fbpx
ಕನ್ನಡ

ಕನ್ನಡ ಏಕೀಕರಣ ಚಳುವಳಿಯ ಪ್ರಮುಖ ರುವಾರಿ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಜನುಮ ದಿನ

ಈ ದಿನ ಕನ್ನಡ ಏಕೀಕರಣ ಚಳುವಳಿಯ ಪ್ರಮುಖ ರುವಾರಿ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಜನುಮ ದಿನ. ಅವರ ಬಗ್ಗೆ ಮಾಹಿತಿ….

ಆಲೂರು ವೆಂಕಟರಾವ್

ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಜುಲೈ 12, 1880ರಂದು ಬಿಜಾಪುರದಲ್ಲಿ ಜನಿಸಿದರು. ಇವರ ವಂಶಜರು ಈಗಿನ ಗದಗ ಜಿಲ್ಲೆಯ ರೋಣ ತಾಲ್ಲೂಕಿನ (ಹೊಳೆ)ಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯರು ಶಿರಸ್ತೇದಾರರು, ತಾಯಿ ಭಾಗೀರಥಿಬಾಯಿ. ಅವರ ಪ್ರಾರಂಭಿಕ ಶಿಕ್ಷಣ ಧಾರವಾಡದಲ್ಲಿ ನೆರವೇರಿತು.

ಆಲೂರರು 1903ರಲ್ಲಿ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿ. ಎ ಪದವಿ ಪಡೆದು, ಮುಂಬಯಿಯಲ್ಲಿ ಕಾನೂನಿನ ಅಭ್ಯಾಸಕ್ಕೆ ತೊಡಗಿ 1905ರಲ್ಲಿ ವಕೀಲರಾದರು. ಒಮ್ಮೆ ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: “ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು.”

ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ, ಅದರ ಕಾರ್ಯಭಾರವನ್ನು ಹೊತ್ತುಕೊಂಡರು. ‘ವಾಗ್ಭೂಷಣ’ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು.

ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ. 1915ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು ಆಗು ಮಾಡಿದರು.

ಸಾಹಿತ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿದ ಆಲೂರರು ಶಿಕ್ಷಣ ಮೀಮಾಂಸೆ, ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಸಂಸಾರ ಸುಖ, ಕರ್ನಾಟಕದ ವೀರರತ್ನಗಳು, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ, ರಾಷ್ರೀಯತ್ವದ ಮೀಮಾಂಸೆ, ಗೀತಾ ರಹಸ್ಯ, ನಾವು ಈಗ ಬೇಡುವ ಸ್ವರಾಜ್ಯ, ಸ್ವರಾಜ್ಯವೆಂದರೇನು?, ಸುಖವೂ ಶಾಂತಿಯೂ, ಸ್ವಾತಂತ್ರ್ಯ ಸಂಗ್ರಾಮ, ಗೀತಾಪ್ರಕಾಶ, ಗೀತಾಪರಿಮಳ, ಗೀತಾ ಸಂದೇಶ, ನನ್ನ ಜೀವನ ಸ್ಮೃತಿಗಳು, ಪೂರ್ವತರಂಗ, ಉತ್ತರತರಂಗ, ಮಧ್ವಸಿದ್ಧಾಂತ ಪ್ರವೇಶಿಕೆ, ಗೀತಾಭಾವ ಪ್ರದೀಪ ಪೂರ್ಣಬ್ರಹ್ಮವಾದ, ಬಿಡಿ ನುಡಿಗಳು ಮುಂತಾದವುಗಳನ್ನು ಪ್ರಕಟಿಸಿದರು.

ಆಲೂರರ ‘ಗತವೈಭವ’ದಲ್ಲಿನ ಈ ಕೆಳಗಿನ ಮಾತುಗಳಲ್ಲಿನ ವೀರ್ಯವತ್ತಾದ ಶೈಲಿ ಇಂತಿದೆ… “ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ.”

ಈ ಮಾತುಗಳು ಅಲೂರರು ಕಂಡ ಅಂದಿನ ಕನ್ನಡದ ದುರ್ಗತಿ, ಅದಕ್ಕಾಗಿ ಅವರು ರೂಢಿಸಿಕೊಂಡ ಮನೋಧರ್ಮ ತೋರುತ್ತವೆ. ಅವರು ಮಾಡಿದ ಕೆಲಸಗಳಾದರೋ ಅವರು ಮುಂದೆ ಕನ್ನಡಕ್ಕೆ ನೀಡಿದ ಕಾಯಕಲ್ಪವನ್ನು ಸಾರಿ ಹೇಳುತ್ತವೆ. ಕನ್ನಡದಲ್ಲಿ ಮುಂದೆ ಆದ ಕೆಲಸಗಳು, ಪಡೆದ ಕೀರ್ತಿ ಇವೆಲ್ಲಕ್ಕೂ ನಾವು ಆಲೂರು ವೆಂಕಟರಾಯರಿಗೆ ಅದಮ್ಯ ಚಿರಋಣಿಗಳಾಗಿರಬೇಕಾಗುತ್ತದೆ.

