fbpx
ಸಣ್ಣ ಕಥೆ

ಎಷ್ಟು ದುಡ್ಡಿದ್ದರು ಸಾಲದು ಅನ್ನೋನ ಕಥೆ ಕೊನೆಗೆ ಇಷ್ಟೇ ಆಗೋದು ..

ಬಕಾಸುರನ ಸಂತೃಪ್ತಿ – ನೀತಿ ಕಥೆ.

ಒಬ್ಬ ಊರಿನಲ್ಲಿ ಒಬ್ಬ ಯುವಕನಿದ್ದ.ಅವನಿಗೆ ಅಗಾಧವಾದ ಹಸಿವಿನ ರೋಗವಿತ್ತು.ಎಷ್ಟು ತಿಂದರೂ ತೃಪ್ತಿ ಇರಲಿಲ್ಲ.ತಳವಿಲ್ಲದ ಬಾವಿಯಂತಹ ಹೊಟ್ಟೆ,ಎಷ್ಟು ತಿಂದರೂ ಇಂಗದ ಹಸಿವು !

ಮನೆ ಮದ್ದಾಯಿತು, ಆಲೋಪತಿ, ಹೋಮಿಯೋಪತಿ, ನಾಟಿ ಔಷಧಿ ಎಲ್ಲಾ ಪ್ರಯತ್ನಿಸಿದರು. ಹಲವು ದೇವರಿಗೆ ಹರಕೆ ಹೊತ್ತರು.ಯಾವುದೂ ಫಲ ನೀಡಲಿಲ್ಲ. ಅವನಿಗೆ ಆಹಾರ ಹೊಂದಿಸುವುದೇ ಒಂದು ಸಮಸ್ಯೆಯಾಯಿತು.ಕೊನೆಗೆ ಅವನ ತಂದೆ-ತಾಯಿ ,ಅವನ ಬಂಧು- ಬಳಗ  ಎಲ್ಲಾ ಕೈ ಚೆಲ್ಲಿದರು !  ಈಗಿನ ಕಾಲದವರಂತಲ್ಲ, ಆಗಿನ ಕಾಲದ ಜನ. ಅವನ ಊರಿನವರು ಯುವಕನ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದರು.ಕೊನೆ ಕೊನೆಗೆ  ಇದು ಊರಿನವರಿಗೂ ಸಮಸ್ಯೆಯಾಗತೊಡಗಿತು. ಇಡೀ  ಊರಿನಲ್ಲಿ ಆಹಾರದ ಕೊರತೆ ಕಂಡು ಬಂತು. ಊರವರು ಅಸಮಾಧಾನ ಸೂಚಿಸುವ ಮೊದಲೇ ಅವನ ತಂದೆ ತಾಯಿ ಅವನನ್ನು ಊರಿನಿಂದ ಹೊರ ಕಳಿಸುವ ವಿಚಾರ ಮಾಡಿದರು.

ಎಲ್ಲೋ ,ದೂರದ ಆಶಾಭಾವನೆ ಮತ್ತು ಕರುಳಿನ ಸಂಕಟ ಇಷ್ಟು ದಿನ ಅವರನ್ನು ತಡೆಯುತ್ತಿತ್ತು. ಆದರೆ ಆಹಾರದ ಕೊರತೆ ಇಡೀ ಊರನ್ನೇ ವ್ಯಾಪಿಸಿದಾಗ  ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾಯಿತು.ದೇವರ ದಯೆಯೋ ಅವರ ಪೂರ್ವ ಜನ್ಮದ ಪುಣ್ಯವೋ, ಸಮಯಕ್ಕೆ ಸರಿಯಾಗಿ ಆ ಊರಿಗೆ ಒಬ್ಬ ಸನ್ಯಾಸಿಯ ಆಗಮನವಾಯಿತು.  ಅವರ ಸಾಧನೆ ,ಸಾಮರ್ಥ್ಯದ ಬಗ್ಗೆ, ಅವರಿಗಿರುವ ವಿಶೇಷ ಶಕ್ತಿಯ ಬಗ್ಗೆ ಅನೇಕ ದಂತ ಕಥೆಗಳಿದ್ದವು.

