ಇತ್ತೀಚಿಗೆ ಕೋಲ್ಕತ್ತಾ ಮೂಲದ ವ್ಯಕ್ತಿಯೊಬ್ಬರ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು . ದೊಡ್ಡ ಕಾಯಿಲೆ ಏನೂ ಅಲ್ಲದಿದ್ದರೂ, ವೈದ್ಯರ ನಿರ್ದೇಶನದ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು . ಆಕೆಯ ಡಿಸ್ಚಾರ್ಜ್ ಮಾಡುವ ಹೊತ್ತಿಗೆ ಮಾಡಲಾದ ಬಿಲ್ ,ಬರೋಬ್ಬರಿ 42 ಲಕ್ಷ ! ಮಧ್ಯಮ ವರ್ಗದವನಾದ ಆ ವ್ಯಕ್ತಿ ,ಕಡೆಗೆ ತನ್ನ ಬಳಿ ಇದ್ದ ಪ್ಲ್ಯಾಟ್ ಅನ್ನೇ ಮಾರಾಟ ಮಾಡಿ ಆಸ್ಪತ್ರೆಯ ವೆಚ್ಚ ಭರಿಸಿದ . ನಿಮಗೂ ಆಸ್ಪತ್ರೆಯ ಇಂತಹ ದುಬಾರಿ ಶುಲ್ಕಗಳ ಬಗ್ಗೆ , ಅನುಭವಕ್ಕೆ ಬಂದಿರಬಹುದು .ಅದು ಯಾಕೆ ಅಷ್ಟು ದುಬಾರಿ ಶುಲ್ಕ ವಿಧಿಸಲಾಗುತ್ತದೆ ಗೊತ್ತಾ ?ನಿಮಗೆ ದೊಡ್ಡ ರೋಗ ಬರಬೇಕಾಗಿಯೇ ಇಲ್ಲ ಆದರೆ ಬರಬಾರದ ರೋಗ ಭರಿಸುತ್ತಾರೆ ಕೆಲ ಡಾಕ್ಟರುಗಳು! ಅದು ಹೇಗೆ ಅಂತೀರಾ ? ಅದರ ಹಿಂದಿದೆ ‘ಟಾರ್ಗೆಟ್ ಸಿಸ್ಟಮ್’ ಅನ್ನುವ ಆತಂಕಕಾರಿ ವಿಚಾರ .
ದೊಡ್ಡ ದೊಡ್ಡ ಆಸ್ಪತ್ರೆಗಳು ತನ್ನ ಷೇರುಗಳನ್ನು ಮಾರುಕಟ್ಟೆಯಲ್ಲಿ ಬಿಟ್ಟಿರುತ್ತವೆ . ಷೇರುದಾರರುಗಳನ್ನು ಆಕರ್ಷಿಸಬೇಕಾದರೆ ,ಹೆಚ್ಚು ಪ್ರಮಾಣದ ಲಾಭ ತೋರಿಸಿಕೊಡಬೇಕು ಇದಕ್ಕಾಗಿ ಅವರು ,ಪರಿಣತ ವೈದ್ಯರುಗಳಿಗೆ ಟಾರ್ಗೆಟ್ ನೀಡಿರುತ್ತಾರೆ .ಅದೇನೆಂದರೆ ಈ ತಿಂಗಳಿನಲ್ಲಿ ಇಂತಿಷ್ಟೇ ಪ್ರಮಾಣದ ಶಸ್ತ್ರಚಿಕಿತ್ಸೆ ಗಳು ನಡೆಯಬೇಕು ಹಾಗೂ ಇಷ್ಟೇ ಪ್ರಮಾಣದ ಮೊತ್ತ ಆಸ್ಪತ್ರೆಗೆ ಹರಿದು ಬರಬೇಕು ಎಂದು . ಆ ನುರಿತ ವೈದ್ಯರುಗಳು , ರೋಗಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದಿದ್ದರೂ ಶಸ್ತ್ರಚಿಕಿತ್ಸೆ ಮಾಡಿಸುವುದು ಅಥವಾ ಅಗತ್ಯವೇ ಇಲ್ಲದ ಟೆಸ್ಟ್ ಗಳನ್ನು ಮಾಡಿಸುವುದು ,ಇಂತಹ ಕಾರ್ಯಗಳಲ್ಲಿ ತೊಡಗುತ್ತಾರೆ .ಇದು ರೋಗಿಯ ಅರಿವಿಗೇ ಬರುವುದಿಲ್ಲ . ಈ ಮೊದಲು ಹೆಣವನ್ನು ತೀವ್ರಾ ನಿಗಾ ಘಟಕದಲ್ಲಿ ಇರಿಸಿ ,ರೋಗಿಯ ಸಂಬಂಧಿಗಳಿಗೆ ರೋಗಿಯನ್ನು ಬದುಕಿಸುತ್ತೇವೆ ಎಂದು ಭರವಸೆ ಕೊಟ್ಟು ಹಣ ಸುಲಿಯುವುದು ,ಹಳೇಯ ಆರೋಪಗಳಲ್ಲಿ ಒಂದು. ಆದರೆ ತಾಜಾ ಮಾಹಿತಿ ಪ್ರಕಾರ, ಅನಗತ್ಯ ಪರೀಕ್ಷೆ ಅಥವಾ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಕೊಂಡಿ ಹೊರಬಂದಿದ್ದು ವೈದ್ಯರಿಂದಲೇ ಅನ್ನುವುದು ಸಧ್ಯದ ವಿಚಾರ .
