fbpx
ದೇವರು

ಬಿಲ್ವಿದ್ಯೆಯಲ್ಲಿ ದ್ರೋಣಾಚಾರ್ಯರ ಮೆಚ್ಚಿನ ಶಿಷ್ಯ ಅರ್ಜುನ ಅವನಿಗೆ ದೇವಕನ್ನಿಕೆರು ಕೊಟ್ಟಿದ್ದ ವರದ ಬಗ್ಗೆ ಗೊತ್ತಾ?

ದ್ರೋಣಾಚಾರ್ಯರಿಂದ ಶಿಷ್ಯರ ಪರೀಕ್ಷೆ.

ಒಂದು ವಿಶಾಲವಾದ ಅರಮನೆಯಲ್ಲಿ ಕೌರವ-ಪಾಂಡವರ  ಬಾಲಕರ ವಿದ್ಯಾಭ್ಯಾಸ ಪ್ರಾರಂಭವಾಯಿತು.  ಆಗಿಂದಾಗ್ಗೆ ಭೀಷ್ಮನೂ, ದೃತರಾಷ್ಟ್ರನು ತಮ್ಮ ಬಾಲಕರ ವಿದ್ಯಾಭ್ಯಾಸ ಹೇಗೆ ಸಾಗಿದೆ ಎಂಬುದನ್ನು ನೋಡಲು ಬಂದು ಆಗಾಗ ಸೂಕ್ತ , ಸಲಹೆ,ಸೂಚನೆಗಳನ್ನು  ನೀಡಿ ಹೋಗುತ್ತಿದ್ದರು. ವಿದ್ಯಾದಾನದ ಸಮಯದಲ್ಲಿ ದ್ರೋಣಾಚಾರ್ಯರಿಗೆ ಕೌರವರು ಮತ್ತು ಪಾಂಡವ ಪುತ್ರರಲ್ಲಿದ್ದ ಶ್ರದ್ಧೆ, ಕೌಶಲ್ಯ , ಸ್ಪಷ್ಟವಾಗಿ  ಗೋಚರವಾಗುತ್ತಿತ್ತು. ಪಾಂಡವರು ಗುರುಗಳು ಹೇಳಿಕೊಟ್ಟ,ವಿದ್ಯೆಯನ್ನು ಶೀಘ್ರವಾಗಿ ಗ್ರಹಿಸುತ್ತಿದ್ದರೆ,ಕೌರವ ಪುತ್ರರು ನಿಧಾನವಾಗಿ ಗ್ರಹಿಸುತ್ತಿದ್ದರು.

ಧರ್ಮರಾಜ ಮತ್ತು ಅರ್ಜುನರು ಗುರುಗಳು ಹೇಳಿದ ವಿದ್ಯೆಯನ್ನು ಒಂದೇ ಬಾರಿಗೆ ಗ್ರಹಿಸಿದರೆ, ಭೀಮಸೇನನು ಎರಡು ಬಾರಿ ಮತ್ತು ನಕುಲ ಸಹದೇವರು ಮೂರು ಬಾರಿಗೆ ಗ್ರಹಿಸುತ್ತಿದ್ದರು.ಆದರೆ ಕೌರವ ಪುತ್ರರಿಗೆ 8 ರಿಂದ 10 ಬಾರಿಗೆ ತಿಳಿಸಿ ಹೇಳುವ ಪಡಿಪಾಟು ದ್ರೋಣರದಾಗಿತ್ತು. ಇದಲ್ಲದೇ ಬರಬರುತ್ತಾ ದ್ರೋಣರು ಕೌರವ ಪುತ್ರರೆಲ್ಲರೂ ತಾಮಸ ಬುದ್ಧಿಯವರಾಗಿದ್ದನ್ನು ಕಂಡುಕೊಂಡರು. ತಾಮಸಿಗಳಿಗೆ ವಿದ್ಯೆ ಬೇಗನೆ ಹತ್ತುವುದಿಲ್ಲವೆಂಬ ಸಂಗತಿ ಅವರಿಗೂ ಗೊತ್ತಿತ್ತು. ಆದರೆ ಭೀಷ್ಮಾಚಾರ್ಯರು ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುತ್ತಿದ್ದುದರಿಂದ ಮತ್ತು ಅಖಂಡ ಬ್ರಹ್ಮಚಾರಿಯಾದ ಭೀಷ್ಮರಿಗೆ ದ್ರೋಹ ಬಗೆದಂತಾಗುತ್ತದೆ  ಎಂಬ ಅಳುಕಿನಿಂದ ತಮಗೆ ವಿಶೇಷ ತೊಂದರೆಯಾದರೂ ಕೌರವರಿಗೆ ಪದೇ ಪದೇ ಹೇಳಿಕೊಡುತ್ತ ಅವರನ್ನು ಶಸ್ತ್ರಾಸ್ತ್ರ ವಿದ್ಯೆಯಲ್ಲಿ ಪಾರಂಗತರಾಗುವಂತೆ ಮಾಡಲು ಶ್ರಮಿಸುತ್ತಿದ್ದರು.