ಕೊನೆಯ ಪ್ರಯತ್ನವೆಂಬಂತೆ ಯುವಕನ ತಂದೆ ತಾಯಿ ಸನ್ಯಾಸಿಯ ಹತ್ತಿರ ಯುವಕನ ಸಮಸ್ಯೆಯನ್ನು ನಿವೇಧಿಸಿಕೊಂಡರು. ಸಮಸ್ಯೆಯನ್ನು ಆಲಿಸಿದ ಸನ್ಯಾಸಿಯು ಸಾವಧಾನದಿಂದ ಹೀಗೆಂದರು: “ ಚಿಂತಿಸಬೇಡಿ, ಪರಿಹಾರವಿದೆ !  ಈ ಯುವಕ ಇನ್ನೂ ಜೀವನ ಪೂರ್ತಿ ಒಬ್ಬನೇ ಕುಳಿತು ತ್ತಿನ್ನುವ ಹಾಗಿಲ್ಲ. ಪ್ರತಿಸಾರಿ ಊಟಕ್ಕೆ ಕುಳಿತಾಗ ನಾಲ್ಕು ಜನರೊಂದಿಗೆ ಹಂಚಿ ತ್ತಿನ್ನಬೇಕು. ಈ ನಿಯಮವನ್ನು  ತಪ್ಪಿಸಿದರೆ  ಮತ್ತೆ  ಅಗಾಧವಾದ ಹಸಿವಿನ ರೋಗಕ್ಕೆ ಬಲಿಯಾಗುವ ಸಾಧ್ಯತೆಯಿದೆ”.

ಸನ್ಯಾಸಿ ತೋರಿದ ಪರಿಹಾರದ ಬಗ್ಗೆ ಅನುಮಾನವಿದ್ದರೂ, ವಿಚಿತ್ರವೆನಿಸಿದರೂ ,ಕೊನೆ ಪ್ರಯತ್ನವಾಗಿ ಅವರ ಸಲಹೆಯನ್ನು  ಪಾಲಿಸತೊಡಗಿದರು.  ಯುವಕನು ಸನ್ಯಾಸಿಗಳು ಹೇಳಿದ ಹಾಗೆ ಮಾಡಲು  ತೊಡಗಿದ. ಆಶ್ಚರ್ಯವೆಂಬಂತೆ ಯುವಕನ ಅಗಾಧವಾದ ಹಸಿವಿನ ರೋಗ ಪರಿಹಾರವಾಯಿತು. ಯುವಕನು ಸ್ವಲ್ಪವೇ ತಿಂದರೂ ಸಂತೃಪ್ತಿಯನ್ನು ಅನುಭವಿಸಿದ. ಉರಿನವರೆಲ್ಲ ಹರ್ಷದಿಂದ ಸನ್ಯಾಸಿಯನ್ನು ಕೊಂಡಾಡಿದರು. ತಮ್ಮ ಆಶೀರ್ವಾದ ವಚನ ಸಭೆಯಲ್ಲಿ  ಸನ್ಯಾಸಿಗಳು ಹೀಗೆ ಹೇಳಿದರು .

“ ಅತೀ ಹಣದಾಹವಿರುವವರು ಕೂಡ ಈ ಪರಿಹಾರವನ್ನು ಬಳಸಿ ಜೀವನದಲ್ಲಿ ಸಂತೃಪ್ತಿ ಹೊಂದಬಹುದು !” ಆ ಹೊತ್ತಿಗೆ ಕಾರ್ಲಾ ಮಾರ್ಕ್ಸ್ ಇನ್ನೂ ಹುಟ್ಟಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top