ಆಂಜನೇಯ ಭೀಮನನ್ನು ಪರೀಕ್ಷೆಮಾಡಿದ ಪ್ರಸಂಗ ನಿಮಗೆ ಗೊತ್ತೇ?
ಭೀಮಸೇನನು ಪತ್ನಿ ದ್ರೌಪದಿಯು ಸೌಗಂಧಿಕಾ ಪುಷ್ಪವನ್ನು ತರುವಂತೆ ಕೇಳಿದಾಗ ತಂದು ಕೊಡುತ್ತೇನೆ ಎಂದು ಸುವಾಸನೆಯನ್ನು ಅನುಭವಿಸುತ್ತಾ ಗಾಳಿ ಬರುತ್ತಿರುವ ಈಶಾನ್ಯ ದಿಕ್ಕಿಗೆ ಪ್ರಯಾಣ ಬೆಳೆಸಿದನು.ಹಿಮಾಲಯದಿಂದ ಗಂಧಮಾದನ ಪರ್ವತವನ್ನು ಹತ್ತಿ ಅಲ್ಲಿರುವ ಶಾಂತವಾದ ಆಶ್ರಮಗಳನ್ನು ನೋಡುತ್ತ ಮುನ್ನೆಡೆಸಿದನು.
ಭೀಮನು ಮುಂದೆ ಹೋಗುವಾಗ ಆನೆಗಳು ಹೆದರಿದವು.ಅರಣ್ಯವೇ ನಡುಗಿತು.ಮುಂದೆ ಒಂದು ಸರೋವರ ಕಂಡಾಗ ಅಲ್ಲಿ ಈಜಾಡಿ ಪಕ್ಕದಲ್ಲಿಯೇ ಇರುವ ಒಂದು ಬಾಳೆಯ ತೋಟದಲ್ಲಿ ಒಂದು ದೊಡ್ಡ ಕಪಿಯು ಕುಳಿತಿತ್ತು.ಅದರ ಬಾಲವು ದಾರಿಗೆ ಅಡ್ಡವಾಗಿತ್ತು.ಬಾಳೆಯ ತೋಟದ ಪ್ರವೇಶ ಮಾಡಿದ ಭೀಮಸೇನನು ಗರ್ಜಿಸಿದನು. ಆದುದರಿಂದ ಅಲ್ಲಿರುವ ಕಪಿಯು “ ಮಹಾನುಭಾವ,ಇಲ್ಲಿಗೆ ಬಂದು ಗರ್ಜಿಸಿ ನಿದ್ದೆ ಕೆಡಿಸಿದೆ ಈ ಹಾದಿಯಲ್ಲಿ ಯಾರೂ ಮುಂದೆ ಹೋಗುವಂತಿಲ್ಲ. ನೀನು ಹಿಂತಿರುಗಿ ಹೋಗು” ಎಂದನು.
ಆಗ ಭೀಮಸೇನನು ನಾನು ಪಾಂಡು ರಾಜರ ಮಗ ಭೀಮಸೇನ.ನೀನು ದಾರಿ ಬಿಡದಿದ್ದರೆ ಮೇಲಿಂದಲೇ ಹಾರಿ ಹೋಗಬಲ್ಲೆನು.ನೀನೇ ದಾರಿ ಮಾಡಿಕೊಡು ಎಂದಾಗ ಆ ಕಪಿಯು ನಾನು ಮುದುಕನಾಗಿದ್ದೇನೆ.ನನ್ನ ಬಾಲವನ್ನು ಎತ್ತಿಡಲೂ ಸಹ ನನಗೆ ಸಾಧ್ಯವಾಗುವುದಿಲ್ಲ.ನೀನೇ ಸ್ವಲ್ಪ ಸರಿಸಿಟ್ಟು ಮುಂದೆ ಹೋಗು ಎಂದು ಹೇಳಿದನು.