ಶಿಷ್ಯರನ್ನು ಪರೀಕ್ಷೆ ಮಾಡಬೇಕು ಎಂಬ ಮನದಾಸೆಯಿಂದ  ದ್ರೋಣರು ಮೊದಲು ಕೌರವ ಮುಖಂಡರಾದ ದುರ್ಯೋಧನನನ್ನು ಕರೆದು “ ಜೇಷ್ಠ ರಾಜಕುಮಾರನೇ, ನಾನೊಂದು ವ್ರತವನ್ನು ಪ್ರಾರಂಭಿಸುವವನಿದ್ದೇನೆ. ಆ ವ್ರತದ ಅಂಗವಾಗಿ ನಾನು ಬೆಳಗಿನ ಒಂದು ಪ್ರಹರದ ಸಮಯಕ್ಕೇ ಗಂಗಾನದಿಯಿಂದ ಬಂಗಾರದ ಕಲಶದಲ್ಲಿ ತಂದ ಶುದ್ದೋದಕದಿಂದ  ಈಶ್ವರನ ಲಿಂಗಕ್ಕೆ ಅಭಿಷೇಕ ಮಾಡಬೇಕು ಆದ್ದರಿಂದ ಆ ಸಮಯಕ್ಕೆ ಪ್ರತೀದಿನ ತಪ್ಪದೇ ಗಂಗಾನದಿಯಿಂದ ಅಗ್ರೋದಕ ತಂದು ಕೊಡುವೆಯಾ?” ಎಂದು ಪ್ರಶ್ನಿಸಿದರು.

ಅದಕ್ಕೆ ದುರ್ಯೋಧನನು ಇದೆಂಥಾ ಕೋರಿಕೆ ಗುರುಗಳೇ ಗಂಗಾನದಿ ಇಲ್ಲಿಂದ ಹನ್ನೆರಡು ಮೈಲಿ ದೂರದಲ್ಲಿದೆ.ಅಷ್ಟು ಬೆಳಗಿನ ಸಮಯದಲ್ಲಿ ರಾಜಕುಮಾರನಾದ ಅಲ್ಲಿಗೆ ಹೋಗಿ ನೀರು ತಂದುಕೊಡುವುದು ಆಗದು.ನೀವು ಒಪ್ಪಿದರೆ ಅಳುಗಳನ್ನು ನೇಮಿಸಿಕೊಡುತ್ತೇನೆ.ಅವರಿಂದ ನೀರು ತರಿಸಿಕೊಂಡು ನಿಮ್ಮ ಪೂಜೆ ನೆರವೇರಿಸಿಕೊಳ್ಳಿರಿ.ಎಂದು ಉತ್ತರಿಸಿದನು.ಅದಕ್ಕೆ ದ್ರೋಣರು “ಈ ಸಂಗತಿ ನನಗೆ ಗೊತ್ತು, ಆದರೆ ಗುರು ನೆರವೇರಿಸಿದ ಪೂಜೆಗೆ ಅತನಲ್ಲಿ ವಿದ್ಯೆ ಪಡೆಯುತ್ತಿರುವ ಶಿಷ್ಯನೇ ಅಗ್ರೋದಕ ತಂದು ಕೊಡುವದು ಶ್ರೇಯಸ್ಕರ ಮತ್ತು ಈ ಪೂಜೆಯಿಂದ ದೊರೆಯುವ ಪುಣ್ಯದಲ್ಲಿ ಶಿಷ್ಯನಿಗೂ ಭಾಗ ಸಿಗುತ್ತದೆ” ಎಂದರು. ಇದ್ಯಾವುದೂ ದುರ್ಯೋಧನನ ತಲೆಗೆ ಹತ್ತದೇ ನಿರಾಕರಿಸಿಬಿಟ್ಟನು.

