ಎಲ್ಲಾ ತಾಯಿಯರು ತಪ್ಪದೇ ಒದಲೇಬೇಕಾದ ಕಥೆ ಇದು.ನೀವೇ ಮುಂದೊಂದು ದಿನ ನಿಮ್ಮ ಮಕ್ಕಳು ಪ್ರಖ್ಯಾತರಾಗಬೇಕು ಎಂದರೆ ನೀವೇ ಅವರಿಗೆ ಸ್ಫೂರ್ತಿ.ನಿಮ್ಮ ಮಾತುಗಳು ನಿಮ್ಮ ನಡವಳಿಕೆಯ ಅವರಿಗೆ ವೇದ ಪಾಠಗಳು. ನಿಮ್ಮ ಮಕ್ಕಳಿಗೆ ನೀವೇ ಸ್ಪೂರ್ತಿಯಾಗಬೇಕು.
ಹೆತ್ತ ತಾಯಿಯೇ ಮುತ್ತೇ ಸ್ಫೂರ್ತಿ.
ಇಲ್ಲಿರುವ ಅಪರೂಪದ ಚಿತ್ರದಲ್ಲಿ ತತ್ವಜ್ಞಾನಿ ಸಾಕ್ರೆಟಿಸರಿಗೆ ವಿಷ ಪ್ರಾಶಾನದಿಂದ ಸಾಯಿಸುವ ಶಿಕ್ಷೆ ಕೊಟ್ಟಾಗಿನ ಮನೋಜ್ಞವಾದ ದೃಶ್ಯವಿದೆ.ಎರಡು ಶತಮಾನಗಳ ಹಿಂದೆ ರಚಿಸಲ್ಪಟ್ಟ ಇದು ಇಂದು ಲಕ್ಷಾಂತರ ಡಾಲರುಗಳಷ್ಟು ಬೆಲೆ ಬಾಳುತ್ತದಂತೆ.ಇದನ್ನು ರಚಿಸಿದವರು ಇಂಗ್ಲೆಂಡಿನಲ್ಲಿ ನೆಲೆಸಿದ್ದ ಬೆಂಜೆಮಿನ್ ವೆಸ್ಟ್ ಎಂಬ ಚಿತ್ರಕಾರರು. ಇಂಗ್ಲೆಂಡಿನಲ್ಲಿ ರಾಯಲ್ ಅಕ್ಯಾಡಮಿ ಆಫ್ ಆರ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದವರು.ಆಗಿನ ಇಂಗ್ಲೆಂಡ್ ದೊರೆಗಳ ಆಪ್ತಮಿತ್ರರಾಗಿದ್ದವರು.
ಅವರ ಚಿತ್ರಗಳು ಲಕ್ಷ ಗಟ್ಟಲೇ ಬೆಲೆಯನ್ನು ಗಳಿಸುತ್ತಿದ್ದವು.ಆಶ್ಚರ್ಯವೇನೆಂದರೆ ಬೆಂಜೆಮಿನ್ನರು ಯಾವುದೇ ಕಲಾ ಶಿಲೆಯ ವಿದ್ಯಾರ್ಥಿಯಾಗಿ ಕಲೆಯನ್ನು ಕಲಿತವರಲ್ಲ. ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ ಯಾವುದೇ ಚಿತ್ರಕಲಾ ಶಾಲೆಗೂ ಹೋಗದೇ ಯಾರಿಂದಲೂ ಪಾಠ ಹೇಳಿಸಿಕೊಳ್ಳದೇ ಇಷ್ಟೊಂದು ಪ್ರಖ್ಯಾತ ಚಿತ್ರಕಾರರಾಗಲು ಸ್ಪೂರ್ತಿ ಯಾರೆಂದು ಕೇಳಿದಾಗ ನನ್ನ ಹೆತ್ತ ತಾಯಿ ನನಗೆ ಕೊಟ್ಟ ಒಂದು ಸಿಹಿ ಮುತ್ತು.ನಾನು ಈ ಮಟ್ಟಕ್ಕೆ ಏರಲು ಕಾರಣವಾಯಿತು! ಎಂದರಂತೆ.ಅದು ಹೇಗೆಂದು ಕೇಳಿದಾಗ ಅವರು ಹೇಳಿಕೊಂಡ ಘಟನೆ ಹೀಗಿದೆ.
