ಭಾರತೀಯ ಸಂಸ್ಕøತಿಯಲ್ಲಿ ಮಾತಾಪಿತರ ನಂತರ ಹಿರಿಯ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ, ವಿವೇಕದ ಬೆಳಕು ಹರಿಸಿ, ವ್ಯಕ್ತಿಯನ್ನು ಆತ್ಮಚಿಂತನೆಗೆ ತೊಡಗಿಸುವನು ಗುರು. `ಗು’ ಎಂದರೆ `ಅಂಧಕಾರ.’ `ರು’ ಎಂದರೆ `ನಿವಾರಿಸುವ’ ಅಂದರೆ ಅಜ್ಞಾನವೆಂಬ ಅಂಧಕಾರವನ್ನು ದೂರ ಮಾಡಿ ಸುಜ್ಞಾನದ ಬೆಳಕು ಹರಿಸುವವನೇ `ಗುರು.’ ಭಾರತ ಮಾತ್ರವಲ್ಲದೆ ಜಗತ್ತಿನ ಇತರ ಭಾಗಗಳಲ್ಲಿನ ವಿವಿಧ ಮತ, ಧರ್ಮಗಳಲ್ಲೂ ಗುರುವಿಗೆ ಉನ್ನತ ಸ್ಥಾನವನ್ನು ನೀಡಲಾಗಿದೆ. ರಾಮಾಯಣ, ಮಹಾಭಾರತ ಹಾಗೂ ಭಾಗವತಗಳಲ್ಲೂ ಗುರುವಿನ ಹಿರಿಮೆ ಹಾಗೂ ಕೊಡುಗೆಯನ್ನು ಸುದೀರ್ಘವಾಗಿ ಉಲ್ಲೇಖನವನ್ನು ಕಾಣಬಹುದು. ಬ್ರಹ್ಮ ಜ್ಞಾನವನ್ನು ಬೋಧಿಸುವನನ್ನು ಸಾಕ್ಷಾತ್ ದೇವರೆಂದೇ ಪರಿಗಣಿಸಬೇಕು. ಗುರುವಿನ ಮೂಲಕವೇ ಪರಮಾತ್ಮನ ಸಾಕ್ಷಾತ್ಕಾರವಾಗಬೇಕು. ಆದ್ದರಿಂದ ಗುರು ಬೇರೆ, ಪರಮಾತ್ಮನು ಬೇರೆಯಲ್ಲ. ಶಿಷ್ಯನಲ್ಲಿರುವ ಆತ್ಮ ಗುರುವನ್ನು ಜಾಗೃತಗೊಳಿಸಿ ಅವನನ್ನು ಅಧ್ಯಾತ್ಮ ಮಾರ್ಗದಲ್ಲಿ ನಡೆಸುವವ ಗುರು.
ಹಿಂದೆ ಗುರು, ಮುಂದೆ ಗುರಿ ಇದ್ದಾಗ ಮಾತ್ರ ಕಾರ್ಯಗಳಲ್ಲಿ ಯಶಸ್ಸು ಸಾಧ್ಯ. ದೇವರಿಗಿಂತ ಗುರು. ಗುರುವಿಗಿಂತ ಗುರು ಕೃಪೆ ದೊಡ್ಡದು. ಗುರುಗಳ ಕೃಪಾ ದೃಷ್ಟಿಯಲ್ಲಿ ಶಕ್ತಿ, ಆನಂದ ಹಾಗೂ ಶಾಂತಿಯ ಲಹರಿಗಳು ಇರುತ್ತದೆ. ಗುರುಕೃಪೆ ಇದ್ದರೆ ಮಾತ್ರ ತೀವ್ರ ಪ್ರಾರಬ್ಧದಿಂದ ಪಾರಾಗಲು ಸಾಧ್ಯವಾಗುವುದು.
ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಗೆ ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎನ್ನುವರು. ವ್ಯಾಸರನ್ನು ನಾವು ಆದಿ ಗುರು ಎಂದು ಪೂಜಿಸುತ್ತೇವೆ. ಅಂದು ಅವರನ್ನು ಆರಾಧಿಸಬೇಕು. ಭಾರತೀಯ ಸಂಸ್ಕøತಿಯ ಶ್ರೇಷ್ಠ ಅಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾಚೇತನ ವೇದವ್ಯಾಸರು. ವೇದಗಳು ಹಿಂದೆ ಒಂದೇ ಆಗಿತ್ತು. ಅಧ್ಯಯನ ಮಾಡಲು ಅನುಕೂಲಕ್ಕಾಗಿ ನಾಲ್ಕು ಭಾಗಗಳನ್ನು ಮಾಡಿದವರೇ ವೇದವ್ಯಾಸರು. ಅವು ಯಾವುವು ಎಂದರೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳೆಂದು ವಿಭಾಗಿಸಿದರು. ಬ್ರಹ್ಮಸೂತ್ರ, ಭಗವದ್ಗೀತೆ, ದಶೋಪನಿಷತ್‍ಗಳನ್ನು ವ್ಯವಸ್ಥಿತವಾಗಿ ನಿರೂಪಿಸಿ ಕೊಟ್ಟ ಶ್ರೇಯಸ್ಸು ವ್ಯಾಸರಿಗೇ ಸಲ್ಲುತ್ತದೆ. 18 ಪುರಾಣಗಳನ್ನು ಲೋಕಕ್ಕೆ ಸಮರ್ಪಿಸಿದವರೂ ವ್ಯಾಸರೇ. ಮನುಕುಲದ ಮೋಕ್ಷ ಪ್ರಾಪ್ತಿಗಾಗಿ ಅವತರಿಸಿದ ಶ್ರೇಷ್ಠ ಗುರು ವೇದವ್ಯಾಸರು. ಇಂತಹ ಗುರುವನ್ನು ಅಂದು ಪೂಜಿಸಿ ಸನ್ಯಾಸಿಗಳು, ಸಾಧುಸಂತರು, ಯತಿಗಳು ಪೀಠಾಧಿಪತಿಗಳು ಚಾತುರ್ಮಾಸ್ಯ ವ್ರತವನ್ನು ಪ್ರಾರಂಭಿಸುವರು. ತಾನು ಬೆಳಗಿ ತನ್ನಂತೆ ಇತರರನ್ನು ಬೆಳಗಿಸುವವನೇ ನಿಜವಾದ ಗುರು. ಗುರು ಸಿಗದೇ ಇದ್ದರೂ ಗುರುವಿನ ಭಾವಚಿತ್ರವನ್ನು, ಮೂರ್ತಿಯನ್ನು ಪೂಜಿಸಿ ಅವನಿಂದ ವಿದ್ಯೆ ಪಡೆಯಬಹುದು.
ಒಮ್ಮೆ ಗುರು ಹಾಗೂ ಶಿಷ್ಯ ಒಂದು ಕುಟೀರದಲ್ಲಿ ವಾಸವಾಗಿದ್ದರು. ಗುರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಆ ಸಮಯದಲ್ಲಿ ಶಿಷ್ಯನು ಕುಟೀರದಲ್ಲಿ ಧ್ಯಾನ, ತಪಸ್ಸನ್ನು ಮಾಡುತ್ತಿದ್ದನು. ಬಹಳ ಸಮಯದ ನಂತರ ಶಿಷ್ಯನು ಹೊರಗೆ ಬಂದನು. ಕುಟೀರದ ಮುಂದೆ ತನ್ನ ಗುರು ಹಾಗೂ ತನ್ನ ಇಷ್ಟ ದೈವನಾದ ಶ್ರೀರಾಮಚಂದ್ರನು ನಿಂತಿರುವುದನ್ನು ಕಾಣುತ್ತಾನೆ. ನಾನು ಈಗ ಮೊದಲು ಯಾರಿಗೆ ವಂದಿಸಬೇಕು? ಇಷ್ಟ ದೈವನಿಗೋ ಅಥವಾ ಗುರುವಿಗೋ ಎಂದು ಯೋಚಿಸಿ ತಕ್ಷಣ ತನ್ನ ಗುರುವಿನ ಪಾದಗಳಿಗೆ ವಂದಿಸಿ ನಂತರ ಶ್ರೀರಾಮಚಂದ್ರನಿಗೆ ವಂದಿಸುವನು. ಆಗ ಗುರು, “ಶಿಷ್ಯ, ನೀನು ಮೊದಲು ಶ್ರೀರಾಮಚಂದ್ರನಿಗೆ ವಂದಿಸಬೇಕಲ್ಲವೇ? ಇದನ್ನು ಇಟ್ಟು ನನಗೇಕೆ ನಮಸ್ಕರಿಸಿದೆ?’’ ಎಂದು ಕೇಳಿದಾಗ, “ಗುರುವೇ ತಾವು ನನ್ನ ಪಾಲಿಗೆ ಇರದಿದ್ದರೆ ನನಗೆ ಭಗವಂತನ ದರ್ಶನ ಆಗುತ್ತಿರಲಿಲ್ಲ.
