fbpx
ಜೀವನ ಕ್ರಮ

ಕಲೆ,ವಿಜ್ಞಾನಗಳು ಒಳಿತಿಗಾಗಿ ಇರಬೇಕೆ ಹೊರತು,ಅಹಂಕಾರ ಪ್ರದರ್ಶನಕ್ಕಾಗಿ ಅಲ್ಲ – ತುಂಬುರ,ನಾರದರ ಕಥೆ..

 ಶ್ರೇಷ್ಠ ಕಲೆ ಯಾವುದು ?

ಸಾಮಾನ್ಯವಾಗಿ ಜನರಲ್ಲಿ ತುಸು ಜ್ಞಾನ, ಚಾತುರ್ಯವಿದ್ದಾಗ, “ ನನಗೆ ಸರಿ ಸಮಾನರು ಯಾರಿದ್ದಾರೆ ? ಎಂಬ ಅಹಂಕಾರ ಬೆಳೆದು ಬಿಡುವುದುಂಟು.ಇದಕ್ಕಾಗಿಯೇ,  “ ಅಲ್ಪ ವಿದ್ಯಾ ಮಹಾ ಗರ್ವಿ” ಎಂಬ ಮಾತು ಹುಟ್ಟಿರುವುದು.ಆದರೆ, ನಿಜವಾದ ವಿದ್ವಾಂಸರು, ಸಾಧಕರು, ಕಲಾವಿದರು, ತಮಗೇನೂ ತಿಳಿದಿಲ್ಲ ಎಂಬಂತೆ ನಿರ್ಗವಿಗಳಾಗಿರುತ್ತಾರೆ. ಸಾಧಕರ ಈ ನಿರಹಂಕಾರಿ ಮನೋಭಾವವನ್ನು  ತಿಳಿಸುವ ಒಂದು ಅರ್ಥಪೂರ್ಣ ಪ್ರಸಂಗ ಇಲ್ಲಿದೆ.

ಒಮ್ಮೆ ಸ್ವರ್ಗದಲ್ಲಿ ನಾರದರು ಮತ್ತು ತುಂಬುರರ ನಡುವೆ ನಮ್ಮಿಬ್ಬರಲ್ಲಿ ಶ್ರೇಷ್ಠ ಕಲಾವಿದರು ಯಾರು ? ಎಂಬ ಕುರಿತು ವಿವಾದ ಉಂಟಾಯಿತು..ಅವರಿಬ್ಬರ ನಡುವೆ  ಅದು ಬಗೆಹರಿಯದಿದ್ದಾಗ ತಮ್ಮ ವಿವಾದವನ್ನು ಬಗೆಹರಿಸುವಂತೆ ಭಗವಂತನಾದ ಶ್ರೀ ವಿಷ್ಣುವಿನ ಬಳಿ ಹೋಗಿ  ವಿನಂತಿಸಿಕೊಂಡರು.

ಆಗ ಮುಗುಳು ನಗುತ್ತಾ ವಿಷ್ಣು ದೇವರು ಹೇಳಿದರು, ಸಂಗೀತದ ಮಟ್ಟಿಗೆ “ನಾನು ಅಷ್ಟೇನೂ ಪಳಗಿದವನಲ್ಲ.ಮಹಾನ್ ಕಲಾವಿದರಾದ ಹನುಮಂತರ ಬಳಿಗೆ ಹೋಗಿ.ಅವರ ಸೂಕ್ತ ತೀರ್ಮಾನವನ್ನು ನೀಡಬಲ್ಲರು.”

ವಿಷ್ಣುವಿನ ಮಾತನ್ನು ಒಪ್ಪಿದ್ದ ತುಂಬುರ ಮತ್ತು ನಾರದ ಇಬ್ಬರೂ ಅಂತಿಮ ನಿರ್ಣಾಯವನ್ನು ಪಡೆಯಲೆಂದು ನೇರವಾಗಿ ಹಿಮಾಲಯದ ಕಡೆಗೆ ಹೊರಟರು.ಅಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮಂಜುಗಡ್ಡೆಗಳ ನಡುವೆ ಕುಳಿತು ಮಧುರ ಕಂಠದಲ್ಲಿ ಹಾಡುವ ಹನುಮಂತನನ್ನು ಕಂಡರು.

ಹನುಮಂತರು ತಮ್ಮ ಗಾಯನದಲ್ಲಿ ಎಷ್ಟೊಂದು ಮಗ್ನರಾಗಿದ್ದರೆಂದರೆ ಚಪ್ಪಾಳೆ ತಟ್ಟಿ ಹನುಮಂತನ ಗಮನವನ್ನು ಸೆಳೆಯಬೇಕಾಯಿತು. ಕಣ್ತೆರೆದ ಹನುಮಂತನಿಗೆ ಅವರಿಬ್ಬರೂ  ತಿಳಿಸಿದರು. ಭಗವಂತನಾದ ವಿಷ್ಣುವು ನಮ್ಮಿಬ್ಬರ ಪೈಕಿ ಶ್ರೇಷ್ಠ ಸಂಗೀತ ವಿದ್ವಾಂಸರು ಯಾರು ? ಎಂಬ ನಿರ್ಣಯ ಪಡೆಯುವಂತೆ ತಿಳಿಸಿದ್ದಾರೆ.