ಡಾ|| ಅರುಣ್ ಗಾಡ್ರೆ ಹಾಗೂ ಡಾ|| ಅಭಯ್ ಶುಕ್ಲಾ ಬರೆದಿರುವ ಪುಸ್ತಕ ‘Dissenting Diagnosis’ದಲ್ಲಿ ಇಂತಹ ಆತಂಕಕಾರಿ ವಿಚಾರಗಳ ಬಗ್ಗೆ ,ಬೆಳಕು ಚೆಲ್ಲಲಾಗಿದೆಯೆಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ . ಇವರು ,ದೊಡ್ಡ ಆಸ್ಪತ್ರೆಗಳು ಷೇರುದಾರರನ್ನು ಆಕರ್ಷಿಸಲು, ಆಸ್ಪತ್ರೆಗಳ ಸಿಇಓಗಳು ವೈದ್ಯರ ಮೇಲೆ ಒತ್ತಡ ಹಾಕಲು ಉಪಯೋಗಿಸುವ ಟಾರ್ಗೆಟ್ ಸಿಸ್ಟಮ್ ಹಾಗೂ ಇದಕ್ಕೆ ಬಗ್ಗದ ಪ್ರಾಮಾಣಿಕ ವೈದ್ಯರುಗಳನ್ನು ಕೆಲಸದಿಂದ ಕಿತ್ತು ಹಾಕುವ ವಿಚಾರವನ್ನೂ ಪ್ರಸ್ತಾಪಿಸಿದೆ .ಈ ದಂಧೆಯಲ್ಲಿ ಫಾರ್ಮಾ ಕಂಪೆನಿಗಳು , ಆಸ್ಪತ್ರೆಗಳು ಹಾಗೂ ಕೆಲ ಡಾಕ್ಟರುಗಳು ಭಾಗೀದಾರರಾಗಿದ್ದಾರೆಂದು ತಿಳಿಸಲಾಗಿದೆ .
ಇದೇ ಪುಸ್ತಕದಲ್ಲಿ ಹೆಸರು ಹೇಳಲು ಬಯಸದ pathologist ಒಬ್ಬರು ,ರೋಗಿಗಳಿಂದ ಸಂಗ್ರಹಿಸಲಾಗುವ ಪರೀಕ್ಷಾ ಮಾದರಿಗಳನ್ನು ಉಪಯೋಗಿಸದೇ ವಾಷ್ ಬೇಸಿನ್ಗಳಿಗೆ ಹಾಕುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ! , ಅಸಲಿಗೆ ಅಂತಹ ಒಂದು ಪರೀಕ್ಷೆಯ ಅಗತ್ಯತೆಯೇ ಇರುವುದಿಲ್ಲ. ಆದರೂ ಪರೀಕ್ಷೆ ಮಾಡಿಸಲಾಗುತ್ತದೆ ಇದರ ಹಿಂದೆ ಲಾಭ ಗಳಿಕೆಯ ತಂತ್ರ ಕೆಲಸ ಮಾಡುತ್ತಿದೆ ಅನ್ನುವುದು ನಿಜಕ್ಕೂ ಆತಂಕಕಾರಿ.ಇನ್ನೊಂದು ಘಟನೆಯಲ್ಲಿ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ, ಶಸ್ತ್ರಚಿಕಿತ್ಸೆ ಮಾಡದಕ್ಕಾಗಿ ಆಸ್ಪತ್ರೆಯ CEO ,ಮೂತ್ರಶಾಸ್ತ್ರಜ್ಞರೊಬ್ಬರನ್ನು ಕೆಲಸದಿಂದ ತೆಗೆದು ಹಾಕಿದ ಘಟನೆಯ ಬಗ್ಗೆಯೂ ವಿವರಿಸಲಾಗಿದೆ. ಅಸಲಿಗೆ ಆ ರೋಗಿಗೆ ಅಂತಹ ಶಸ್ತ್ರಚಿಕಿತ್ಸೆಯ ಅಗತ್ಯವೇ ಇರಲಿಲ್ಲ .