ಬಡ ಕುಟುಂಬದವರಾದ ಅವರ ತಾಯಿ ಸಂಸಾರ ನಿರ್ವಹಣೆಗಾಗಿ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡಬೇಕಾಗಿತ್ತಂತೆ.ಒಮ್ಮೆ ಯಾವುದೋ ಮನೆಯವರು ಆಕೆಗೆ ಬರೆಯಲು ಉಪಯೋಗಿಸುವ ಕಪ್ಪು,ನೀಲಿ,ಕೆಂಪು ಮತ್ತು ಹಸಿರು ಶಾಯಿಯ ಶೀಷೆಗಳನ್ನು ತರಲಿಕ್ಕೆ ಕಳುಹಿಸಿದ್ದರಂತೆ.ಅವನ್ನೆಲ್ಲ್ಲಾ ಆಕೆ ಕೊಂಡು ಕೊಳ್ಳುವಷ್ಟರಲ್ಲಿ ಕತ್ತಲಾಗಿತ್ತು. ಮರುದಿನ ಅವನ್ನು ಕೊಂಡೊಯ್ದರಾಯಿತು ಎಂದುಕೊಂಡು ಆಕೆ ಅವನ್ನೆಲ್ಲವನ್ನು ಮನೆಗೆ ತಂದಿಟ್ಟರು.
ಆಕೆಗೆ ಬೆಂಜಮಿನ್ ವೆಸ್ಟ್ ಒಬ್ಬ ಏಳೆಂಟು ವರ್ಷದ ಮಗ ಮತ್ತು ಎರಡು ವರ್ಷ ವಯಸ್ಸಿನ ಸ್ಯಾಲಿ ಎಂಬ ಹೆಣ್ಣುಮಗಳು ಇದ್ದರು.ಮರುದಿನ ಮುಂಜಾನೆ ಆಕೆ ಕೆಲಸಕ್ಕೆ ಹೋಗುವಾಗ ಬಣ್ಣ ಬಣ್ಣದ ಶಾಯಿಯ ಶೀಷೆಗಳನ್ನು ತೆಗೆದುಕೊಂಡು ಹೋಗಲು ಮರೆತುಬಿಟ್ಟರು.
ಆಕೆಯ ಮಗ ಬೆಂಜಮಿನನಿಗೆ ನಿನ್ನ ತಂಗಿ ಸ್ಯಾಲಿಯನ್ನು ನೀನು ನೋಡಿಕೋ ಎಂದು ಹೇಳಿ ಹೋದರು . ತಂಗಿಯನ್ನು ಆಟವಾಡಿಸುತ್ತಿದ್ದ ಬೆಂಜಮಿನ್ನನ ಕಣ್ಣಿಗೆ ಬಣ್ಣ ಬಣ್ಣದ ಶಾಯಿಯ ಶೀಷೆಗಳು ಕಂಡವು.ಆತ ಅವನ್ನು ತನಗೆ ತಿಳಿದಂತೆ ಮಿಶ್ರಣ ಮಾಡಿದ.ಅವನ್ನು ಬಳಸಿಕೊಂಡು ತನ್ನ ಮುದ್ದು ತಂಗಿ ಸ್ಯಾಲಿಯ ಚಿತ್ರವನ್ನು ಗೋಡೆಯ ಮೇಲೆ ಬಿಡಿಸತೊಡಗಿದ.ಹಾಗೆ ಮಾಡುವಾಗ ಮನೆಯ ನೆಲದ ಮೇಲೆ,ಅಲ್ಲಿದ್ದ ಕುರ್ಚಿ ,ಮೇಜು , ಮಂಚಗಳ ಮೇಲೆ ಮತ್ತು ಗೋಡೆಯ ಮೇಲೆ ಬಣ್ಣ ಚೆಲ್ಲಾಪಿಲ್ಲಿಯಾಗಿ ಚೆಲ್ಲಿತ್ತು.ನೋಡಲು ಅಲ್ಲೇನೋ ರಾದ್ಧಾಂತವಾದಂತೆ ಕಾಣುತ್ತಿತ್ತು!