ಆಲೂರರು ಪ್ರಸಿದ್ಧ ‘ಜಯಕರ್ನಾಟಕ’ ಪತ್ರಿಕೆಯನ್ನು 1922ರಲ್ಲಿ ಸ್ಥಾಪಿಸಿದರು. ಆಲೂರರು ತಮ್ಮನ್ನು ತಾವು ಒಬ್ಬ ಸಾಹಿತಿಯೆಂದು ಎಲ್ಲಿಯೂ ಬಣ್ಣಿಸಿಕೊಂಡೇ ಇಲ್ಲ. ಆದರೆ, ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ, ರಂಗರಾವ್ ದಿವಕಾರ ಮುಂತಾದ ಹಲವು ಜನಪ್ರಿಯ ಸಾಹಿತಿ ಶ್ರೇಷ್ಠರಿಗೆ ಪೋಷಣೆ, ಪ್ರೋತ್ಸಾಹಗಳನ್ನು ನೀಡಿದರು. ಜಯಕರ್ನಾಟಕದ ಸಂಪಾದಕೀಯದಲ್ಲಿನ ಅವರು ಮಾತುಗಳು ಇಲ್ಲಿ ಉಲ್ಲೇಖನೀಯ. “ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದ ಕೊಟ್ಟಿರುವೆ. ಕರ್ನಾಟಕದ ಸಕಲಭಾಗಗಳಲ್ಲಿಯೂ ಲೇಖಕರು ಕವಿಗಳೂ ಹುಟ್ಟಬೇಕೆಂಬುದೇ ನನ್ನ ಉದ್ದೇಶ.”

ಆಲೂರರು ಕರ್ನಾಟಕಕ್ಕಾಗಿ ಹೇಗೆ ಹೋರಾಡಿದರೋ ಅದೇ ರೀತಿಯಲ್ಲಿ ರಾಷ್ಟ್ರೀಯತ್ವಕ್ಕಾಗಿ ಹೊಡೆದಾಡಿದರು. 1928ರಲ್ಲಿ ಅವರು “ರಾಷ್ಟ್ರೀಯ ಮೀಮಾಂಸೆ” ಎಂಬ ಒಂದು ಕಿರುಹೊತ್ತಗೆಯನ್ನು ಬರೆದು ಪ್ರಕಟಿಸಿದರು. ರಾಷ್ಟ್ರೀಯತ್ವವನ್ನು ಸುಂದರವಾಗಿ ವರ್ಣಿಸುವ, ಆಲೂರರ ಈ ವಾಕ್ಯವೃಂದವನ್ನು ನೋಡುವಾಗ, ನಮಗೆ ಅವರ ಕಲ್ಪನೆಯ ನಿಚ್ಚಳತೆ ಕಂಡುಬರುತ್ತದೆ.

“ರಾಷ್ರೀಯತೆಯನ್ನು, ಅಥವಾ ರಾಷ್ಟ್ರಾಭಿಮಾನ ಎಂಬುದನ್ನು ಅಥವಾ ಅಹಂಕಾರವನ್ನು ಒಂದು ನದಿಗೆ ಹೋಲಿಸಬಹುದು. ಈ ಅಹಂಕಾರ ರೂಪ ನದಿಯ ಉಗಮವು ಚಿಕ್ಕದಿದ್ದು, ಅದು ತನ್ನ ಸ್ವಂತ ಮನಸ್ಸು ಎಂಬಷ್ಟರಮಟ್ಟಿಗೆ ಮಾತ್ರವೇ ಇರುತ್ತದೆ. ಆದರೆ ಅದು ಮುಂದೆ ವಿಸ್ತಾರವಾಗುತ್ತ ತನ್ನ ಹೆಂಡಿರು, ಮಕ್ಕಳು, ತನ್ನ ಊರು, ತನ್ನ ಪ್ರಾಂತ್ಯ, ತನ್ನ ರಾಷ್ಟ್ರ – ಇಲ್ಲಿಯವರೆಗೆ ವಿಸ್ತಾರಹೊಂದಿ ಕೊನೆಗೆ ಅದು ಸರ್ವಭೂಸಹಿತ ಸಮುದ್ರಕ್ಕೆ ಹೋಗಿ ಕೂಡುತ್ತದೆ”.

