ಹನುಮ ಜನಿಸಿದ ನಾಡು ಅಂಜನಾದ್ರಿ ಬೆಟ್ಟ ಪ್ರಮುಖರ ದರ್ಶನ ಪಡೆಯುವ ಕೇಂದ್ರವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಂಧ (ಹನುಮನಹಳ್ಳಿ) ಐತಿಹಾಸಿಕ ಪ್ರದೇಶವೂ ಹೌದು. ವಿಜಯನಗರ ಸಾಮ್ರಾಜ್ಯದ ಪ್ರದೇಶದಲ್ಲಿ ಬರುವ ಈ ಸ್ಥಳ ತುಂಗಭದ್ರಾ ನದಿ ತಟದಲ್ಲಿರುವ ಧಾರ್ಮಿಕ ಕ್ಷೇತ್ರ.
ಐತಿಹ್ಯ
ಅಂಜನಾದ್ರಿ ಬೆಟ್ಟಕ್ಕೆ ಭಕ್ತಿ ಭಾವದೊಂದಿಗೆ ಆಗಮಿಸುವ ಭಕ್ತರ ದಂಡು ಒಂದೆಡೆಯಾದರೆ, ಇಲ್ಲಿನ ಪೌರಾಣಿಕ ಹಿನ್ನೆಲೆಯನ್ನು ಓದಿ ತಿಳಿದುಕೊಂಡ ವಿದೇಶಿ ಪ್ರವಾಸಿಗರು, ಈ ಬೆಟ್ಟಕ್ಕೆ ಭೇಟಿ ನೀಡಲು ಕುತೂಹಲದಿಂದ ದೌಡಾಯಿಸುತ್ತಾರೆ. ಅಂಜನಾದ್ರಿ ಪರ್ವತ ಪ್ರದೇಶವೆಂದರೆ ರಾಮಾಯಣದ ಶ್ರೀ ಆಂಜನೇಯ ಹುಟ್ಟಿ ಬೆಳೆದ ಪ್ರದೇಶವೆಂದೇ ಎಲ್ಲರ ನಂಬಿಕೆ. ಇದರಿಂದಾಗಿಯೇ ಭಕ್ತಿ ಭಾವದೊಂದಿಗೆ ಈ ಬೆಟ್ಟಕ್ಕೆ ಭೇಟಿ ನೀಡುವರ ಸಂಖ್ಯೆ ವೃದ್ಧಿಸಲು ಕಾರಣವಾಗಿದೆ.
ಅಂಜನಾದ್ರಿ ಬೆಟ್ಟ ಹನುಮಂತ ಜನಿಸಿದ ಸ್ಥಳ ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಇಂತಹ ಸ್ಥಳಕ್ಕೆ ರಾಜಕೀಯ ನಾಯಕರು ಭೇಟಿ ನೀಡುತ್ತಾರೆ. ಅದು ಅಧಿಕಾರ ಪಡೆಯುವುದಕ್ಕಾಗಿ ಪರ್ವತವನ್ನು ಏರಿ ಹರಕೆ ಹೊತ್ತರೆ ಅವರ ಬೇಡಿಕೆ ಈಡೇರುತ್ತದೆ ಎಂಬ ವಾಡಿಕೆ ಇದೆ. ಹೀಗಾಗಿ ಬಹಳಷ್ಟು ರಾಜಕೀಯ ನಾಯಕರು ಸೇರಿದಂತೆ ಚಿತ್ರ ನಟರೂ ಸಹ ಪರ್ವತ ಏರಿದ ಅನೇಕ ಉದಾಹರಣೆಗಳಿವೆ.
