಡುವಾಗ ಸಾವಿರಾರು ವರ್ಷಗಳಾದ್ರೂ ಗಟ್ಟಿಮುಟ್ಟಗಿರಬಲ್ಲಂತಹ ಕಟ್ಟಡಗಳನ್ನ ಕಟ್ಟಿದ್ದಾರೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ಕಲ್ಯಾಣೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ೧೨ನೇ ದಿನದ ಚಿತಿರೈ ಹಬ್ಬಕ್ಕೆ ವಿಶೇಷ ಮಹತ್ವವಿದ್ದು ಲಕ್ಷಾಂತರ ಭಕ್ತಾದಿಗಳು ಸೇರುತ್ತಾರೆ.

 

ತಂಜಾವೂರ್

ಚೋಳರ ಆಡಳಿತಾವಧಿಯಲ್ಲಿ ತಾಂಜಾವೂರಿನಲ್ಲಿ ಸುಮಾರು ೭೦ ದೇವಸ್ಥಾನಗಳನ್ನು ಕಟ್ಟಿಸಲಾಗಿದೆ. ಆ ೭೦ ದೇವಸ್ಥಾನಗಳಲ್ಲಿ ಭ್ರುಹದೇಶ್ವರನ ದೇವಸ್ಥಾನ ಎಲ್ಲಕ್ಕಿಂತಲೂ ದೊಡ್ಡದು. ೬೦ ಮೀ ಎತ್ತರವಿರುವ ಗೋಪುರವನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವುದು ಇಲ್ಲಿನ ವಿಶೇಷ. ಈ ಊರಿನಲ್ಲಿರುವ ಮತ್ತೊಂದು ಅದ್ಭುತ ಜಾಗ ಅರಮನೆ. ಈ ಅರಮನೆಯಲ್ಲಿ ಜಗತ್ಪ್ರಸಿದ್ದವಾಗಿರುವ ತಾಂಜಾವೂರ್ ಪೇಂಟಿಗ್ಸ್ ನೋಡಬಹುದು. ದರ್ಬಾರ್ ಹಾಲಿನಲ್ಲಿ ಚಿನ್ನದ ಲೇಪನ ಮಾಡಲಾಗಿರುವ ತಾಂಜಾವೂರ್ ಪೇಂಟಿಗ್ಸ್ ನೋಡುವ ಸಲುವಾಗಿ ದೂರ ದೂರದ ದೇಶಗಳಿಂದ ಕಲಾಸಕ್ತರು ಆಗಮಿಸುತ್ತಾರೆ.

ಚೆಟ್ಟಿನಾಡ್

ಮದುರೈ ಮತ್ತೆ ತಾಂಜಾವೂರಿನಿಂದ ಕೇವಲ ೨ ಗಂಟೆ ಪ್ರಯಾಣ ಮಾಡಿದಲ್ಲಿ ಚೆಟ್ಟಿನಾಡನ್ನ ತಲುಪಬಹುದು. ಈ ಊರು ಹಲವಾರು ಹಳೆಯ ಬಂಗ್ಲೆಗಳಿಗೆ ಹೆಸರುವಾಸಿ. ಕೆಲವು ಹಳೇ ಬಂಗಲೆಗಲನ್ನು ಹೆರಿಟೇಜ್ ಹೋಟೆಲ್ಲುಗಳಾಗಿ ಬದಲಾವಣೆ ಮಾಡಿದ್ದಾರೆ. ನಾವೂ ರಾಜರಂತೆ ಅಲ್ಲಿ ತಂಗಿದ್ದು ಅಲ್ಲಿನ ವೈಭವವನ್ನು ಸವಿಯಬಹುದು. ಚಿಟ್ಟಿನಾಡಿನ ಹೃದಯ ಭಾಗದಲ್ಲಿರುವ ಕರೈಕುಡಿ ಎನ್ನುವ ಊರಿನಲ್ಲೊಂದು ಬಂಗ್ಲೋ ಹೋಮ್ ಸ್ಟೇ ಇದೆ. ಇಲ್ಲಿನ ವಿಶೇಷ ಏನಪ್ಪಾ ಅಂದ್ರೆ ೭ ಕೋರ್ಸ್ ಬಾಳೆಲೆ ಊಟ.ಇಲ್ಲಿ ಕುಕ್ಕಿಂಗ್ ಕ್ಲಾಸಸ್ ಕೂಡ ನಡೆಸುತ್ತಾರೆ. ಆ ಊರಿನ ಅಡುಗೆ ತಿನ್ನುವುದೇ ಒಂದು ಹಬ್ಬ. ಆಹಾರಪ್ರಿಯರಿಗಾಗಿಯೇ ಹಲವು ಸ್ಪೆಷಲ್ ಪ್ಯಾಕೇಜ್ಗಳೂ ಕೂದ ಲಭ್ಯವಿದೆ.

