ಕಾರ್ತವೀರ್ಯಾರ್ಜುನನೊಂದಿಗೆ ರಾವಣನು ಯುದ್ದ ಮಾಡಿದನು.
ಶ್ರೀ ವಿಷ್ಣುವಿನ ಸುದರ್ಶನ ಚಕ್ರದ ಸಾಧನೆ.
ರಾವಣನಿಗೆ ಯುದ್ಧ ಉತ್ಸಾಹವು ಹೆಚ್ಚಾಗಿತ್ತು ಅದುದರಿಂದಾಗಿ ಇನ್ನು ಮುಂದೆ ಯಾವ ಲೋಕದಲ್ಲಿ ಯಾರನ್ನು ಗೆಲ್ಲಬೇಕು ? ಎಂದು ಚಿಂತಿಸಿದನು.ಇನ್ನೂ ಉಳಿದಿರುವವನೆಂದರೆ ಶ್ರೀಹರಿಮಾತ್ರ ಅವನನ್ನು ಜಯಿಸಿದರೆ ಹದಿನಾಲಕ್ಕೂ ಲೋಕಗಳಲ್ಲಿ ಯಾರು ಸಮಾನರಿಲ್ಲ.ಎಂದು ಪ್ರಹಸ್ತ ಮಾರೀಚ ಮೊದಲಾದವರ ಎದುರಿಗೆ ಹೂಗಳಿಕೊಳ್ಳುತ್ತಿದ್ದನು.ಆ ಸಮಯದಲ್ಲಿ ವಿಭೀಷಣನು ರಾವಣನಿಗೆ ಈ ರೀತಿ ಕೇಳಿದನು.ರಾಕ್ಷಸ ಶ್ರೇಷ್ಟನೇ, ಎಲ್ಲರನ್ನು ಜಯಿಸಿದೆ ಎಂದು ತಿಳಿಯುವುದು ತಪ್ಪು ಲೋಕದಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಶೂರರಿರುವರು. ಮಾಹಿಷ್ಣತಿ ನಗರದ ಅರಸನಾದ ಸಹಸ್ರಾರ್ಜುನನಿಲ್ಲವೆ ? ಇಂದ್ರ ಪುತ್ರನಾದ ವಾಲಿಯು ಕಿಷ್ಕಿಂದಾ ರಾಜ್ಯದಲ್ಲಿ ಇಲ್ಲವೇ ? ಶ್ರೀ ಮನ್ನಾರಾಯಣನನ್ನು ದ್ವಾರಪಾಲಕನನ್ನಾಗಿಸಿಕೊಂಡು ರಸಾತಳ ದೊರೆ ಬಲಿ ಚಕ್ರವರ್ತಿ ಇಲ್ಲವೇ ? ಎಂದು ಬಲಿಷ್ಟರ ಬಗೆಗೆ ತಿಳುವಳಿಕೆ ನೀಡಿದನು.
ಸಹಸ್ರಾರ್ಜುನನ ಬಗೆಗೆ ತಿಳಿದಾಗ ಅವನ ಬಗೆಗಿನ ಜ್ಞಾನವನ್ನು ಅವನ ಪರಾಕ್ರಮವನ್ನು ಅವನನ್ನು ಜಯಿಸುವ ದಾರಿಯನ್ನು ರಾವಣನು ಚಿಂತಿಸಿದನು.ಹಿಂದೆ ಮಹಾಲೋವತೀ ನಗರದಲ್ಲಿದ್ದ ಶತೃಪ್ರಸೂದನನೆಂಬ ರಾಕ್ಷಸನು ವರ ಪಡೆದು ಅಹಂಕಾರದಿಂದ ಎಲ್ಲಎನ್ನು ಪೀಡಿಸಲಾರಂಭಿಸಿದನು. ದೇವತೆಗಳು ಶ್ರೀಮನ್ನಾರಾಯಣನನ್ನು ನಾನಾ ರೀತಿಯಿಂದ ರಾಕ್ಷಸನ ಸಂಹಾರ ಮಾಡುವಂತೆ ಕೇಳಿಕೊಂಡರು.