ಕೋಲ್ಕತ್ತಾ ಮೂಲದ ಸಾಮಾನ್ಯ ವೈದ್ಯರಾದ ಡಾ. ಪುಣ್ಯವೃತ ಅವರು ಹೇಳುವಂತೆ , ಇಂದಿನ ದಿನಗಳಲ್ಲಿ ವೈದ್ಯರುಗಳು ರೋಗಿಯ ದಾಖಲೆಗಳನ್ನು ಸರಿಯಾಗಿ ಸಂಗ್ರಹಿಸುವುದೇ ಇಲ್ಲ ಹಾಗೂ ಆಸ್ಪತ್ರೆ ,ಕ್ಲಿನಿಕ್ ಸುತ್ತಮುತ್ತ ಇರುವ ಎಲ್ಲಾ ಪ್ರಯೋಗಾಲಯಗಳಿಂದ ಡಾಕ್ಟರುಗಳಿಗೆ ಕಮಿಷನ್ ನಿಗದಿ ಮಾಡಿರಲಾಗುತ್ತದೆ . ಎಕ್ಸ್ ರೇಗಳಿಗೆ ೨೫% ,MRI ಹಾಗೂ CT ಸ್ಕಾನ್ಗಳಿಗೆ ೩೫% ದಷ್ಟು ಕಮಿಷನ್ ಕೊಡಲಾಗುತ್ತದೆ .ಇದು ವೈದ್ಯರುಗಳ ಪೀಸುಗಳಿಗಿಂತಲೂ ಹೆಚ್ಚಿನ ಆದಾಯ ದೊರಕಿಸಿಕೊಡಬಲ್ಲುದು ಆದ್ದರಿಂದ ಹೆಚ್ಚಿನ ವೈದ್ಯರು ಇದರ ಆಕರ್ಷಣೆಗೆ ಒಳಗಾಗಿ ರೋಗಿಗಳಿಂದ ಅನಾವಶ್ಯಕ ಟೆಸ್ಟುಗಳನ್ನು ಮಾಡಿಸುತ್ತಾರೆ .ಇದು ಕೇವಲ ಕೋಲ್ಕತ್ತಾದ ಕಥೆಯಲ್ಲ ಬದಲಿಗೆ ನಮ್ಮ ನಿಮ್ಮೆಲ್ಲರ ಊರುಗಳಲ್ಲಿಯೂ ಇದೇ ಪರಿಸ್ಥಿತಿ .
ಇನ್ನು ಈ ಬಗ್ಗೆ ಭಾರತೀಯ ಮೆಡಿಕಲ್ ಕೌನ್ಸಿಲ್, ಕುರುಡಾಗಿ ವರ್ತಿಸುತ್ತಿರುವ ಬಗ್ಗೆಯೂ ಹಾಗೂ ಇದನ್ನು ಸರಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಹಿಸಬೇಕಾದ ಕ್ರಮಗಳ ಬಗ್ಗೆಯೂ ಲೇಖಕರು ಬೆಳಕು ಚೆಲ್ಲುತ್ತಾ ಹೋಗಿದ್ದಾರೆ
ಮುಂದಕ್ಕೆ ಓದುತ್ತಾ ಹೋದಂತೆ ,ಶಸ್ತ್ರಚಿಕಿತ್ಸೆಯನ್ನೇ ಮಾಡದೇ ಸ್ವಲ್ಪ ಪ್ರಮಾಣದ ,ಮತ್ತು ಭರಿಸುವ ಔಷದ ಕೊಟ್ಟು ಚರ್ಮದ ಮೇಲೆ ಸ್ವಲ್ಪ ಹೊಲಿಗೆ ಹಾಕಿ ,ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ನಂಬಿಸುವ ಧಂಧೆಯ ಬಗ್ಗೆಯೂ ವಿವರಿಸಲಾಗಿದೆ .ಇದನ್ನೆಲ್ಲಾ ಓದುವಾಗ ನಾವು ಕಷ್ಟಪಟ್ಟು ದುಡಿದ ಹಣವನ್ನು ಹೇಗೆಲ್ಲಾ ದೋಚುತ್ತಾರೋ ,ಎಂಬ ಬಗ್ಗೆ ಆತಂಕ ಶುರುವಾಗುತ್ತದೆ.ಇಂತಹ ಒಂದು ಕೆಟ್ಟ ವ್ಯವಸ್ಥೆಯನ್ನು ಕೊನೆಗಾಣಿಸಲು ,ವೈದ್ಯರುಗಳೇ ಮುಂದಾಗಿದ್ದು ಸಂತಸದ ವಿಚಾರ .ಯಾಕೆಂದರೆ ಸಾಮಾನ್ಯವಾಗಿ ಯಾವುದೇ ವೈದ್ಯರು ,ಇನ್ನೊಂದು ವೈದ್ಯರುಗಳ ತಪ್ಪುಗಳ ಬಗ್ಗೆ ರಹಸ್ಯ ಬಿಚ್ಚಿಡುವುದಿಲ್ಲ ಯಾಕೆಂದರೆ ಇದು ವೈದ್ಯರುಗಳ ಒಳಗಡೆ ಮಾಡಿಕೊಂಡ ಅಲಿಖಿತ ಒಪ್ಪಂದ ಎಂದೂ ಹೇಳಲಾಗುತ್ತಿದೆ ಆದರೆ ಇಲ್ಲಿ ವೈದ್ಯರುಗಳೇ ಈ ವಿಚಾರವನ್ನು ಹೊರಹಾಕಿರುವುದು , ಜನಸಾಮಾನ್ಯರಲ್ಲಿ ಆತಂಕದ ಜೊತೆಗೆ ಸ್ವಲ್ಪ ಸಂತಸವನ್ನು ಮೂಡಿಸಿದೆ ಯಾಕೆಂದರೆ ಹೇಗೆಲ್ಲಾ ಇದನ್ನು ತಪ್ಪಿಸಬಹುದು ಎಂಬುದರ ಬಗ್ಗೆ ಜನಸಾಮಾನ್ಯರೂ ಚಿಂತಿಸಬಹುದಾಗಿದೆ .
