fbpx
ಜೀವನ ಕ್ರಮ

ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತ್ತಿತ್ತಂತೆ – ಕಥೆ ಮುದುಕನ ಮಾರ್ಗದರ್ಶನ..

(ಹಿರಿಯರ) ಮುದುಕನ ಮಾರ್ಗದರ್ಶನ.

ಉಕ್ರೇನ್ ನಲ್ಲಿ ಬಂಟು ಎಂಬ ಒಬ್ಬ ತರುಣ ದೊರೆ ಇದ್ದ.ಅವನ ಹುರುಪಿಗೆ ತಕ್ಕಂತೆ ಮಂತ್ರಿಗಳಿದ್ದರು.ಅವರೆಲ್ಲ ರಾಜ್ಯವನ್ನು ಸಂಪತ್ತಿನಿಂದ ತುಂಬಿ ತುಳುಕುವಂತೆ ಮಾಡಬೇಕು, ಅದಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು.ಮುದುಕರಿಂದ ಕೆಲಸ ಮಾಡಲು ಸಾಧ್ಯವಿಲ್ಲ.ಅವರಿಗೆ ಹಾಕುವ ಕೂಳೂ ವ್ಯರ್ಥ. ಆದ್ದರಿಂದ ಮುದುಕರನ್ನೆಲ್ಲ ದೂರದ ಕಾಡಿಗೆ ಕರೆದುಕೊಂಡು ಹೋಗಿ ಬಿಟ್ಟರೆ ತುಂಬಾ ಧಾನ್ಯ ಉಳಿಯುತ್ತದೆ ಎಂದು ಹೇಳಿಕೊಟ್ಟರು.

ಈ ಸಲಹೆ ರಾಜನಿಗೆ ತುಂಬಾ ಸಮಂಜಸವೆನಿಸಿತು “ರಾಜ್ಯದಲ್ಲಿರುವ ಎಲ್ಲಾ ಮುದುಕರನ್ನು ಅವರ ಮಕ್ಕಳು ದೂರದ ಕಾಡಿಗೆ ಸಾಗಿಸಿ ಬರಬೇಕು. ಇದನ್ನು ಉಲ್ಲಂಘಿಸಿದವರ ತಲೆ ಕಡಿಯಲಾಗುತ್ತದೆ” ಎಂದು ಡಂಗುರ ಹೊಡೆಸಿದ.ರಾಜಾಜ್ಞೆಯಂತೆ ಜನರು ಮುದುಕರನ್ನೆಲ್ಲಾ ದಟ್ಟ ಕಾಡುಗಳಲ್ಲಿ  ಬಿಟ್ಟು ಬಂದರು.ಆಹಾರವಿಲ್ಲದೆ ಮುದುಕರು ಅಲ್ಲೇ ಸತ್ತರು.

ಉಕೇಬು ಎಂಬ ತರುಣನ ತಂದೆಯೂ ಹಣ್ಣು ಮುದುಕನಾಗಿದ್ದ. ತಂದೆಯ ಮೇಲೆ ಅವನಿಗೆ ತುಂಬಾ ಪ್ರೀತಿ. ಅವರ ರಾಜಾಜ್ಞೆಯನ್ನು ಮೀರುವುದುಂಟೇ ? ಅವನು ಎರಡೂ ಕಣ್ಣುಗಳಲ್ಲಿ ನೀರು ಹರಿಸುತ್ತಾ ತಂದೆಯ ಬಳಿ ಹೋಗಿ ವಿಚಾರವನ್ನು ತಿಳಿಸಿದ. ಉಕೇಬುವಿನ ತಂದೆ, ‘ಮಗನೇ, ನೆಡೆದುಕೊಂಡ ಕಾಡಿಗೆ ಹೋಗುವ ಚೈತನ್ಯ ನನಗಿಲ್ಲ.ನನ್ನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಬಿಟ್ಟು ಬಾ ಅದಕ್ಕಾಗಿ ಚಿಂತಿಸಬೇಡ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ಎಂದ.

ತಂದೆಯನ್ನು ಉಕೇಬು ಹೆಗಲ ಮೇಲೆ ಕೂರಿಸಿಕೊಂಡು ಕಾಡಿಗೆ ಹೊರಟ. ಆಗ ಮುದುಕ ದಾರಿಯುದ್ದಕ್ಕೂ ಕೈಗೆಟುಕಿದ ಮರಗಳ ಕೊಂಬೆಯಿಂದ ಎಲೆಗಳನ್ನು ಮುರಿದು ಹಾಕಲಾರಂಭಿಸಿದ. ‘ಅಪ್ಪಾ ಹೀಗೇಕೆ ಮಾಡುತ್ತಿದ್ದೀಯ ?ಎಂದು ಉಕೇಬು ಕೇಳಿದ.ಮಗನೇ ನನ್ನನ್ನು ಕಾಡಿನಲ್ಲಿ ಬಿಟ್ಟು ನೀನೊಬ್ಬನೇ  ಮರಳಿ ಬರುತ್ತೀಯಾ.ಆಗ ನಿನಗೆ ದಾರಿ ತಪ್ಪಬಾರದೆಂದು ಎಲೆಗಳನ್ನು ಗುರುತಿಗಾಗಿ ಮುರಿದು ಹಾಕುತ್ತಿದ್ದೇನೆ’ ಎಂದು ಹೇಳಿದ.

