“ಗುರುವಿಗೆ ತಿರುಮಂತ್ರ ಹಾಕಿದ ಹುಲಿ”.
ಅನೇಕ ವರ್ಷಗಳ ಹಿಂದೆ ಕಾಡಿನಲ್ಲಿ ಹುಲಿ ಇತ್ತು.ಅದು ಒಂಟಿಯಾಗಿ ಬೆಳೆದಿತ್ತು.ಅದಕ್ಕೆ ಜೊತೆಗಾರರು ಯಾರು ಇರಲಿಲ್ಲ.ಎಲ್ಲರೂ ಪಕ್ಕದ ಕಾಡಿಗೆ ಇದೊಂದನ್ನು ಬಿಟ್ಟು ತೆರಳಿದ್ದರು.ಅದು ಸದಾ ಕಾಲ ಮರದಡಿ ನೆರಳಿನಲ್ಲಿ ಸೋಮಾರಿಯಾಗಿ ಮಲಗಿ ಕೊಂಡಿರುತ್ತಿತ್ತು. ಹೀಗೆ ಮಲಗಿರುವಾಗ ಅದರತ್ತ ಕಾಡು ಬೆಕ್ಕೊಂದು ಬಂದಿತ್ತು. “ಏನು ಹುಲಿರಾಯರೇ ಕ್ಷೇಮವೇ ? ಹಾಯಾಗಿ ನಿದ್ದೆ ಮಾಡುತ್ತಿರುವೆಯಲ್ಲಾ.. ಈಗ ತಾನೇ ಭರ್ಜರಿ ಭೋಜನ ಮುಗಿಸಿರುವ ಹಾಗೆ ಕಾಣುತ್ತಿದೆ”.
ಕಾಡುಬೆಕ್ಕಿನ ಮಾತಿಗೆ ಹುಸಿನಕ್ಕ ಹುಲಿ “ಅಯ್ಯೋ ನನಗೆ ಬೇಟೆಯಾಡಲು ಬಂದರೆ ತಾನೇ ಭರ್ಜರಿ ಭೋಜನ ಮಾಡುವುದಕ್ಕೆ! ಹಸಿವಿನಿಂದ ಸುಸ್ತಾಗಿ ಇಲ್ಲಿ ಕುಳಿತ್ತಿದ್ದೇನೆ” ಎಂದಿತು. ಆಶ್ಚರ್ಯಗೊಂಡ ಕಾಡು ಬೆಕ್ಕಿಗೆ ಹುಲಿಯ ಸ್ಥಿತಿ ನೋಡಿ ಬೇಸರವಾಯಿತು. ಅದು ಬೇಟೆಯ ವಿದ್ಯೆಯನ್ನು ಕಲಿಸಿಕೊಡಲು ಮುಂದಾಯಿತು. ಆ ದಿನದಂದು ಹುಲಿಗೆ ಕಠಿಣ ತರಬೇತಿ ಪ್ರಾರಂಭವಾಯಿತು. ಅನೇಕ ತಂತ್ರಗಳನ್ನು ಕಾಡು ಬೆಕ್ಕು, ಹುಲಿಗೆ ಕಲಿಸಿತು.
ದಿನೇ ದಿನೇ ಕಲಿತ ವಿದ್ಯೆಯನ್ನು ಅಭ್ಯಾಸ ಮಾಡುತ್ತಾ ಮಾಡುತ್ತಾ ಹುಲಿರಾಯ ಬೇಟೆಯಲ್ಲಿ ಪಳಗಿಬಿಟ್ಟಿತು. ಅದೊಂದು ದಿನ ಹುಲಿಗೆ ತೀವ್ರ ಹಸಿವು.ಅದು ತನ್ನ ಗುರು ಕಾಡು ಬೆಕ್ಕಿನ ಬಳಿಗೆ ತೆರಳಿ ತನಗೆ ಆಹಾರ ಬೇಕೆಂದು ಕೇಳಿತು. ಕಾಡುಬೆಕ್ಕು ‘ಹಾಗಾದರೆ ನಿನ್ನ ಬೇಟೆಯ ಸಾಮರ್ಥ್ಯವನ್ನು ಪರೀಕ್ಷಿಸಲು ಇದೇ ಸುಸಂದರ್ಭ’ ಎಂದಿತು.ಗಹಗಹಿಸಿ ನಕ್ಕ ಹುಲಿ ಕಾಡು ಬೆಕ್ಕಿನತ್ತ ಧಾವಿಸಿತು.ಗಾಬರಿಯಾದ ಕಾಡುಬೆಕ್ಕು ತನ್ನ ಬಳಿ ಏಕೆ ಬರುತ್ತಿದ್ದೀಯೆಂದು ಕೇಳಿದಾಗ “ನನ್ನ ಮೊದಲ ಪ್ರಯೋಗ ನಿನ್ನ ಮೇಲೆ ಆಗಲಿ.ನಿನ್ನನ್ನೇ ಬೇಟೆಯಾಡಿ ಹಸಿವು ತೀರಿಸಿಕೊಳ್ಳುತ್ತೇನೆ” ಎಂದಿತು ಹುಲಿ.
ಭಯಗೊಂಡ ಕಾಡು ಬೆಕ್ಕು “ ಕಲಿತ ವಿದ್ಯೆಯನ್ನು ಗುರುವಿನ ಮೇಲೆ ಪ್ರಯೋಗಿಸುತ್ತಿರುವೆಯಲ್ಲಾ ಇದು ಸರಿಯೇ ?” ಎಂದು ಕೇಳಿತು. ಕಾಡುಬೆಕ್ಕಿನ ಯಾವ ಮಾತುಗಳನ್ನು ಕೇಳಿಸಿಕೊಳ್ಳುವ ಸಂಯಮ ಹುಲಿಗಿರಲಿಲ್ಲ. ನಿನ್ನ ಎಲ್ಲಾ ವಿದ್ಯೆಗಳೂ ನನಗೆ ಸಿದ್ಧಿಸಿವೆ. ನೀನು ಏನೇ ಮಾಡಿದರೂ ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ದಾಳಿ ಮಾಡಲು ಮುಂದಾಯಿತು. “ಯ್ಯೋ ಹುಲಿರಾಯ,ನಿನಗೆ ನಾನು ಎಲ್ಲಾ ವಿದ್ಯೆಗಳನ್ನು ಕಲಿಸಿರುವೆ ಎಂದು ತಿಳಿದುಕೊಂಡಿರುವೆಯಲ್ಲಾ?”
ಅದು ತಪ್ಪು ಒಂದು ವಿದ್ಯೆಯನ್ನು ನಿನಗೆ ಕಲಿಸಿರಲಿಲ್ಲ.ಬೇಟೆಯಿಂದ ತಪ್ಪಿಸಿಕೊಳ್ಳುವ ವಿದ್ಯೆ ನಿನಗಿನ್ನು ತಿಳಿದಿಲ್ಲ,ನನಗೆ ತಿಳಿದಿದೆ” ಎಂದು ನಕ್ಕು ಬಡ ಬಡನೆಯೇ ಹತ್ತಿರವೇ ಇದ್ದ ಮರವನ್ನು ಸರಸರನೇ ಏರಿತು.ಹುಲಿರಾಯ ಪೆಚ್ಚಾಗಿ ತನ್ನನ್ನು ತಾನೇ ಹಳಿದುಕೊಳ್ಳುತ್ತಾ ಕಾಡಿನಲ್ಲಿ ಮರೆಯಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
