ಕೆಲವರ ಜೀವನವೇ ಹಲವರಿಗೆ ದಾರಿ. ನೀವು ಕಷ್ಟ ಪಟ್ಟು ಮೇಲೆ ಬರುವ ಹುಡುಗ, ಹುಡುಗಿಯರ ಕತೆಯುಳ್ಳ ಸಿನಿಮಾ ನೋಡಿರಬಹುದು. ತುಂಬಾ ಕಷ್ಟ ಪಟ್ಟು ಓದುವ ನಾಯಕ ಕಡೆಗೊಂದು ದಿನ ಎಸ್‌ಪಿಯಾಗಿಯೋ ಡಿಸಿಯಾಗಿಯೋ ಹಳ್ಳಿಗೆ ಬರುವ ದೃಶ್ಯ ನೋಡಿದರೆ ಮೈ ಜುಮ್ ಎನ್ನುತ್ತದೆ. ಅಂಥಾ ಕತೆಗಳು ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ನಡೆಯುತ್ತವೆ ಅನ್ನುವುದನ್ನು ಇಬ್ಬರು ತೋರಿಸಿಕೊಟ್ಟಿದ್ದಾರೆ. ಅವರ ಕತೆ ಅನೇಕರಿಗೆ ಸ್ಫೂರ್ತಿ.
ಕೆ.ಬಾಲಗುರು ಎಂಬ ಜಾದೂಗಾರ
ಊರು ತಮಿಳುನಾಡಿನ ಪುಟ್ಟ ಹಳ್ಳಿ. ತಂದೆ ಕೂಲಿ ಕೆಲಸ ಮಾಡುವ ವ್ಯಕ್ತಿ. ಬಡ ಕುಟುಂಬ. ಹುಡ್ಗನಿಗೆ ದೊಡ್ಡ ಜನ ಆಗಬೇಕು ಅನ್ನೋ ಕನಸು. ಆದರೆ ತುಂಬಾ ಓದಿಸುವ ಚೈತನ್ಯ ಮನೆಯವರಿಗಿರಲಿಲ್ಲ. ಹುಡ್ಗನಲ್ಲಿ ಓದುವ ಆಸಕ್ತಿ ತೀವ್ರವಾಗಿತ್ತು. ಅದನ್ನು ನೋಡಿದ ಟೀಚರ್ ಸ್ಕಾಲರ್‌ಶಿಪ್ ಪರೀಕ್ಷೆ ಬರೆಸಿದರು. ಅದರಿಂದಾಗಿ ಬಾಲಗುರು ದ್ವೀತಿಯ ಪಿಯುಸಿವರೆಗೆ ಓದಿದ. ಆ ಹಂತದಲ್ಲಿ ಪರಿಸ್ಥಿತಿ ತುಂಬಾ ಕಠಿಣವಾಯಿತು. ಬಾಲಗುರು ಓದು ನಿಲ್ಲಿಸಿದ.