ಆಗ ನಾರಾಯಣನು ಅವರಿಗೆ ಅಭಯವನ್ನಿತ್ತು ಚಕ್ರಾಯುಧವನ್ನು ಧರಿಸಿ ಗರುಡ ಗಮನನಾಗಿ ಲೋಹವತೀ ನಗರಕ್ಕೆ ಬಂದು ಅಲ್ಲಿ ಪಾಂಚಜನ್ಯ ಶಂಖವನ್ನು ಊದಿದನು. ಶತೃಪ್ರಸೂದನನು ಕೋಪದಿಂದ ಆರ್ಭಟಿಸುತ್ತಾ ಯುದ್ಧಕ್ಕೆ ಬಂದನು ಚತುರಂಗಬಲ ಯುದ್ಧಕ್ಕೆ ಬಂದಿತು.ವಿಷ್ಣುವಿಗೆ ಬಹುಕಾಲದಿಂದ ತೋಳ್ಬಲ ಪ್ರದರ್ಶನಕ್ಕೆ ಅವಕಾಶವಿರಲಿಲ್ಲ. ಈಗ ನಿನ್ನೊಡನೆ ಯುದ್ಧ ಮಾಡುವುದಕ್ಕೆ ಅನುಕೂಲತೆ ಒದಗಿತು. ನಿನ್ನ ಹೆಂಡತಿ ಮಕ್ಕಳನ್ನು ನೋಡಿ ಬಾ ಎಂದು ಮೂದಲಿಸಿದನು.
ಶತೃಪ್ರಸೂದನನು ಬಾಣಗಳ ಮಳೆಗರೆದು ದೇವಸೈನ್ಯವನ್ನು ಹಿಮ್ಮೆಟ್ಟಿಸಿದನು.ಶಿವಪ್ರಸಾದದಿಂದ ದೊರೆತ ಶಕ್ತಿಯ ಆಯುಧದಿಂದ ಕತ್ತಲೆ ಉಂಟಾಗುವಂತೆ ಮಾಡಿದಾಗ ನಾರಾಯಣನು ಸೌರಾಸ್ತ್ರದಿಂದ ಬೆಳಕನ್ನು ಮುಡಿಸಿದನು.ಅನೇಕ ಕಾಲದವರೆಗೆ ಯುದ್ಧ ನೆಡೆಯಿರೂ ಯಾರಿಗೂ ಸೋಲಾಗಲಿಲ್ಲ. ಆಗ ಶ್ರೀ ಹರಿಯು ಅಂತರ್ಧಾನ ಹೊಂದಿ ಶಿವನ ಪ್ರಸಾದದಿಂದ ಈ ಶತೃಪ್ರಸೂದನ ಮನುಷ್ಯ ಸುರನರ ಮೃಗ ಪಕ್ಷಿ ಹೀಗೆ ಯಾರಿಂದಲೂ ನಾಶಹೊಂದಲಾರೆನೆಂದು ಜ್ಞಾನ ದೃಷ್ಟಿಯಿಂದ ತಿಳಿದನು.ಮುಂದೇನು ಮಾಡಬೇಕೆಂದು ಯೋಚಿಸಿದನು.
ಆಗ ಸುದರ್ಶನ ಚಕ್ರವು ನಾರಾಯಣನ ಚಿಂತೆಯನ್ನು ಬಗೆಹರಿಸಿ ನಾನೇ ಶತೃಪ್ರಸೂದನನನ್ನು ಕೊಲ್ಲುವೆನೆಂದು ಹೇಳಿದಾಗ ಆ ಚಕ್ರವನ್ನೇ ಕಳಿಸಿದನು. ಶತೃಪ್ರಸೂದನನು ಚಕ್ರಕ್ಕೆ ಎಲ್ಲಿ ನಿನ್ನೊಡೆಯಾ ಎಂದು ಅವನನ್ನೇ ಕಳಿಸಲು ಹೇಳಿದಾಗ ಚಕ್ರವು ನಾನು ಒಡೆಯನಲ್ಲಿರುವ ಆಯುಧಗಳಲ್ಲಿ ಒಂದಾಗಿರುವ ಮೊದಲು ನನ್ನೊಂದಿಗೆ ಯುದ್ಧ ಮಾಡು ಅನಂತರ ನನ್ನೊಡೆಯನೊಂದಿಗೆ ಮತ್ತೆ ಯುದ್ಧ ಮಾಡಬಹುದು ಎಂದು ಹೇಳಿ ಚಕ್ರವು ಶತೃಪ್ರಸೂದನನ ಮೇಲೆ ಆಕ್ರಮಣ ಮಾಡಿತು.ಶತೃಪ್ರಸೂದನನು ಚಕ್ರದಿಂದ ಹತನಾದನು.
