ತೆನಾಲಿರಾಮ ಅಷ್ಟು ಬುದ್ದಿವಂತನಾಗಿದ್ದಕ್ಕೆ, ಅವನು ಕಳ್ಳನನ್ನ ಸುಲಭವಾಗಿ ಕಂಡುಹಿಡಿದಿದ್ದು.
ತೆನಾಲಿ ರಾಮನ ಊರಿನಲ್ಲಿ ಭರತ್ ಮತ್ತು ಕುಮಾರ್ ಎಂಬ ಇಬ್ಬರು ಸ್ನೇಹಿತರಿದ್ದರು. ಒಮ್ಮೆ ಭರತನು ತನ್ನ ಕುಟುಂಬದೊಡನೆ ತೀರ್ಥಯಾತ್ರೆಗೆ ಹೋಗಲು ತೀರ್ಮಾನಿಸಿದ. ಭರತನ ಮನೆಯಲ್ಲಿ 5000 ಚಿನ್ನದ ನಾಣ್ಯಗಳಿದ್ದವು. ಆ ನಾಣ್ಯಗಳನ್ನು ಎಲ್ಲಿ ಬಚ್ಚಿಡಲಿ ಎಂದು ಯೋಚಿಸುತ್ತಾ ಒಂದು ದೊಡ್ಡ ಜಾಡಿಯೊಳಕ್ಕೆ ಆ 5000 ಚಿನ್ನದ ನಾಣ್ಯಗಳನ್ನ ಹಾಕಿ ಮೇಲೆ ಭತ್ತವನ್ನು ತುಂಬಿದನು. ನಂತರ ಆ ಮಡಕೆಯನ್ನು ತನ್ನ ಸ್ನೇಹಿತ ಕುಮಾರನ ಮನೆಗೆ ತೆಗೆದುಕೊಂಡು ಹೋಗಿ ಅವನ ಮನೆಯಲ್ಲಿ ಜೋಪಾನವಾಗಿಟ್ಟುಕೊಳ್ಳುವಂತೆ ಹೇಳಿ ಕುಮಾರನ ಕೈಗೆ ಕೊಟ್ಟು ತೀರ್ಥಯಾತ್ರೆಗೆ ತೆರೆಳಿದನು.
ಸುಮಾರು ದಿನಗಳು ಕಳೆದರು ಭರತನು ವಾಪಸ್ಸು ಬರಲಿಲ್ಲ. ಕುಮಾರನು ಆ ಜಾಡಿಯನ್ನು ಕೂತಹಲದಿಂದ ತೆಗೆದು ಜಾಡಿಯ ತಲೆಯನ್ನು ಕೆಳಗೆ ಮಾಡಿದ. ಅದರಲ್ಲಿದ್ದ 5000 ಚಿನ್ನದ ನಾಣ್ಯಗಳನ್ನ ನೋಡಿ ಕುಮಾರನಿಗೆ ಆಶ್ಚರ್ಯವಾಗುತ್ತದೆ.ಅವನು ಆ 5000 ಚಿನ್ನದ ನಾಣ್ಯಗಳನ್ನೂ ತೆಗೆದುಕೊಂಡು ಬೇರೆ ಭತ್ತವನ್ನು ತುಂಬುತ್ತಾನೆ.
ಒಂದು ವರ್ಷದ ನಂತರ ಭರತನು ತೀರ್ಥಯಾತ್ರೆಯಿಂದ ವಾಪಸ್ಸುಬಂದು ಕುಮಾರನ ಹತ್ತಿರ ತನ್ನ ಭತ್ತದ ಜಾಡಿಯನ್ನು ವಾಪಸ್ಸು ಪಡೆದುಕೊಂಡು ಮನೆಗೆ ಬಂದನು.ಮನೆಗೆ ಬಂದು ನೋಡಿದಾಗ ಅದರಲ್ಲಿ ಕೇವಲ ಭತ್ತ ಮಾತ್ರ ಇತ್ತು ಅವನ 5000 ಚಿನ್ನದ ನಾಣ್ಯಗಳಿರಲಿಲ್ಲ. ನಂತರ ಭರತನು ಕುಮಾರನ ಮನೆಗೆ ಹೋಗಿ ಕೇಳಿದನು.ಅದಕ್ಕೆ ಕುಮಾರನು “ನೀನು ಕೊಟ್ಟಿದ್ದು ಭತ್ತದ ಜಾಡಿ, ನಿನ್ನ ಕೈಯಲ್ಲೇ ಇದೆಯಲ್ಲ. ನನಗೆ ಯಾವ ಚಿನ್ನದ ನಾಣ್ಯಗಳು ಗೊತ್ತಿಲ್ಲ”ಎಂದು ಹೇಳುತ್ತಾನೆ.
