ಕೋಲಾರದಲ್ಲಿನ ವಿಶ್ವದಲ್ಲೆ ಏಕೈಕ ಗರುಡ ದೇವಾಲಯ. ಸೀತೆಯ ರಕ್ಷಣೆಗೆಂದು ಬಂದ ಜಟಾಯು ಪಕ್ಷಿಯನ್ನು ರಾವಣ ಕೊಲ್ಲಲ್ಪಟ್ಟ ಸ್ಥಳ. ಇಲ್ಲಿಗೆ ಒಮ್ಮೆ ಭೇಟಿ ನೀಡಿದ್ರೆ ೮ ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವೆ. ಹೀಗಾಗಿ ಇಲ್ಲಿಗೆ ಭಕ್ತಸಾಗರವೇ ಹರಿದು ಬರುತ್ತದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮವೂ ಐತಿಹಾಸಿಕ ಹಿನ್ನೆಲೆ ಇರುವ ಗರುಡ ದೇವಸ್ಥಾನ ಹೊಂದಿರುವ ಗ್ರಾಮ. ವಿಶ್ವದಲ್ಲೆ ಏಕೈಕ ದೇವಸ್ಥಾನ ಇದಾಗಿದ್ದು, ಪುರಾಣಗಳ ಪ್ರಕಾರ ಮಹಾಭಾರತದ ವೇಳೆ ಅರ್ಜುನನಿಂದ ಇಲ್ಲಿ ಶ್ರೀ ಗರುಡ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ ಎಂಬ ಕಥೆ ಇದೆ. ಮುಳಬಾಗಿಲು ತಾಲೂಕು ಕೇಂದ್ರದಿಂದ ೧೪ ಕೀ.ಮೀ. ದೂರ ಕ್ರಮಿಸಿದರೆ ಸಾಕು ಕೊಲದೇವಿ ಗ್ರಾಮ ಸಿಗುತ್ತದೆ. ಈ ಗ್ರಾಮ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಹಿನ್ನೆಲೆ ಹೊಂದಿರುವ ಸ್ಥಳವಾಗಿದೆ. ಹಲವು ಶತಮಾನಗಳ ಹಿಂದೆ ಬೃಗ ಮಹಾಋಷಿಗಳಿಂದ ಈ ಪ್ರದೇಶಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.
ಈ ದೇವಾಲಯ ಸಾವಿರ ವರ್ಷಗಳ ಹಿಂದೆಯೇ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪನೆ ಆಗಿದೆ. ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ವಿಷ್ಣು ವರ ಕೊಟ್ಟು ಭೂ ಲೋಕಕ್ಕೆ ಹೋಗು ಎಂದಾಗ ಹನುಮನು ಇಲ್ಲಿ ಬಂದು ನೆಲೆಸಿದ್ದಾನೆ ಎನ್ನಲಾಗುತ್ತಿದೆ. ಇಲ್ಲಿಯ ಗರುಡ ದೇವರು ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಹೊಂದಿರುವುದನ್ನು ಕಾಣಬಹುದು.
ಪುರಾಣದಲ್ಲಿ ಏನಿದೆ ?
ಛಲವಂತ ರಾವಣ ಸೀತೆಯನ್ನು ಅಪಹರಿಸಿದ ವೇಳೆ ವಿಷ್ಣುವಿನ ವಾಹನ ಜಟಾಯು ಪಕ್ಷಿ ಸೀತೆಯನ್ನು ಕಾಪಾಡಲು ಮುಂದಾದಾಗ ರಾವಣ ಜಟಾಯುವಿನ ಎರಡು ರೆಕ್ಕೆಗಳನ್ನು ಕತ್ತರಿಸಿ ಹಾಕುತ್ತಾನೆ. ಆ ಎರಡು ರೆಕ್ಕೆಗಳು ಈ ಭಾಗದಲ್ಲಿ ಬಿದ್ದವು ಎನ್ನುವುದು ಇತಿಹಾಸ. ಹಾಗಾಗಿಯೇ ರಾವಣನಿಂದ ಗರುಡ ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದು ಇದಕ್ಕೆ ಕೊಲದೇವಿ ಎಂಬ ಹೆಸರು ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಇನ್ನೂ ಜಟಾಯು ಬಿದ್ದ ಸ್ಥಳದಲ್ಲೇ ಹನುಮನು ಬಂದು ನೆಲೆಸಿದ್ದಾನೆ ಎನ್ನಲಾಗುತ್ತದೆ.
ಇಲ್ಲಿರುವ ಆಂಜನೇಯ ಹಲ್ಲು ಹಾಗೂ ಕೈಯಲ್ಲಿ ಬ್ರಹ್ಮಾಸ್ತ್ರವನ್ನು ಹೊಂದಿದ್ದಾನೆ. ಗರುಡ ದೇವರ ದರ್ಶನ ಮಾಡಿದರೆ ಅದೃಷ್ಟ ಖುಲಾಯಿಸುತ್ತೆ ಎನ್ನುವುದು ಗರುಡ ಪುರಾಣಗಳಲ್ಲಿ ಕಂಡುಬರುತ್ತದೆ. ಇನ್ನೊಂದೆಡೆ ಮೇಲುಕೋಟೆ ಚಲುವ ನಾರಾಯಣಸ್ವಾಮಿ ಹಾಗೂ ತಿರುಪತಿಯ ದೇವಾಲಯಗಳಿಗೂ ಈ ಗರುಡ ದೇವರಿಗೂ ಸಂಬಂಧವಿದೆ ಎಂಬ ಇತಿಹಾಸವೂ ಇಲ್ಲಿದೆ.
೮ ರೀತಿಯ ಸರ್ಪ ದೋಷಗಳು ನಿವಾರಣೆ:
ಈ ಗರುಡ ದೇವರನ್ನು ದರ್ಶನ ಮಾಡಿದ್ರೆ ೮ ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ವೈದ್ಯ ಲೋಕಕ್ಕೆ ಸವಾಲಾದ ಹಲವು ಕಾಯಿಲೆಗಳು ಇಲ್ಲಿ ವಾಸಿಯಾಗಿವೆ. ವಾಮಾಚಾರ, ಮಾಟ-ಮಂತ್ರಗಳ ನಿವಾರಣೆಗೆ ಬಂದ ಭಕ್ತ ಕೋಟಿಯನ್ನು ಗರುಡ ದೇವರು ರಕ್ಷಿಸಿದ್ದಾನೆ. ಪ್ರತಿ ಶನಿವಾರ, ಭಾನುವಾರ ಇಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಗರುಡ ದೇವರ ದರ್ಶನ ಪಡೆದರೆ ಬೇಡಿದ್ದನ್ನು ನೀಡುತ್ತಾನೆ ಎಂಬ ಪ್ರತೀತಿ ಇಲ್ಲಿದೆ. ಇಲ್ಲಿಗೆ ಬಂದ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ. ಹಾಗಾಗಿ ಇಲ್ಲಿಗೆ ನೆರೆಯ ಆಂಧ್ರ ಹಾಗೂ ತಮಿಳುನಾಡಿನ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