ಚಕ್ರವು ತಾನೇ ಶತೃಪ್ರಸೂದನನನ್ನು ಕೊಂದೆನೆಂದು ಅಹಂಕಾರದಿಂದ ಬಂದು ಲಕ್ಷ್ಮೀ ನಾರಾಯಣರ ಸಮ್ಮುಖದಲ್ಲಿ ಬಂದು ನಿಂತಾಗ ಶ್ರೀ ಹರಿ ಅದನ್ನು ಧರಿಸದೇ ಇದ್ದನು.ಆ ಸಮಯದಲ್ಲಿ ಅಲ್ಲಿಗೆ ಬಂದ ನಾರದರು ಸುದರ್ಶನ ಚಕ್ರ ಧರಿಸದೇ ಇರುವ ಕಾರಣ ಕೇಳಿದರು.ಈ ಸುದರ್ಶನವು ಬಹಳ ಪರಾಕ್ರಮದಿಂದ ಶತ್ರುವನ್ನು ನಾಶಪಡಿಸಿದೇ ಅದರೂ ಅದು ಇನ್ನೂ ದೂರದಲ್ಲಿಯೇ ಏಕೆ ಇರುವಂತೆ ಮಾಡಿದೆ ಎಂದು ಲಕ್ಷ್ಮಿಯು ಕೇಳಿದಳು.
ಆಗ ನಾರಾಯಣನು ಅಹಂಕಾರದಿಂದ ಈ ಚಕ್ರವು ತಾನೇ ಬಲಶಾಲಿ ಎಂದು ತಿಳಿದಿದೆ ಆದ್ದರಿಂದ ಬಲಾಬಲ ಪರೀಕ್ಷೆ ಆಗಬೇಕೆಂದು ಚಕ್ರಕ್ಕೆ ಮಾನವನಾಗಿ ಹುಟ್ಟಲು ಆದೇಶ ಮಾಡಿದನು.ಆಗ ಚಕ್ರವು ಪರಿಪರಿಯಿಂದ ಬೇಡಿಕೊಂಡಾಗ ಎಲೆ ಚಕ್ರವೇ, ನೀನು ಮಾನವನಾದಾಗ ನಾನು ದತ್ತಾತ್ರೇಯನಾಗಿ ಜನಿಸಿ ಬಂದು ನಿನಗೆ ಸಕಲ ಶಸ್ತ್ರಾಸ್ತ್ರಗಳನ್ನು ಕಲಿಸುವೆನು ವಿದ್ಯೆ ಉಪದೇಶ ಮಾಡುವೆನು.
ಶ್ರೀ ವಿಷ್ಣುವಿನ ಸುದರ್ಶನ ಚಕ್ರ ಮನುಷ್ಯ ಜನ್ಮ ತಾಳಿದ ಕಥೆ.
ಚಕ್ರವು ಮಾಹಿಷ್ಮಿತಿ ನಗರದಲ್ಲಿ ಕಾರ್ತವೀರ್ಯಾರ್ಜುನನೆಂಬ ರಾಜನಾಗಿ ಹುಟ್ಟಿ ಬಂದ ನಂತರ ತಂದೆಯಾದ ಕೃತವೀರ್ಯನು ಮಗನಿಗೆ ಎಲ್ಲ ರೀತಿಯ ಸಂಸ್ಕಾರಗಳನ್ನು ಮಾಡಿಸಿದನು. ಕಾರ್ತವೀರ್ಯಾರ್ಜುನ ವಿದ್ಯಾಭ್ಯಾಸದ ನಂತರದಲ್ಲಿ ತಂದೆ ತಾಯಿಯರಿಗೆ ಬಹಳ ಸಂತಸವಾಯಿತು. ವಿದ್ಯಾಭ್ಯಾಸದ ನಂತರದಲ್ಲಿ ವಿವಾಹವನ್ನು ನೆಡೆಸಿದರು. ರಾಜ್ಯದಲ್ಲಿ ಮಗನನ್ನು ಪಟ್ಟಾಭಿಷೇಕವನ್ನು ಮಾಡಲು ಕೃತವೀರ್ಯನು ಬಯಸಿ ಒಲಗದಲ್ಲಿ ವಿಷಯವನ್ನು ಪ್ರಕಟಿಸಿದಾಗ ಕಾರ್ತವೀರ್ಯಾರ್ಜುನನು ಮಹಾಮುನಿಗಳಾದ ಗರ್ಗರನ್ನು ಕುರಿತು ಈ ರೀತಿಯಲ್ಲಿ ಕೇಳಿದನು.
