fbpx
ದೇವರು

ಮಹಾನ್ ಗುರು ಶಿರಡಿ ಸಾಯಿನಾಥರ ಇತಿಹಾಸ ಹಾಗು ಪವಾಡಗಳು..

ಶಿರ್ಡಿ ಸಾಯಿ ಬಾಬಾ ಇತಿಹಾಸ ಮೂಲ ಹಿನ್ನೆಲೆ

ಶಿರ್ಡಿ ಸಾಯಿ ಬಾಬಾ (ಅಜ್ಞಾತ – ೧೫ ಅಕ್ಟೋಬರ್ ೧೯೧೮) ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ಮತ್ತು ತಮ್ಮ ಜೀವನದ ಅವಧಿಯಲ್ಲಿ ಹಾಗು ನಂತರ ಅವರು ಮುಸ್ಲಿಮ್ ಅಥವಾ ಹಿಂದೂಗಳೇ ಎಂಬುದು ಅನಿಶ್ಚಿತವಾಗಿಯೇ ಉಳಿಯಿತು.

ಹಿನ್ನೆಲೆ

ಸಾಯಿಬಾಬಾ ರವರ ನಿಜವಾದ ಹೆಸರಿನ ಹಾಗು ಜನ್ಮ ಸ್ಥಳದ ಬಗ್ಗೆ ಯಾವುದೇ ಯಾವುದೇ ಸ್ಪಷ್ಟ ಉಲ್ಲೇಖಗಳಿಲ್ಲ. ಇದರ ಬಗ್ಗೆ ಬಾಬಾರವರನ್ನೇ ಕೇಳಿದಾಗ ಯಾವುದೇ ಸೂಕ್ತವಾದ ಸ್ಪಂದನೆ ಸಿಕ್ಕಿಲ್ಲವೆಂದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಯಿಬಾಬಾರು ಶಿರಡಿಗೆ ಆಗಮಿಸಿ ದಾಗ ಅವರಿಗೆ ಯಾವ ಹೆಸರಿತ್ತು ಎಂಬ ಬಗ್ಗೆ ಇತಿಹಾಸದಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.

ಆದರೆ ಸ್ಥಳೀಯ ಖಂಡೋಬ ದೇವಳದ ಆಗಮಿಕರು ಅವರನ್ನು ಕಂಡು ‘ಯಾ ಸಾಯಿ'(ಸಾಯಿ ಸುಸ್ವಾಗತ) ಎಂದು ಉದ್ಘರಿಸಿದರಂತೆ. ಅಂದಿನಿಂದ ಅವರ ಹೆಸರು ಸಾಯಿ ಬಾಬಾ ಎಂದೇ ಪ್ರಸಿದ್ಧಿಯಾಗಿದೆ. ‘ಸಾಯಿ’ ಎನ್ನುವ ಪದವು ಪೆರ್ಶಿಯಾ ಭಾಷೆಯಲ್ಲಿ ಸೂಫಿ ಸಂತರು ಗಳಿಗೆ ಕೊಡುತ್ತಿದ್ದ ಒಂದು ಬಿರುದಾಗಿತ್ತುಹಾಗು ಅದು ‘ಬಡ ವ್ಯಕ್ತಿ ‘ ಎಂಬ ಅರ್ಥ ಹೊಂದಿತ್ತು.

ಬಂಜಾರ ಭಾಷೆಯಲ್ಲಿ ಸಾಯಿ ಎಂದರೆ ‘ಒಳ್ಳೆಯ’ ಎಂಬ ಅರ್ಥವಿದೆ. ಬಾಬಾ ಎಂದರೆ ಭಾರತೀಯ ಭಾಷೆಯಲ್ಲಿ ತಂದೆಯ ತಂದೆ ಸ್ಥಾನ ಅಥವಾ ಹಿರೀಕರು ಎಂಬರ್ಥವಿದೆ. ಹೀಗಾಗಿ ಸಾಯಿ ಬಾಬಾ ಎಂದರೆ ‘ಒಳ್ಳೆಯ ಗುರು’ ‘ಪವಿತ್ರ ಗುರು’ ‘ಸಂತ ಪಿತಾಮಹ’ ಎಂಬಂತಹ ಅರ್ಥಗಳು ಬರುತ್ತವೆ. ಸಾಯಿಬಾಬಾರ ಕೆಲವು ಭಕ್ತರು ಕೂಡ ಆಧ್ಯಾತ್ಮಿಕತೆಯಲ್ಲಿ ಉತ್ತುಂಗಕ್ಕೇರಿ ಜಗದ್ವಿಖ್ಯಾತರಾಗಿದ್ದಾರೆ.