 

ಊಟಿ

ಸುಮಾರು ೨೦೦ ವರ್ಷಗಳ ಹಿಂದೆ ಬ್ರಿಟೀಶರು ನಮ್ಮ ದೇಶವನ್ನು ಆಳುತ್ತಿದ್ದಾಗ ಇದ್ದಾಗ ಚೆನ್ನೈನ ಬಿಸಿಲು ತಡೆಯಲಾರದೆ ಈ ಊರನ್ನ ಬಳಸೋದಕ್ಕೆ ಶುರು ಮಾಡಿದರು. ಈಗಲೂ ಕೂಡ ಬೇಸಿಗೆ ಶುರುವಾಗುತ್ತಿಂದಂತೆ ದಕ್ಷಿಣ ಭಾರತೀಯರಿಗೆ ಊಟಿ ನೆನಪಾಗೋದು ಸರ್ವೇ ಸಾಮಾನ್ಯವಾಗಿದೆ. ಅದೇ ಕಾರಣಕ್ಕೆ ಏಪ್ರಿಲ್ ಮೇ ತಿಂಗಳಲ್ಲಿ ಊಟಿ ಜನರಿಂದ ತುಂಬಿ ತುಳುಕಾಡುತ್ತಾ ಇರುತ್ತದೆ. ಲೆಖ್ಖಕ್ಕೆ ಸಿಕ್ಕದೇ ಇರುವಷ್ಟು ಸಿನಿಮಾಗಳನ್ನ ಊಟಿಯಲ್ಲಿ ಶೂಟಿಂಗ್ ಮಾಡಲಾಗಿದೆ. ಊಟಿನಲ್ಲಿರೋ ನೋಡಲೇಬೇಕಾದ ಜಾಗವೆಂದರೆ ೨೨ ಹೆಕ್ಟೇರ್ ಜಾಗದಲ್ಲಿ ನಿರ್ಮಿಸಲಾಗಿರುವ ಬೊಟಾನಿಕಲ್ ಗಾರ್ಡನ್. ಪ್ರತಿ ಬೇಸಿಗೆನಲ್ಲೂ ಇಲ್ಲಿ ಪುಷ್ಪ ಪ್ರದರ್ಶನ ಏರ್ಪಾಡು ಮಾಡಲಾಗುತ್ತದೆ. ಊಟಿ ಲೇಕಲ್ಲಿ ಬೋಟಿಂಗ್ ಹೋಗುವುದು ಸಕತ್ ಮಜಾ ಕೊಡುವ ವಿಚಾರ. ನೀಲಗಿರಿ ಬೆಟ್ಟಗಳ ಸೌಂದರ್ಯ ನೋಡಿ ಮೈಮರೆತು ಪ್ರಕೃತಿಯ ಸೌದರ್ಯ ಸವಿಯಬೇಕೆಂದರೆ ದೊಡ್ಡಬೆಟ್ಟದ ತುತ್ತತುದಿ ತಲುಪಬೇಕು.

