ವಿಕ್ರಮ ಬೇತಾಳನ ಕಥೆ:ಯಾರು ಹಿತವರು ಈ ಮೂವರೊಳಗೆ..!
ವಿಕ್ರಮನ ಬೆನ್ನೇರಿದ ಬೇತಾಳ ಒಂದು ಕಥೆಯನ್ನು ಹೇಳಲು ಶುರು ಮಾಡುತ್ತದೆ..
“ವಿಕ್ರಮ, ಒಂದಾನೊಂದು ಕಾಲದಲ್ಲಿ ಒಂದೂರಿನಲ್ಲಿ ಒಬ್ಬ ಪುರೋಹಿತನಿಗೆ ಮಂದಾರವತಿ ಎಂಬ ಮದುವೆ ವಯಸ್ಸಿನ ಸುಂದರ ಕುವರಿ ಇದ್ದಳು. ಪುರೋಹಿತ ದಂಪತಿಗಳಿಗೆ ಆಕೆಯ ವಿವಾಹದ ಚಿಂತೆ . ಒಬ್ಬ ಯೋಗ್ಯ ವರನನ್ನು ಹುಡುಕಿ, ತಮ್ಮ ಮಗಳ ಮದುವೆ ಮಾಡಬೇಕೆಂಬುದು ದಂಪತಿಗಳ ಆಸೆಯಾಗಿತ್ತು”
“ಹೀಗಿರಲು ಒಂದುದಿನ ಅವರ ಮನೆಗೆ ಮೂರು ಯುವಕರು ಬಂದು ಮಂದಾರವತಿಯನ್ನು ನಮಗೆ ಮದುವೆಮಾಡಬೇಕೆಂದು ಪಟ್ಟು ಹಿಡಿದರು. ಮೂವರೂ ಸಹ ಅವಳನ್ನು ಮದುವೆ ಯಾಗಲು ದಕ್ಷರಾಗಿದ್ದರು.. ಸಾಲದೆಂಬಂತೆ ಮೂವರೂ ಯುವಕರು ತಮ್ಮ ಬದಲಾಗಿ ಬೇರೆ ಯಾರಿಗೇ ಮಂದಾರವತಿಯನ್ನು ಮದುವೆ ಮಾಡಿದ್ದೆ ಆದಲ್ಲಿ ತಾವು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು.. ಹೀಗಾಗಿ, ದಂಪತಿಗಳು ಸಂಕಟಕ್ಕೆ ಸಿಲುಕಿಕೊಂಡರು ದಂಪತಿಗಳು ಏನೂ ತೋಚದೆ ಯಾರಿಗೂ ಮಂದಾರವತಿಯನ್ನು ಮದುವೆ ಮಾಡದೆ ಆಕೆಯನ್ನು ಕುವರಿಯಾಗಿಯೇ ಇಡಲು ತೀರ್ಮಾನಿಸಿದರು.”
“ತಮ್ಮ ಒಬ್ಬಳೇ ಮಗಳ ಜೀವನ ಈ ಪರಿಸ್ತಿತಿ ತಲುಪಿತಲ್ಲ ಎಂಬ ಕೊರಗಲ್ಲಿ ಪುರೋಹಿತ ದಂಪತಿಗಳಿಬ್ಬರೂ ಕೊರಗಿ ಪ್ರಾಣವನ್ನು ಬಿಟ್ಟರು. ತನ್ನ ಪ್ರೀತಿ ಪಾತ್ರ ಪೋಷಕರ ಅಗಲುವಿಕೆಯನ್ನು ತಾಳಲಾರದ ಮಂದಾರವತಿ ತಾನೂ ಕೊರಗಿ ಕೊನೆಗೊಂದು ದಿನ ತಾನೂ ಪ್ರಾಣಬಿಟ್ಟಳು”
ಮುಂದೆ ಬೇತಾಳವು “ಮಂದಾರವತಿಯನ್ನು ಪ್ರೀತಿಸಿದ ಮೂವರು ಯುವಕರು ಆಕೆಯನ್ನು ಕಳೆದುಕೊಂಡ ದುಃಖ ತಾಳಲಾರದೇ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜೀವನ ಕಳೆದುಕೊಂಡರು. ಮೂವರೂ ಸೇರಿ ಆಕೆಯ ಶವವನ್ನು ಸುಟ್ಟರು. ಮೊದಲನೆಯವನು ಶವದ ಬೂದಿಯನ್ನು ತೆಗೆದುಕೊಂಡು ಗಂಗೆಯಲ್ಲಿ ವಿಸರ್ಜನೆ ಮಾಡಲು ಹೊರಟ. ಎರಡನೆಯವನು ಆಕೆಯ ಶವದ ಬೂದಿಯ ಮೇಲೆ ಮಲಗಿ ಅನ್ನಹಾರಗಳನ್ನು ತ್ಯಜಿಸಿದ. ಮೂರನೆಯವನು, ಹುಚ್ಚನಾಗಿ ಊರೂರು ಅಲೆದ.”