ಬೆಂಜಮಿನರ ತಾಯಿ ಮನೆಗೆ ಬಂದಾಗ,ಮನೆಯ ನೆಲ,ಗೋಡೆಗಳು,ಮೇಜು, ಮಂಚಗಳ ಮೇಲೆ ಬಿದ್ದಿದ್ದ ಬಣ್ಣದೋಕುಳಿಯ ರಾದ್ಧಾಂತವನ್ನು ನೋಡಿದರು.ಬೇರೆ ಯಾರಾದರೂ ತಾಯಿ ಆ ರಾದ್ದಂತವನ್ನು ನೋಡಿ ಏನು ಮಾಡುತ್ತಿದ್ದರೋ ಏನೋ ? ಗೊತ್ತಿಲ್ಲ ? ಆದರೆ ಆಕೆ ಮಗನ ಮೇಲೆ ಸಿಟ್ಟುಗೊಳ್ಳಲಿಲ್ಲ. ಮಗನಿಗೆ ಪೆಟ್ಟು ಕೊಡಲಿಲ್ಲ.ಗೋಡೆಯ ಮೇಲೆ ಮುಸುಕು ಮುಸುಕಾಗಿ ಬಿಡಿಸಲಾಗಿದ್ದ ಮಗಳು ಸ್ಯಾಲಿಯ ಚಿತ್ರವನ್ನು ನೋಡಿದರು.ಮಗನನ್ನು ಹತ್ತಿರ ಕರೆದು ಈ ಚಿತ್ರವನ್ನು ಬಿಡಿಸಿದ್ದು ನೀನೇನಾ ? ಎಂದು ಕೇಳಿದರು.ಆತ ಅಂಜುತ್ತಲೇ ಹೌದೆಂದ.ತಕ್ಷಣ ತಾಯಿ ಮಗನನ್ನು ತಬ್ಬಿಕೊಂಡರು ಕೆನ್ನೆಗೆ ಮುತ್ತು ಕೊಟ್ಟರು.ಎಷ್ಟು ಅದ್ಭುತವಾಗಿ ನಿನ್ನ ತಂಗಿಯ ಚಿತ್ರವನ್ನು ಬಿಡಿಸಿದ್ದೀಯ ಎಂದು ಉದ್ಗಾರ ತೆಗೆದರು !
ಮುಂದೊಂದು ದಿನ ಹೆಸರಾಂತ ಚಿತ್ರಕಾರನಾದ ಬೆಂಜಮಿನ್ ವೆಸ್ಟ್ ಅಂದು ಹುಟ್ಟಿಕೊಂಡ ! ಆ ಮುತ್ತು ಮತ್ತು ಪ್ರೋತ್ಸಾಹದ ಮಾತುಗಳೇ ಅತನಿಗೆ ಸ್ಫೂರ್ತಿ ಎಂದು ಬೆಂಜಮಿನ್ನರು ಹೇಳಿ ಕೊಂಡರಂತೆ ! ಅಂದಿನ ಪರಿಸ್ಥಿತಿಯಲ್ಲಿ ಬೆಂಜಮಿನರ ತಾಯಿಯ ಸ್ಥಿತಿಯಲ್ಲಿ ನಾವಿದ್ದಿದ್ದರೆ ನಾವೇನು ಮಾಡುತ್ತಿದ್ದೆವು ? ಮುಂದೊಂದು ದಿನ ಪ್ರಖ್ಯಾತನಾಗುವ ಚಿತ್ರಕಾರನನ್ನು ಹುಟ್ಟು ಹಾಕುತ್ತಿದೆವೋ ಅಥವಾ ಮಗನ ಮೇಲೆ ಸಿಟ್ಟು ಮಾಡಿಕೊಂಡು,ಅವನಿಗೊಂದು ಪೆಟ್ಟುಕೊಟ್ಟು ಆವನನ್ನು ಅಳಿಸಿ,ಅವನ ಸ್ತುಪ್ತ ಪ್ರತಿಭೆಯನ್ನು ಅಳಿಸಿ ಹಾಕುತ್ತಿದ್ದೆವೋ ? ತಿಳಿಯದು.
ಆದರೆ ಈ ತಾಯಿಯ ಒಂದು ಮುತ್ತು ,ಶ್ಲಾಘನೀಯ ಮಾತುಗಳು ದೊಡ್ಡ ಚಿತ್ರಕಾರನಾಗಿ ಮಾಡಿತು. ಇಂದಿಗೂ ಎಲ್ಲರ ಮನಸ್ಸಿನಲ್ಲೂ ಚಿರಪರಿಚಿತರಾಗಿ ಉಳಿಯುವಂತೆ ಮಾಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