ಯಾವುದೋ ಒಂದು ಊರಲ್ಲಿ ಹೋಗಿ ಫರ್ನಿಚರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಆದರೂ ಓದುವ ಆಸಕ್ತಿ ಕಡಿಮೆಯಾಗಲಿಲ್ಲ. ಒಂದಲ್ಲ ಒಂದು ದಿನ ಐಎಎಸ್ ಪರೀಕ್ಷೆಗೆ ಕೂರುತ್ತೇನೆ ಅಂತಂದುಕೊಂಡ. ಸಿಕ್ಕ ಸಿಕ್ಕ ಪುಸ್ತಕ ಓದತೊಡಗಿದ. ಬಾಲಗುರುನ ಹೆಚ್ಚುಗಾರಿಕೆ ಎಂದರೆ ಆತ ಕೈಗೆ ಸಿಕ್ಕ ಯಾವ ಪುಸ್ತಕವನ್ನೂ ಬಿಡುತ್ತಿರಲಿಲ್ಲ. ಆದರೆ ಅವನಿಗೆ ಪತ್ರಿಕೆ ಖರೀದಿಸುವಷ್ಟು ದುಡ್ಡು ಇರುತ್ತಿರಲಿಲ್ಲ. ಐಎಎಸ್ ಪರೀಕ್ಷೆ ಬರೆಯುವವರು ಪ್ರತಿದಿನ ಪತ್ರಿಕೆ ಓದಬೇಕಾದದ್ದು ಅವಶ್ಯ. ಬಾಲಗುರು ಅದಕ್ಕೊಂದು ಐಡಿಯಾ ಮಾಡಿದ. ಹತ್ತಿರದಲ್ಲಿರುವ ಅಂಗಡಿಗೆ ಹೋಗಿ ಅಲ್ಲಿನವರ ಸ್ನೇಹ ಸಂಪಾದಿಸಿದ. ಚೌರದ ಅಂಗಡಿಗೆ ಪತ್ರಿಕೆ ಮತ್ತು ಮ್ಯಾಗಜೀನ್‌ಗಳು ಬರುತ್ತಿದ್ದವು. ಮೊದಲೆಲ್ಲಾ ದಿನವೂ ಊಟದ ಹೊತ್ತಿಗೆ ಹೋಗಿ ಓದು ಬರುತ್ತಿದ್ದ. ಅಲ್ಲಿನವರು ಫ್ರೆಂಡ್ ಆದ ಮೇಲೆ ಹದಿನೈದು ದಿನಕ್ಕೊಮ್ಮೆ ಅಂಗಡಿಗೆ ಹೋಗಿ ಅವನ್ನೆಲ್ಲಾ ತೆಗೆದುಕೊಂಡು ಹೋಗಿ ಓದುತ್ತಿದ್ದ.
ಹೀಗೆ ವರ್ಷಗಳುರುಳಿದವು. ಅವನ ತಂಗಿ ಮದ್ವೆ ನಡೆಯಿತು. ಅದರ ನಂತರ ಅವನು ಅವನ ಕನಸನ್ನು ನನಸು ಮಾಡಲು ಕೆಲಸ ಬಿಟ್ಟ. ಚೆನ್ನೈಗೆ ಹೋಗುವ ನಿರ್ಧಾರ ಮಾಡಿದ. ಚೆನ್ನೈಯಲ್ಲಿದ್ದ ಆತನ ಫ್ರೆಂಡ್ ತನ್ನ ರೂಮಲ್ಲಿರಲು ಅವಕಾಶ ಕೊಟ್ಟ. ಆದರೆ ಅವನ ರೂಮ್‌ಮೇಟ್‌ಗಳು ಒಂದೇ ವಾರದಲ್ಲಿ ಬಾಲಗುರುನನ್ನು ಹೊರಗೆ ಹೋಗು ಎಂದರು.
ಸ್ವಾಭಿಮಾನಿ ಬಾಲಗುರು ಅಲ್ಲಿಂದ ಹೊರಬಂದ. ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡ. ಅಲ್ಲಿ ಉಚಿತವಾಗಿ ಊಟ ಮತ್ತು ವಸತಿ ಸಿಗುತ್ತದೆ ಮತ್ತು ಓದಬಹುದು ಅನ್ನೋದು ಅವನ ಉದ್ದೇಶವಾಗಿತ್ತು. ಆದರೆ ಸೆಕ್ಯುರಿಟಿ ಕೆಲಸದವರಿಗೆ ಯಾರೂ ಮರ್ಯಾದೆ ಕೊಡಲ್ಲ ಅನ್ನೋದು ಅವನಿಗೆ ಕೆಲವೇ ದಿನಗಳಲ್ಲಿ ಗೊತ್ತಾಯಿತು. ಅದವನಿಗೆ ಬೇಸರ ತರಿಸಿತ್ತು. ಹಾಗಾಗಿ ಅವನು ಫಾರ್ಮಸಿಯೊಂದರಲ್ಲಿ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿಕೊಂಡ. ಹೀಗೆ ಕೆಲಸ ಮಾಡುತ್ತಲೇ ಕರೆಸ್ಪಾಂಡೆನ್ಸ್‌ನಲ್ಲಿ ಬಿಎ ಪರೀಕ್ಷೆಗೆ ಕೂತ. ಡಿಗ್ರಿ ಪಡೆದ. ಅನಂತರ ಮೊದಲ ಸಲ ಐಎಎಸ್ ಪರೀಕ್ಷೆ ಬರೆದ. ದುರದೃಷ್ಟವಶಾತ್ ಪಾಸಾಗಲಿಲ್ಲ. ಹಾಗಂತ ಸೋತು ಕೂರಲಿಲ್ಲ.