ಮಹಾಮುನಿಗಳೇ,ರಾಜ್ಯದ ಆಡಳಿತವನ್ನು ನೆಡೆಸಲು ಅತ್ಯಂತ ಬುದ್ಧಿವಂತಿಕೆ ಬೇಕು.ಅನೇಕ ರೀತಿಯ ತೊಂದರೆಗಳು ಆಡಳಿತದಲ್ಲಿ ಬರುವವು,ರಾಜನಿಗೆ ದಿವ್ಯಾಸ್ತ್ರಗಳ ಅವಶ್ಯಕತೆಯಿದೆ ನಾನು ಯಾವ ರೀತಿ ಶಕ್ತಿಯನ್ನು ಸಂಪಾದಿಸಲಿ ? ಎಂದು ಕೇಳಿದನು. ಅದೇ ಸಮಯದಲ್ಲಿ ಪ್ರಜೆಗಳು ಮಂತ್ರಿಗಳು ಕೃತವೀರ್ಯನ ಅಪೇಕ್ಷೆಯಂತೆ ರಾಜ್ಯದ ಆಡಳಿತ ಸ್ವೀಕರಿಸಲು ಕೋರಿದರು.ಹಾಗೆ ಮಾಡದಿದ್ದರೆ ರಾಜ್ಯವು ಶತ್ರುಗಳ ಪಾಲಾಗುವುದು. ಈ ರೀತಿಯ ಬೇಡಿಕೆ ಪ್ರಜೆಗಳಿಂದ ಬಂದಾಗ ರಾಜಕುಮಾರ ಕಾರ್ತವೀರ್ಯಾರ್ಜುನ ರಾಜ್ಯದ ಆಡಳಿತವನ್ನು ಸ್ವೀಕರಿಸಲು ಒಪ್ಪಿಸಿದನು,ಆದರೆ ಅದ್ಕಕೆ ಪುರ್ವದಲ್ಲಿ ಕೆಲವು ಕಾಲ ನಾನು ಕೆಲವು ಅಸ್ತ್ರ ಶಸ್ತ್ರಗಳನ್ನು ಪಡೆಯಲು ಬಯಸಿದ್ದೇನೆಂದು ಗರ್ಗಮುನಿಯು ರಾಜಕುಮಾರ, ನೀನೂ ಸಹ ಮಹಾವಿಷ್ಣುವಿಗೆ ಸಮನಾಗುವಂತೆ ಎಲ್ಲಿಯೂ ತಪಸ್ಸಿಗಾಗಿ ಹೋಗುವ ಅವಶ್ಯಕತೆಯಿಲ್ಲ. ಸಹ್ಯಾದ್ರಿಯಲ್ಲಿರುವ ಗುರು ದತ್ತಾತ್ರೇಯರನ್ನು ಕಂಡು ಅವರಿಂದಲೇ ವಿದ್ಯೆಯನ್ನು ಶಸ್ತ್ರಾಸ್ತ್ರಗಳನ್ನು ಪಡೆಯಬಹುದಾಗಿದೆ ಎಂದು ಸೂಚಿಸಿದಾಗ ಕಾರ್ತವೀರ್ಯಾರ್ಜುನ ಹಾಗೂ ಅವನ ಮನೆಯವರಿಗೆ ಅತ್ಯಂತ ಸಂತೋಷವಾಯಿತು.