ಆಗ ದ್ರೋಣರು ಈ ವಿಚಾರವನ್ನು ಅರ್ಜುನನಿಗೆ ಹೇಳಿದರು.ಅವನು ತಕ್ಷಣ ಒಪ್ಪಿಕೊಂಡನು. ಮರುದಿವಸದಿಂದಲೇ ಬೆಳಗಿನ ಜಾವಕ್ಕೆ  ಇನ್ನೂ ಒಂದು  ಗಂಟೆಯಿರುವಾಗಲೇ ಬಂಗಾರದ ಕಲಶದಲ್ಲಿ ಪವಿತ್ರ ಗಂಗೆಯ ಅಗ್ರೋದಕ ತುಂಬಿಕೊಂಡು ಬಂದು ಗುರುಗಳಿಗೆ ಒಪ್ಪಿಸುತ್ತಿದ್ದನು. ಇದರಿಂದ ಸುಪ್ರೀತರಾದ ದ್ರೋಣರು ಮನದಲ್ಲಿಯೇ ಅರ್ಜುನನನ್ನು ಹರಸಿದರು.

ಹೀಗಿರುತ್ತಾ ಒಂದು ದಿನ ದುರ್ಯೋಧನನು ಗುರಿ ದ್ರೋಣರ ಬಳಿಗೆ ಬಂದು ಆ ಮಾತು ಈ ಮಾತು ಆಡುತ್ತಾ ಕೊನೆಗೆ ನೇರವಾಗಿ ಗುರುಗಳಿಗೆ ಅರ್ಜುನನಿಗೆ ತಿಳಿಯಗೊಡದಂತೆ ತನಗೆ ಬಿಲ್ಲುವಿದ್ಯೆಯಲ್ಲಿ ವಿಶೇಷ ತರಬೇತಿ ನೀಡಬೇಕೆಂದು  ಆಗ್ರಹ ಪಡಿಸಿದನು.ಇದಕ್ಕೆ ಶಿಷ್ಯರಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಇದು ಸಾಧ್ಯವಿಲ್ಲ ಎಂದು ದ್ರೋಣರು ನೀಡಿದ ಹಿತೋಪದೇಶ ಅವನಿಗೆ ಸಮ್ಮತವಾಗಲಿಲ್ಲ. ಅವನು ಗುರುಗಳಿಗೆ ಆಮಿಷ ಒಡ್ಡುತ್ತಾ ತನಗೆ ವಿಶೇಷ ತರಬೇತಿ ನೀಡಿದಲ್ಲಿ ಅವರು ಮನಒಪ್ಪುವಂತೆ ಹೆಚ್ಚಿನ ಕಾಣಿಕೆ ನೀಡುವುದಾಗಿ ಹೇಳಿದನು. ಇದರಿಂದ ದ್ರೋಣರಿಗೆ ಜಿಗುಪ್ಸೆಯಾಯಿತು ಅರ್ಜುನನಲ್ಲಿ ಹುದುಗಿರುವ ಸುಪ್ತ ಸಾಮರ್ಥ್ಯ ಪ್ರದರ್ಶನಕ್ಕೆ ಇದು ಒಂದು ಅವಕಾಶವೆಂದು ಬಗೆದ ಅವರು ಒಪ್ಪಿದಂತೆ ನಟಿಸಿ ಅವನಿಗೆ ಭರವಸೆ ನೀಡಿದರು.

