ದೇವರನ್ನು ನಂಬುವವರನ್ನು ನಾವೂ ನಂಬಬಹುದು.
ಅಸಕ್ತಿಕರವಾದ ಘಟನೆಯೊಂದು ಇಲ್ಲಿದೆ.ನಮ್ಮ ನಂಬಿಕೆಗಳು ಏನೇ ಇರಲಿ ಆದರೆ ಇಲ್ಲಿರುವುದು ದೇವರನ್ನು ನಂಬುವವರು ಮತ್ತು ನಂಬದವರ ನಡುವೆ ನೆಡೆಯಿತೆನ್ನಲಾದ ಪುಟ್ಟ ಘಟನೆ. ಫ್ರಾನ್ಸ್ ಪಾರ್ಲಿಮೆಂಟಿನ ಹಿರಿಯ ಸಾದಸ್ಯರೊಬ್ಬರು ಪ್ರವಾಸದಲ್ಲಿದ್ದರು. ರಾತ್ರಿಯಾಗಿತ್ತು ಯಾವುದೋ ಒಂದು ಸಣ್ಣ ನಗರ ಸಿಕ್ಕಿತು.ಅಲ್ಲೊಂದು ಪುಟ್ಟ ಹೋಟೆಲ್ ಕಂಡಿತು.ರಾತ್ರಿ ತಂಗಿದ್ದು ಮರುದಿನ ಪ್ರಯಾಣ ಮುಂದುವರಿಸಿದರಾಯಿತು ಎಂದುಕೊಂಡು ಹಿರಿಯರು ಹೋಟೆಲ್ ಪ್ರವೇಶಿಸಿದರು.
ಆ ನಡು ರಾತ್ರಿಯಲ್ಲಿ ಹೋಟೆಲ್ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಕಿರಿಯ ಗುಮಾಸ್ತರು ಈ ಹಿರಿಯರನ್ನು ಸ್ವಾಗತಿಸಿದರು. ಅವರಿಗೆ ಕೊಠಡಿಯನ್ನು ಕೊಟ್ಟರು.ಕೊಠಡಿಯ ಬಾಡಿಗೆಯನ್ನು ಮುಂಗಡವಾಗಿಯೇ ಪಾವತಿಸುವುದು.ಅಲ್ಲಿನ ಪದ್ದತಿ. ಹಿರಿಯರು ಕೊಠಡಿಯ ಬಾಡಿಗೆ ಎಷ್ಟೆಂದು ಕೇಳಿದರು.ಗುಮಾಸ್ತರು ಹೇಳಿದಷ್ಟು ಬಾಡಿಗೆಯನ್ನು ತಕ್ಷಣ ಪಾವತಿಸಿದರು.ಗುಮಾಸ್ತರು ಬಾಡಿಗೆ ಸ್ವೀಕರಿಸುವಾಗ ‘ ಈ ಹಣಕ್ಕೆ ನಾಳೆ ಬೆಳಗ್ಗೆ ರಸೀತಿ ಕೊಡುವೆ ,ರಸೀತಿ ಕೊಡುವ ಗುಮಾಸ್ತ ಈಗ ಇಲ್ಲಿಲ್ಲ.ಬೆಳಗ್ಗೆ ಬರುತ್ತಾರೆ.ಆಗ ರಸೀತಿ ಕೊಡುಸಿಕೊಡುತ್ತೇನೆ.ಈಗ ಬೇಕಿದ್ದರೆ ಒಂದು ಕಾಗದದಲ್ಲಿ ಹಣ ಸಂದಾಯವಾಗಿದೆಯೆಂದು ಬರೆದು ನಾನೇ ಸಹಿ ಮಾಡಿ ಕೊಡುತ್ತೇನೆ ಆಗಬಹುದೇ ?’ಎಂದು ಕೇಳಿದರು.
ಹಿರಿಯರು ಗಟ್ಟಿಯಾಗಿ ನಗುತ್ತಾ ‘ ನಾನು ಬೆಳಗ್ಗೆ ಬೇಗನೇ ಹೊರಟು ಬಿಡುತ್ತೇನೆ.ಹಾಗಾಗಿ ನನಗೆ ರಸೀತಿಯ ಅವಶ್ಯವಿಲ್ಲ. ನಾನು ಹಣ ಕೊಟ್ಟಿರುವುದನ್ನು,ನೀವು ಹಣ ಸ್ವೀಕರಿಸುವುದನ್ನು ಆ ದೇವರು ನೋಡಿರುತ್ತಾನೆ.ಆತನೇ ಸಾಕ್ಷಿಯಾಗಿರುವಾಗ ರಸೀತಿಯ ಅವಶ್ಯವಾದರೂ ಏನು ?’ ಎಂದರು.ಗುಮಾಸ್ತರು ಗಟ್ಟಿಯಾಗಿ ನಗುತ್ತಾರೆ ‘ನೀವು ಆಶ್ಚರ್ಯಕರವಾದ ಮಾತನ್ನಾಡಿದಿರಿ! ನಿಮಗೆ ದೇವರ ಮೇಲೆ ಅಷ್ಟೊಂದು ನಂಬಿಕೆಯೇ ?’ ಎಂದು ಕೇಳಿದರು.