ಕಾರ್ತವೀರ್ಯಾರ್ಜುನನು ಸರ್ವಾಲಂಕಾರ ಭೂಷಿತರಾದ ಗುರುಗಳಾದ ದತ್ತಾತ್ರೇಯರಿದ್ದಲ್ಲಿಗೆ ಬಂದು ಲಕ್ಷ್ಮೀದೇವಿಯಂತಿರುವ ಪತ್ನಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆಕೆಯೊಂದಿಗೆ ಸರಸ ಸಲ್ಲಾಪ ಮಾಡುತ್ತಿರುವ ದತ್ತಾತ್ರೇಯರನ್ನು ಕಂಡನು.ಅವರನ್ನು ಒಂದಿಸಿ ತಾನೇಕೆ ಬಂದಿದ್ದೇನೆಂದು ಪ್ರಾರ್ಥಿಸಿದನು. ದತ್ತಾತ್ರೇಯನು ಸ್ತ್ರೀ ಸಮೇತನಾಗಿರುವ ನನ್ನಲ್ಲಿ ಏನು ವಿದ್ಯೆಯನ್ನು ಪಡೆಯುವೆ ? ಎಂದು ಕೇಳಿದಾಗ ರಾಜಪುತ್ರ ಕಾರ್ತವೀರ್ಯಾರ್ಜುನನು ತಾವು ಸಾಕ್ಷಾತ್ ಲಕ್ಷ್ಮೀ ನಾರಾಯಣರಂತೆ ಎಂದು ನನ್ನ ಮೇಲೆ ಕೃಪೆ ಮಾಡಿ ಎಂದು ಕೇಳಿಕೊಂಡನು.
ಕಾರ್ತವೀರ್ಯಾರ್ಜುನನಿಗೆ ಯೋಗ,ಅಷ್ಟಸಿದ್ದಿಗಳು, ದಿವ್ಯಾಸ್ತ್ರಗಳು ಸಿಗುವಂತೆ ಅನುಗ್ರಹಿಸಿದರು.ರಾಜಪುತ್ರನು ಯುದ್ಧದಲ್ಲಿ ಜಯ,ಅಥಿತಿಗಳಲ್ಲಿ ಭಕ್ತಿ, ಸರ್ವೋತ್ತಮ ಪುರುಷನಿಂದ ನಿಗ್ರಹವೂ ಆಗುವಂತೆ ಕೃಪೆ ಮಾಡಬೇಕೆಂದು ಪ್ರಾರ್ಥಿಸಿದನು.ಹೀಗೆ ದತ್ತಾತ್ರೇಯರಿಂದ ದಯೆ ಪಡೆದು ತನ್ನ ನಗರಕ್ಕೆ ಬಂದು ಸಂತೋಷದಿಂದ ಇರಲು ಆರಂಭಿಸಿದನು.ಕೃತವೀರ್ಯನು ವೈಭವದಿಂದ ಮಗನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿದನು.ಕಾರ್ತವೀರ್ಯಾರ್ಜುನನು ಯೋಗಶಕ್ತಿಯಿಂದ ಎಲ್ಲರನ್ನು ಸಂತಸವಾಗಿ ರಕ್ಷಿಸಿದನು.
ದುಷ್ಟಶಿಕ್ಷಣ ಶಿಷ್ಟ ಪರಿಪಾಲನೆ ಮಾಡುತ್ತಾ ತನ್ನನ್ನು ನಂಬಿದವರಿಗೆ ಇಷ್ಟಾರ್ಥಗಳನ್ನು ಕೊಡುತ್ತಿದ್ದನು.ಈ ಜಗತ್ತಿನಲ್ಲಿ ತಾನೊಬ್ಬನ್ನೇ ಶಸ್ತ್ರ ಧರಿಸಬೇಕೆಂದು ಹೇಳಿ ಪ್ರಜೆಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡನು. ಸಪ್ತದ್ವೀಪಗಳಲ್ಲಿ ಏಕಮಾತ್ರ ಚಕ್ರವರ್ತಿಯಾಗಿದ್ದು ಸಾವಿರ ಕೈಗಳಿರುವ ಕಾರ್ತವೀರ್ಯನು ಮಾತ್ರ ರೇವಾ ನದಿಗೆ ಹೋಗಿ ಜಲ ಕ್ರೀಡೆಯನ್ನು ಆಡಲು ಬಯಸಿದನು. ನದಿಯ ನೀರೂ ಸಾಲದಾದಾಗ ಐದುನೂರು ಕೈಗಳಿಂದ ನೀರನ್ನು ತಡೆದು ಉಳಿದ ಕೈಗಳಿಂದ ನೀರನ್ನು ಸಿಂಪಡಿಸುತ್ತಾ ಜಲವಿಹಾರದಲ್ಲಿ ಮಗ್ನನಾಗಿದ್ದನು.
