fbpx
ಸಾಧನೆ

ಈ ಅನಾಥ ತಾಯಿಗೆ ಅಸಂಖ್ಯಾತ ಅಳಿಯಂದಿರು, ಸೊಸೆಯರು, ಮತ್ತು ಮೊಮ್ಮಕ್ಕಳು.

ಈ ಅನಾಥ ತಾಯಿಗೆ ಅಸಂಖ್ಯಾತ ಅಳಿಯಂದಿರು, ಸೊಸೆಯರು, ಮತ್ತು ಮೊಮ್ಮಕ್ಕಳು.

ಹೌದು!  ಸಾವಿರಾರು ಮೊಮ್ಮಕ್ಕಳಿರುವ  ಆಕೆ ಅನಾಥೆ. “ ಅನಾಥ ಮಕ್ಕಳ ತಾಯಿ” ಎಂದು ಕರೆಯಲ್ಪಡುವ ಆಕೆ ಸಿಂಧೂತಾಯಿ ಸಕ್ಪಾಳ್. 1948 ರಲ್ಲಿ ಸಾಕ್ಪಳ್ ಮಹಾರಾಷ್ಟ್ರದ  ಪಿಂಪ್ರಿ ಬಳಿಯ ಹಳ್ಳಿಯಲ್ಲಿ ದನ ಕಾಯುವಾತನ ಮಗಳಾಗಿ ಹುಟ್ಟಿದ ಆಕೆ ತಾಯ್ತಂದೆಯರಿಗೆ ಬೇಡವಾದ ಮಗಳಾಗಿದ್ದಳು  ( ಹೆಣ್ಣು ಮಗುವಲ್ಲವೇ ?) . ಆಕೆಯನ್ನು ಚಿಂದಿ(ಬಟ್ಟೆಯ ತುಂಡು)  ಎಂದೇ ಕರೆಯಲಾಗುತ್ತಿತ್ತು. ಕಾಡಿ ತಿನ್ನುತ್ತಿದ್ದ ಬಡತನದಿಂದಾಗಿ ನಾಲ್ಕನೆಯ ತರಗತಿಯವರೆಗೆ ಮಾತ್ರ ಓದಿದ್ದಳು.ಹತ್ತು ವರ್ಷ ವಯಸ್ಸಿನ  ಆಕೆಯನ್ನು,ಆಕೆಗಿಂತಲೂ 20 ವರ್ಷ ವಯಸ್ಸಾಗಿದ್ದ ವ್ಯಕ್ತಿಯೊಂದಿಗೆ ಮದುವೆ ಮಾಡಿ ಕಳುಹಿಸಲಾಯಿತು.

ಆಕೆಯ ಗಂಡನ ಮನೆಯಲ್ಲೂ ಬಡತನದ್ದೇ ತಾಂಡವ.ಆಕೆಗೆ 20 ವರ್ಷ ವಯಸ್ಸಾಗುವ ಹೊತ್ತಿಗೆ ಮೂರು ಗಂಡು ಮಕ್ಕಳ ತಾಯಿಯಾಗಿದ್ದರು. ನಾಲ್ಕನೆಯ ಮಗುವಿಗೆ ಗರ್ಭಿಣಿಯಾಗಿದ್ದಾಗ ಆಕೆಯ ಗಂಡ ಆಕೆಯನ್ನು ಮನೆಯಿಂದ ಓಡಿಸಿಬಿಟ್ಟರು. ಆಕೆ ತನ್ನ ತವರು ಮನೆಗೆ ಹಿಂದಿರುಗಿದಾಗ, ಆಕೆಯ ತಾಯಿ  ‘ಕೊಟ್ಟ  ಹೆಣ್ಣು ಕುಲಕ್ಕೆ ಹೊರಗು, ನಿನ್ನ ಪಾಡು ನಿನ್ನದು’ ಎಂದು ಹೇಳಿ ಮನೆಯೊಳಕ್ಕೂ ಬಿಟ್ಟುಕೊಳ್ಳದೆ ಅಟ್ಟಿಬಿಟ್ಟರು. ಆಕೆ ಊರಿನ ದನದ ಕೊಟ್ಟಿಗೆಯೊಂದರಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮವಿತ್ತರು.

ಹೆರಿಗೆ ಮಾಡಿಸುವವರೂ ಯಾರು ಇರಲಿಲ್ಲ. ಆಕೆಯೇ ಹೆರಿಗೆ ಮಾಡಿಕೊಂಡರು.ಕರುಳ ಬಳ್ಳಿಯನ್ನು ಚೂಪಾದ ಕಲ್ಲಿನಿಂದ ತುಂಡರಿಸಿಕೊಂಡರು. ಸ್ವತಃ ನಿರಾಶ್ರಿತೆ,ಜೊತೆಗೆ ಹೆಣ್ಣು ಮಗು!   ಆತ್ಮಹತ್ಯೆ ಮಾಡಿಕೊಳ್ಳೋಣವೇ ಎಂದುಕೊಂಡರು.ಆದರೆ ಧೈರ್ಯ ತಂದುಕೊಂಡರು.ಹತ್ತಿರದ ರೈಲು ನಿಲ್ದಾಣಕ್ಕೆ ಹೋಗಿ ಬಿಕ್ಷೆ ಬೇಡ ತೊಡಗಿದರು.ಹೆಣ್ಣು ಮಗುವನ್ನು ಸಾಕಿದರು.ಆಲ್ಲಿ ಆಕೆ ಬಿಕ್ಷೆ ಬೇಡುತ್ತಿದ್ದ ರೈಲ್ವೇ ಫ್ಲ್ಯಾಟ್ ಫಾರಮ್ಮಿನಲ್ಲಿ  ತಾಯಿ ತಂದೆಯರಿಲ್ಲದ ಹನ್ನೊಂದು ಜನ ತಬ್ಬಲಿ ಮಕ್ಕಳಿದ್ದರು. ಅವರೆಲ್ಲರೂ ಬಿಕ್ಷೆ ಬೇಡುತ್ತಲೇ ಬದುಕು ಸಾಗಿಸುತ್ತಿದ್ದರು. ಆಕೆ ಅವರೆಲ್ಲರನ್ನೂ ತನ್ನ ಮಕ್ಕಳಂತೆಯೇ   ಭಾವಿಸಿ ಪ್ರೀತಿಸತೊಡಗಿದರು.