“ರಾಷ್ಟ್ರೀಯತ್ವಕ್ಕೆ ಒಂದೇ ಜಾತಿ ಅಥವಾ ಜನಾಂಗವಿರಬೇಕೆಂಬ ಅವಶ್ಯಕತೆಯೂ ಇಲ್ಲ, ಒಂದೇ ಭಾಷೆಯಿರಬೇಕೆಂಬುದೂ ಹೇಳಲಾಗುವುದಿಲ್ಲ; ಒಂದೇ ಧರ್ಮವೂ ಬೇಕೇಬೇಕಂತಲ್ಲ; ಒಂದೇ ದೇಶವೂ ಕೂಡ ಇಲ್ಲದಿದ್ದರೂ ಸಾಗಬಹುದು.”

“ಹಿಂದೂಸ್ತಾನಕ್ಕೆ ಒಂದೇ ಧರ್ಮ, ಒಂದೇ ಭಾಷೆ, ಒಂದೇ ವಂಶ ಇವು ಇಲ್ಲದಿರುವುದರಿಂದಲೇ ರಾಷ್ಟ್ರೀಯತ್ವವು ಬೇಗನೆ ಬೆಳೆಯುವುದಿಲ್ಲವೆಂದು ಅನೇಕರು ಪ್ರಾಮಾಣಿಕವಾಗಿ ನಂಬುತ್ತಾರೆ. ಈ ಕೊರತೆಗಳು ನಮ್ಮ ರಾಜಕೀಯ ಪ್ರಗತಿಯ ಮಾರ್ಗದಲ್ಲಿಯ ಮುಳ್ಳುಗಳೆಂದೂ, ಅವನ್ನು ಕಿತ್ತೊಗೆಯದಿದ್ದರೆ ರಾಷ್ಟ್ರಪಥವು ಸಾಗಲಾರದೆಂದೂ ಅವರ ಭಾವನೆ. ಅವರ ಈ ಕಲ್ಪನೆಗಳು ತಪ್ಪು ಇರುತ್ತವೆ ಎಂಬುದನ್ನು ಈ ‘ರಾಷ್ಟ್ರೀಯತ್ವದ ಮೀಮಾಂಸೆ’ ಲೇಖನದಲ್ಲಿ ತೋರಿಸುವವರಿದ್ದೇವೆ.”

ಮೇಲಿನ ಮಾತುಗಳು ಆಲೂರರ ದಿಟ್ಟತನವನ್ನೂ, ಆಲೋಚನೆಯಲ್ಲಿನ ಅಸ್ಖಲಿಕ ನಿಲುವನ್ನೂ ಬಹಿರಂಗ ಪಡಿಸುತ್ತವೆ.

ವೀರ ಸಾವರ್ ಕರ್, ಬಾಲಗಂಗಾಧರ ತಿಲಕ ಇಂತಹ ಮಹಾರಾಷ್ಟ್ರೀಯ ನಾಯಕರೊಡನೆ ತೀರ ನಿಕಟ ಸಂಪರ್ಕ ಹೊಂದಿದ್ದ ಆಲೂರರು ಅಖಿಲ ಭಾರತೀಯ ದೃಷ್ಟಿಯನ್ನು ಬೆಳೆಸಿಕೊಂಡರು. ಆದರೆ ಅವರು ಕರ್ನಾಟಕವಷ್ಟೇ ತಮ್ಮ ಕಾರ್ಯಕ್ಷೇತ್ರವೆಂಬುದನ್ನು ಬಹುಬೇಗ ಕಂಡುಕೊಂಡರು.

ಆಲೂರರು ಗಾಂಧೀಜಿಯವರು ನೀಡಿದ ಅಸಹಕಾರ ಚಳವಳಿಗೆ ಓಗೊಟ್ಟು ವಕೀಲಿಗೆ ಶರಣು ಹೊಡೆದರು. ಅಲೂರರಿಗೂ ದೇಶಪಾಂಡೆ ಗಂಗಾಧರರಾಯರಿಗೂ ರಾಜಕೀಯವಾಗಿ ಒಮ್ಮತವಿದ್ದರೂ ಭಾಷೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿತು. ಗಂಗಾಧರರಾಯರು ಮರಾಠಿ ಪರವಾಗಿದ್ದರು, ಆಲೂರರು ಕಟ್ಟಾ ಕನ್ನಡ ಪರ. ಅವರಿಗೆ ಕಾಂಗ್ರೆಸ್ ನೀತಿಗಳು, ಸೆರೆಮನೆಗೆ ಹೋಗುವುದೇ ವಾಡಿಕೆ ಮಾಡಿಕೊಂಡಿದ್ದ ಕೆಲವರ ನಡೆಗಳು ಇಷ್ಟವಾಗದಿದ್ದಾಗ ಆ ಸಂಪರ್ಕಗಳನ್ನು ಕಡಿದುಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ.