ಈ ಸಮಯದಲ್ಲಿ ರಾವಣನು ಬಲಿಷ್ಠನಾದ ಕಾರ್ತವೀರ್ಯನನ್ನು ಸೋಲಿಸಿಯೇ ಮಹಾವಿಷ್ಣುವನ್ನು ಜಯಿಸುವುದು ಸೂಕ್ತವಾಗವುದೆಂದು ನಿಶ್ಚಯಿಸಿ ಮಾಹಿಷ್ಣತಿ ನಗರಕ್ಕೆ ಬಂದನು.ಕಾರ್ತವೀರ್ಯನು ನದಿಗೆ ಜಲಕ್ರೀಡೆಗೆ ಹೋಗಿರುವುದನ್ನು ತಿಳಿದು ನದಿಯ ಕಡೆಗೆ ಬಂದನು.ಅಲ್ಲಿದ್ದ ಶುದ್ಧವಾದ ನೀರನ್ನು ನೋಡಿ ಶಿವಪೂಜೆ ಮಾಡುವ ಆಸೆಯಿಂದ ಪುಷ್ಪಕವಿಮಾನದಿಂದ ಇಳಿದು ಮರಳಿನ ಲಿಂಗವನ್ನು ಮಾಡಿ ಪೂಜಾ ಸಾಮಗ್ರಿಗಳನ್ನು ತರಿಸಿದನು.ನದಿಯ ನೀರು ಉಕ್ಕಿ ಬಂದು ಬಹುದೂರದವರೆಗೆ ಕೊಚ್ಚಿಕೊಂಡು ಹೋದಾಗ ರಾವಣನಿಗೆ ಆಶ್ಚರ್ಯದೊಂದಿಗೆ ಭಯ ಆಯಿತು.
ಈ ರೀತಿಯಲ್ಲಿ ನೀರು ನುಗ್ಗಿ ಬರಲು ಕಾರಣವನ್ನು ತಿಳಿಯಲು ಮೊದಲಿನ ಸ್ಥಳಕ್ಕೆ ಬಂದಾಗ ಪರಿವಾರದವರು ನಸುನಕ್ಕರು.ಪ್ರಹಸ್ತ ಮೊದಲಾದವರನ್ನು ಕಾರಣ ಅರಿಯಲು ಕಳಿಸಿದನು.ಅವರು ಬಂದು ನೋಡಿದಾಗ ನದೀ ತೀರದಲ್ಲಿ ಆಗತಾನೆ ಸ್ನಾನ ಮಾಡಿದ ಅನೇಕ ಸ್ತ್ರೀಯರನ್ನು ಗಮನಿಸಿದರು. ಉಸುಕಿನಲ್ಲಿ ಮೈಯೊಡ್ಡಿ ಕುಳಿತಿರುವವರನ್ನು ನೋಡಿ ಇವರು ಅಪ್ಸರೆಯರೆ ಅಥವಾ ನಕ್ಷತ್ರಗಳೇ ಮೂರ್ತಿರೂಪದಿಂದ ಇರುವರೇ ಎಂದು ತಿಳಿಯದೇ ಹೋದರು.
ಸನಿಹದಲ್ಲಿ ಗಂಧ ಪುಷ್ಪಕಗಳಿಂದ ಅಲಂಕೃತನಾದ ವಸ್ತ್ರಾಭರಣಗಳಿಂದ ಕಂಗೊಳಿಸುವ ಸಹಸ್ರಬಾಹುವನ್ನು ಕಂಡರು. ಅವರು ನದಿಯ ಕೆಲಭಾಗದಲ್ಲಿರುವ ಸಹಸ್ರಾರ್ಜುನನು ತನ್ನ ಐದುನೂರು ಕೈಗಳಿಂದ ನದೀ ಜಲವನ್ನು ತಡೆದುದು ನೀರು ಉಕ್ಕಿ ಬರಲು ಕಾರಣವಾಗಿತ್ತೆಂದು ತಿಳಿಸಿದರು.ರಾವಣನು ಅವರ ಮಾತುಗಳಿಗೆ ಕುಪಿತನಾಗಿ ಗದೆಯನ್ನು ಹಿಡಿದು ಚತುರಂಗ ಬಲದೊಂದಿಗೆ ಮಾಹಿಷ್ಣತಿ ನಗರವನ್ನು ಮುತ್ತಿಗೆ ಹಾಕಿದನು.ಪ್ರಜೆಗಳನ್ನು ಅನೇಕ ರೀತಿಯಿಂದ ಹಿಂಸಿಸಿದಾಗ ಅವನು ನೀನು ಬಲಿಷ್ಟನೇ ಆಗಿದ್ದರೆ ನಮ್ಮ ರಾಜನೊಂದಿಗೆ ಯುದ್ಧ ಮಾಡೆಂದರು.