ನಂತರ ಭರತನು ಕುಮಾರನನ್ನು ತೆನಾಲಿರಾಮನ ಹತ್ತಿರ ನ್ಯಾಯಕ್ಕೆಂದು ಕರೆದುಕೊಂಡು ಹೋದನು. ತೆನಾಲಿರಾಮನು ಭರತನು ಹೇಳಿದ ಮಾತಗಳನ್ನು ಸೂಕ್ಷ್ಮವಾಗಿ ಆಲೋಚಿಸಿ “ಭರತ ನೀನು ಕುಮಾರನಿಗೆ ಭತ್ತದ ಜಾಡಿಯನ್ನು ಯಾವಾಗ ಕೊಟ್ಟಿದ್ದೆ” ಎಂದು ಕೇಳಿದ ಅದಕ್ಕವನು ಸುಮಾರು ಒಂದು ವರ್ಷದ ಹಿಂದೆ ಕೊಟ್ಟಿದ್ದೆ ಎಂದು ಹೇಳಿದ.ಆಗ ತೆನಾಲಿರಾಮ “ಒಂದು ವರ್ಷ ಹಳೆಯ ಭತ್ತವು ಈ ರೀತಿ ಇರುವುದಿಲ್ಲ, ಈ ಭತ್ತವು ತುಂಬಾ ತಾಜಾತನದಿಂದ ಕೂಡಿದೆ.ಕುಮಾರನು ಆ ನಾಣ್ಯಗಳನ್ನು ತೆಗೆದುಕೊಂಡು ಬೇರೆ ಭತ್ತವನ್ನು ತುಂಬಿದ್ದಾನೆ ಹಾಗಾಗಿ ಕುಮಾರನು ಭರತನಿಗೆ ಅವನ 10000 ಚಿನ್ನದ ನಾಣ್ಯಗಳನ್ನು ಕೊಡಬೇಕೆಂದು ಹೇಳುತ್ತಾನೆ.
ತೆನಾಲಿ ರಾಮನು ಹೇಳಿದ್ದನ್ನು ಕೇಳಿದ ಕುಮಾರನು “ಇಲ್ಲ ಇಲ್ಲ ಅದರಲ್ಲಿ ಕೇವಲ 5000 ಚಿನ್ನದ ನಾಣ್ಯಗಳು ಮಾತ್ರ ಇದ್ದಿದ್ದು” ಎಂದು ಹೇಳುತ್ತಾನೆ. ಆಗ ತೆನಾಲಿ ರಾಮನು “ಕುಮಾರ್, ಅದರಲ್ಲಿ 5000 ಚಿನ್ನದ ನಾಣ್ಯಗಳಿತ್ತೆಂದು ನಿನಗೇಗೆ ಗೊತ್ತು ಎಂದು ಪ್ರಶ್ನಿಸಿದನು” ಆಗ ಕುಮಾರನಿಗೆ ಅವಮಾನವೆನಿಸಿತು ಬಂಗಾರದ ನಾಣ್ಯಗಳನ್ನು ಭರತನಿಗೆ ವಾಪಸ್ಸು ಕೊಟ್ಟನು.ಭರತನು ತೆನಾಲಿ ರಾಮನಿಗೆ ಧನ್ಯಾವಾದವನ್ನು ಹೇಳಿದನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
