ಕರ್ಣನು ದ್ರೋಣಾಚಾರ್ಯರ ಕಾರಣದಿಂದ ಪರಶುರಾಮರಿಂದ ಶಾಪಗ್ರಸ್ತನಾದ.
ಕುಂತಿದೇವಿಯ ಕಿವಿಯಿಂದ ಜನಿಸಿದ ಕರ್ಣನು ಒಂದು ಪೆಟ್ಟಿಗೆಯಲ್ಲಿ ತೇಲುತ್ತ ಸೂತ ಕುಲಜನಾದ ದೃತರಾಷ್ಟ್ರನ ಸಾರಥಿ ಸುಬಲನಿಗೆ ದೊರೆತ ಸಂಗತಿಯನ್ನು ಈಗಾಗಲೇ ಹೇಳಲಾಗಿದೆ.ಮಕ್ಕಳಿಲ್ಲದ ಸುಬಲನಾದರೋ ತಮ್ಮ ಜಾತಿಯ ಪದ್ಧತಿಯಂತೆ ಕರ್ಣನಿಗೆ ತನ್ನ ಇತಿಮಿತಿಯೊಳಗೆ ವಿದ್ಯೆ ಕೊಡಿಸುವ ಏರ್ಪಾಡು ಮಾಡಿದ್ದನು.ಇನ್ನೂ ಹೆಚ್ಚು ಕಲಿಯಬೇಕು ಹಾಗೂ ಶಸ್ತ್ರಾಸ್ತ್ರ ಪರಿಣಿತನಾಗಬೇಕು ಎಂಬ ಅವನ ಆಸೆಗೆ ಆತನು ಬೆಳೆದ ಅಂಬಿಗರ ಜಾತಿ ಅಡ್ಡ ಬಂದಿತ್ತು.ಕಾರಣವಿಷ್ಟೇ ದ್ರೋಣಾಚಾರ್ಯರು ಕ್ಷತ್ರಿಯರನ್ನುಳಿದು ಬೇರೆ ಯಾರಿಗೂ ವಿದ್ಯಾದಾನ ಮಾಡುತ್ತಿರಲಿಲ್ಲ.
ಶಸ್ತ್ರಾಸ್ತ್ರ ಮತ್ತು ಶಸ್ತ್ರಾಸ್ತ್ರಗಳನ್ನು ಕಲಿಯುವ ಅದಮ್ಯ ಬಯಕೆ ಹೊಂದಿದ್ದ ಕರ್ಣನು ನಿರಾಶನಾಗಿರಲಿಲ್ಲ.ಶಸ್ತ್ರಾಸ್ತ್ರ ವಿದ್ಯೆ ಕಲಿಸುವುದರಲ್ಲಿ ದ್ರೋಣರಷ್ಟೇ ಪ್ರಖ್ಯಾತಿ ಹೊಂದಿದ್ದ ಪರಶುರಾಮರ ಹೆಸರನ್ನು ಕೇಳಿದ್ದನು. ಅದಕ್ಕಾಗಿ ವಿದ್ಯೆ ಕಲಿಯಲು ಪರಶುರಾಮರ ಬಳಿಗೆ ತೆರಳಿದನು. ಇಲ್ಲಿಯೂ ಕರ್ಣನಿಗೆ ಜಾತಿಯ ಭೂತ ಅಡ್ಡಬಂದಿತು. ಏಕೆಂದರೆ ಬ್ರಾಹ್ಮಣರನ್ನುಳಿದು ಬೇರೆ ಜಾತಿಯವರಿಗೆ ಪರಶುರಾಮರು ವಿದ್ಯೆ ಹೇಳಿ ಕೊಡುತ್ತಿರಲಿಲ್ಲ.ತಾನು ಕ್ಷತ್ರಿಯ ಕುಲ ಸಂಜಾತನಾದರೂ ಬೆಳೆದದ್ದು ಅಂಬಿಗರ ಲಾಲನೆ ಪಾಲನೆಯಲ್ಲಿ,ಪರುಶುರಾಮರ ಬಳಿ ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ವಿಧ್ಯೆ ಕಲಿಯಲು ಪ್ರಾರಂಭಿಸಿದನು.ತೀಕ್ಷ್ಣ ಮತಿಯಾಗಿದ್ದ ಹಾಗೂ ಉತ್ತಮ ಕುಲ ಸಂಜಾತನಾಗಿದ್ದ ಕರ್ಣನಿಗೆ ವಿದ್ಯೆ ಬೇಗ ಬೇಗ ತಲೆಗೆ ಹತ್ತುತ್ತಿತ್ತು.
“ ಇಷ್ಟಾದರೂ ವಿದ್ಯಾ ವಿನಯೇನ ಭೂಷತೆ” ಎಂಬ ಸುಭಾಷಿತದಂತೆ ಕರ್ಣನು ವಿನಯದಿಂದಲೇ ಗುರುಸೇವೆ ಮಾಡುತ್ತ ಇನ್ನು ಹೆಚ್ಚು ಹೆಚ್ಚು ವಿದ್ಯೆ ಕಲಿಕೆಯಲ್ಲಿ ನಿರತನಾಗಿದ್ದನು.