ಕಾರ್ತವೀರ್ಯಾರ್ಜುನನು ಈ ವಿಷಯ ತಿಳಿದು ಅವನನ್ನು ಹಿಡಿದು ತರುತ್ತೇನೆಂದು ಸ್ತ್ರೀಯರನ್ನು ಅಂತಃಪುರಕ್ಕೆ ಕಳಿಸಿದನು.ರಾವಣನು ನಿನ್ನಲ್ಲಿರುವ ಎಲ್ಲ ಆಯುಧಗಳೊಂದಿಗೆ ಯುದ್ಧಕ್ಕೆ ಬಾ ಎಂದಾಗ ರಾಕ್ಷಸ ಧಮ, ಬ್ರಹ್ಮನ ವರದಿಂದ ಅಹಂಕಾರಗೊಂಡಿರುವೆ, ಹತ್ತು ತಲೆಯ ಹುಳವೇ ರೇವಾ ನದಿಯ ನೀರು ನಿನ್ನನ್ನು ಕೊಚ್ಚಿಕೊಂಡು ಹೋದಾಗಲೇ ನಿನ್ನ ಪರಾಕ್ರಮ ತಿಳಿದಿದೆ. ಯುದ್ಧ ಮಾಡುವುದೇ ಆದರೆ ಬಾ ಎಂದು ಆಹ್ವಾನಿಸಿದನು.ರಾವಣನು ಇಪ್ಪತ್ತು ತೋಳುಗಳಿಂದ ಯುದ್ಧ ಬಯಸಿದರೆ ಕಾರ್ತವೀರ್ಯನು ಸಹಸ್ರ ತೋಳುಗಳಿಂದ ಸಿದ್ಧನಾದನು.ರಾವಣನು ಕಾರ್ತವೀರ್ಯನನ್ನು ನೋಯಿಸಿ,ಅಪಹಾಸ್ಯ ಮಾಡಿ ರೊಚ್ಚಿಗೆಬ್ಬಿಸಿದನು. ಕಾರ್ತವೀರ್ಯನು ಐದುನೂರು ಬಾಹು ಅಳತೆಯುಳ್ಳ ಗದೆಯನ್ನು ಬೀಸಿದಾಗ ಅನೇಕ ರಾಕ್ಷಸರು ಹತರಾದರು.ಕಾರ್ತವೀರ್ಯ ಮತ್ತು ರಾವಣನ ಯುದ್ದವನ್ನು ನೋಡಲು ದೇವತೆಗಳೂ ಸಹ ಆಕಾಶದಲ್ಲಿ ಬಂದು ನಿಂತರು. ಭಯಂಕರವಾದ ಗದೆಯಿಂದ ಕಾರ್ತವೀರ್ಯನು ರಾವಣನಿಗೆ ಹೊಡೆದಾಗ ಅವನು ಮೂರ್ಛೆ ಹೊಂದಿ ಬಿದ್ದನು. ಪ್ರಹಸ್ತ ಮೊದಲಾದ ಮಂತ್ರಿಗಳು, ರಾಕ್ಷಸರು ಓಡಿ ಬಂದು ತಂಪಾದ ಉಪಚಾರ ಮಾಡಿದಾಗ ರಾವಣನು ಎಚ್ಚರ ಪಡೆದನು.