“ಮುಂದೆ,ಮೂರನೆಯವನು ಅಲೆಯುತ್ತ ಒಬ್ಬ ಸಿದ್ದಿಯ ಆಶ್ರಮ ಬಳಿ ತಲುಪಿದ. ಸಿದ್ದಿ ಈತನ ಪರಿಸ್ತಿತಿಗೆ ಮರುಗಿ ತನ್ನಲ್ಲಿದ್ದ ಮಂತ್ರ ಪುಸ್ತಕದ ಸಹಾಯದಿಂದ ಆತನನ್ನು ಮರಳಿ ಸಹಜ ಸ್ಥಿತಿಗೆ ತಂದ. ಸಿದ್ದಿಯ ಮನೆಯಲ್ಲಿಯೇ ಉಳಿದುಕೊಂಡ ಯುವಕ, ಅದೊಂದು ಮಂತ್ರ ಪುಸ್ತಕವೆಂದು ಮತ್ತು ಸತ್ತವರನ್ನೂ ಮರುಬದುಕಿಸುವ ವಿದ್ಯೆಯೂ ಅದರಲ್ಲಿರುವುದಾಗಿ ತಿಳಿದುಬಂದಾಗ ಒಂದು ರಾತ್ರಿ ಆ ಪುಸ್ತಕವನ್ನು ಕದ್ದು ಆಶ್ರಮದಿಂದ ನೇರವಾಗಿ ಮಂದಾರವತಿಯ ಶವವನ್ನು ಸುಟ್ಟಿದ್ದ ಸ್ಥಳಕ್ಕೆ ಬಂದಾಗ ಮೊದಲನೆಯವನು ಆಕೆಯ ಅಸ್ತಿಯನ್ನು ವಿಸರ್ಜನೆ ಮಾಡಿ ಪವಿತ್ರ ಗಂಗಾಜಲದೊಂದಿಗೆ ಹಿಂದಿರುಗಿದ್ದ.
ಎರಡನೆಯವನು ಅಲ್ಲಿಯೇ ಬೂದಿಯಮೆಲೆ ಮಲಗಿದ್ದ. ಮೂರನೆಯವನು ಪುಸ್ತಕದ ಸಹಾಯದಿಂದ ಮಂತ್ರ ವಿದ್ಯೆಯನ್ನು ಕಲಿತ ಮಂದಾರವತಿಯ ಶವದ ಬೂದಿಯಮೆಲೆ ಮಂತ್ರದೊಂದಿಗೆ ಗಂಗಾಜಲವನ್ನು ಚಿಮುಕಿಸಿದ. ಆಶ್ಚರ್ಯವಾಗಿ ಮಂದಾರವತಿ ನಿದ್ದೆಯಿಂದ ಎದ್ದವಳಂತೆ ಎದ್ದು ಮೂವರ ಮುಂದೆ ನಿಂತಿದ್ದಳು.”
ಆಗ “ಮೂವರೂ ಯುವಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ. ಪುನಃ ಹಳೆಯ ಸಮಸ್ಯೆಯೇ ಈ ಮೂವರನ್ನು ಕಾಡಿತು. ಮಂದಾರವತಿ ಯಾರನ್ನು ಮದುವೆಯಾಗಬೇಕು? ಎಂಬುದು.”