ಅವರಲ್ಲಿ ಕೆಲವರೆಂದರೆ ಶಿರಡಿಯ ಖಂಡೋಬ ದೇಗುಲದ ಅರ್ಚಕರಾಗಿದ್ದ ಮ್ಹಳಸ್ಪತಿ, ಉಪಾಸ್ನಿ ಮಹಾರಾಜ್ ಮತ್ತಿತರರು. ಇಷ್ಟೇ ಅಲ್ಲದೆ ದೇಶದ ಅನೇಕ ಸಂತ ಶಿರೋಮಣಿಗಳು ಕೂಡ ಸಾಯಿ ಬಾಬಾರ ಅಧ್ಯಾತ್ಮಿಕತೆಯ ಹಾದಿಯನ್ನೇ ತುಳಿದು ಒಂದರ್ಥದಲ್ಲಿ ಅವರ ಅನುಯಾಯಿಗಳಾಗಿದ್ದಾರೆ.

ಅವರಲ್ಲಿ ಮುಖ್ಯವಾದವರೆಂದರೆ ಸಂತ ಬಿದ್ಕರ್ ಮಹಾರಾಜ್, ಸಂತ ಗಂಗಾಗಿರ್, ಸಂತ ಜಾನಕಿದಾಸ ಮಹಾರಾಜ್ ಮತ್ತು ಸತಿ ಗೋದಾವರಿ ಮಾತಾಜಿ. ಸಾಯಿಬಾಬಾ ಎಷ್ಟೋ ಸಂತರನ್ನು ಸಹೋದರರೆ ಎಂದೂ ಸಂಭೋದಿಸಿದ್ದು ಉಂಟು, ಅದರಲ್ಲೂ ಮುಖ್ಯವಾಗಿ ಅಕ್ಕಲಕೋಟೆಯ ಸ್ವಾಮಿ ಸಮರ್ಥರ ಭಕ್ತ ವೃಂದವನ್ನು.

ಇತಿಹಾಸ ಮೂಲಗಳು

ಸಾಯಿ ಬಾಬಾ ಜೀವನ ಚರಿತ್ರಕಾರರು (ಉದಾಹರಣೆಗೆ: ಗೋವಿಂದ ರಾವ್ ರಘುನಾಥ ದಾಬೋಲ್ಕರ್, ಆಚಾರ್ಯ ಎಕ್ಕಿರಾಳ ಭಾರದ್ವಾಜ್, ಸ್ಮ್ರಿತಿ ಶ್ರೀನಿವಾಸ್, ಆಂತೋನಿಯೋ ರಿಗೊಪೋಲಾಸ್) ಅವಲೋಕಿಸಿರುವ ಪ್ರಾಥಮಿಕ ಮೂಲವೆಂದರೆ ಶಿರಡಿಯಲ್ಲಿ ದೊರೆತ ಒಂದು ಡೈರಿ. ಈ ಡೈರಿಯನ್ನು ಬರೆದಿದ್ದು ‘ಗಣೇಶ ಶ್ರೀಕೃಷ್ಣ ಕಪರ್ದೆ’ ಎನ್ನುವರು. ಇವರು ಪ್ರತಿ ದಿನವು ಶಿರಡಿಯಲ್ಲೇ ಇದ್ದುಕೊಂಡು ಡೈರಿಯನ್ನು ಬರೆದಿದ್ದಾರೆ ಎನ್ನಲಾಗಿದೆ.

ಶಿರಡಿಗೆ ಪುನರಾಗಮನ

1858ರಲ್ಲಿ ಬಾಬಾ ಶಿರಡಿಗೆ ಹಿಂದಿರುಗಿದಾಗ ಅವರ ಉಡುಗೆಯ ಶೈಲಿ ಸಂಪೂರ್ಣ ಬದಲಾಗಿತ್ತು. ಮುಕ್ಕಾಲು ತೋಳು ಇರುವ ಮಂಡಿಯವರೆವಿಗೂ ಇರುವ ಕಪನಿಯನ್ನು ಧರಿಸಿ ಕಾಲುಗಳಿಗೆ ಶ್ವೇತ ವರ್ಣದ ಒಂದು ವಸ್ತ್ರ ಹಾಗು ತಲೆಗೆ ಶ್ವೇತವರ್ಣದ ಬಟ್ಟೆಯೊಂದನ್ನು ಸುತ್ತಿಕೊಂಡಿರುತ್ತಿದ್ದರು. ಮುಂದೆ ಬಾಬಾರು ಈ ಶೈಲಿಯನ್ನೇ ಅನುಸರಿಸಿದರು. ಅವರ ಈ ಧರಿಸಿನ ಶೈಲಿ ಯಥಾವತ್ತಾಗಿ ಸೂಫಿ ಶೈಲಿಯನ್ನೇ ಹೋಲುತ್ತಿದ್ದು ಗಮನಾರ್ಹ.