ಮರುವರ್ಷ ಮತ್ತೆ ಬರೆದ. ಅಲ್ಲೂ ಪಾಸಾಗಲಿಲ್ಲ. ಈ ಹೊತ್ತಿಗೆ ಬ್ಯಾಂಕ್ ಎಕ್ಸಾಂ ಬರೆದು ಪಾಸಾದ. ಆದರೆ ಐಎಎಸ್‌ಗಾಗಿ ಅದನ್ನು ಬಿಟ್ಟ. ಮತ್ತೆ ಪರೀಕ್ಷೆ ಬರೆದ.
ಫೈನಲೀ, ಅವನು ಗೆದ್ದ. ಇನ್ನೇನು ಅವನು ಐಎಎಸ್ ಅಧಿಕಾರಿಗಳ ತರಬೇತಿ ಕೇಂದ್ರ ಸೇರಿಕೊಳ್ಳಲಿದ್ದಾನೆ. ಕೆಲವೇ ತಿಂಗಳಲ್ಲಿ ಬಾಲಗುರು ಐಎಎಸ್ ಆಗಿ ಅವನ ಹಳ್ಳಿಗೆ ಹಿಂದಿರುಗುತ್ತಾನೆ. ಆಗ ಅವನ ಮನೆಯವರ ಕಣ್ಣಲ್ಲಿ ನೀರಿರುತ್ತದೆ. ಊರವರ ಕಣ್ಣಲ್ಲಿ ಹೆಮ್ಮೆ.
ಕುಲದೀಪ್ ಅನ್ನೋ ಕನಸುಗಾರ
ಊರು ಲಕ್ನೋ. ತಂದೆ ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಸೆಕ್ಯುರಿಟಿ ಗಾರ್ಡ್. ಬಾಲ್ಯದಿಂದಲೇ ಕುಲದೀಪ್‌ಗೆ ಡಿಸಿ ಅಥವಾ ಎಸ್‌ಪಿಯಾಗುವ ಆಸೆ. ಸಿನಿಮಾಗಳನ್ನು ನೋಡುತ್ತಿದ್ದ ಕುಲ್‌ದೀಪ್‌ಗೆ ಡಿಸಿ ಅಥವಾ ಎಸ್‌ಪಿಗೆ ಸೂಪರ್ ಪವರ್ ಇರುತ್ತದೆ ಅನ್ನೋದು ಅಚ್ಚರಿಯ ಸಂಗತಿಯಾಗಿತ್ತು. ಹಾಗಾಗಿ ಅವತ್ತಿಂದಲೇ ತಾನೂ ಅಂಥದ್ದೇ ಸ್ಥಾನಕ್ಕೆ ಹೋಗಬೇಕು ಅನ್ನೋ ಕನಸು ಕಾಣತೊಡಗಿದ ಆತ.