ಭೀಮನು ಬಾಲಕ್ಕೆ ಕೈ ಹಾಕಿ ಪ್ರಯತ್ನಿಸಿ ಸೋತನು.ಆಗ ಕಪಿಯು ತನ್ನ ಎಡಗೈಯಿಂದ ಬಾಲವನ್ನು ಎತ್ತಿ ಸರಿಸಿದನು.ಭೀಮನು ಕಪಿಗೆ ನಮಸ್ಕರಿಸಿ ನಿನ್ನ ಎದುರಿಗೆ ಅಹಂಕಾರವನ್ನು ಪ್ರದರ್ಶಿಸಿದ್ದೇನೆ. ನನ್ನನ್ನು ಕ್ಷಮಿಸು ಮಹಾನುಭಾವ ನೀನು ನನ್ನ ಅಣ್ಣನಾದ ಹನುಮನೆ ? ಯಕ್ಷನೆ ? ದೇವತೆಯೇ ? ಗಂಧರ್ವನೇ ? ಯಾರು ? ಈ ರೂಪದಲ್ಲಿ ಏಕಿರುವೆ? ಎಂದು ಕೇಳಿದನು.
ಆಗ ಕಪಿಯಾಗಿರುವ ಹನುಮಂತನು ನಿಜರೂಪದಿಂದ ಪ್ರತ್ಯಕ್ಷನಾಗಿ ಭೀಮನನ್ನು ಅಪ್ಪಿಕೊಂಡನು.ಭೀಮನ ಆಯಾಸವೆಲ್ಲ ದೂರವಾದಾಗ ಸೌಗಂಧಿಕಾ ಪುಷ್ಪದ ಬಗ್ಗೆ ಹನುಮಂತನನ್ನು ಕೇಳಿದನು. ಆಂಜನೇಯನು ಪುಷ್ಪವು ಕುಬೇರನ ಉದ್ಯಾನದಲ್ಲಿದೆ. ನೀನು ಹೋಗಿ ತೆಗೆದುಕೊಂಡು ಬಾ ಎಂದು ಶುಭವನ್ನು ಹಾರೈಸಿ ಕಳಿಸಿದನು.
ಭೀಮನು ಸುಂದರವಾದ ಸರೋವರ ಇದ್ದಲ್ಲಿಗೆ ಬಂದು ಅಲ್ಲಿರುವ ಕಮಲ,ಹಂಸ, ಚಕ್ರ ವಾಕಗಳನ್ನೆಲ್ಲಾ ಕಂಡು ಸಂತಸಪಟ್ಟನು. ಅಲ್ಲಿಯೇ ಸೌಗಂಧಿಕಾ ಪುಷ್ಪಗಳೂ ಇದ್ದವು.ಅವುಗಳ ರಕ್ಷಣೆಗೆ ಸೈನಿಕರು ಸಹ ಇದ್ದರು.ಅವರು ಭೀಮನನ್ನು ಆಕ್ರಮಿಸಿದಾಗ ಎಲ್ಲರನ್ನೂ ಮುರಿದು ಕುಕ್ಕಿದನು. ಅವರ ಅಸ್ತ್ರಗಳು ಏನೂ ಪರಿಣಾಮ ಭೀರಲಿಲ್ಲ.
ಅವರು ಓಡಿ ಬಂದು ಕುಭೇರನಿಗೆ ತಿಳಿಸಿದರು. ಕುಭೇರನು ಸಹ ಭೀಮನ ಬಗ್ಗೆ ತಿಳಿದು ಪುಷ್ಪವನ್ನು ತೆಗೆದುಕೊಂಡು ಹೋಗಲು ಅನುಮತಿಸಿದನು. ಹೂಗಳನ್ನು ಉತ್ತರೀಯದಲ್ಲಿ ಕಟ್ಟಿ ತಂದು ದ್ರೌಪದಿಗೆ ಭೀಮಸೇನ ಕೊಟ್ಟನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