ಭೇಟಿ ನೀಡಿದ ಪ್ರಮುಖರು: ಮಧ್ಯಪ್ರದೇಶದ ಮಾಜಿ ಸಿಎಂ ಉಮಾ ಭಾರತಿ ನಾಲ್ಕು ವರ್ಷಗಳ ಹಿಂದೆ ಅಂಜನಾದ್ರಿ ಪರ್ವತ ಏರಿ ಹನುಮನ ದರ್ಶನ ಪಡೆದಿದ್ದರು. ಅಲ್ಲದೆ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ಅಶೋಕ್ ಸಿಂಘಾಲ್, ಪ್ರವೀಣ್‌ಬಾಯ್ ತೊಗಾಡಿಯಾ, ಬಿಜೆಪಿ ನಾಯಕ ಗೋವಿಂದಾಚಾರ್ಯ ಭೇಟಿ ನೀಡಿದ್ದಾರೆ. ಕೇವಲ ರಾಜಕೀಯ ನಾಯಕರಲ್ಲದೆ ಖ್ಯಾತ ತೆಲುಗು ಮತ್ತು ಕನ್ನಡ ಚಿತ್ರ ನಟ, ನಿರ್ದೇಶಕರು, ಗಾಯಕರು ಅಂಜನಾದ್ರಿ ಬೆಟ್ಟ ಹತ್ತಿ ಹರಕೆ ತೀರಿಸಿದ್ದಾರೆ. ಹಾಲಿವುಡ್ ನಟ ಜಾಕಿಚಾನ್, ಅರ್ಜುನ್ ಸರ್ಜಾ, ತೆಲುಗು ಸ್ಟಾರ್ ಚಿರಂಜೀವಿ, ನಾಗಾರ್ಜುನ ಅವರಿಗೆ ನೃತ್ಯ ನಿರ್ದೇಶನ ನೀಡಿದ ರಾಘವ ಲಾರೇನ್ ಹಾಗೂ ಚಿತ್ರ ನಟ ಶ್ರೀಕಾಂತ್ ಅವರು ಅಂಜನಾದ್ರಿ ಬೆಟ್ಟ ಏರಿದ್ದಾರೆ. ಖ್ಯಾತ ಕನ್ನಡ ಚಿತ್ರ ನಟ ಅಂಬರೀಷ್, ಶಿವರಾಜಕುಮಾರ ಅವರು ಪಂಪಾ ಸರೋವರ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದರು.
ಗೌಪ್ಯವಾಗಿ ಬಂದ ಮೋದಿ ಪತ್ನಿ: ದೇಶದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಸಹ ಈಗ ಅಂಜನಾದ್ರಿ ಬೆಟ್ಟ ಏರಿದ್ದಾರೆ. ತಮ್ಮ ಪತಿ ಪ್ರಧಾನಿಯಾಗಲಿ ಎಂಬ ಹರಕೆ ಹೊತ್ತಿದ್ದ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಅವರು ಗೌಪ್ಯವಾಗಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆದು, ಅನಂತರ ಪಂಪಾ ಸರೋವರದಲ್ಲಿ ಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಉತ್ತರ ಭಾರತದಿಂದ ದಿನ ನಿತ್ಯ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ಈ ಪ್ರದೇಶದಲ್ಲಿ ಕೆಲ ನಾಯಕರು ಗೌಪ್ಯವಾಗಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ರಾಮಾಯಣದ ಪ್ರಸಿದ್ಧ ಸ್ಥಳವಾಗಿರುವ ಈ ಪ್ರದೇಶದಲ್ಲಿ ನವವೃಂದಾವನ, ಚಿಂತಾಮಣಿ, ವಾಲಿಕಿಲ್ಲಾ, ದುರ್ಗಾ ಬೆಟ್ಟ ಸೇರಿದಂತೆ ಪ್ರಸಿದ್ಧ ಸ್ಥಳಗಳೂ ಇಲ್ಲಿವೆ.
ಮಾರ್ಗ: ಬೆಂಗಳೂರಿನಿಂದ ಚಿತ್ರದುರ್ಗ ಮೂಲಕ ಹೊಸಪೇಟೆ ಅಥವಾ ಗಂಗಾವತಿ ತಲುಪಬಹುದು. ಅಲ್ಲಿಂದ ಸರ್ಕಾರಿ ಬಸ್ ಮೂಲಕ ಪ್ರಯಾಣಿಸಬಹುದು. ಹತ್ತಿರದ ರೈಲು ನಿಲ್ದಾಣ ಮುನಿರಾಬಾದ್ ಜಂಕ್ಷನ್. ಹೊಸಪೇಟೆ, ಗಂಗಾವತಿಯಲ್ಲಿ ಉಳಿದುಕೊಳ್ಳಲು ವಸತಿಗೃಹಗಳು ಸಿಗುತ್ತವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