ಯುಪಿಎಸ್‌ಸಿ ಪರೀಕ್ಷೆ ಬರೆಯೋದು ಅವನ ಜೀವಮಾನದ ದೊಡ್ಡ ಆಸೆಯಾಗಿತ್ತು. ಆದರೆ ಕುಟುಂಬ ಬಡತನದಲ್ಲಿದೆ. ಅವನನ್ನು ತುಂಬಾ ಓದಿಸಬೇಕು ಅಂದರೆ ಕಷ್ಟವೇ. ಆದರೆ ಕುಲದೀಪ್‌ನ ಆಸೆ ನೋಡಿ ತಂದೆ ಸೂರ್ಯಕಾಂತ್‌ನಿಗೆ ಅವನಿಗೆ ಬೇಡ ಅಂತ ಹೇಳಲು ಮನಸ್ಸಾಗಲಿಲ್ಲ. ಅವರು ಕಷ್ಟ ಪಟ್ಟು ಜಾಸ್ತಿ ದುಡಿಯತೊಡಗಿದರು. ಕುಲದೀಪ್‌ನಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದರು.
ಒಂದ್ಸಲ ಬರೆದ. ಪಾಸಾಗಲಿಲ್ಲ. ಎರಡನೇ ಸಲ ಬರೆದ ಆಗಲೂ ಪಾಸಾಗಲಿಲ್ಲ. ಈ ನಡುವೆ ಬಿಎಸ್‌ಎಫ್ದು ಪರೀಕ್ಷೆ ಬರೆದು ಪಾಸಾದ. ಆದರೆ ಕೆಲಸಕ್ಕೆ ಹೋಗಲಿಲ್ಲ. ಐಪಿಎಸ್ ಆಗಬೇಕು ಅನ್ನೋದು ಅವನ ಬದುಕಿನ ದೊಡ್ಡ ಗುರಿಯಾಗಿತ್ತು. ಹಾಗಾಗಿ ಮತ್ತೆ ಪರೀಕ್ಷೆ ಬರೆದ. ಅವನು ಪಾಸಾದ ಅನ್ನೋ ಸುದ್ದಿ ಕೇಳಿ ತಂದೆಯ ಕಾಲು ನೆಲದಲ್ಲಿರಲಿಲ್ಲ. ಎಲ್ಲಾ ಸೆಕ್ಯುರಿಟಿ ಗಾರ್ಡ್‌ಗಳಿಗೂ ಸಿಹಿ ಹಂಚಿ ಸಂಭ್ರಮಿಸಿ ಮನೆಗೆ ಹೋಗಿದ್ದಾರೆ.
ಆದರೆ ಮನೆಯವರಿಗೆ ಐಪಿಎಸ್ ಎಂದರೇನು ಅಂತ ಗೊತ್ತಿಲ್ಲ. ಸಬ್ ಇನ್‌ಸ್ಪೆಕ್ಟರ್ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಪವರ್‌ಫುಲ್ ಅಂತ ನಂಬಿಕೊಂಡಿರುವ ಅ ಕುಟುಂಬಕ್ಕೆ ಮನೆಯ ಮಗ ಎಸ್‌ಪಿಯಾಗಲಿದ್ದಾನೆ ಅಂದ್ರೆ ಗೊತ್ತಾಗುವುದಿಲ್ಲ. ಕಡೆಗೆ ಆತ ಆಫೀಸರ್ ಆಗಲಿದ್ದಾನೆ ಅಂತ ಹೇಳಿದಾಗ ಮನೆಯಲ್ಲಿ ಎಲ್ಲರ ಕಣ್ಣಲ್ಲು ನೀರು. ಜಾಸ್ತಿ ದಿನ ಬೇಕಿಲ್ಲ. ಕೆಲವು ತಿಂಗಳುಗಳ ನಂತರ ಕುಲದೀಪ್ ಪೊಲೀಸ್ ದಿರಿಸಿನಲ್ಲಿ ಆ ಹಳ್ಳಿಗೆ ಕಾಲಿಟ್ಟು ಮನೆಗೆ ಹೋದಾಗ ಅಲ್ಲಿದ್ದವರ ಪ್ರತಿಕ್ರಿಯೆ ಹೇಗಿರಬಹುದು ಎಂದು ನೆನೆದರೆ ರೋಮಾಂಚನವಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