ಅದನ್ನು ಕೇಳಿದ ಉಕೇಬುವಿನ ಮನಸ್ಸು ಕರಗಿತು. ‘ಅಪ್ಪಾ,ನಾನು ನಿಮ್ಮನ್ನು ಬಿಟ್ಟು ಇರಲಾರೆ.ನಾವೂ ಮರಳಿ ಮನೆಗೆ ಹೋಗೋಣ. ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ನಿಮ್ಮನ್ನು ಮನೆಯಲ್ಲಿಯೇ  ಕಾಪಾಡುತ್ತೇನೆ’ ಎಂದು ಹೇಳಿ ತಂದೆಯನ್ನು ಮನೆಗೆ ಕರೆದುಕೊಂಡು ಬಂದು ನೆಲ ಮಾಳಿಗೆಯಲ್ಲಿ ಇರಿಸಿದ. ಕೆಲವು ಕಾಲ ಕಳೆಯಿತು.ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ ಭಾರಿ ಕ್ಷೇಮ ಉಂಟಾಯಿತು. ಆಗ ರಾಜನು ಇಲ್ಲಿ ಕುಡಿಯಲು ನೀರು ಸಿಗುವಂತೆ ಮಾಡಿದವರಿಗೆ ಅವರೇನು ಕೇಳಿದರೂ ಕೊಡುತ್ತೇನೆ ಎಂದು ಪ್ರಕಟಿಸಿದ.

ಉಕೇಬು ನೆಲ ಮಾಳಿಗೆಯಲ್ಲಿದ್ದ ತನ್ನ ತಂದೆಗೆ ಕ್ಷಾಮದ ಸುದ್ದಿ ಹೇಳಿದಾಗ ಅವನು, ‘ ನಮ್ಮ ಗ್ರಾಮದೇವತೆಯ ಮುಂದಿರದ ಬಳಿ ಒಂದು ಹತ್ತಿಯ ಮರವಿದೆ.ನಮ್ಮ ಪೂರ್ವಜರು ಹೇಳುತ್ತಿದ್ದರು.ಆ ಮರದ ಪೂರ್ವ ದಿಕ್ಕಿನ ಮೂರು ಬೇರುಗಳನ್ನು ಕತ್ತರಿಸಿದರೆ ಭಾರೀ ನೀರಿನ ಜಲ ಬರುತ್ತದೆ’ ಎಂದ. ಕೂಡಲೇ ಉಕೇಬು ರಾಜನ ಬಳಿಗೆ ಹೋಗಿ ಈ ಸಲಹೆಯನ್ನು ನೀಡಿದ ನಂತರ ಹತ್ತಿಯ ಮರದ ಬೇರುಗಳನ್ನು ಕತ್ತರಿಸಲಾಯಿತು. ಆಗ ಅಲ್ಲಿ ನೀರು ಹರಿಯಿತು.ಬಹು ದಿನಗಳಿಂದ ನೀರನ್ನು ಕಾಣದಿದ್ದವರು ಮೊಗೆದು ನೀರನ್ನು ಕುಡಿದು ಜೀವ ಉಳಿಸಿಕೊಂಡರು.

ನೀರು ನಿರಂತರವಾಗಿ ಹರಿಯುತ್ತಾ  ಇತ್ತು. ಈ ಸಲಹೆ ನೀಡಿದ ಉಕೇಬುವಿಗೆ ಏನು ಕೋರಿಕೆಯಿದೆ ಎಂದು ರಾಜನು ಕೇಳಿದಾಗ ಆತ, ‘ಮುದುಕರನ್ನು ಕಾಡಿಗೆ ಬಿಟ್ಟು ಬರುವ ಕಾನೂನನ್ನು  ರದ್ದು ಮಾಡಿರಿ,ಬೇರೇನೂ  ನನಗೆ ಬೇಡ’ ಎಂದ. ರಾಜನ ಹುಬ್ಬು ಗಂಟಿಕ್ಕಿತು ‘ಅದೇಕೆ ಈ ಕೋರಿಕೆ ?’  ಎಂದು ಕೇಳಿದ. ‘ನನ್ನ ಮುದಿ ತಂದೆಯ ಸಲಹೆ ಇಲ್ಲದಿದ್ದರೆ ನಾವು ನೀರಿಲ್ಲದೇ ಸಾಯಬೇಕಿತ್ತು’ ಎಂದು ಉಕೇಬು  ತನ್ನ ತಂದೆಯನ್ನು ರಹಸ್ಯವಾಗಿ ತಾನು ಕಾಪಾಡುತ್ತಿರುವುದನ್ನೂ ಅವನು ಕೊಟ್ಟ ಸಲಹೆಯಿಲ್ಲದಿದ್ದರೆ ತಾವೆಲ್ಲರೂ ನೀರಿಲ್ಲದೇ ಸಾಯಬೇಕಿತ್ತು ಎಂದೂ ಉಕೇಬು ನಿಜ ವಿಷಯವನ್ನು ವಿವರಿಸಿದ. ರಾಜನ ಕಣ್ಣು ತೆರೆಯಿತು. ಮುದುಕರಿಂದ ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ಪ್ರಯೋಜನವಾಗಿದೆ ಎಂಬುದು ಅರಿವಾಗುತ್ತಲೇ ಈ ಕುರುಡು ಕಾನೂನನ್ನು ರದ್ದು ಮಾಡಿ ಉಕೇಬುವನ್ನು ಸನ್ಮಾನಿಸಿದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top