ಮತ್ತೆ ಯುದ್ಧಕ್ಕೆ ರಾವಣನು ಬಂದಾಗ ರಾವಣನು ಕೋಪದಿಂದ ಕಿಡಿಗಳನ್ನು ಕಾರುತ್ತಾ ಅಷ್ಟಗಂಟಾಶಕ್ತಿ ಎಂಬ ಆಯುಧವನ್ನು ಕಾರ್ತವೀರ್ಯನ ಮೇಲೆ ಪ್ರಯೋಗಿಸಿದನು.ಬೆಂಕಿಯ ಜ್ವಾಲೆಯೊಂದಿಗೆ ಬಂದ ಆ ಅಸ್ತ್ರವನ್ನು ಕಾರ್ತವೀರ್ಯನು ತಡೆದು ತುಂಡು ತುಂಡು ಮಾಡಿದನು. ಗದಾಯುದ್ದ ಆರಂಭವಾಯಿತು. ಎರಡು ಮದ್ದಾನೆಗಳ ಯುದ್ದದಂತೆ ಗದಾಯುದ್ದ ನೆಡೆಯಿತು.ಆಗ ಇಬ್ಬರೂ ಗದಾಘಾತದಿಂದ ತಪ್ಪಿಸಿಕೊಳ್ಳುತ್ತಿದ್ದರು,ಆದರೆ ಒಮ್ಮೆ ಕಾರ್ತವೀರ್ಯನು ತೀವ್ರವಾಗಿ ರಾವಣನಿಗೆ ಹೊಡೆದನು. ಅನಂತರದಲ್ಲಿ ರಾವಣನನ್ನು ಹಿಡಿದು ಕುಕ್ಕಿದನು.ಬಂಗಾರದ ಬೇಡಿಯನ್ನು ತರಿಸಿ ಬಂಧನದಲ್ಲಿ ಇರಿಸಿದನು. ಹೀಗೆ ಕಾರ್ತವೀರ್ಯನು ಕಾರಾಗೃಹದಲ್ಲಿ ರಾವಣನು ಅನೇಕ ವರ್ಷಗಳ ಕಾಲ ಇದ್ದನು.
ರಾವಣನು ಈ ರೀತಿ ಬಂಧನದಲ್ಲಿ ಇರುವುದನ್ನು ತಿಳಿದ ಪುಲಸ್ತ್ಯ ಮುನಿಯು ಮಾಹಿಷ್ಣತಿ ನಗರಕ್ಕೆ ಬಂದನು. ಕಾರ್ತವೀರ್ಯನು ಮುನಿಯನ್ನು ಉಪಚರಿಸಿ ಗೌರವಿಸಿದನು.ಇಂದ್ರನನ್ನು ದಿಕ್ಪಾಲಕರನ್ನು ಜಯಿಸಿದ ರಾವನನನ್ನು ಜಯಿಸಿದ ನೀನು ಅಸಾಮಾನ್ಯ ವೀರನಾಗಿರುವೆ. ಇಷ್ಟು ಅವಮಾನವನ್ನು ಮಾಡಿದ್ದು ಸಾಕು .ಇವನು ನನ್ನ ಮೊಮ್ಮಗನು, ನನ್ನ ಮೇಲೆ ಅಭಿಮಾನವಿದ್ದರೆ ಇವನನ್ನು ಬಿಡು ಎಂದರು. ಚಕ್ರವರ್ತಿ ಕಾರ್ತವೀರ್ಯನು ರಾವಣನನ್ನು ಸಂಕೋಲೆಗಳಿಂದ ಬಿಡಿಸಿ ಮಂಗಳ ಸ್ನಾನ ಮಾಡಿಸಿ ಅಲಂಕಾರ ಮಾಡಿಸಿ ಕರೆತಂದನು.
ರಾವಣನಿಗೆ ಶೂರನಿಗೆ ಜಯ ಅಪಜಯ ಎರಡೂ ಸಮಾನವು ನೀನು ಅಪಜಯಕ್ಕಾಗಿ ಹೆದರಬೇಡವೆಂದು ಪುಲಸ್ತ್ಯ ಮುನಿಯೊಂದಿಗೆ ಕಳಿಸಿದನು.ಪುಲಸ್ತ್ಯ ರಾವಣನನ್ನು ಲಂಕಾಪಟ್ಟಣಕ್ಕೆ ಕರೆದುಕೊಂಡು ಹೋದನು.ಇನ್ನು ಮುಂದಾದರೂ ಅಹಂಕಾರ ಪಡಬೇಡ. ಉತ್ತಮ ನಡೆತೆಯಿಂದ ಸುಖವಾಗಿರೆಂದು ಹೇಳಿ ಹೊರಟು ಹೋದನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