ಮರುದಿನ ಅರ್ಜುನನು ಗಂಗಾನದಿಗೆ ಅಗ್ರೋದಕ ತರಲಿಕ್ಕೆ ಹೋದ ಸಮಯದಲ್ಲಿ ದುರ್ಯೋಧನನನ್ನೂ ಆತನ ಸಹೋದರರನ್ನೂ ಕರೆದುಕೊಂಡು ಗಂಗಾನದಿಗೆ ಹೋಗುವ ಮಾರ್ಗದಲ್ಲಿಯ ಒಂದು ಅಶ್ವತ ಮರದ ಬಳಿಗೆ  ತೆರಳಿ ಒಂದು ಬಾಣಕ್ಕೆ ಮಂತ್ರೋಪದೇಶ ಮಾಡಿ ಅದನ್ನು ದುರ್ಯೋಧನನಿಗೆ ಕೊಟ್ಟು ಬಿಲ್ಲಿಗೆ ಹೆದೆಯೇರಿಸಿ ಆ ಅಶ್ವತ ವೃಕ್ಷಕ್ಕೆ ಈ ಬಾಣ ಪ್ರಯೋಗಿಸು ಎಂದು ಅಪ್ಪಣೆ ಮಾಡಿದರು. ಅದರಂತೆ ದುರ್ಯೋಧನನು ಬಾಣ ಪ್ರಯೋಗಿಸಲು ಆ ಅರಳಿ ಮರದ(ಅಶ್ವತವೃಕ್ಷ) ಎಲ್ಲ ಎಲೆಗಳಲ್ಲಿಯೂ ಅಂಬಿನ ಅಳತೆಯ ತೂತುಗಳು ಬಿದ್ದವು.ಆಗ ಹರ್ಷೋದ್ರೇಕಿತನಾದ ದುರ್ಯೋಧನನು ಗುರುಗಳೇ ಈ ವಿದ್ಯೆಯಲ್ಲಿ ನನ್ನನ್ನು ಪಾರಂಗತನನ್ನಾಗಿ ಮಾಡಿರಿ ಎಂದನು.ಆಗ  ದ್ರೋಣಾಚಾರ್ಯರು ಆಯಿತು ಈಗ ಅರ್ಜುನ ಮರಳಿ ಬರುವ ಸಮಯವಾಯಿತು.ಮುಂದೆ ನೋಡೋಣ ನೆಡೆಯಿರಿ ಎಂದು ಹೇಳುತ್ತಾ ಅವರನ್ನು ಮರಳಿ ಅರಮನೆಗೆ ಕರೆತಂದರು.

ಇತ್ತ ಅಗ್ರೋದಕ ತರಲು ಗಂಗಾನದಿಗೆ ಅರ್ಜುನನು ತೆರಳಿದ ಸಮಯದಲ್ಲಿ ಆ ದಿನ ಜಲಕ್ರೀಡೆಯಾಡಲು ಏಳೆಂಟು ಜನ ದೇವಕನ್ನಿಕೆಯರು ಬಂದಿದ್ದರು. ಅವರೆಲ್ಲ ವಿವಸ್ತ್ರರಾಗಿ ಜಲಕ್ರೀಡೆಯಲ್ಲಿ ತನ್ಮಯರಾದ್ದರಿಂದ ಶಿಷ್ಟಾಚಾರ ಸಂಪ್ರದಾಯದಂತೆ ಅರ್ಜುನನು ಅಲ್ಲಿಯೇ ಇದ್ದ ಒಂದು ಆಲದ ಮರದ ಬೊಡ್ಡೆಯ ಪಕ್ಕದಲ್ಲಿ ನಿಂತನು.

ಅವರು ಜಲಕ್ರೀಡೆ ಮುಗಿಸಿ ಮೇಲೆ ಬಂದು ತಮ್ಮ ವಸ್ತ್ರಾಲಂಕಾರ ಮಾಡಿಕೊಂಡು ನಂತರ ಅರ್ಜುನನು ಲಗುಬಗೆಯಿಂದ ಸ್ನಾನಕ್ಕಾಗಿ ನದಿಗೆ ಇಳಿದನು ಅಪರಿಚಿತ ವ್ಯಕ್ತಿಯನ್ನು ನೋಡಿದ ದೇವಕನ್ನಿಕೆಯರು “ನೀನು ಯಾರು ? ಇಲ್ಲಿಗೇಕೆ ಬಂದೆ?” ಎಂದು ಪ್ರಶ್ನಿಸಿದರು. ಅದಕ್ಕೆ ಅರ್ಜುನನು  ನಾನು ಪಾಂಡು ಪುತ್ರ ಅರ್ಜುನನೆಂದು,ನಮ್ಮ ಗುರುಗಳಾದ ದ್ರೋಣರ ಲಿಂಗಪೂಜಾ ಕಾರ್ಯಕ್ರಮಕ್ಕೆ ಪವಿತ್ರ ಗಂಗಾಜಲವನ್ನು ಕೊಂಡೊಯ್ಯಲು ಬಂದಿದ್ದಾಗಿಯೂ ಹಾಗೂ ದೇವಕನ್ನಿಕೆಯರು ಜಲಕ್ರೀಡೆಯಲ್ಲಿ ನಿರತರಾಗಿದ್ದರಿಂದ ಆಲದ ಮರದ ಬೊಡ್ಡೆಯ ಹಿಂದೆ ನಿಂತುದಾಗಿಯೂ ತಿಳಿಸಿದನು. ಆಗಲೇ ಪೂಜೆಗೆ ಸಮಯವಾಯಿತು ಎಂದು ಚಡಪಡಿಸುತ್ತಾ ಬೇಗಬೇಗನೇ  ಸ್ನಾನ ಮುಗಿಸಿ ಗಂಗಾಜಲವನ್ನು ತುಂಬಿಕೊಂಡು ಹೊರಟನು.ಅವನ ಸದ್ಗುಣಗಳನ್ನೂ, ಶಿಷ್ಟಾಚಾರವನ್ನೂ ಮೆಚ್ಚಿದ ದೇವಕನ್ನಿಕೆಯರು ಜೀವನದ ಸಮಸ್ಯೆಗಳನ್ನು ಎದುರಿಸುವಲ್ಲಿ ಸದಾ ನಿನಗೆ ಜಯವಾಗಲಿ ಎಂದು ಹರಸಿ ಬೀಳ್ಕೊಟ್ಟರು.