ಭೋದನೆಗಳು ಮತ್ತು ಆಚರಣೆಗಳು

ಶಿರಡಿ ಸಾಯಿಬಾಬಾ ತಮ್ಮ ಭಕ್ತರ ಜೊತೆಯಲ್ಲಿ ಮಸೀದಿಯ ಗೋಡೆಗೆ ಒರಗಿರುವುದು (ನಿಜ ಚಿತ್ರ)

ಸಾಯಿ ಬಾಬಾ ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆಗಳನ್ನು, ಜಾತಿ ವಾದಗಳನ್ನು ವಿರೋಧಿಸುತ್ತಿದ್ದರು. ಯಾವುದೇ ಒಂದು ಧರ್ಮಕ್ಕೆ ಕಟ್ಟು ಬೀಳದೆ ಧರ್ಮಾತೀತವಾದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಮುಸ್ಲೀಮರ ರಂಜಾನ್ ಹಬ್ಬವನ್ನು, ಹಿಂದೂಗಳ ರಾಮ ನವಮಿಯನ್ನು ಸಾಂಗವಾಗಿ ಆಚರಿಸುತ್ತಿದ್ದರು. ಯಾವಾಗಲು ತಮ್ಮ ಅನುಯಾಯಿಗಳಿಗೆ ಸರಳ ಜೀವನವನ್ನೇ ನಡೆಸುವಂತೆ ಹಾಗು ತಮಗೆ ಇದ್ದುದರಲ್ಲಿಯೇ ದಾನ ಮಾಡಿ ಹಂಚಿ ತಿನ್ನುವ ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಕರೆ ಕೊಟ್ಟಿದ್ದರು.

ಪವಾಡಗಳು

ಸಾಯಿ ಬಾಬಾ ಅನುಯಾಯಿಗಳು ಹಾಗು ಭಕ್ತರು ಬಾಬಾರ ಹಲವು ಪವಾಡಗಳನ್ನು ನೋಡಿದ್ದಾಗಿ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಒಂದೇ ಸಮಯದಲ್ಲಿ ಎರಡು ಸ್ಥಳದಲ್ಲಿರುವುದು, ನಿರಾಧಾರವಾಗಿ ಗಾಳಿಯಲ್ಲಿ ತೇಲುವುದು, ಮುಖ ನೋಡಿದ ತಕ್ಷಣ ಮನಸ್ಸಿನಲ್ಲಿರುವುದನ್ನು ಹೇಳುವುದು, ದೇಹದಿಂದ ಆತ್ಮದ ಬೇರ್ಪಡಿಸುವಿಕೆ, ಯಮುನಾ ನದಿಯ ಸೃಷ್ಟಿ, ಸಮಾಧಿ ಸ್ಥಿತಿಗೆ ತಲುಪುವುದು, ರೋಗಿಗಳನ್ನು ಕ್ಷಣಾರ್ಧದಲ್ಲಿ ಗುಣಮುಕ್ತರನ್ನಾಗಿ ಮಾಡುವುದು, ಕರುಳು ಮತ್ತಿತರ ಹೊಟ್ಟೆಯ ಭಾಗಗಳನ್ನು ಹೊಟ್ಟೆಯಿಂದ ತೆಗೆದು ಮತ್ತೆ ಹಾಗೆ ಕೂಡಿಸುವುದು,ಬೀಳುತ್ತಿದ್ದ ಮಸೀದಿಯನ್ನು ನೋಟದಿಂದಲೇ ತಡೆದಿದ್ದು, ತಮ್ಮ ಭಕ್ತರಿಗೆ ಪವಾಡ ಸದೃಶವಾಗಿ ಸಹಾಯ ಮಾಡುತ್ತಿದ್ದ ಎಷ್ಟೋ ಉದಾಹರಣೆಗಳು ಇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top