ಈ ಸಮಾಚಾರ ತಿಳಿದ ದ್ರೋಣಾಚಾರ್ಯರು ಪರುಶುರಾಮರ ಆಶ್ರಮಕ್ಕೆ ತೆರಳಿದರು.ಆ ಸಮಯದಲ್ಲಿ ಪರಶುರಾಮರು ಮಧ್ಯಾಹ್ನದ ಭೋಜನ ಮುಗಿಸಿ ಲಘು ನಿದ್ರೆ ಹೊಂದುವ ದೃಷ್ಟಿಯಿಂದ ಕುಟೀರದಲ್ಲಿ ಕರ್ಣನ ತೊಡೆಯ ಮೇಲೆ ತಮ್ಮ ತಲೆಯನ್ನಿಟ್ಟು ನಿದ್ರಾವಶರಾಗಿದ್ದರು. ಒಳಪ್ರವೇಶಿಸಿದ ದ್ರೋಣರು ಕರ್ಣನಿಗೆ ಪರುಶುರಾಮರನ್ನು ಎಬ್ಬಿಸಲು ಹೇಳಿದರು.
ಇದಕ್ಕೊಪದ ಕರ್ಣನು ದ್ರೋಣರ ಆಜ್ಞೆಯನ್ನು ತಿರಸ್ಕರಿಸಿದನು. ಕೋಪೋದ್ರಿಕ್ತರಾದ ದ್ರೋಣರು ಒಂದು ಗುಂಗಿಹುಳದ ರೂಪಧರಿಸಿ ಕರ್ಣನ ಇನ್ನೊಂದು ತೊಡೆಯನ್ನು ಕಡಿಯಹತ್ತಿದರು.ಕಡಿತ ಅಧಿಕವಾಗುತ್ತ ಕರ್ಣನ ತೊಡೆಯಲ್ಲಿ ರಂಧ್ರವುಂಟಾಗಿ.ರಕ್ತ ಜಿನುಗಲು ಪ್ರಾರಂಭವಾಗಿ ಅಧಿಕಗೊಳ್ಳುತ್ತಾ ಹೋಯಿತು. ಇಷ್ಟಾದರೂ ಕರ್ಣನು ಮಿಸುಕಾಡದೆ ಆ ಯಾತನೆಯನ್ನು ಸಹಿಸಿಕೊಂಡು ಹಾಗೆಯೇ ಕುಳಿತನು. ಈ ಕ್ರಮದಿಂದ ಭೃಂಗರೂಪದ ದ್ರೋಣರ ಕೋಪ ಇನ್ನೂ ಅಧಿಕಗೊಂಡಿತು.ಅವರು ಹತಾಶರಾಗಿ ಕೊನೆಗೆ ನಿದ್ರಾವಶರಾಗಿದ್ದ ಪರುಶುರಾಮರ ಕಿವಿಯನ್ನೇ ಕಚ್ಚಿ ಅವರ ನಿದ್ರಾ ಭಂಗಮಾಡಿ ಅಲ್ಲಿಂದ ಹಾರಿ ಹೋದರು.
ಗುಂಗಿಹುಳದ ಕಚ್ಚುವಿಕೆಯಿಂದಾಗಿ ನಿದ್ರೆಯಿಂದ ಎಚ್ಚೆತ್ತ ಪರಶುರಾಮರು ಕುಳಿತಿದ್ದ ಕರ್ಣನೆಡೆಗೆ ನೋಡಿದರು.ಆತನ ಬಲತೊಡೆಯಲ್ಲಿ ರಕ್ತ ಹರಿಯುತ್ತಿದ್ದುದನ್ನು ಕಂಡರು.ಆಗ ಪರಶುರಾಮರು ಇದೇನು ? ನಿನ್ನ ತೊಡೆಯಿಂದ ರಕ್ತ ಹರಿಯುತ್ತಿದೆ ? ಎಂದು ಕೇಳಿದರು. ಆಗ ಕರ್ಣನು ಗುರುಗಳು ನಿದ್ರಾವಶರಾಗಿದ್ದಾಗ ಒಂದು ಗುಂಗಿಹುಳವೂ ತನ್ನ ತೊಡೆಯನ್ನು ಕಡಿದು ಗಾಯ ಮಾಡಿತು ಎಂದು ಉತ್ತರಿಸಿದನು. ಗುಂಗಿಹುಳವೂ ನಿನ್ನ ತೊಡೆಯನ್ನು ಕಡಿಯಲು ಪ್ರಾರಂಭಿಸಿದ ಕೂಡಲೇ ನೀನು ಅದನ್ನು ಕೈಯಿಂದ ಹೊಡೆದು ಹೋಡಿಸಬಹುದಿತ್ತಲ್ಲ. ಇಷ್ಟೊಂದು ನೋವು ಸಂಕಟ ಅನುಭವಿಸುವುದು ತಪ್ಪುತ್ತಿತ್ತು ಎಂದರು.