ಇಷ್ಟು ಹೇಳಿ ಬೇತಾಳವು ರಾಜನಲ್ಲಿ “ರಾಜಾ, ನೀನು ಬಹಳ ಬುದ್ದಿವಂತ ಎಂದು ಕೇಳಿದ್ದೇನೆ. ನಿಮ್ಮ ರಾಜ್ಯದ ಜನರ ಸಮಸ್ಯೆಗಳನ್ನು ಸುಲಭದಲ್ಲಿ ಬಗೆಹರಿಸುವೆ ಎಂಬುದನ್ನೂ ಕೇಳಿದ್ದೇನೆ. ಇಂತಹ ಸಮಸ್ಯೆ ನಿನ್ನ ರಾಜ್ಯದಲ್ಲಿ ಬಂದಿದ್ದಲ್ಲಿ ಏನು ಮಾಡುತ್ತಿದ್ದೆ? ನೀನು ಈ ಸಮಸ್ಯೆಗೆ ಸಮಾಧಾನಕರ ಉತ್ತರ ನೀಡಬೇಕು” ಎಂದಿತು.
ಆಗ ರಾಜ ವಿಕ್ರಮನು “ಒಂದು ಹೆಣ್ಣಿಗೆ ಬಾಲ್ಯದಲ್ಲಿ ತಂದೆಯ ಆಶ್ರಯ, ಯವ್ವನದಲ್ಲಿ ಗಂಡನ ಆಶ್ರಯ ಮತ್ತು ಮುಪ್ಪಿನಲ್ಲಿ ಮಗನ ಆಶ್ರಯ ಸಿಗಬೇಕು. ಮಂದಾರವತಿ ಸತ್ತ ಮೇಲೆ ಮಂತ್ರ ಶಕ್ತಿಯಿಂದ ಮಂದಾರವತಿಗೆ ಮರುಜೀವ ಕರುಣಿಸಿದ ಮೂರನೇ ಯುವಕ ಆಕೆಯ ಜನ್ಮದಾತನಾದ, ಹಾಗಾಗಿ ಆತ ಮಂದಾರವತಿಯ ತಂದೆಯ ಸ್ಥಾನ ಸ್ವೀಕರಿಸಬೇಕು. ಆಕೆಯ ಅಸ್ತಿಗಳನ್ನು ಗಂಗೆಯಲ್ಲಿ ವಿಸರ್ಜಿಸಿ ಮಂದಾರವತಿಯ ಅಂತ್ಯಸಂಸ್ಕಾರಗಳನ್ನು ನೆರವೇರಿಸಿ ಸಾವಿನ ನಂತರದ ಮರುಹುಟ್ಟಿಗೆ ಕಾರಣನಾದ ಮೊದಲನೇ ಯುವಕ ಆಕೆಯ ಮಗನ ಸ್ಥಾನಕ್ಕೆ ಯೋಗ್ಯನಾದ. ಜೀವನದ ಹಂಗು ತೊರೆದು ಕಳೆದುಕೊಂಡ ಆಕೆಯ ಪ್ರೀತಿಯ ನೆನೆಯುತ್ತ ಆಕೆಗಾಗಿಯೇ ಬದುಕಿ ಆಕೆಗಾಗಿಯೇ ಸಾಯುವುದಾಗಿ ನಿಶ್ಚಯಿಸಿದ ಎರಡನೇ ಯುವಕನೇ ಮಂದಾರವತಿಯ ಪತಿಯ ಸ್ಥಾನ ವರಿಸಲು ಯೋಗ್ಯನಾದ.
“ಕಷ್ಟದ ಸಮಸ್ಯೆಗೆ ಸುಲಭದಲ್ಲಿ ಉತ್ತರ ನೀಡಿದ ವಿಕ್ರಮನ ಜಾಣ್ಮೆಗೆ ಮೆಚ್ಚುಗೆ ತೋರುತ್ತ, ಬೇತಾಳ “ಭಲಾ ವಿಕ್ರಮ ಭಲಾ, ಅಭೂತಪೂರ್ವ ಉತ್ತರ. ನಿಜಕ್ಕೂ ನಿನ್ನ ಜಾಣ್ಮೆಗೆ ಮೆಚ್ಚಿದೆ.”ಎಂದು ಹೇಳಿ ಹಾರಿ ಹೋಗುತ್ತದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
