ಶಿಬಿ ಚಕ್ರವರ್ತಿಯ ತ್ಯಾಗ ಮನೋಭಾವ.
ಶಿಬಿ ಚಕ್ರವರ್ತಿಯ ಧರ್ಮಾಚರಣೆಯಿಂದ ಬಹಳ ಉತ್ತಮ ರೀತಿಯಲ್ಲಿ ತನ್ನ ರಾಜ್ಯವನ್ನು ಆಳುತ್ತಿದ್ದನು.ಅವನು ತ್ಯಾಗಕ್ಕೆ ಪ್ರಸಿದ್ಧನಾಗಿದ್ದನು.ಇವನ ಪ್ರಸಿದ್ಧಿಯು ದೇವತೆಗಳನ್ನು ತಲುಪಿತು. ಇವನ ತ್ಯಾಗವನ್ನು ಪರೀಕ್ಷಿಸಬೇಕೆಂದು ಯಮಧರ್ಮ ಮತ್ತು ಅಗ್ನಿದೇವನು ಒಂದು ತಂತ್ರವನ್ನು ಹೂಡಿದನು.ಒಂದು ದಿನ ಶಿಬಿ ಚಕ್ರವರ್ತಿಯ ರಾಜ್ಯಸಭೆಯಲ್ಲಿದ್ದಾಗ ಒಂದು ಪಾರಿವಾಳವು ಶಿಬಿ ಚಕ್ರವರ್ತಿಯ ಸಿಂಹಾಸನದ ಬಳಿ ಹಾರಿ ಹೋಗಿ, “ ಮಹಾಪ್ರಭೂ, ಒಂದು ದೊಡ್ಡ ಗಿಡುಗವು ನನ್ನನ್ನು ಹಿಡಿದು ತ್ತಿನ್ನಲೆಂದು ಅಟ್ಟಿಸಿಕೊಂಡು ಬರುತ್ತಿದೆ.ನಾನು ಪ್ರಾಣ ಭಯದಿಂದ ತತ್ತರಿಸಿ ಹೋಗಿದ್ದೇನೆ. ಆದುದರಿಂದ ದಯಾಳುಗಳಾದ ತಾವು ನನಗೆ ಆಶ್ರಯ ಕೊಟ್ಟು ನನ್ನನ್ನು ರಕ್ಷಿಸಿರಿ” ಎಂದು ಮೊರೆಯಿಟ್ಟಿತು.
ಶಿಬಿ ಚಕ್ರವರ್ತಿಯು ಕನಿಕರದಿಂದ ಆ ಪಕ್ಷಿಯನ್ನು ಎತ್ತಿಕೊಂಡು ತನ್ನ ತೊಡೆಯ ಮೇಲೆ ಇರಿಸಿಕೊಂಡು ಅದರ ತಲೆಯನ್ನು ಸವರತೊಡಗಿದನು. ಪಾರಿವಾಳವು ಶಿಬಿ ಚಕ್ರವರ್ತಿಯ ಔದರ್ಯವನ್ನು ಮೆಚ್ಚಿ ಅವನ ತೊಡೆಯ ಮೇಲೆ ನಿರ್ಭಯದಿಂದ ಕುಳಿತುಕೊಂಡಿತು. ಅಷ್ಟರಲ್ಲಿ ಒಂದು ಗಿಡುಗವು ಹುಡುಕುತ್ತಾ ಅಲ್ಲಿಗೆ ಬಂದಿತು.
ಪಾರಿವಾಳವು ಚಕ್ರವರ್ತಿಯ ತೊಡೆಯ ಮೇಲೆ ಕುಳಿತಿರುವುದನ್ನು ಕಂಡಿತು.ಅದು ಚಕ್ರವರ್ತಿಯ ಬಳಿ ಹಾರಿ “ ಮಹಾಪ್ರಭೂ, ನಾನು ನನ್ನ ಆಹಾರಕ್ಕಾಗಿ ಈ ಪಾರಿವಾಳವನ್ನು ಅಟ್ಟಿಸಿಕೊಂಡು ಇಲ್ಲಿಯವರೆಗೂ ಬಂದಿದ್ದೇನೆ. ನಾನು ಹಸಿವಿನಿಂದ ಬಳಲಿದ್ದೇನೆ. ನಿಮ್ಮ ತೊಡೆಯ ಮೇಲೆ ಕುಳಿತಿರುವ ಪಕ್ಷಿಯೂ ನನ್ನ ಆಹಾರವಾಗಿದೆ.ಅದನ್ನು ದಯವಿಟ್ಟು ನನಗೆ ಕೊಟ್ಟು ನನ್ನನ್ನು ಹಸಿವಿನ ಸಂಕಟದಿಂದ ಮುಕ್ತಗೊಳಿಸಿ” ಎಂದು ಪ್ರಾರ್ಥಿಸಿತು.