ಕನ್ಯಾಕುಮಾರಿ

ಭಾರತದ ತುತ್ತತುದಿ ಎಂದರೆ ಕನ್ಯಾಕುಮಾರಿ. ಇದೂ ಕೂಡ ತಮಿಳ್ನಾಡಲ್ಲೇ ಇದೆ. ಬಂಗಾಳಕೊಲ್ಲಿ , ಅರಬ್ಬೀ ಸಮುದ್ರ ಮತ್ತೆ ಹಿಂದೂ ಮಹಾಸಗರದ ಸಂಗಮ ಸ್ಥಳವೇ ಕನ್ಯಾಕುಮಾರಿ. ೧೮೯೨ ರಲ್ಲಿ ಸ್ವಾಮಿ ವಿವೇಕಾನಂದರು ಈ ಸಮುದ್ರದ ಮದ್ಯದಲ್ಲಿರೋ ಕಲ್ಲಿನ ಮೇಲೆ ಕೂಳಿತು ಧ್ಯಾನ ಮಾಡಿದ್ದರು. ಆ ಮಹಾತಪಸ್ವಿ ಧ್ಯಾನ ಮಾಡಿದ್ದ ಜಾಗ ಈಗ ಎಲ್ಲರೂ ಭಕ್ತಿಯಿಂದ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳವಾಗಿದೆ. ಇದೇ ಸ್ಥಳದಲ್ಲಿ ತಮಿಳುನಾಡಿನ ಹೆಸರಾಂತ ಕವಿಗಳಾದ ತಿರುವಲ್ಲೂರರ ಪ್ರತಿಮೆಯನ್ನೂ ಅನಾವರಣಗೊಳಿಸಿಲಾಗಿದೆ. ಒರಿಸ್ಸಾದ ದೇವಸ್ಥಾನದ ರೀತಿಯಲ್ಲಿಯೇ ಕಟ್ಟಲಾಗಿರುವ ಗಾಂಧಿ ಮೆಮೋರಿಯಲ್ ಮರೆಯದೆ ನೋಡಲೇಬೇಕಾದ ಸ್ಥಳ. ಏಪ್ರಿಲ್ ತಿಂಗಳ ಹುಣ್ಣಿಮೆಯ ದಿನ ನೀವು ಕನ್ಯಾಕುಮಾರಿಗೆ ಹೋದಲ್ಲಿ ಸೂರ್ಯ ಅಸ್ತಮಿಸುವುದನ್ನೂ ಚಂದ್ರ ಉದಯಿಸೋದನ್ನೂ ಒಟ್ಟಿಗೆ ನೋಡಾಬಹುದು. ನಿಸರ್ಗಪ್ರಿಯರಿಗೆ ಅದೊಂದು ಕಣ್ಣಿಗೆ ಹಬ್ಬವೆನಿಸುವ ಸಂಧರ್ಭ.

 

ರಾಮೇಶ್ವರಂ

ರಾಮೇಶ್ವರಕ್ಕೆ ಜನ ಬರುವ ಕಾರಣವೇ ಇಲ್ಲಿರುವ ಪವಿತ್ರ ನೀರಿನಲ್ಲಿ ಸ್ನಾನ ಮಾಡೋ ಉದ್ದೇಶ. ಇದೊಂದು ಚಿಕ್ಕ ಊರು. ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಿಂದ ಎಲ್ಲಾ ಪಾಪ ಕರ್ಮಗಳೂ ಕಳೆಯುತ್ತವೆ ಎಂಬ ನಂಬಿಕೆ ಇದೆ.ಎರಡು ಉದ್ದವಾದ ಬ್ರಿಡ್ಜ್ ಮೇಲೆ ಸ್ವಲ್ಪ ದೂರ ಹೋದಲ್ಲಿ ಧನುಶ್ಕೋಡಿ ಎಂಬ ಹೆಸರಿನ ಜಾಗವಿದೆ. ಈ ಜಗದಲ್ಲಿ ಒಂದಾನೊಂದು ಕಾಲದಲ್ಲಿ ಜನವಾಸ ಇತ್ತಾದರೂ ಆನಂತರ ಎಂದರೆ ೧೯೬೪ ರಲ್ಲಿ ಸೈಕ್ಲೋನ್ ಬಂದ ಕಾರಣ ಊರೆಲ್ಲಾ ಹಾಳಾಗಿ ಜನವಾಸ ಈಗ ಇಲ್ಲವಾಗಿದೆ. ಈಗ ಆ ಬ್ರಿಡ್ಜ್ ಇಲ್ಲದೆ ಈ ದ್ವೀಪಕ್ಕೆ ಹೋಗುವುದು ಕಷ್ಟ. ಆಶ್ಚರ್ಯದ ಸಂಗತಿ ಏನೆಂದರೆ ಇಲ್ಲಿಂದ ಶ್ರೀಲಂಕಾ ಕೇವಲ ಮೂವತ್ತೇ ಕಿಲೋಮೀಟರ್ರು.

