fbpx
ದೇವರು

ಗಾಯಿತ್ರಿಮಂತ್ರವನ್ನು ಪಠಿಸಿದರೆ ಸಮೃದ್ಧ ಬದುಕು ಸಿದ್ಧಿಸುತ್ತೆ.

ಗಾಯತ್ರಿ ಮೂಲತಃ ಸಂಸ್ಕೃತ ಪದವಾದ ಗಾಯತ್ರ ಪದದ ಸ್ತ್ರೀಲಿಂಗ ರೂಪ. ಈ ಪದವನ್ನು ಸಂಸ್ಕೃತದಲ್ಲಿ ಗಾಯಂತಮ್ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ ಎಂದು ಬಿಡಿಸುತ್ತಾರೆ. ಭಾಷಾಂತರಿಸಿದರೆ ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೊ ಅದೆ ಗಾಯತ್ರ ಎಂಬ ಅರ್ಥ ಮೂಡಿ ಬರುತ್ತದೆ. ಹಿಂದೂ ಧರ್ಮಾನುಯಾಯಿಗಳ ವಚನ ಲೇಖನಗಳಲ್ಲಿ ಮತ್ತು ಧರ್ಮ ಗ್ರಂಥಗಳಲ್ಲಿ ಈ ಪದವನ್ನು ಮೂರು ಸ್ವರೂಪದಲ್ಲಿ ಕಾಣಬಹುದು.

ಗಾಯತ್ರಿ ಮಂತ್ರದ ಅರ್ಥ

ಅನಂತ ಸ್ವರೂಪನಾದ ಭೂಮಿ, ಅಂತರಿಕ್ಷ ಹಾಗೂ ಸ್ವರ್ಗ ಲೋಕಗಳಲ್ಲಿ ಮೂರು ವೇದಗಳಲ್ಲಿ ಹಾಗೂ ಮೂರು ಕಾಲಗಳಲ್ಲಿ ವ್ಯಾಪಿಸಿರುವ ಯಾವ ಪರಮಾತ್ಮನನ್ನು ಬುದ್ಧಿ, ಮಾತು ಹಾಗೂ ಕರ್ಮಗಳನ್ನು ಪ್ರೇರೇಪಿಸುತ್ತಾನೋ ಅಂಥ ಪ್ರಕಾಶ ಮಾನವಾದ ಜಗತ್ತಿನ ಸೃಷ್ಟಿಗೆ ಕಾರಣನಾದ ಸವಿತೃ ದೇವನ ಶ್ರೇಷ್ಠವಾದ ತೇಜಸ್ಸನ್ನು ಧ್ಯಾನಿಸುತ್ತೇವೆ.

ಕನ್ನಡ ಭಾಷಾಂತರ

ಹಲವರು ಹಲವು ರೀತಿಯಲ್ಲಿ ಭಾಷಾಂತರಿಸಿದ್ದಾರೆ. ಆದರೆ ಮೂಲ ಅರ್ಥ ಹೀಗೆ ಹೊಮ್ಮುತ್ತದೆ. ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ)ಗೆ ಪ್ರೇರಿಸಲಿ

ಗಾಯತ್ರೀ ಮಂತ್ರ

*ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು) ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ, ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತಾರೆ. ಗಾಯತ್ರೀ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರನಿಂದ ದರ್ಶಿಸಲ್ಪಟ್ಟಿದೆ ಎಂದು ಕೆಲವರು ನಂಬುತ್ತಾರೆ. ಆದರೆ ಗಾಯತ್ರೀ ಮಂತ್ರ ಇರುವ ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವ ಪುರಾಣ ಕಥೆ.

*ಉಪನಯನ ಸಂಸ್ಕಾರದಲ್ಲಿ ಉಪನೀತನಿಗೆ ಈ ಮಂತ್ರವನ್ನು ಉಪದೇಶಿಸುತ್ತಾರೆ. ಬ್ರಹ್ಮೋಪದೇಶ ರೂಪವಾದ ಈ ಮಂತ್ರದಿಂದ ಉಪನೀತ ವಿಪ್ರನಾಗುತ್ತಾನೆ. ಮನುಸ್ಮೃತಿಯಲ್ಲಿ ತಿಳಿಸಿರುವಂತೆ ಗಾಯತ್ರಿ ಸಕಲ ವೇದಗಳ ಸಾರವಾದುದು, ಪರಬ್ರಹ್ಮ ಸ್ವರೂಪವುಳ್ಳದ್ದು. ಓಂಕಾರಪುರ್ವಕ ಸಂಧ್ಯಾಕಾಲಗಳಲ್ಲಿ ವೇದಮಾತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ, ಮಹಾಪಾತಕಗಳು ನಶಿಸುತ್ತವೆ.

*ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಿಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದು ಅನೇಕ ಧರ್ಮಶಾಸ್ತ್ರಜ್ಞರ ಅಭಿಪ್ರಾಯ. ಋಗ್ವೇದದದ ೩.೬೨.೧೦ನೆ (೩ನೆ ಮಂಡಲ, ೬೨ನೆ ಸೂಕ್ತ, ೧೦ನೆ ರಿಚ) ಮಂತ್ರವಾಗಿರುವ ಇದು, “ಓಂ ಭೂರ್ಭುವಃ ಸ್ವಃ” ಎಂಬ ಪೀಠಿಕೆ (ಯಜುರ್ವೇದದ ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ.

*ಮಹರ್ಷಿ ವ್ಯಾಸರು ಹೇಳುವಂತೆ ಗಾಯತ್ರಿಯನ್ನು ಅಲ್ಲಗಳೆದು ಅನ್ಯ ಉಪಾಸನೆ ಮಾಡುವಂಥ ವ್ಯಕ್ತಿ ಪಕ್ವಾನ್ನವನ್ನು ತೊರೆದು ಭಿಕ್ಷಾನ್ನವನ್ನು ಸ್ವೀಕರಿಸುವ ಮೂರ್ಖರಿಗೆ ಸಮ. ಮಂದ ಬುದ್ಧಿಯ ಸ್ಮರಣ ಶಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳು 108 (ನೂರ ಎಂಟು) ಬಾರಿ ಜಪಿಸಬೇಕು. ಗಾಯತ್ರಿ ತ್ರಿಗುಣಾತ್ಮಕ ಗಾಯತ್ರಿ ಮಂತ್ರ ಪಠಿಸುತ್ತಿರುವಾಗ ತುಟಿ ಅಲುಗಾಡಬೇಕಲ್ಲದೆ ಇತರರಿಗೆ ಕೇಳಬಾರದು.

*ಐಶ್ವರ್ಯ ಹಾಗೂ ಶೋಭೆಯಿಂದ ಕೂಡಿದ ಗಾಯತ್ರಿಯು ಲೋಕಕ್ಕೆ ತಾಯಿ. ಪರಬ್ರಹ್ಮನ ಸ್ವರೂಪವುಳ್ಳವಳು, ಶ್ರೇಷ್ಠ ಸಂಪತ್ತನ್ನು ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ.

ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹೀ

ಧಿಯೋ ಯೋನಃ ಪ್ರಚೋದಯಾತ್‌

ಈ ಮಂತ್ರ ಗಾಯತ್ರಿ ಛಂದಸ್ಸಿನಲ್ಲಿದೆ. ಆದುದರಿಂದ ಇದು ಗಾಯತ್ರಿ, ಇದು ಸಾವಿತ್ರಿಯೂ ಹೌದು.

ಸರ್ವೇಷಾಂ ಜಪ ಸೂಕ್ತಾನಾಂ ಗಾಯತ್ರೀ ಪರಮೋ ಜಪ

ದುರ್ಲಭಾ ಸರ್ವ ಮಂತ್ರೇಷು, ಗಾಯತ್ರೀ ಪ್ರಣವಾನ್ವಿತಾ॥ (ಬೃಹತ್ ಪರಾಶರ ಸಂಧ್ಯಾ ಭಾಷ್ಯ)

ಎಲ್ಲ ಜಪಸೂಕ್ತಗಳ ಪೈಕಿ ಗಾಯತ್ರಿಯೇ ಶ್ರೇಷ್ಠ. ಗಾಯತ್ರಿ ಮಂಜರಿಯಲ್ಲಿ ಶಿವನು ಪಾರ್ವತಿಗೆ ಹೇಳುತ್ತಾನೆ – ಗಾಯತ್ರಿಯು ವೇದಗಳ ಮಾತೆ ಅವಳೇ ಭೂಮಿಯ ಮೇಲಿನ ಮೊತ್ತ ಮೊದಲ ಶಕ್ತಿ, ಎಲ್ಲಾ ಬ್ರಾಹ್ಮಣರು ಆದಿ ಶಕ್ತಿ ಹಾಗೂ ವೇದಮಾತೆಯಾದ ಗಾಯತ್ರಿಯನ್ನು ಉಪಾಸಿಸುತ್ತಾರೆ. ಆದ್ದರಿಂದ ಅವರೆಲ್ಲರೂ ಶಾಕ್ತರೇ ಹೊರತು ಶೈವರೂ ಅಲ್ಲ ವೈಷ್ಣವರೂ ಅಲ್ಲ.

ಉಪನಯನವೆಂಬ ಸಂಸ್ಕಾರದ ಮೂಲಕ ಏಳು ವರ್ಷ ಪೂರ್ತಿಯಾಗಿ ಎಂಟನೇ ವರ್ಷಕ್ಕೆ ಕಾಲಿಡುವಾಗ ದ್ವಿಜ ಅಥವಾ ಬ್ರಾಹ್ಮಣನೆನಿಸಿ ಬ್ರಹ್ಮಜ್ಞಾನವನ್ನು ಪಡೆಯುವ ಅರ್ಹತೆಯನ್ನು ಒಬ್ಬ ಹುಡುಗ ಪಡೆಯುತ್ತಾನೆ. ಈ ಮೂಲಕ ಗಾಯತ್ರಿ ಮಂತ್ರದ ಉಪದೇಶ ಪಡೆಯುತ್ತಾನೆ.

ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ.

ಉಪನಯನ ಸಂಸ್ಕಾರದ ನಂತರದ ಕ್ಷಣವೇ ಬ್ರಾಹ್ಮಣನೆನಿಸಿಕೊಂಡ ಯಾವನೇ ವ್ಯಕ್ತಿ ಬ್ರಹ್ಮಜ್ಞಾನವನ್ನು ಕ್ರಮೇಣ ಪಡೆಯುತ್ತಾ, ಸಾತ್ವಿಕ ಬುದ್ಧಿ ಹೊಂದಿ ಸದಾ ಇನ್ನೊಬ್ಬರ ಒಳ್ಳೆಯದನ್ನೇ ಹಾರೈಸುತ್ತಾನೆ. ಎಲ್ಲರಿಗೂ ಸನ್ಮಾರ್ಗದಲ್ಲಿ ಹೋಗುವ ದಾರಿ ತೋರಿಸುತ್ತಾನೆ. ಅವನೇ ನಿಜವಾದ ಬ್ರಾಹ್ಮಣ.

ಪದ್ಮಪುರಾಣದಲ್ಲಿ ಬ್ರಹ್ಮನೇ ನಾರದರಿಗೆ ನಿಜವಾದ ಬ್ರಾಹ್ಮಣ ಎಂದರೆ ಯಾರು? ಎಂಬ ವಿವರಣೆಯನ್ನು ವಿವರಿಸಿದ್ದಾರೆ.

‘ಜನ್ಮನಾ ಚಾಯತೇ ಜಂತುಃ ಸಂಸ್ಕಾರಾತ್ ದ್ವಿಜ ಉಚ್ಯತೆ’- ಅಂದರೆ ಹುಟ್ಟಿನಿಂದ ಎಲ್ಲರೂ ಶ್ರೀಸಾಮಾನ್ಯರೇ, ಸಂಸ್ಕಾರ ಬಲದಿಂದ ದ್ವಿಜನಾಗಿ ಬ್ರಹ್ಮಜ್ಞಾನ ಪಡೆಯಲು ಅರ್ಹನಾಗುತ್ತಾನೆ.

ಸಂಧ್ಯಾವಂದನೆ ಮಾಡುವುದು ಬ್ರಾಹ್ಮಣನೆನಿಸಿಕೊಂಡವನ ಆದ್ಯ ಕರ್ತವ್ಯ. ಏಕೆಂದರೆ ಈ ಮೂಲಕ ಪ್ರತಿಯೊಬ್ಬರಿಗೂ ತನ್ನ ಪ್ರವರ ಮತ್ತು ಗೋತ್ರದ ತಿಳಿವಳಿಕೆ ಬರುತ್ತದೆ. ಇದರಿಂದ ಮುಂದಕ್ಕೆ ವಿವಾಹದ ಸಂದರ್ಭದಲ್ಲಿ ಸಗೋತ್ರ ವಿವಾಹದಿಂದ ತಪ್ಪಿಸಿಕೊಳ್ಳಬಹುದು. ಸಗೋತ್ರ ವಿವಾಹ ಮತ್ತು ಹತ್ತಿರದ ಸಂಬಂಧಿಗಳ ವಿವಾಹ ಆರೋಗ್ಯಕರವಲ್ಲ. ಒಂದೇ ರಕ್ತಗುಂಪು ಇರುವ ಗಂಡು ಹೆಣ್ಣು ವಿವಾಹವಾದರೆ ಯಾವ ಸಮಸ್ಯೆಗಳು ಬರುತ್ತವೆ ಎಂಬುದನ್ನು ನಮ್ಮ ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ.

ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಗಾಯತ್ರಿ ಮಂತ್ರದ ಉಪದೇಶವನ್ನು ಪಡೆದ ನಂತರ ನಿರಂತರ ಪ್ರತಿದಿನ ತಪ್ಪದೇ ತನ್ನ ಜೀವನದುದ್ದಕ್ಕೂ ಉಚ್ಚರಿಸತಕ್ಕದ್ದು. ಏಕಂದರೆ ಎಲ್ಲಾ ಮಂತ್ರ, ಪೂಜೆ, ಪುರಸ್ಕಾರಗಳಿಗೂ ಅತೀ ಎತ್ತರದಲ್ಲಿ ರಾರಾಜಿಸುವುದು ಗಾಯತ್ರಿ ಮಹಾಮಂತ್ರ. ಗಾಯತ್ರಿ ಕಾಮಧೇನು ಅಥರ್ವವೇದದಲ್ಲಿ ಗಾಯತ್ರಿ ಮಂತ್ರ-ಶಕ್ತಿ, ಧನ ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top