ಹನುಮಂತ ಈ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡಲಿಲ್ಲ,ಬದಲಾಗಿ ಪಕ್ಕದಲ್ಲಿದ್ದ ವೀಣೆಯನ್ನು ಎತ್ತಿಕೊಂಡರು, ನಿಧಾನವಾಗಿ ಅದರ ತಂತಿಗಳನ್ನು ಹದಗೊಳಿಸುತ್ತಾ ಬಂದು ವಿಶಿಷ್ಟ ಪ್ರಕಾರವಾದ ದ್ವನಿ ಬರುವಂತೆ ತಂತಿಯನ್ನು ಮೀಟ ತೊಡಗಿದರು. ವೀಣೆಯಿಂದ ಹೊರಟ ದ್ವನಿ ಎಷ್ಟು ಅತ್ಯದ್ಬುತವಾಗಿತ್ತು ಎಂದರೆ,ಅದರ ಪರಿಣಾಮವಾಗಿ ಹಿಮಾಲಯದ ಮಂಜುಗೆಡ್ಡೆ ಕರಗಿ ನೀರಾಗ ತೊಡಗಿತು. ಇದನ್ನು ನೋಡಿದ ತುಂಬುರ -ನಾರದರಿಬ್ಬರೂ ಚಕಿತರಾಗಿ ಬಿಟ್ಟರು.ನೀರಿನ ಪ್ರವಾಹವೇ ಉಕ್ಕಿ  ಹರಿದು ನಾರದ ತುಂಬುರರು ಈ ನೀರಿನಲ್ಲಿ ಮುಳುಗತೊಡಗಿದರು. ಆಗ ‘ನಮ್ಮನ್ನು ಪಾರು ಮಾಡಿರಿ’ ಎಂದು ವಿನಂತಿಸಿಕೊಂಡರು.

ಆಗ ಹನುಮಂತನು ಕರಗಿದ ನೀರನ್ನು ಹಿಡಿದು ಗೆಡ್ಡೆಯನ್ನಾಗಿ ಮಾಡಬಲ್ಲವರೇ  ಶ್ರೇಷ್ಠ ಕಲಾವಿದರೆಂಬುದೇ ನನ್ನ ನಿರ್ಣಯ ಎಂದು ನುಡಿದನು.ನಾರದ ತುಂಬುರರಿಬ್ಬರೂ ತಮ್ಮ ಸಂಗೀತದ ಹಿರಿಮೆ ತೋರಲೆಂದು ವೀಣೆಯ ತಂತಿಗಳನ್ನು ಜೋರಾಗಿ ಮೀಟ ತೊಡಗಿದರು.ಆದರೆ ಅವರ ಪ್ರಯತ್ನ ವ್ಯರ್ಥವಾಗಿ “ನೀವೇ ಮಹಾನ ಕಲಾವಿದರು” ಎಂದು ಸೋಲನ್ನೊಪ್ಪಿಕೊಂಡು, ತಲೆ ಬಾಗಿದರು.

ಈ ಪ್ರಪಂಚದಲ್ಲಿ ಯಾವುದೇ ಒಂದು ಕಲೆ ಅಥವಾ ವಿಶೇಷ  ಜ್ಞಾನದ ಬಗ್ಗೆ ಗರ್ವ, ಅಹಂಕಾರವಿರಬಾರದು ಎಲ್ಲ ಕಲೆ,ವಿಜ್ಞಾನಗಳು ಭಗವಂತನ ಆರಾಧನೆಗಾಗಿ ಇರಬೇಕೆ ಹೊರತು,ಅಹಂಕಾರ ಪ್ರದರ್ಶನಕ್ಕಾಗಿ ಅಲ್ಲ,ಜಗತ್ತಿನಲ್ಲಿ ತಾನೇ ದೊಡ್ಡವನು ಎನ್ನುವ ಅಹಂಕಾರ ಯಾರಿಗೂ ಬರಬಾರದು, ಎಲ್ಲರೂ ಶಕ್ತಿವಂತರು ಎಂಬ ಮುಕ್ತ ನಿಲುವು ಹೊಂದಿರಬೇಕು. “ತಾಳಿದವ ಬಾಳಿಯಾನು” ಎಂಬ ಮಾತಿನಂತೆ ನಿರಹಂಕಾರಿಗಳೇ ಈ ಜಗತ್ತಿನಲ್ಲಿ ಸಫಲರಾಗಬಲ್ಲರು ಎಂಬುದನ್ನು ಎಂದೂ ಮರೆಯಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top