ಪೋಷಿಸಿದರು.ಇನ್ನೂ ಹೆಚ್ಚು ಹೆಚ್ಚು ಭಿಕ್ಷೆಯನ್ನು ಬೇಡತೊಡಗಿದರು. ಏಕೆಂದರೆ  ಈಗ ಆಕೆ ಹತ್ತಾರು ಮಕ್ಕಳಿಗೆ ಅನ್ನವನ್ನುಣಿಸಬೇಕಿತ್ತು. ತನ್ನ ಸ್ವಂತ ಮಗುವನ್ನು ಪುಣೆಯ ಶ್ರೀಮಂತ ದಗಡಸೇಟ್ ಟ್ರಸ್ಟಿಗೆ ದತ್ತು ಕೊಟ್ಟು ಬಿಟ್ಟರು.ಉಳಿದ ಮಕ್ಕಳನ್ನು ಸಾಕ ತೊಡಗಿದರು. ಮುಂದೆ ಆಕೆ ತನ್ನ ಇಡೀ ಜೀವನವನ್ನು ಅನಾಥ ಮಕ್ಕಳಿಗಾಗಿಯೇ ಮೀಸಲಿಟ್ಟರು. ಬಿಕ್ಷೆಯಿಂದಲೇ ಅವರನ್ನೆಲ್ಲ ಬೆಳೆಸತೊಡಗಿದರು.

ಸಿಂಧೂ ತಾಯಿಯವರು ಇದುವರೆಗೂ 1050 ಅನಾಥ ಮಕ್ಕಳನ್ನು ಸಾಕಿದ್ದಾರೆ, ಬೆಳೆಸಿದ್ದಾರೆ,ಒದಿಸಿದ್ದಾರೆ, ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ಅವರಿಗೆ 207 ಜನ ಅಳಿಯಂದಿರು, 36 ಜನ ಸೊಸೆಯಂದಿರೂ ಮತ್ತು ಒಂದು ಸಾವಿರಕ್ಕೂ ಹೆಚ್ಚು ಮೊಮ್ಮಕ್ಕಳಿದ್ದಾರೆ.  ಪುಣೆಯ ಹೆಡಪ್ಸರ್ ಬಡಾವಣೆಯಲ್ಲಿ ಆಕೆ ಸ್ಥಾಪಿಸಿದ “ಸನ್ಮತಿ ಬಾಲ ನಿಕೇತನದಲ್ಲಿ” ಈಗ ಮುನ್ನೂರಕ್ಕೂ ಹೆಚ್ಚು ಅನಾಥ ಮಕ್ಕಳು ವಾಸಿಸುತ್ತಿದ್ದಾರೆ. ಆಕೆಗೆ 500 ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.

ಆಕೆಯ ಬದುಕನ್ನು ಆಧರಿಸಿದ “ ಮೀ ಸಿಂಧೂತಾಯಿ ಸಪ್ಕಾಳ್” ಎಂಬ ಮರಾಠಿ ಭಾಷೆಯ ಚಲನಚಿತ್ರ ಕೂಡ 2010 ರಲ್ಲಿ ಬಿಡುಗಡೆಯಾಗಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿತು.

ಈಗಲೂ 69ರ ವಯಸ್ಸಿನಲ್ಲೂ ಬಿಡುವಿಲ್ಲದೆ ದುಡಿಯುವ ಸಿಂಧೂ ತಾಯಿಯ ‘ದೊಡ್ಡ ಮಗ’ನಿಗೆ ಈಗ 86 ವರ್ಷ ವಯಸ್ಸು! ಆತ ಯಾರು ಗೊತ್ತೇ ? ಆತ ಆಕೆಗೆ ತಾಳಿ ಕಟ್ಟಿದ ಗಂಡ ! ‘ನನ್ನದು ತಪ್ಪಾಯಿತು, ನಿನ್ನನ್ನು ಮನೆಯಿಂದ ಹೊರಕ್ಕೆ ಅಟ್ಟ ಬಾರದಿತ್ತು. ನಾನೀಗ ನಿರಾಶ್ರಿತ’ ಎಂದು ಬೇಡಿಕೊಂಡು ಬಂದ ಗಂಡನನ್ನು ‘ಆಯಿತು ನೀವೂ ಒಬ್ಬ ಮಗನಂತೆ ಈ ಅನಾಥ ಮಕ್ಕಳೊಡನೆ ಇರಿ’ ಎಂದು ಹೇಳಿ ಸೇರಿಕೊಂಡರಂತೆ. ಸಿಂಧೂ ತಾಯಿ  ಇವರ ಆತ್ಮವಿಶ್ವಾಸಕ್ಕೆ.ಛಲಬಿಡದ ಸಾಧನೆಗೆ, ನಾವೆಲ್ಲ ನಮಸ್ಕರಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top