ಪೂಜಾ ಸಮಯ ಹತ್ತಿರವಾಯಿತು ಎಂದು ಚಡಪಡಿಸುತ್ತಾ ಲಗುಬಗೆಯಿಂದ ಮರಳಿ ಬರುತ್ತಿದ್ದ ಅರ್ಜುನನು ಅಶ್ವಥ ಮರದ ಕೆಳಗೆ ಗುರು ದ್ರೋಣಾಚಾರ್ಯರ ಹೆಜ್ಜೆಯ ಗುರುತುಗಳನ್ನು ಕಂಡನು.ಅದರ ಜೊತೆಗೆ ಇನ್ನೂ ಕೆಲವರ ಹೆಜ್ಜೆಯ ಗುರುತುಗಳನ್ನು ಕಂಡನು.ಅದರ ಜೊತೆಗೆ ಇನ್ನೂ ಕೆಲವರ ಹೆಜ್ಜೆಯ ಗುರುತುಗಳನ್ನು ಕಂಡನು.ಇದನ್ನು ನೋಡಿ ಅರ್ಜುನನಿಗೆ ತಾನು ಬರುವುದು ವಿಳಂಬವಾಯಿತು ಎಂದು ಗುರುಗಳು ತನ್ನನ್ನು ಹುಡುಕುತ್ತಾ ಇಲ್ಲಿಯವರೆಗೆ ಬಂದು ಹೋಗಿದ್ದಾರೇನೋ ಎಂಬ ಅನುಮಾನ ಬಂದು ಮನಸ್ಸಿನಲ್ಲಿ ಕಿರಿಕಿರಿಯಾಯಿತು.ಅಯ್ಯೋ ಶಿವ ಶಿವಾ ಮುಂದೆ ಹೇಗೆ ಎನ್ನುತ್ತ ಆಕಾಶದ ಕಡೆಗೆ ನೋಡಿದನು.