ಅದಕ್ಕೆ ಕರ್ಣನು “ಅದೇನೋ ಸರಿ ಗುರುಗಳೇ,ಆದರೆ ನಿದ್ರಾವಶರಾಗಿದ್ದ ತಮ್ಮ ನಿದ್ರೆ ಭಂಗವಾಗುತ್ತಿತ್ತು. ಇದರಿಂದ ನನಗೆ ಗುರು ಸೇವೆಯಲ್ಲಿ ವ್ಯತ್ಯಯ ಮಾಡಿದ ದೋಷ ತಟ್ಟುತ್ತಿತ್ತು.ಅದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ” ಎಂದು ಉತ್ತರಿಸಿದನು.
ಶಿಷ್ಯನ ಗುರುಭಕ್ತಿಯನ್ನು ಕಂಡು ಪರುಶುರಾಮರಿಗೆ ಭಾರಿ ಆನಂದವಾಯಿತು. ಆದರೆ,ಮರುಕ್ಷಣವೇ ಅವರಿಗೆ ಒಂದು ಅನುಮಾನ ಕಾಡಿತು.ಬ್ರಾಹ್ಮಣರ ಕಷ್ಟ,ಸಹಿಷ್ಣುತೆಯ ಸಂಪೂರ್ಣ ಅರಿವು ಹೊಂದಿದ್ದ ಪರಶುರಾಮರು ಪ್ರಥಮ ಬಾರಿಗೆ ಶಿಷ್ಯನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಅವನ ಮುಖದಲ್ಲಿ ರಾಜಕಳೆ ಸೂಸುತ್ತಿತ್ತು.ಆದ್ದರಿಂದ ಇವನು ಬ್ರಾಹ್ಮಣನಲ್ಲ ಎಂದು ತೀರ್ಮಾನಕ್ಕೆ ಬಂದ ಕರ್ಣನಿಗೆ ಗದರಿಕೆಯ ದ್ವನಿಯಲ್ಲಿ ನಿನ್ನ ಜಾತಿಯ ಬಗ್ಗೆ ನಿಜ ಹೇಳು ಎಂದು ಕೇಳಿದರು. ಅವರ ರೌದ್ರ ಕಳೆಯನ್ನೂ ಮತ್ತು ಇಂಗಿತವನ್ನೂ ಅರಿತ ಕರ್ಣನು ತಾನು ಸೂತ ಕುಲದವನೆಂದು,ವಿದ್ಯೆ ಕಲಿಯುವ ಆದಮ್ಯ ಆಸೆಯಿಂದ ಬ್ರಾಹ್ಮಣನೆಂದು ಸುಳ್ಳು ಹೇಳಿ ತಮ್ಮಲ್ಲಿ ವಿದ್ಯೆ ಕಲಿಯಲು ಬಂದ ಸಂಗತಿ ನಿಜವೆಂದು ಗದ್ಗದಿತನಾಗಿ ಹೇಳಿದನು. ಆಗ ಪರಶುರಾಮರು ಈಗ ಒಂದು ಸುಳ್ಳಿಗೆ ಮತ್ತೊಂದು ಸುಳ್ಳು ಹೇಳುತ್ತಿರುವೆಯಲ್ಲ. ನಿನ್ನ ಮುಖದಲ್ಲಿ ರಾಜಕಳೆ ಸೂಸುತ್ತಲಿದೆ. ಇಂಥದರಲ್ಲಿ ನೀನು ಸೂತ ಕುಲದವನೆಂದು ಹೇಳುತ್ತಿರುವೆಯಲ್ಲ.
ಅದೇನೇ ಇರಲಿ ನೀನು ಬ್ರಾಹ್ಮಣನಂತೂ ಅಲ್ಲ.ಆದ್ದರಿಂದ ಸುಳ್ಳು ಹೇಳಿ ವಿದ್ಯೆ ಸಂಪಾದಿಸಿರುವ ನಿನಗೆ ಆಪತ್ಕಾಲದಲ್ಲಿ ನಾನು ಹೇಳಿ ಕೊಟ್ಟಿರುವ ಮಂತ್ರೋಪದೇಶಗಳು ನೆನಪಿಗೆ ಬಾರದೆ ಪ್ರಯೋಜನಕ್ಕೆ ಬಾರದಂತಾಗಲಿ ಎಂದು ಶಾಪ ನೀಡಿ ಕ್ಷತ್ರಿಯ ಕುಲದ ಮೇಲಿನ ದ್ವೇಷದಿಂದ ಕ್ಷತ್ರಿಯರಿಗೆ ವಿದ್ಯಾದಾನ ಮಾಡಬಾರದು ಎಂಬ ತಮ್ಮ ತತ್ವಕ್ಕೆ ಬದ್ಧರಾಗಿ ಆತನನ್ನು ಆಶ್ರಮದಿಂದ ಹೊರಹಾಕಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