ಆಗ ಶಿಬಿ ಚಕ್ರವರ್ತಿಯು “ ಎಲೈ ಗಿಡುಗನೇ, ನಾನು ಈ ಪಕ್ಷಿಗೆ ಅಭಯವನ್ನಿತ್ತಿದ್ದೇನೆ. ಆದುದರಿಂದ ಏನೇ ಆದರೂ ಸರಿ ಅದನ್ನು ನಿನಗೆ ಬಿಟ್ಟು ಕೊಡಲಾರೆ” ಎಂದನು.ಆಗ ಗಿಡುಗವು “ಚಕ್ರವರ್ತಿಯೇ, ನೀನು ಧರ್ಮಾಚರಣೆಗೆ ಮತ್ತು ತ್ಯಾಗಕ್ಕೆ ಪ್ರಸ್ಸಿದ್ದನಾಗಿರುವೆ. ನಿನ್ನ ಬಳಿ ಹಸಿದು ಬಂದವರಿಗೆ ನ್ಯಾಯವಾಗಿ ಸಿಗಬೇಕಾದ ಆಹಾರವು ಸಿಗದಂತೆ ಮಾಡುವುದು ನ್ಯಾಯವೇ ?” ಎಂದು ಪ್ರಶ್ನಿಸಿತು.
ಆಗ ಶಿಬಿ ಚಕ್ರವರ್ತಿಯ ಒಂದೆರಡು ನಿಮಿಷ ಆಲೋಚಿಸಿದನು.ಪಾರಿವಾಳಕ್ಕೆ ಅಭಯವನ್ನಿತ್ತು ಆಶ್ರಯ ನೀಡಿ ಬಳಿಕ ಅದನ್ನು ಶತ್ರುವಿನ ಕೈಗೊಪ್ಪಿಸುವುದು ನೀತಿ ಬಾಹಿರವಾಗಿದೆ.ಆದರೆ ಹಸಿದು ಬಂದಿರುವ ಪಕ್ಷಿಯ ಆಹಾರವನ್ನು ತಪ್ಪಿಸಿದಂತೆಯೂ ಆಗಿದೆ.ಈಗೇನೂ ಮಾಡಲಿ ? ಎನ್ನುವ ಉಭಯ ಸಂಕಟದಲ್ಲಿ ಸಿಲುಕಿದನು.
ತಕ್ಷಣ ಗಿಡುಗನನ್ನು ಕುರಿತು “ಎಲೈ ಗಿಡುಗನೇ, ನೀನು ಹಸಿದಿರುವೆಯಲ್ಲವೇ ? ನಿನ್ನ ಹಸಿವನ್ನು ನೀಗಿಸಿದರೆ ಆಯಿತಲ್ಲವೇ ? ಅದಕ್ಕಾಗಿ ಬೇಕಾದಷ್ಟು ಮಾಂಸವನ್ನು ಕೊಡಿಸುವೆ” ಎಂದನು ? ಗಿಡುಗವು ತನಗೆ ಪಾರಿವಾಳವನ್ನೇ ಬಿಟ್ಟು ಕೊಡಬೇಕೆಂದು ಪಟ್ಟು ಹಿಡಿಯಿತು.ಕೊನೆಗೆ ಶಿಬಿಯು “ಎಲೈ ಗಿಡುಗನೆ, ಅಭಯ ನೀಡಿದ ಪಕ್ಷಿಯನ್ನು ನಿನಗೆ ಖಂಡಿತವಾಗಿಯೂ ಬಿಟ್ಟು ಕೊಡಲಾರೆ.