ಆಲೂರರು ಮೂಲತಃ ಧಾರ್ಮಿಕ ವ್ಯಕ್ತಿ. ಬಾಲಗಂಗಾಧರ ತಿಲಕರ ‘ಗೀತಾರಹಸ್ಯ’ದ ಅನುವಾದ ಕಾರ್ಯ, ಅವರ ರಾಜಕಾರಣ ಮತ್ತು ಧರ್ಮದೃಷ್ಟಿಗಳ ಸಮನ್ವಯಕ್ಕೆ ಒಂದು ದಾರಿ ಮಾಡಿಕೊಟ್ಟಿತು ಎನ್ನಬಹುದು. ‘ಗೀತಾ ರಹಸ್ಯ’ದ ಅನುವಾದ ಕಾರ್ಯ ಕೈಗೊಂಡದ್ದು, ತಿಲಕರ ಒತ್ತಾಯದ ಮೇರೆಗೆ. ಅನುವಾದ ಎಲ್ಲರಿಗೂ ಸಮ್ಮತವಾಗಬೇಕೆಂದ ದೃಷ್ಟಿಯಿಂದ, ಬಿ.ಎಂ.ಶ್ರೀ ಮತ್ತಿತರರ ಅಭಿಪ್ರಾಯ ಪಡೆದು ಅದನ್ನು ಪರಿಷ್ಕರಿಸಿದರು. ಆಲೂರರ ಜೊತೆಗೆ ಕೆರೂರು ವಾಸುದೇವಾಚಾರ್ಯರು ಕೊನೆಯ ಭಾಗದ ಕೆಲವು ಶ್ಲೋಕಗಳನ್ನು ಅನುವಾದ ಮಾಡಿ ಸಹಕರಿಸಿದರು.

ಅಲೂರ ವೆಂಕಟರಾಯರದು ಆಧ್ಯಾತ್ಮಿಕ ಪ್ರವೃತ್ತಿ. 1931ರಲ್ಲಿ ಬ್ರಿಟಿಷ್ ಸರ್ಕಾರ ಅವರಿಗಾಗಿ ‘ಸರ್ಚ್ ವಾರೆಂಟ್’ ಅನ್ನು ಹೊರಡಿಸಿತು. ಅವರನ್ನು ಸೆರೆಹಿಡಿದು ಕಲಘಟಗಿಯಲ್ಲಿ ದಿಗ್ಭಂದನದಲ್ಲಿ ಇರಿಸಿದರು. ಇದರ ಪರಿಣಾಮ ಆಲೂರರ ಮೇಲೆ ಒಳ್ಳೆಯದನ್ನೇ ಮಾಡಿತು. ಅವರ ಆಧ್ಯಾತ್ಮ ಚಿಂತನೆಗೆ, ಅಧ್ಯಯನಕ್ಕೆ ಈ ಬಿಡುವು ಅನುವು ಮಾಡಿಕೊಟ್ಟಿತು. ಅವರು ಗೀತೆಯ ಬಗ್ಗೆ ಅನಂತರ ಬರೆದ ನಾಲ್ಕು ವಿದ್ವತ್ ಪೂರ್ಣ ಗ್ರಂಥಗಳ ಬರವಣಿಗೆಗೆ ಇಲ್ಲಿ ನಡೆಸಿದ ಚಿಂತನೆ ಮತ್ತು ಅಧ್ಯಯನಗಳೇ ಬುನಾದಿ ಹಾಕಿದವು ಎಂದು ಹೇಳಬಹುದು. ಒಬ್ಬ ಮಾಧ್ವ ಧರ್ಮಾನುಯಾಯಿಯಾಗಿಯೂ ವೆಂಕಟರಾಯರು ಹಲವು ವಿಭಿನ್ನ ಮನೋಧರ್ಮದ ಗ್ರಂಥಗಳನ್ನು ಬರೆದರು.