 

ತಿರುವಣ್ಣಾಮಲೈ

ಸಾಕಷ್ಟು ಜನರ ಪ್ರಕಾರ ತಿರುವಣ್ಣಮಲೈನಲ್ಲಿರುವ ಅರುಣಾಚಲ ಪರ್ವತದಲ್ಲಿ ಅದೇನೋ ಧನಾತ್ಮಕ ಶಕ್ತಿ (ಪಾಸಿಟಿವ್ ಎನರ್ಜಿ) ಇದೆಯಂತೆ.ಈ ಬೆಟ್ಟವನ್ನ ಇಡೀ ಭೂಮಿಯಲ್ಲೇ ತುಂಬಾ ಪ್ರಶಾಂತವಾಗಿರುವ ಜಾಗ ಅಂತಲೇ ಗುರುತಿಸಲಾಗ್ತಾ ಇದೆ. ಇಲ್ಲಿರಿರೋ ಪ್ರಶಾಂತತೆ ಎಂತಹವರಿಗೂ ಮಾನಸಿಕವಾಗಿ ನೆಮ್ಮದಿ ಕೊಡುತ್ತೆ. ಹಿಂದೂಗಳಿಗೆ ವಿಶೇಷವಾಗಿ ಶಿವನನ್ನ ಆರಾಧನೆ ಮಾದುವವರಿಗೆ ಈ ಬೆಟ್ಟ ಅದರ ಕೆಳಗಿರುವ ಪುರಾತನ ದೇವಸ್ಥಾನ ಎರಡು ತುಂಬಾನೇ ಶ್ರೇಷ್ಠ. ಊರು ನೋಡೋಕೆ ಬರುವವರೊದು ಕಡೆಯಾದರೆ ಶಾಂತಿ ನೆಮ್ಮದಿ ಅರಸಿ ಬರೋರಿಗೂ ಈ ಊರು ಕೈಬೀಸಿ ಕರೆಯುತ್ತಿದೆ. ಈ ಊರು ಬೆಟ್ಟ ಮತ್ತೆ ದೇವಸ್ಥಾನ ಮಾತ್ರವಲ್ಲದೆ ಶ್ರೀ ರಮಣ ಮಹರ್ಶಿಗಳ ಆಶ್ರಮ ಇರುವ ಕಾರಣಕ್ಕೂ ಕೂಡ ಒಳ್ಳೆಯ ಹೆಸ್ರು ಪಡೆದುಕೊಂಡಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಕಾರ್ಥಿಗೈ ದೀಪಂ ಅನ್ನೋ ಆಚರಣೆ ಮಾಡ್ತಾರೆ.ಆ ದಿನ ದೀಪಗಳನ್ನ ಕೈನಲ್ಲಿ ಹಿಡ್ಕೊಂಡು ಸಹಸ್ರಾರು ಜನ ಇಡೀ ಬೇಟ್ಟವನ್ನ ಪ್ರದಕ್ಷಿಣೆ ಬರ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top