ಭಗವಂತನ ದರ್ಶನ ಆಗಿದ್ದು ತಮ್ಮಿಂದಲೇ. ಆದ್ದರಿಂದಲೇ ಮೊದಲು ನಾನು ನಿಮಗೆ ನಮಸ್ಕರಿಸಿದ್ದು’’ ಎಂದರು. ಭಗವಂತನಿಗಿಂತಲೂ ಭಗವಂತನ ಪ್ರಾಪ್ತಿಗಾಗಿ ನಮ್ಮ ಕೈ ಹಿಡಿದು ಮುನ್ನಡೆಸುವ `ಗುರುವೇ’ ಮೇಲು ಶಿಷ್ಯರ ಪಾಲಿಗೆ! ಯಾವುದೇ ಕೆಲಸ ಮಾಡಲು ಗುರು ಬೇಕೇಬೇಕು. ಈ ಕಾರಣಕ್ಕಾಗಿಯೇ ಶ್ರೀರಾಮಕೃಷ್ಣ ಪರಮಹಂಸರು ಹೇಳಿದರು. ಕಳ್ಳನಿಗೂ ಗುರು ಇರುವನು ಎಂದು.
ಕೆಲವು ಸಂದರ್ಭದಲ್ಲಿ ನಮ್ಮ ಮನಸ್ಸೇ ಗುರು ಆಗಬಹುದು. ಅದೂ ಸಹ ಸದ್ಗುರುವಿನ ಅನುಗ್ರಹದಿಂದಲೇ ನಡೆಯುವುದು. ಶ್ರೀರಾಮನಿಗೆ ವಸಿಷ್ಠರು ಗುರು. ಶ್ರೀಕೃಷ್ಣನಿಗೆ ಸಾಂದೀಪನಿ ಗುರು. ಶ್ರೀ ಶಂಕರಾಚಾರ್ಯರಿಗೆ ಗೋವಿಂದ ಭಗವತ್ಪಾದರು ಗುರು. ಶ್ರೀ ರಾಮಕೃಷ್ಣ ಪರಮಹಂಸರಿಗೆ ತೋದಾಪುರಿ ಗುರು. ಹೀಗೆ ಎಲ್ಲರಿಗೂ ಗುರು ಬೇಕೇಬೇಕು. ಗುರುವಿಲ್ಲದೆ ಕಲಿತ ವಿದ್ಯೆ, ವಿದ್ಯೆಯೇ ಅಲ್ಲ ಎನ್ನುವುದು ಶಾಸ್ತ್ರ.
ಪ್ರತಿಯೊಬ್ಬ ವ್ಯಕ್ತಿಯೂ ಗುರುಪೂರ್ಣಿಮೆ ದಿನ ಗುರುವಿಗೆ ವಂದಿಸುವುದು ಅವನ ಕರ್ತವ್ಯವಾಗಿದೆ. 12 ಹುಣ್ಣಿಮೆಯಲ್ಲಿ ಈ ಗುರು ಪೌರ್ಣಿಮೆ ಅತಿ ಶ್ರೇಷ್ಠ ಎಂದು ಶಾಸ್ತ್ರದಲ್ಲಿ ಹೇಳಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