ಅವನ ದೃಷ್ಟಿ ಗಿಡಗಳ ಎಲೆಗಳ ಮೇಲೆ ಬಿದ್ದಾಗ ಅವೆಲ್ಲಾ ತೂತಾಗಿದ್ದವು.ಇದು ಒಬ್ಬ ಬಿಲ್ಲು ವಿದ್ಯೆಯಲ್ಲಿ ನಿಷ್ಣಾತನಾದವನ ಕೆಲಸವೇ ವಿನಃ ಬೇರೆ ಯಾರದ್ದೂ ಅಲ್ಲ ಎಂಬುದು ಆತನಿಗೆ ಮನವರಿಕೆಯಾಯಿತು. ಆಹಾ ಎಂಥ ಘನವಾದ ವಿದ್ಯೆ ಎಂದು ಆಶ್ಚರ್ಯ ಪಡುತ್ತ ತಾನೂ ಇದನ್ನೇಕೆ ಸಾಧಿಸಬಾರದು ಎಂದು ಇಕ್ಜಿಸಿದನು.ಹಾಗೆಯೇ ಪರೀಕ್ಷಿಸಿ ನೋಡೋಣ ಎಂದು ಅಗ್ರೋದಕ ತುಂಬಿದ ಬಂಗಾರದ ಕಲಶವನ್ನು ಒಂದು ಬಾಣದ ತುದಿಗೆ ಸಿಕ್ಕಿಸಿ ಆಕಾಶದ ಕಡೆಗೆ ನೇರವಾಗಿ ಬಿಟ್ಟನು.ಆ ಕಲಶ ಪುನಃ ತನ್ನ ಕಡೆಗೆ ಬಂದು ತಲುಪುವುದರೊಳಗಾಗಿ ಇನ್ನೊಂದು ಬಾಣವನ್ನು ಗುರು ದ್ರೋಣಾಚಾರ್ಯರನ್ನು ನೆನೆದು ಮತ್ತೊಂದು ಅರಳಿ ಮರಕ್ಕೆ ಹೊಡೆದನು.ಈತನ ಬಾಣ ಪ್ರಯೋಗದಿಂದ ಆರಳೀ ಮರದ ಎಲೆ ಅರ್ಧ ಕತ್ತರಿಸಿ ಭೂಮಿಗೆ ಬಿದ್ದವು.ಅಷ್ಟೊತ್ತಿಗೆ ಆಕಾಶಕ್ಕೆ ಏರಿದ್ದ ಕಲಶ ಹೊತ್ತ ಬಾಣ ಪುನಃ ಭೂಮಿಯಕಡೆಗೆ ಬಂದಾಗ ಅದು ಭೂಮಿಯನ್ನು ಸ್ಪರ್ಶಿಸಗೊಡದೇ ಅದನ್ನು ಕೈಯಲ್ಲಿ ಹಿಡಿದುಕೊಂಡು ಓಡೋಡಿ ಗುರುಗಳ ಕುಟೀರಕ್ಕೆ ಬಂದನು.

ಇಷ್ಟೆಲ್ಲಾ ಆಗುವ ವೇಳೆಗೆ ಸ್ವಲ್ಪ ಸಮಯ ವ್ಯಯವಾದ್ದರಿಂದ ದ್ರೋಣಾಚಾರ್ಯರು ಕೋಪಗೊಂಡಂತೆ ನಟಿಸುತ್ತಾ ಅರ್ಜುನನಿಗೆ ಶಾಪ ಕೊಡಲಿಕ್ಕೆ ಉದ್ಯುಕ್ತರಾದಂತೆ ಮಾಡಿದರು. ಇದನ್ನು ಕಂಡು ಭೀಮನು ಭಯಭೀತನಾಗಿ ಅಜ್ಜ ಭೀಷ್ಮಾಚಾರ್ಯರಿಗೆ ವಿಷಯ ತಿಳಿಸಿದನು. ಕೂಡಲೇ ಧಾವಿಸಿ ಬಂದ ಭೀಷ್ಮರು ವಿಷಯವೇನೆಂದು ವಿಚಾರಿಸಿದರು. ಅರ್ಜುನನು ನೆಡೆದ ಸಂಗತಿಯನ್ನು ವಿವರಿಸಲು ಭೀಷ್ಮರು ದ್ರೋಣರನ್ನು ಸಂತೈಸುತ್ತಾ ಅವನ ಹೇಳಿಕೆಯ ನಿಜಾಂಶವನ್ನು ಪರೀಕ್ಷಿಸಿ ಬಿಡೋಣ ಎಂದು ಎಲ್ಲರನ್ನೂ ಅಶ್ವಥ ವೃಕ್ಷಕ್ಕೆ ಕರೆದುಕೊಂಡು ಬಂದರು.