ಹಿರಿಯರು ‘ ಹೌದಪ್ಪಾ ಹೌದು! ನಾನು ದೇವರನ್ನು ದೃಢವಾಗಿ ನಂಬುತ್ತೇನೆ’ ಎಂದರು. ಗುಮಾಸ್ತರು ನಗುತ್ತಾ ‘ ನಿಮ್ಮ ಮಾತು ಕೇಳಿದರೆ ನಗು ಬರುತ್ತದೆ.ಈ ಆಧುನಿಕ ಯುಗದಲ್ಲೂ ದೇವರನ್ನು ದೃಢವಾಗಿ ನಂಬುವ ನಿಮ್ಮಂಥವರು ಇದ್ದೀರಿ ಎಂಬುದೇ ಆಶ್ಚರ್ಯ’ ಎಂದರು.
‘ಹಿರಿಯರು ಈ ಮಾತಿನಲ್ಲಿ ನಗುವಂಥದ್ದೇನಿದೆ ?ಪುರಾತನ ಯುಗವೋ, ಆಧುನಿಕ ಯುಗವೋ, ಎಲ್ಲಾ ಯುಗಗಳಲ್ಲಿಯೂ ಜನರು ದೇವರನ್ನು ನಂಬುತ್ತಲೇ ಬಂದಿದ್ದಾರೆ.ನಾನೂ ಅದೇ ನಂಬಿಕೆಯುಳ್ಳವನು ! ಹೀಗೇಕೆ ಕೇಳುತ್ತೀರಿ ? ನೀವು ದೇವರನ್ನು ನಂಬುವುದಿಲ್ಲವೇ ?’ ಎಂದು ಕೇಳಿದರು. ಗುಮಾಸ್ತರು ನಗುವನ್ನು ಮುಂದುವರಿಸುತ್ತಾ. ‘ಇಲ್ಲಾ ಸರ್! ನಾನು ಖಂಡಿತವಾಗಿಯೂ ದೇವರನ್ನು ನಂಬುವುದಿಲ್ಲ ’ ಎಂದರು.
ತಕ್ಷಣ ಹಿರಿಯರ ಮುಖಚರ್ಯೆಯೇ ಬದಲಾಯಿತು.ಅವರ ಮುಖದ ಮೇಲಿನ ನಗೆ ಮಾಯವಾಯಿತು. ಅವರು ‘ ಹಾಗಿದ್ದರೆ ನಾನು ಕೊಟ್ಟ ಹಣಕ್ಕೆ ದಯವಿಟ್ಟು ನೀವೇ ರಸೀತಿ ಬರೆದುಕೊಡಿ ನಮ್ಮಿಬ್ಬರ ನಡುವೆ ನೆಡೆದ ಹಣಕಾಸಿನ ವ್ಯವಹಾರ ಸಣ್ಣದೇ ಇರಬಹುದು.ಆದರೆ ನಾನು ಆ ವ್ಯವಹಾರಕ್ಕೆ ದೇವರೇ ಸಾಕ್ಷಿಯೆಂದು ಭಾವಿಸುತ್ತೇನೆ.
ನೀವು ದೇವರನ್ನು ನಂಬುವುದಿಲ್ಲವಾದರೆ, ನಮ್ಮ ವ್ಯವಹಾರಕ್ಕೆ ಸಾಕ್ಷಿಯೇ ಇಲ್ಲದಂತಾಗುತ್ತದೆ.ದೇವರನ್ನು ನಂಬುವವರನ್ನು ನಾವು ನಂಬಬಹುದು ! ದೇವರನ್ನು ನಂಬದವರನ್ನು ನಾನಂತೂ ನಂಬುವುದಿಲ್ಲ ! ದಯವಿಟ್ಟು ಈಗಿಂದೀಗಲೇ ನಾನು ಕೊಟ್ಟ ಹಣಕ್ಕೆ ರಸೀತಿ ಬರೆದುಕೊಡಿ’ ಎಂದು ಗಂಭೀರವಾಗಿ ಹೇಳಿದರು.ಗುಮಾಸ್ತರ ನಗುವೂ ನಿಂತು ಹೋಯಿತು.ಅವರೂ ಗಂಭೀರರಾದರು. ಮರು ಮಾತಿಲ್ಲದೇ ತಮ್ಮ ಕೈ ಬರಹದಲ್ಲೇ ಹಣ ಸಂದಾಯದ ರಸೀತಿ ಬರೆದುಕೊಟ್ಟರು.
ಮರುದಿನ ಮುಂಜಾನೆ ಹಿರಿಯರು ಹೋಟೆಲ್ಲಿನಿಂದ ಹೊರಡುವಾಗಲೂ ಅವರಿಬ್ಬರ ಮುಖದ ಮೇಲಿನ ಗಾಂಭೀರ್ಯ ಮರೆಯಾಗಿರಲಿಲ್ಲ ! ಮೊದಲೇ ಹೇಳಿದ ಹಾಗೆ ನಮ್ಮ ನಂಬಿಕೆಗಳು ಏನೇ ಇರಲಿ.ಈಗ ನಾವು ಆ ಹಿರಿಯರ ಗುಂಪಿಗೆ ಸೇರಿದವರೋ, ಅಥವಾ ಆ ಗುಮಾಸ್ತರ ಗುಂಪಿಗೆ ಸೇರಿದವರೋ ಎಂಬುದನ್ನು ಚಿಂತಿಸಬಹುದಲ್ಲವೇ ? ಉತ್ತರ ಕೊಡುವುದು ಬೇಡ.ಚಿಂತನೆ ಮಾಡಿದರೆ ಸಾಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