ಆಲೂರರು ತಮ್ಮ ಜೀವನದ ಕೊನೆಯ ಭಾಗದಲ್ಲಿ ಬಹಳ ಮಟ್ಟಿಗೆ ಸಾರ್ವಜನಿಕ ಜೀವನದಿಂದ ದೂರವಿದ್ದು ತಮ್ಮನ್ನು ಒಳಗೆ ಸೆಳೆದುಕೊಂಡರು. ಒಂದು ಕಡೆ ರಾಜಕಾರಣದಿಂದ ದೂರವಾದದ್ದು, ಇನ್ನೊಂದು ಕಡೆ ಆಧ್ಯಾತ್ಮಿಕ ಜೀವನದತ್ತ ಒಲವು – ಇವರು ಸಾರ್ವಜನಿಕವಾಗಿ ದೂರಸರಿಯಲು ಕಾರಣವಾಯಿತು. ಇದರಿಂದ ಕನ್ನಡದ ಕೆಲಸಕ್ಕೆ ವೆತ್ಯಯವಾಯಿತು. ಶ್ರೀ ಅರವಿಂದರ ಬರವಣಿಗೆ ಚಿಕ್ಕವಯಸ್ಸಿನಲ್ಲಿಯೇ ಅವರ ಮೇಲೆ ಪ್ರಭಾವವನ್ನು ಬೀರಿದ್ದಿತು.

ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು ‘ಕರ್ನಾಟಕದ ಪ್ರಾಣೋಪಾಸಕರು’ ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಬೇಂದ್ರೆಯವರು ಆಲೂರರ ವೈಶಿಷ್ಟ್ಯವನ್ನು ಹೀಗೆ ಗುರುತಿಸಿದ್ದಾರೆ:

“ಬಹುಮುಖವಾಗಿಯೂ, ಏಕನಿಷ್ಠೆಯಿಂದಲೂ, ಅನನ್ಯ ಬುದ್ಧಿಯಿಂದಲೂ, ಸತತ ಅನುಸಂಧಾನದಿಂದಲೂ, ಕರ್ನಾಟಕದ ಸಲುವಾಗಿ ವಿಚಾರ ಮಾಡುವವರೂ, ತದನುಸಾರವಾಗಿಯೇ ಆಚರಿಸಲು ಪ್ರಯತ್ನಿಸುವವರೂ ಹಿರಿಯರಾದ ಕನ್ನಡಿಗರಲ್ಲಿ ಇನ್ನೂ ಇವರೊಬ್ಬರೇ! ಅದೇ ಇವರ ತಪಸ್ಸು. ಇವರ ಅದ್ವಿತೀಯವಾದ ಹೆಸರು ಅದರ ಫಲವು.

ಇವರಲ್ಲಿ ಬುದ್ದಿಯ ಏಕಾಗ್ರ ವೃತ್ತಿಗಿಂತ ವ್ಯಾಪಕವೃತ್ತಿಯು ಹೆಚ್ಚು, ಮೂರ್ತಿಪೂಜೆಗಿಂತ ತತ್ವಪೂಜೆಯು ಅಧಿಕ. ಆಚಾರ ನಿಷ್ಠೆಗಿಂತ ವಿಚಾರ ನಿಷ್ಠೆ ಬಹಳ. ರಾಷ್ಟ್ರೀಯ ದೃಷ್ಠಿ ಹೆಚ್ಚು, ರಾಷ್ಟ್ರದರ್ಶನ ಕಡಿಮೆ. ಜನೋದ್ದೀಪನ ಹೆಚ್ಚು, ಜನ ನಿರ್ವಹಣ ಶಕ್ತಿ ಕಡಿಮೆ… ಇವರು ಜನನಾಯಕರಾಗದೆ ನೇತ್ರವಾಗಿದ್ದಾರೆ; ಮುಂದಾಳುಗಳಾಗದೆ ಪ್ರತಿನಿಧಿಗಳಾಗಿದ್ದಾರೆ.”

ಆಲೂರರು ನಿಧನರಾದದ್ದು ಫೆಬ್ರವರಿ 25, 1964ರಲ್ಲಿ. ನಾವು ಒಂದಿನಿತು ಕನ್ನಡದ ಅಮೃತಸುಧೆಯನ್ನು ನಮ್ಮ ಕಾಲದಲ್ಲಿ ಸವಿದಿದ್ದರೆ ಅದು ಆಲೂರ ವೆಂಕಟರಾಯರಂತಹ ಮಹನೀಯರು ನಮಗೆ ನೀಡಿದ ತೀರ್ಥಪ್ರಸಾದ. ಈ ಮಹಾನ್ ಕನ್ನಡ ಕುಲಪುರೋಹಿತ ಆಚಾರ್ಯರ ಚರಣ ಕಮಲಕ್ಕೆ ನಮ್ಮ ಭಕ್ತಿಯ ನಮನ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top