ಅಲ್ಲಿ ನೋಡಿದರೆ ಒಂದು ಮರದ ಎಲೆಗಳಲ್ಲಿ ಕೇವಲ ತೂತು ಬಿದ್ದಿದ್ದರೆ ಇನ್ನೊಂದು ಮರದ ಎಲೆಗಳು ಸರಿಯಾಗಿ ಅರ್ಧರ್ಧ ಕತ್ತರಿಸಿ  ಭೂಮಿಗೆ ಬಿದ್ದಿದ್ದವು.ಆದ್ದರಿಂದ ಗೊಂದಲ ಪರಿಹರಿಸುವ ದೃಷ್ಟಿಯಿಂದ ಭೀಷ್ಮರು ಮೊಮ್ಮಗನಿಗೆ(ಅರ್ಜುನ) ಪವಿತ್ರ ಗಂಗಾನದಿಯ ಅಗ್ರೋಧಕ ತುಂಬಿದ ಕಲಶವನ್ನು ಭೂಮಿಯ ಮೇಲೆ ಇಡದೆ   ನೀನು ಹೇಗೆ ಬಾಣ ಪ್ರಯೋಗಿಸಿದೆ ಎಂಬುದನ್ನು ಈಗ ಎಲ್ಲರೆದುರಿಗೆ ತೋರಿಸು ಎಂದು ಅಜ್ಞಾಪಿಸಿದರು.ಆಗ ಅರ್ಜುನನು ಮೊದಲು ಮಾಡಿದಂತೆಯೇ ಒಂದು ಬಾಣದ ತುದಿಗೆ ಕಲಶ ಕಟ್ಟಿ ಅದನ್ನು ಅಕಾಶದೆಡೆಗೆ ಬಿಟ್ಟು ,ಅದು ಪುನಃ ಭೂಮಿಯನ್ನು ಸ್ಪರ್ಶಿಸುವ ಮೊದಲೇ ಗುರುಗಳನ್ನು ನೆನೆಯುತ್ತಾ ಮತ್ತೊಂದು ಬಾಣ ಹೂಡಿ ತಾನು ಪ್ರಯೋಗಿಸಿದ್ದ ಆರಳೀ ಮರಕ್ಕೆ ಬಿಟ್ಟಾಗ ಈ ಮೊದಲೇ ಅರ್ಧರ್ಧ ಕತ್ತರಿಸಿದ್ದ ಎಲೆಗಳು ಈಗ ಪೂರ್ಣ ಕತ್ತರಿಸಿ ನೆಲಕ್ಕೆ ಬಿದ್ದವು. ಈ ಮದ್ಯೆ ಆಕಾಶಕ್ಕೆ ನೆಗೆದಿದ್ದ ಕಲಶ ಸಮೇತ ಬಾಣ ಪುನಃ ಬರುವಷ್ಟರಲ್ಲಿ ಅದನ್ನು ಭೂಮಿಗೆ ಸ್ಪರ್ಶವಾಗಗೊಡದೇ ಹಿಡಿದುಕೊಂಡನು.

ಗುರು ದ್ರೋಣರಿಗೆ ಕಂಠ ಬಿಗಿದು ಬಂದು ಅರ್ಜುನನನ್ನು ಬಿಗಿದಪ್ಪಿಕೊಂಡರು. “ವತ್ಸಾ, ಶಿಷ್ಯನೆಂದರೆ ನೀನೆ. ನಿನ್ನಂಥ ಶಿಷ್ಯನಿದ್ದರೆ ಗುರುವಿನ ಕೀರ್ತಿ ದಶ ದಿಕ್ಕುಗಳಲ್ಲಿ ಹರಡುವುದು.ಇನ್ನು ಮುಂದೆ ಮಹತ್ವದ ಮತ್ತು ಕ್ಲಿಷ್ಟ  ಬಾಣ ಪ್ರಯೋಗಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಮಂತ್ರೋಪದೇಶವನ್ನು  ನಿನಗಷ್ಟೇ ಹೇಳಿಕೊಡುತ್ತೇನೆ.ನಿನ್ನಂಥ ಶಿಷ್ಯನ ಮೂಲಕ ನಾನೂ ಅಜರಾಮರ ನಾಗುತ್ತೇನೆ ಎಂದು ನುಡಿದರು”.

ಇದನ್ನೆಲ್ಲ ನೋಡಿದ ಭೀಷ್ಮರಿಗೆ ಅನಂದಾಶ್ರುಗಳು ಉದುರಿ ಮೊಮ್ಮಗನ ಮೇಲಿನ ಪ್ರೀತಿ ಮತ್ತು ಅಭಿಮಾನ ಅಧಿಕ ಗೊಂಡಿತು. ಕೌರವ ಸುತರು ಯಥಾ ಪ್ರಕಾರ ಹೊಟ್ಟೆಯಲ್ಲಿ ಕಸಿವಿಸಿ ಪಡುತ್ತ ತೋರಗೊಡದೇ ಅದನ್ನು ತಾವೂ ಸಂತೋಷಪಟ್ಟಂತೆ ನಟಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top