ಅದು ಧರ್ಮ ಮತ್ತು ನ್ಯಾಯ ಬಾಹಿರವಾಗಿದೆ. ನಿನ್ನ ಹಸಿವನ್ನು ನೀಗಿಸಲು ಪಾರಿವಾಳದ ತೂಕದಷ್ಟೇ ಮಾಂಸವನ್ನು ನನ್ನ ದೇಹದಿಂದ ಕಡಿದು ನಿನಗೆ ಒಪ್ಪಿಸುವೆ” ಎಂದನು.ಇದಕ್ಕೆ ಗಿಡುಗವು ಒಪ್ಪಿಕೊಂಡಿತು.
ರಾಜಸಭೆಯು ಈ ಅನಿರೀಕ್ಷಿತ ಘಟನೆಯನ್ನು ಕಾತರದಿಂದ ವೀಕ್ಷಿಸುತ್ತಿತ್ತು. ಚಕ್ರವರ್ತಿಯು ಒಂದು ಖಡ್ಗವನ್ನು ಮತ್ತು ಒಂದು ತಕ್ಕಡಿಯನ್ನು ತೆರಲು ಸೇವಕರಿಗೆ ಅಜ್ಞಾಪಿಸಿ ಅವುಗಳನ್ನು ತರಿಸಿಕೊಂಡನು.ತಕ್ಕಡಿಯ ಒಂದು ತೆಟ್ಟೆಯಲ್ಲಿ ಪಾರಿವಾಳವನ್ನು ಇಟ್ಟು ಅಷ್ಟೇ ತೂಕದ ಮಾಂಸವನ್ನು ಇನ್ನೊಂದು ತಟ್ಟೆಯಲ್ಲಿ ಹಾಕುವುದಕ್ಕಾಗಿ ತನ್ನ ಎಡ ತೊಳನ್ನು ತುಂಡರಿಸಲು ಖಡ್ಗವನ್ನು ಎತ್ತಿದನು. ಇಡೀ ರಾಜ್ಯ ಸಭೆಯಲ್ಲಿ ಕೋಲಾಹಲ ಎದ್ದಿತು.ಆದರೆ ಚಕ್ರವರ್ತಿಯು ಇನ್ನೇನು ತನ್ನ ತೊಳನ್ನು ತುಂಡರಿಸ ಬೇಕೆನ್ನುವಷ್ಟರಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯಿತು.
ಗಿಡುಗನು ಯಮಧರ್ಮನಾಗಿಯೂ , ಪಾರಿವಾಳವು ಅಗ್ನಿದೇವನಾಗಿಯೂ ಪ್ರತ್ಯಕ್ಷರಾದರು.ಚಕ್ರವರ್ತಿಯು ಭಕ್ತಿಯಿಂದ ತಲೆಬಾಗಿ ದೇವತೆಗಳಿಗೆ ವಂದಿಸಿದನು. ಇಬ್ಬರೂ ದೇವತೆಗಳು ಚಕ್ರವರ್ತಿಯ ತ್ಯಾಗ ಮೋನೋಬಾವದ ,ಧರ್ಮ ಪರಿಪಾಲನೆಯ ಪ್ರವೃತ್ತಿಯನ್ನು ಮೆಚ್ಚಿ,ಅವನು ದೀರ್ಘಕಾಲ ಸುಖವಾಗಿ ಬಾಳಲಿ ಎಂದು ಹರಸಿ ಅಂತರ್ಧಾನರಾದರು.
ಯಾವಾಗಲೂ ಧರ್ಮವನ್ನು ಪಾಲಿಸಿ,ತ್ಯಾಗ ಮನೋಭಾವವನ್ನು ಮೈಗೂಡಿಸಿಕೊಳ್ಳಿರಿ,ನ್ಯಾಯೋಚಿತವಾಗಿ ನೆಡೆಯಿರಿ.ಆಗ ಧರ್ಮವೇ ನಿಮ್ಮನ್ನು ಕಾಪಾಡುತ್ತದೆ.
ಅದಕ್ಕೆ ಹೇಳಿರುವುದು “ಧರ್ಮೋ ಧರ್ಮೋತಿ ರಕ್ಷಿತಃ” ಇದರ ಅರ್ಥ ನಾವು ಧರ್ಮದ ಮಾರ್ಗದಲ್ಲಿ ನೆಡೆದರೆ ,ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