ಈ ಹಿಂದೆ ನನ್ನ ವೈಯುಕ್ತಿಕ ಅನುಭವದ ಆಧಾರದಲ್ಲಿ , ಅಕ್ಕಪಕ್ಕ ಇರುವ ಎರಡು ಆಸ್ಪತ್ರೆಗಳು ಸರಕಾರದಿಂದ ಅಧಿಕಾರಿಗಳು ಪರಿಶೀಲನೆಗೆ ಬರುವಾಗ ,ಒಂದು ಆಸ್ಪತ್ರೆಯ ರೋಗಿಗಳನ್ನು ಇನ್ನೊಂದು ಆಸ್ಪತ್ರೆಗೆ ಸಾಗಿಸಿ ಬೆಡ್ ಭರ್ತಿ ಮಾಡಿಸುವುದು ಅಥವಾ ಆಸ್ಪತ್ರೆಯ ಸಣ್ಣಪುಟ್ಟ ನೌಕರರನ್ನೇ ಬೆಡ್ ಮೇಲೆ ಮಲಗಿಸಿ ರೋಗಿಯೆಂದು ನಮೂದಿಸುವ ವಿಚಾರಗಳ ಬಗ್ಗೆ ಕೇಳಿದ್ದೆ ಇದು ಜನಸಾಮಾನ್ಯರ ಮೇಲೆ ಅಷ್ಟೇನೂ ಪರಿಣಾಮ ಬೀರದಿದ್ದರೂ ಮೇಲಿನ ಎಲ್ಲಾ ವಿಚಾರಗಳು ತುಂಬಾ ಚಿಂತಿಸಬೇಕಾದದ್ದು .
ವೈದ್ಯೋ ನಾರಾಯಣೋ ಹರಿಃ ಎಂಬ ಆ ಕಾಲದ ಮಾತು ಹೋಗಿ ವೈದ್ಯೋ ನಾರಾಯಣ ‘ NO ‘ ಹರಿಃ ಅನ್ನುವ ಕಾಲ ಬಂದಾಗಿದೆ .ವೈದ್ಯರನ್ನು ಅಂಧರಾಗಿ ನಂಬಬೇಡಿ . ಕೆಲವರಿಗೆ ಆರೋಗ್ಯ ಸರಿಯಾಗಿದ್ದರೂ ಸುಖಾಸುಮ್ಮನೆ ‘ಚೆಕ್ ಅಪ್ ‘ ಮಾಡಿಸುವ ಗೀಳು ಇರುತ್ತದೆ .ಇಂತಹ ಗೀಳು ಇರುವವರು ಇದನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ ,ನೀವು ಕಷ್ಟಪಟ್ಟು ದುಡಿದ ಹಣವನ್ನು ಕಾರ್ಪೊರೇಟ್ ಆಸ್ಪತ್ರೆಗಳ ಮಾಲೀಕರಿಗೆ ಹಾಗೂ ಷೇರುದಾರರಿಗೆ ಅಥವಾ ಲ್ಯಾಬ್ ,ಡಾಕ್ಟರ್ಗಳಿಗೆ ತಿನ್ನಿಸಬೇಡಿ . ದಿನನಿತ್ಯ ಸರಳ ವ್ಯಾಯಾಮ ,ನಿಯಮಿತ ಆಹಾರ ಸೇವನೆಗಳ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಿ .
ಲೇಖನ: ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
ಮಾಹಿತಿಮೂಲ : ದೀ ವೀಕ್ಸ್ ಆಂಗ್ಲ ಪತ್ರಿಕೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
