ಜನ್ಮ ನಕ್ಷತ್ರ ಅಥವಾ ನಾಮ ನಕ್ಷತ್ರಗಳಿಗೆ 8-12-1 ಈ ಸ್ಥಾನದಲ್ಲಿ ಶನಿಯು ಇದ್ದುದಾದರೆ ಶನಿ ಶಾಂತಿ ಪೂಜೇ ಮಾಡಿಸಬೇಕು. ಶ್ರಾವಣ ಅಥವಾ ಇನ್ನಾವುದೇ ಮಾಸದ ಆದಿಯಲ್ಲಿರುವ ಶನಿವಾರದಿಂದ ಆರಂಭಿಸಿ 22 ಶನಿವಾರ ಕಬ್ಬಿಣದಿಂದ ತಯಾರಿಸಿದ ಶನೈಶ್ಚರ ಪ್ರತಿಮೆಯನ್ನು ನೀಲಿಪುಷ್ಪ, ಗಂಧ, ಅಕ್ಷತೆಗಳಿಂದ ಪೂಜಿಸಿ ಪ್ರತಿ ದಿವಸ ” ಓಂ ಶನೈಶ್ಚರಾಯ ನಮಃ ಎಂಬ ಮಂತ್ರದಿಂದ ಒಂದೋಂದು ಸಹಸ್ರ ಜಪ ಮಾಡಿ ಕೊನೆಯ 23 ನೆಯ ಶನಿ ವಾರ ಪ್ರಾತಃ ಕಾಲದಲ್ಲಿ ಎದ್ದು ದಿನದ ಕಾರ್ಯಗಳನ್ನು ಮುಗಿಸಿ ಸ್ನಾನ ಶಿವಪೂಜಾದಿಗಳನ್ನು ತೀರಿಸಿಕೊಂಡು ಪ್ರಾಣಾಯಾಮವನ್ನು ಮಾಡಿ ದೇಶಕಾಲಾದಿಗಳನ್ನು ಉಚ್ಚರಿಸಬೇಕು.
ನಂತರ ಸಂಕಲ್ಪವನ್ನು ಮಾಡಿ ಗಣಪತಿ ಪೂಜಾ, ಸ್ವಸ್ತಿವಾಚನ, ಸಂಕ್ಷಿಪ್ತನವ ಗ್ರಹ ಪೂಜಾದಿಗಳನ್ನು ಮಾಡಿ ರಂಗವಲ್ಯಾದಗಳಿಂದ ಅಲಂಕೃತವಾದ ಪರಿ ಶುದ್ದ ಪ್ರದೇಶದಲ್ಲಿ ಧನಸ್ಸು ಆಕಾರದ ಮಂಡಲದಲ್ಲಿ ಕರೇ ಎಳ್ಳುಗಳ ಗುಡ್ಡೆಯನ್ನು ರಚಿಸಿ ಅದರ ಮೇಲೆ ನೀರಿನಿಂದ ತುಂಬಿದ ಕಬ್ಬಿಣದ ಕಲಶ (ತಂಬಿಗೆ) ವನ್ನು ಸ್ಥಾಪಿಸಿ ಅದರ ಮೇಲೆ ಕಬ್ಬಿಣದ ಅಥವಾ ಲೋಹದ ಶನೈಶ್ಚರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಬೇಕು.
“ಶಮಗ್ನಿರಗ್ನಿ” ಎಂಬ ಮಂತ್ರದಿಂದ ಕರನ್ಯಸ, ಅಂಗನ್ಯಾಸ ಮಾಡಿ ಧ್ಯಾನ, ಆವಾಹನಾದಿಗಳನ್ನು ಸಮರ್ಪಿಸಿ ಶನೈಶ್ಚರನನ್ನು ಸ್ಥಾಪಿಸಿ ಪೂಜಿಸಬೇಕು.
ನಂತರ ಶನೈಶ್ಚರನ ಬಲಭಾಗದಲ್ಲಿ ಅಧಿದೇವತೆಯಾದ ಯಮನನ್ನೂ, ಎಡಭಾಗದಲ್ಲಿ ಪ್ರತ್ಯಧಿದೇತೆಯಾದ ಪ್ರಜಾಪತಿಯನ್ನೂ ಆವಾಹನೆ ಮಾಡಿ ಪ್ರತಿಷ್ಠಾಪಿಸಿ ಪೂಜಿಸಬೇಕು.
ಶನೈಶ್ಚರನಿಗೆ ಪಂಚಾಮೃತ ಅಭಿಷೇಕ, ಎಳ್ಳಿನ ಎಣ್ಣೆಯಿಂದ ಸ್ನಾನಾದಿಗಳನ್ನು ಮಾಡಿಸಿ ಎರಡು ಕಪ್ಪು ವಸ್ತ್ರಗಳನ್ನು ಹೊದಿಸಿ ಉದ್ದು, ಎಳ್ಳುಗಳನ್ನು ಬದಿಯಲ್ಲಿ ಇಟ್ಟು ಪುಷ್ಪ ಅಕ್ಷತಾದಿಗಳಿಂದ ಪುರುಷ ಸೂಕ್ತ, ಷೋಡಶೋಪಚಾರಗಳಿಂದ ಪೂಜಿಸಿ ಜಪಮುಗಿಸಿ ಕಲಸನ್ನ, ಉದ್ದು ಮಿಶ್ರ ಮಾಡಿ ನೈವೇದ್ಯ ಮಾಡಿ ತರ್ಪಣ ಕೊಟ್ಟು ಹೊಮ ಮಾಡಿ ಪ್ರಧಾನ ದೇವತಾ ಶನೈಶ್ಚರನಿಗೆ ಮೊಸರು, ತುಪ್ಪ, ಜೇನುತುಪ್ಪ, ಬನ್ನಿ ( ಶಮೀ) ಸಮಿತ್ತುಗಳಿಂದ-
“ಓಂ ಶನ್ನೋದೇವಿ ಸ್ವಾಹಾ ಶನೈಶ್ಚರಾಯ ಇದಂ ನಮಮ”
ಈ ಮಂತ್ರದಿಂದ ಜಪ ಸಂಖ್ಯೆ 110 ದಷ್ಟು ಸಾರಿ ಆಹುತಿ ಕೊಟ್ಟು ಹೋಮ ಕಾರ್ಯಮುಗಿಸಿ ಜಲಪೂರ್ಣವಾದ ಕಲಶದಲ್ಲಿ ಎಳ್ಳು, ಉದ್ದು, ಹಾಕಿ ಜಲದಿಂದ ಯಜಮಾನನಿಗೆ ಸ್ನಾನ ಮಾಡಿಸಬೇಕು ನಂತರ ಉತ್ತರ ಪೂಜೆಯನ್ನು ಮಾಡಿ ವಿಸರ್ಜಿಸಬೇಕು.
ಈಗೆ ಶನೈಶ್ಚರ ಗ್ರಹ ಶಾಂತಿ ಪೂಜೆ ಮಾಡಬೇಕು.
ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ,
ಮೈಸೂರು.
9845371416, 9343277012
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
